SA20: ರಣರೋಚಕ ಪಂದ್ಯದಲ್ಲಿ 2 ರನ್ಗಳ ರೋಚಕ ಜಯ
Durban's Super Giants vs Pretoria Capitals: ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ SA20 ಟಿ20 ಟೂರ್ನಿಯ 2ನೇ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ವಿರುದ್ಧ ಡರ್ಬನ್ ಸೂಪರ್ ಜೈಂಟ್ಸ್ ತಂಡವು ರೋಚಕ ಜಯ ಸಾಧಿಸಿದೆ. ಅದು ಕೂಡ ಕೊನೆಯ ಓವರ್ನಲ್ಲಿನ ಜಿದ್ದಾಜಿದ್ದಿನ ಹೋರಾಟದ ಮೂಲಕ ಎಂಬುದು ವಿಶೇಷ.
ಸೌತ್ ಆಫ್ರಿಕಾ ಟಿ20 ಲೀಗ್ನ 2ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಡರ್ಬನ್ನ ಕಿಂಗ್ಸ್ಮೀಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ಮತ್ತು ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಡರ್ಬನ್ ಸೂಪರ್ ಜೈಂಟ್ಸ್ ತಂಡದ ನಾಯಕ ಕೇಶವ್ ಮಹಾರಾಜ್ ಬ್ಯಾಟಿಂಗ್ ಆಯ್ದುಕೊಂಡರು.
ಅದರಂತೆ ಇನಿಂಗ್ಸ್ ಆರಂಭಿಸಿದ ಡರ್ಬನ್ ಸೂಪರ್ ಜೈಂಟ್ಸ್ ತಂಡಕ್ಕೆ ಬ್ರೈಸ್ ಪಾರ್ಸನ್ಸ್ (47) ಹಾಗೂ ಮ್ಯಾಥ್ಯೂ ಬ್ರೀಟ್ಝ್ಕ್ (33) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು.
40 ಎಸೆತಗಳನ್ನು ಎದುರಿಸಿದ ವಿಲಿಯಮ್ಸನ್ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 60 ರನ್ ಬಾರಿಸಿದರು. ಇನ್ನು ಅಂತಿಮ ಓವರ್ಗಳ ವೇಳೆ ಅಬ್ಬರಿಸಿದ ವಿಯಾನ್ ಮುಲ್ಡರ್ 19 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 45 ರನ್ ಚಚ್ಚಿದರು. ಈ ಮೂಲಕ ಡರ್ಬನ್ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿತು.
210 ರನ್ಗಳ ಗುರಿ:
210 ರನ್ಗಳ ಕಠಿಣ ಗುರಿ ಪಡೆದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪರ ಮೊದಲ ಓವರ್ನಿಂದಲೇ ವಿಲ್ ಜಾಕ್ಸ್ ಹಾಗೂ ರಹಮಾನುಲ್ಲಾ ಗುರ್ಬಾಝ್ ಅಬ್ಬರಿಸಲಾರಂಭಿಸಿದರು. ಪರಿಣಾಮ 12 ಓವರ್ಗಳಲ್ಲಿ ತಂಡದ ಮೊತ್ತ 150ರ ಗಡಿದಾಟಿತು.
ಈ ಹಂತದಲ್ಲಿ 43 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 89 ರನ್ ಬಾರಿಸಿದ್ದ ರಹಮಾನುಲ್ಲಾ ಗುರ್ಬಾಝ್ ಔಟಾದರು. ಇದರ ಬೆನ್ನಲ್ಲೇ ನಾಯಕ ರೈಲಿ ರೊಸ್ಸೊವ್ (1) ಕೂಡ ವಿಕೆಟ್ ಒಪ್ಪಿಸಿದರು.
ಇನ್ನು 35 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 64 ರನ್ ಚಚ್ಚಿದ್ದ ವಿಲ್ ಜಾಕ್ಸ್ರನ್ನು ಬೌಲ್ಡ್ ಮಾಡುವಲ್ಲಿ ನೂರ್ ಅಹ್ಮದ್ ಯಶಸ್ವಿಯಾದರು. ಬ್ಯಾಕ್ ಟು ಬ್ಯಾಕ್ ಮೂರು ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಡರ್ಬನ್ ಸೂಪರ್ ಜೈಂಟ್ಸ್ ಬೌಲರ್ಗಳು ರನ್ ಗತಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಪರಿಣಾಮ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 207 ರನ್ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೇವಲ 2 ರನ್ಗಳಿಂದ ಡರ್ಬನ್ ಸೂಪರ್ ಜೈಂಟ್ಸ್ ರೋಚಕ ಜಯ ಸಾಧಿಸಿತು. ಇನ್ನು ಈ ವಿರೋಚಿತ ಸೋಲಿನ ಹೊರತಾಗಿಯೂ ಸ್ಪೋಟಕ 89 ರನ್ ಬಾರಿಸಿದ್ದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಆರಂಭಿಕ ರಹಮಾನುಲ್ಲಾ ಗುರ್ಬಾಝ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಡರ್ಬನ್ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ಬ್ರೀಟ್ಝ್ಕ್ , ಬ್ರೈಸ್ ಪಾರ್ಸನ್ಸ್ , ಕೇನ್ ವಿಲಿಯಮ್ಸನ್ , ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ಹೆನ್ರಿಕ್ ಕ್ಲಾಸೆನ್ , ವಿಯಾನ್ ಮುಲ್ಡರ್ , ಡ್ವೈನ್ ಪ್ರಿಟೋರಿಯಸ್ , ಕ್ರಿಸ್ ವೋಕ್ಸ್ , ಕೇಶವ್ ಮಹಾರಾಜ್ (ನಾಯಕ) , ನವೀನ್-ಉಲ್-ಹಕ್ , ನೂರ್ ಅಹ್ಮದ್.
ಇದನ್ನೂ ಓದಿ: IPL 2025: RCB ಆರಂಭಿಕರು ಯಾರೆಂದು ತಿಳಿಸಿದ ಕೋಚ್
ಪ್ರಿಟೋರಿಯಾ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ , ವಿಲ್ ಜ್ಯಾಕ್ಸ್ , ಸ್ಟೀವ್ ಸ್ಟೋಕ್ , ರೈಲಿ ರೊಸ್ಸೊವ್ (ನಾಯಕ) , ಕೈಲ್ ವೆರ್ರಿನ್ನೆ (ವಿಕೆಟ್ ಕೀಪರ್) , ಲಿಯಾಮ್ ಲಿವಿಂಗ್ಸ್ಟೋನ್ , ಜೇಮ್ಸ್ ನೀಶಮ್ , ಸೆನುರಾನ್ ಮುತ್ತುಸಾಮಿ , ಕೈಲ್ ಸಿಮಂಡ್ಸ್ , ಈಥನ್ ಬಾಷ್ , ಡೇರಿನ್ ಡುಪಾವಿಲ್ಲನ್.
Published On - 7:58 am, Sat, 11 January 25