IND vs AUS: ಪಿಂಕ್ ಟೆಸ್ಟ್ಗೂ, ಪಿಂಕ್ ಬಾಲ್ ಟೆಸ್ಟ್ಗೂ ಇದೆ ವ್ಯತ್ಯಾಸ
India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ. ಅಡಿಲೇಡ್ನಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನ ಪಂದ್ಯ ಎಂಬುದು ವಿಶೇಷ. ಅಂದರೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ನಾಲ್ಕು ವರ್ಷಗಳ ಬಳಿಕ ಡೇ-ನೈಟ್ ಟೆಸ್ಟ್ನಲ್ಲಿ ಮುಖಾಮುಖಿಯಾಗಲು ಸಜ್ಜಾಗಿ ನಿಂತಿದೆ.
ಬಹುನಿರೀಕ್ಷಿತ ಪಿಂಕ್ ಬಾಲ್ ಟೆಸ್ಟ್ಗೆ ವೇದಿಕೆ ಸಿದ್ಧವಾಗಿದೆ. ಅಡಿಲೇಡ್ನ ಓವಲ್ ಮೈದಾನದಲ್ಲಿ ಶುಕ್ರವಾರದಿಂದ (ಡಿ.6) ಶುರುವಾಗಲಿರುವ ಪಿಂಕ್ ಬಾಲ್ ಟೆಸ್ಟ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಕಾವೇರುತ್ತಿದ್ದಂತೆ ಏನಿದು ಪಿಂಕ್ ಬಾಲ್ ಟೆಸ್ಟ್? ಪಿಂಕ್ ಟೆಸ್ಟ್ಗೂ ಇದಕ್ಕೂ ಏನು ವ್ಯತ್ಯಾಸ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…
ಏನಿದು ಪಿಂಕ್ ಬಾಲ್ ಟೆಸ್ಟ್?
ಪಿಂಕ್ ಬಾಲ್ ಟೆಸ್ಟ್ ಎಂದರೆ ಡೇ-ನೈಟ್ ಟೆಸ್ಟ್ ಪಂದ್ಯ. ಹೊನಲು ಬೆಳಕಿನಲ್ಲಿ ಆಡಲಾಗುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಅನ್ನು ಬಳಸಲಾಗುತ್ತದೆ. ಹೀಗಾಗಿಯೇ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್ ಎಂದು ಕರೆಯಲಾಗುತ್ತಿದೆ.
2015 ರಲ್ಲಿ ಶುರುವಾದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಈವರೆಗೆ 22 ಪಂದ್ಯಗಳನ್ನಾಡಲಾಗಿದೆ. ಈ ಎಲ್ಲಾ ಪಂದ್ಯಗಳಲ್ಲೂ ಫಲಿತಾಂಶ ಮೂಡಿಬಂದಿರುವುದು ವಿಶೇಷ. ಅಂದರೆ ಯಾವುದೇ ಮ್ಯಾಚ್ ಡ್ರಾನಲ್ಲಿ ಕೊನೆಗೊಂಡಿಲ್ಲ.
ಇನ್ನು ಪಿಂಕ್ ಬಾಲ್ ಟೆಸ್ಟ್ ಅಥವಾ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರುವ ಮುಖ್ಯ ಉದ್ದೇಶ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸುವುದು. ಇಲ್ಲಿ ಪಂದ್ಯವು ಹೊನಲು-ಬೆಳಕಿನಲ್ಲಿ ಆಯೋಜಿಸುತ್ತಿರುವುದರಿಂದ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸುತ್ತಿದ್ದಾರೆ. ಈ ಪ್ರಯೋಗವು ಯಶಸ್ವಿಯಾಗಿದ್ದರಿಂದ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಪ್ರತಿ ವರ್ಷ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ.
ಪಿಂಕ್ ಟೆಸ್ಟ್ ಎಂದರೇನು?
ಪ್ರತಿ ವರ್ಷ ಸಿಡ್ನಿಯಲ್ಲಿ ಆಡಲಾಗುವ ಮೊದಲ ಟೆಸ್ಟ್ ಪಂದ್ಯವನ್ನು ಪಿಂಕ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಪಂದ್ಯದಲ್ಲಿ ಆಟಗಾರರು ಪಿಂಕ್ ಕ್ಯಾಪ್ ಧರಿಸುವುದು. ಇದರ ಉದ್ದೇಶ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಅದರ ವಿರುದ್ಧ ಹೋರಾಡುತ್ತಿರುವವರಿಗೆ ಧೈರ್ಯ ತುಂಬುವುದು.
ಇಂತಹದೊಂದು ಅಭಿಯಾನಕ್ಕೆ ನಾಂದಿಯಾಡಿದ್ದು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್ಗ್ರಾಥ್ ಎಂಬುದು ವಿಶೇಷ. ಮೆಕ್ಗ್ರಾಥ್ ಅವರ ಪತ್ನಿ ಜೇನ್ ಮೆಕ್‌ಗ್ರಾತ್ ಅವರು ಸ್ತನ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಆ ಬಳಿಕ ಮೆಕ್‌ಗ್ರಾತ್ ಫೌಂಡೇಶನ್ ಸ್ಥಾಪಿಸಿದ ಗ್ಲೆನ್ ಮೆಕ್ಗ್ರಾಥ್ ಸ್ತನ ಕ್ಯಾನ್ಸರ್ ಜಾಗೃತಿ ಹಾಗೂ ಈ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಚಿಕಿತ್ಸೆಗೆ ನೆರವು ನೀಡುತ್ತಾ ಬರುತ್ತಿದ್ದಾರೆ.
ಈ ಅಭಿಯಾನಕ್ಕೆ ಸಿಡ್ನಿ ಕ್ರಿಕೆಟ್ ಕೂಡ ಸಾಥ್ ನೀಡಿದ್ದು, ಈ ಮೂಲಕ ಪ್ರತಿ ವರ್ಷ ಪಿಂಕ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ. ಈ ಪಂದ್ಯಕ್ಕಾಗಿ ಸಿಡ್ನಿ ಸ್ಟೇಡಿಯಂನ ಗ್ಯಾಲರಿಗಳನ್ನು ಪಿಂಕ್ ಬಣ್ಣಗಳಿಂದ ಅಲಂಕೃತಗೊಳಿಸಲಾಗುತ್ತದೆ. ಹಾಗೆಯೇ ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಂದು ಲೇಡೀಸ್ ಸ್ಟ್ಯಾಂಡ್ ಅನ್ನು ತಾತ್ಕಾಲಿಕವಾಗಿ ಜೇನ್ ಮೆಕ್‌ಗ್ರಾತ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಲಾಗುತ್ತದೆ.
ಇದನ್ನೂ ಓದಿ: IPL 2025: RCB ತಂಡಕ್ಕೆ 4 ತವರು ಮೈದಾನ..!
ಇನ್ನು ಈ ಪಂದ್ಯದಲ್ಲಿ ಆಟಗಾರರು ಧರಿಸಿದ ಪಿಂಕ್ ಕ್ಯಾಪ್ ಅನ್ನು ಕೂಡ ಹರಾಜಾಗಿಡಲಾಗುತ್ತದೆ. ಇದರಿಂದ ಬಂದ ಹಣವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತದೆ. ಮುಖ್ಯವಾಗಿ ಈ ಪಂದ್ಯವನ್ನು ಪಿಂಕ್ ಬಾಲ್ನಲ್ಲಿ ಆಡಲಾಗುವುದಿಲ್ಲ. ಬದಲಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಸಾಮಾನ್ಯವಾಗಿ ಬಳಸಲಾಗುವ ರೆಡ್ ಬಾಲ್ನಲ್ಲೇ ಈ ಪಂದ್ಯವನ್ನು ಆಯೋಜಿಸಲಾಗುತ್ತದೆ.
Published On - 8:05 am, Thu, 5 December 24