IND vs AUS: ಮೊದಲ ದಿನದಾಟ ಮಳೆಗಾಹುತಿ; ಬ್ರಿಸ್ಬೇನ್​ನ ಮುಂದಿನ 4 ದಿನಗಳ ಹವಾಮಾನ ಹೇಗಿರಲಿದೆ?

India vs Australia 3rd Test, Brisbane Weather Report: ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಪೂರ್ಣವಾಗಿ ಮಳೆಗೆ ಬಲಿಯಾಗಿದೆ. ಮಳೆಯಿಂದಾಗಿ ಆಟವನ್ನು ರದ್ದುಗೊಳಿಸಲಾಗಿದೆ. ಹವಾಮಾನ ಇಲಾಖೆಯು ಮುಂದಿನ ನಾಲ್ಕು ದಿನಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಯನ್ನು ಊಹಿಸಿದೆ, ಇದು ಸರಣಿಯ ಮೇಲೆ ಪರಿಣಾಮ ಬೀರಬಹುದು.

IND vs AUS: ಮೊದಲ ದಿನದಾಟ ಮಳೆಗಾಹುತಿ; ಬ್ರಿಸ್ಬೇನ್​ನ ಮುಂದಿನ 4 ದಿನಗಳ ಹವಾಮಾನ ಹೇಗಿರಲಿದೆ?
ಬ್ರಿಸ್ಬೇನ್ ಹವಾಮಾನ ವರದಿ
Follow us
ಪೃಥ್ವಿಶಂಕರ
|

Updated on: Dec 14, 2024 | 2:31 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಗಾಬಾ ಮೈದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಆದರೆ ಟೆಸ್ಟ್​ನ ಮೊದಲ ದಿನ ಸಂಪೂರ್ಣವಾಗಿ ಮಳೆಗಾಹುತಿಯಾಗಿದೆ. ಪಂದ್ಯಕ್ಕೆ ಅಡ್ಡಿಪಡಿಸುವುದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ಕೇವಲ 13.2 ಓವರ್‌ ಮಾತ್ರ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು. ಇಲ್ಲಿಂದ ಆರಂಭವಾದ ಮಳೆ ನಿಲ್ಲಲೇ ಇಲ್ಲ. ಹೀಗಾಗಿ ದಿನದಾಟವನ್ನು ರದ್ದುಗೊಳಿಸಲು ಅಂಪೈರ್​ಗಳು ನಿರ್ಧರಿಸಿದ್ದರು. ವಾಸ್ತವವಾಗಿ ಪಂದ್ಯಕ್ಕೂ ಮುನ್ನವೇ ಬ್ರಿಸ್ಬೇನ್​ನಲ್ಲಿ ಮುಂದಿನ ಐದು ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿತ್ತು. ಅದರಂತೆ ಮೊದಲ ದಿನ ಸಂಪೂರ್ಣವಾಗಿ ಮಳೆಗೆ ಬಲಿಯಾಗಿದೆ. ಇದೀಗ ಉಳಿದ ನಾಲ್ಕು ದಿನಗಳಲ್ಲಿಯೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವ ಕಾರಣ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.

ಮುಂದಿನ 4 ದಿನಗಳ ಹವಾಮಾನ ಹೇಗಿರಲಿದೆ?

ಗಾಬಾ ಟೆಸ್ಟ್‌ನ ಮೊದಲ ದಿನದ ಆಟ ಮಳೆಯಿಂದಾಗಿ ರದ್ದಾಗಿದೆ. ಇದರ ಜೊತೆಗೆ ಮೇಲೆ ಹೇಳಿದಂತೆ ಬ್ರಿಸ್ಬೇನ್‌ನಲ್ಲಿ ಮುಂದಿನ ನಾಲ್ಕು ದಿನವೂ ಸಹ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಟೆಸ್ಟ್‌ನ ಎರಡನೇ ದಿನ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯ ಸಂಭವನೀಯತೆ ಶೇ.50 ರಷ್ಟಿರಲಿದೆ. ಅಕ್ಯುವೆದರ್ ವರದಿ ಪ್ರಕಾರ ಮೂರನೇ ದಿನವೂ 70% ಮಳೆಯಾಗಲಿದ್ದು, ನಾಲ್ಕನೇ ದಿನ ಶೇ.84ರಷ್ಟು ಮಳೆ, ಕೊನೆಯ ದಿನ ಶೇ.56ರಷ್ಟು ಮಳೆ ಬೀಳಲಿದೆ ಎಂದು ವರದಿಯಾಗಿದೆ. ಒಟ್ಟಾರೆ ಕಥೆ ಏನೆಂದರೆ, ಗಾಬಾ ಟೆಸ್ಟ್ ಪಂದ್ಯದ ಮೇಲೆ ಭಾರೀ ಮಳೆಯ ಛಾಯೆ ಆವರಿಸಿದ್ದು, ಪಂದ್ಯದ ಫಲಿತಾಂಶ ಹೊರಬೀಳುತ್ತದೆಯೋ ಇಲ್ಲವೋ ಎಂದು ಹೇಳುವುದು ತುಂಬಾ ಕಷ್ಟ.

ಮೂರನೇ ಟೆಸ್ಟ್​ಗೆ ಉಭಯ ತಂಡಗಳು

ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್‌ವುಡ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ