Bazball: ಆ್ಯಶಸ್ ಸರಣಿಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಬಾಝ್​ಬಾಲ್

| Updated By: ಝಾಹಿರ್ ಯೂಸುಫ್

Updated on: Aug 01, 2023 | 7:06 PM

Ashes 2023: ಆ್ಯಶಸ್ ಸರಣಿಯು ಸಮಬಲದೊಂದಿಗೆ ಅಂತ್ಯಗೊಂಡಿರುವ ಕಾರಣ ಇಂಗ್ಲೆಂಡ್​ ತಂಡದ ಈ ಸ್ಟ್ರಾಟರ್ಜಿ ಮುಂಬುರುವ ಟೆಸ್ಟ್ ಸರಣಿಯಲ್ಲೂ ಕಾಣಿಸಿಕೊಳ್ಳಲಿದೆ.

Bazball: ಆ್ಯಶಸ್ ಸರಣಿಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಬಾಝ್​ಬಾಲ್
England Team
Follow us on

ಆಡು ಗೆಲ್ಲುವ ತನಕ ಆಡು…ಗೆಲ್ಲಲು ಸಾಧ್ಯವಿಲ್ಲವೆಂದು ಕಂಡು ಬಂದರೆ ಡ್ರಾ ಮಾಡಲೆಂದು ಆಡು…ಟೆಸ್ಟ್ ಕ್ರಿಕೆಟ್​ನ ಈ ನಿಯಮ ಇಂಗ್ಲೆಂಡ್ (England) ತಂಡಕ್ಕೆ ಅನ್ವಯಿಸಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದು ಕೂಡ  ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಎಂಬುದು ವಿಶೇಷ. 5 ಪಂದ್ಯಗಳ ಈ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಬ್ಯಾಟರ್​ಗಳು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದರು. ಆದರೆ ಈ ಎರಡೂ ಪಂದ್ಯಗಳಲ್ಲೂ ಆಸ್ಟ್ರೇಲಿಯಾ ವಿರುದ್ಧ ಆಂಗ್ಲರು ಮುಗ್ಗರಿಸುತ್ತಿದ್ದಂತೆ ಬಾಝ್​ಬಾಲ್ ತಂತ್ರಗಾರಿಕೆಯನ್ನು  ಹಲವರು ಟೀಕಿಸಿದ್ದರು.

ಆದರೆ ಈ ಟೀಕೆ ಟಿಪ್ಪಣಿಗಳಿಗೆ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಂ ತಲೆ ಕೆಡಿಸಿಕೊಂಡಿರಲಿಲ್ಲ ಎಂಬುದು ವಿಶೇಷ. ಅದರಂತೆ ಮುಂದಿನ 3 ಪಂದ್ಯಗಳಲ್ಲೂ ಇಂಗ್ಲೆಂಡ್ ತಂಡ ಬಾಝ್​ಬಾಲ್  ಆಟವನ್ನೇ ಮುಂದುವರೆಸಿದ್ದರು. ಅಂತಿಮ ಫಲಿತಾಂಶ ಬಂದಾಗ ಆ್ಯಶಸ್ ಸರಣಿ 2-2 ಸಮಬಲದೊಂದಿಗೆ ಅಂತ್ಯಗೊಂಡಿತ್ತು. ಇತ್ತ ಮತ್ತೊಮ್ಮೆ ಬಾಝ್​ಬಾಲ್ ಕ್ರಿಕೆಟ್ ಗೆದ್ದ ಖುಷಿಯಲ್ಲಿದ್ದರು ಬ್ರೆಂಡನ್ ಮೆಕಲಂ. ಅತ್ತ ಸರಣಿ ಸೋಲದ ಸಂಭ್ರಮದಲ್ಲಿದ್ದರು ಇಂಗ್ಲೆಂಡ್ ಕ್ರಿಕೆಟ್ ಪ್ರೇಮಿಗಳು.

ಆ್ಯಶಸ್ ಸರಣಿಯಲ್ಲಿ ಬಾಝ್​ಬಾಲ್ ಎಫೆಕ್ಟ್:

ಈ ಬಾರಿಯ ಆ್ಯಶಸ್ ಸರಣಿಯ ಮೂಲಕ ಇಂಗ್ಲೆಂಡ್ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡಕ್ಕೆ ಬಾಝ್​ಬಾಲ್ ಎಫೆಕ್ಟ್ ತೋರಿಸಿದ್ದಾರೆ. ಅಷ್ಟೇ ಅಲ್ಲದೆ ಇದುವರೆಗೆ ಒಂದು ಲೆಕ್ಕ ಇನ್ಮುಂದೆ ಮತ್ತೊಂದು ಲೆಕ್ಕ ಎಂಬುದನ್ನೂ ಕೂಡ ನಿರೂಪಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

  • ಆ್ಯಶಸ್ ಸರಣಿಯ ಇತಿಹಾಸದಲ್ಲೇ ಈ ಬಾರಿ ಅತ್ಯಧಿಕ ಸಿಕ್ಸ್​ಗಳು ಮೂಡಿಬಂದಿವೆ. ಅಂದರೆ 5 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 74 ಸಿಕ್ಸ್​ಗಳು ಸಿಡಿದಿವೆ.
  • ಆ್ಯಶಸ್ ಸರಣಿ ಇತಿಹಾಸದಲ್ಲೇ ಈ ಸಲ ಅತ್ಯಧಿಕ ರನ್ ರೇಟ್​ನಲ್ಲಿ ಸ್ಕೋರ್​ ಗಳಿಸಲಾಗಿದೆ. ಅಂದರೆ 5 ಟೆಸ್ಟ್ ಪಂದ್ಯಗಳಲ್ಲಿ ಪ್ರತಿ ಓವರ್​ನಲ್ಲಿ 3.93 ರನ್​ ರೇಟ್​ನಲ್ಲಿ ರನ್ ಕಲೆಹಾಕಿದ್ದಾರೆ.
  • ಈ ಬಾರಿಯ ಸರಣಿಯಲ್ಲಿ ಪ್ರತಿ ಓವರ್​ಗೆ 4.74 ಸರಾಸರಿಯಲ್ಲಿ ರನ್​ ಕಲೆಹಾಕುವ ಮೂಲಕ ಇಂಗ್ಲೆಂಡ್ ಬ್ಯಾಟರ್​ಗಳು ಆಸ್ಟ್ರೇಲಿಯನ್ನರಿಗೆ ಬಾಝ್​ಬಾಲ್ ಕ್ರಿಕೆಟ್ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಈ ಮೂಲಕ ಬಾಝ್​ಬಾಲ್ ತಂತ್ರಗಾರಿಕೆಯೊಂದಿಗೆ ಇಂಗ್ಲೆಂಡ್ ತಂಡವು ಈ ಹಿಂದಿನ ಆ್ಯಶಸ್ ಸರಣಿಯ ರನ್​ಗಳಿಕೆ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ್ದಾರೆ. ಇದೀಗ ಆ್ಯಶಸ್ ಸರಣಿಯು ಸಮಬಲದೊಂದಿಗೆ ಅಂತ್ಯಗೊಂಡಿರುವ ಕಾರಣ ಇಂಗ್ಲೆಂಡ್​ ತಂಡದ ಈ ಸ್ಟ್ರಾಟರ್ಜಿ ಮುಂಬುರುವ ಟೆಸ್ಟ್ ಸರಣಿಯಲ್ಲೂ ಕಾಣಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ಭಾರತಕ್ಕೂ ಬಾಝ್​ಬಾಲ್ ಭೀತಿ:

ಇಂಗ್ಲೆಂಡ್ ತಂಡದ ಮುಂದಿನ ಟೆಸ್ಟ್ ಭಾರತ ವಿರುದ್ಧ ಎಂಬುದು ವಿಶೇಷ. ಹೀಗಾಗಿ ಭಾರತದ ಪಿಚ್​ನಲ್ಲಿ ಬಾಝ್​ಬಾಲ್​ ಎಫೆಕ್ಟ್ ಹೇಗಿರಲಿದೆ ಎಂಬುದನ್ನು ತಿಳಿಯಲು ಜನವರಿ 25 ರ ತನಕ ಕಾಯಲೇಬೇಕು. ಅಂದರೆ ಜನವರಿ 25, 2024 ರಿಂದ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಆರಂಭವಾಗಲಿದೆ.

ಏನಿದು ಬಾಝ್​ಬಾಲ್ ಕ್ರಿಕೆಟ್?

ನ್ಯೂಝಿಲೆಂಡ್​ನ ಮಾಜಿ ಆಟಗಾರ, ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕಲಂ ಅವರ ಅಡ್ಡ ಹೆಸರು ಬಾಝ್. ಕ್ರಿಕೆಟ್​ ಅಂಗಳದಲ್ಲಿ ಬಾಝ್​ ಎಂದೇ ಗುರುತಿಸಿಕೊಂಡಿರುವ ಮೆಕಲಂ ಅವರ ಆಕ್ರಮಣಕಾರಿ ಆಟದ ವಿಧಾನವನ್ನು ಇದೀಗ ಬಾಝ್​ಬಾಲ್ (BazBall) ಕ್ರಿಕೆಟ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Stuart Broad: 6 ಸಿಕ್ಸ್​ಗಿಂತ 600 ವಿಕೆಟ್​ ಮೇಲು..!

ವಿಶೇಷ ಎಂದರೆ ಬಾಝ್​ಬಾಲ್ ಆಟವನ್ನು ಆರಂಭಿಸಿದ ಬಳಿಕ ಇಂಗ್ಲೆಂಡ್ ತಂಡವು ಒಂದೇ ಒಂದು ಟೆಸ್ಟ್ ಸರಣಿಯನ್ನು ಸೋತಿಲ್ಲ. ಬ್ರೆಂಡನ್ ಮೆಕಲಂ ಕೋಚಿಂಗ್ ಹಾಗೂ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ 7 ಟೆಸ್ಟ್ ಸರಣಿಗಳನ್ನು ಆಡಿದೆ. ಈ ವೇಳೆ  5 ರಲ್ಲಿ ಗೆಲುವು ದಾಖಲಿಸಿದರೆ, 2 ರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲೂ ಬಾಝ್​ಬಾಲ್ ಎಫೆಕ್ಟ್ ಮುಂದುವರೆಯುವುದರಲ್ಲಿ ಯಾವುದೇ ಅನುಮಾನ ಬೇಡ.