Team India ಗೆಲುವಿನ ರೂವಾರಿಗಳ ತೆರೆಯ ಹಿಂದಿನ ರೋಚಕ ಕಹಾನಿ ತೆರೆದಿಟ್ಟಾಗ!

ಟಿ ನಟರಾಜನ್, ತಮಿಳುನಾಡಿನ ದೂರದ ಗ್ರಾಮವಾದ ಚಿನ್ನಪ್ಪಂಪಟ್ಟಿಯ ಈ ಆಟಗಾರ ದೈನಂದಿನ ಕೂಲಿ ಕಾರ್ಮಿಕನ ಮಗನಾಗಿದ್ದು, ಬೌಲರ್‌ಗಳಿಗೆ ಬೇಕಾದ ಬೂಟುಗಳನ್ನು ಖರೀದಿಸಲು ಸಹ ಹಣವಿಲ್ಲದೆ ಪರದಾಡಿದ್ದರು.

  • TV9 Web Team
  • Published On - 13:25 PM, 20 Jan 2021
Team India ಗೆಲುವಿನ ರೂವಾರಿಗಳ ತೆರೆಯ ಹಿಂದಿನ ರೋಚಕ ಕಹಾನಿ ತೆರೆದಿಟ್ಟಾಗ!
ಚಾಂಪಿಯನ್​ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ

ಪ್ರತಿಕೂಲ ಪರಿಸ್ಥಿತಿಗಳಲ್ಲಿಯೇ ನೈಜ ಆಟಗಾರನ ಪ್ರತಿಭೆ ಹೊರಬರುವುದು ಎಂಬುದಕ್ಕೆ ಟೀಂ ಇಂಡಿಯಾದ ಈ ಐತಿಹಾಸಿಕ ಗೆಲುವೇ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾ ನೆಲದಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿದೆ. ಮೈದಾನದೊಳಗೆ ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುವಂತಹ ಹೊಸ ಪ್ರತಿಭೆಗಳು ಟೀಂ ಇಂಡಿಯಾದಲ್ಲಿ ರಾರಾಜಿಸತೊಡಗಿವೆ. ಅಲ್ಲದೆ ಅತ್ಯಂತ ಕಠಿಣ ಸಂದರ್ಭಗಳಲ್ಲಿ ತಂಡವು ತೋರಿಸಿದ ಹೋರಾಟದ ಮನೋಭಾವವೂ ಪ್ರಶಂಸನೀಯವಾಗಿದೆ. ಇಂತಹ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನ ತೆರೆಯ ಹಿಂದಿನ ಕಹಾನಿ ರೋಚಕವಾಗಿದೆ.


ಟೀಕಾಕಾರರಿಗೆ ಬ್ಯಾಟ್​ನಲ್ಲೇ ಉತ್ತರಿಸಿದ ರಿಷಭ್ ಪಂತ್..
ಅತ್ಯುತ್ತಮ ಐಐಟಿ ಸಂಸ್ಥೆಗಳು ಸೇರಿದಂತೆ ಕೆಲವು ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳು ಇರುವ ನಗರವೆಂದು ರೂರ್ಕಿಯನ್ನು ಕರೆಯಲಾಗುತ್ತದೆ. ಈ ರೂರ್ಕಿ ರಿಷಭ್ ಪಂತ್ ಅವರ ತವರೂರು. ಬಾಲ್ಯದ ದಿನಗಳಲ್ಲಿ ಪಂತ್ ತನ್ನ ತಾಯಿಯೊಂದಿಗೆ ದೆಹಲಿಯ ಸಾನೆಟ್ ಕ್ಲಬ್‌ನಲ್ಲಿ ಅಭ್ಯಾಸ ಮಾಡಿದ ನಂತರ ಗುರುದ್ವಾರದಲ್ಲಿ ಅನೇಕ ಬಾರಿ ವಿಶ್ರಾಂತಿ ಪಡೆಯುತ್ತಿದ್ದದ್ದು ಇದೆ. ತಂದೆ ರಾಜೇಂದ್ರರ ಮರಣದ ನೋವಿನಲ್ಲೂ ಸಹ ರಿಷಭ್ ಪಂತ್ ಐಪಿಎಲ್‌ನಲ್ಲಿ ಕಣಕ್ಕಿಳಿದಿದ್ದರು. ಇಂತಹ ರಿಷಭ್ ಪಂತ್, ಜೋಶ್ ಹ್ಯಾಝಲ್‌ವುಡ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು ಗೆದ್ದು ಭಾರತಕ್ಕೆ ಚಾಂಪಿಯನ್​ ಪಟ್ಟ ತಂದುಕೊಟ್ಟರು. ಅಲ್ಲದೆ ಟೀಕಾಕಾರರ ಮಾತಿಗೆ ತಮ್ಮ ಬ್ಯಾಟ್​ನಿಂದಲೇ ಉತ್ತರಿಸಿದ್ದಾರೆ.


ತಂದೆಯ ಸಾವು, ಜನಾಂಗೀಯ ನಿಂದನೆಯಲ್ಲಿ ಬೆಂದೆದ್ದ ಮೊಹಮ್ಮದ್ ಸಿರಾಜ್..
ಅತ್ಯಂತ ಬಡ ಕುಟುಂಬದಿಂದ ಬಂದ ಆಟಗಾರ ಮೊಹಮ್ಮದ್ ಸಿರಾಜ್. ಹೈದರಾಬಾದ್​ನಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಗೌಸ್ ಅವರ ಪುತ್ರ. ಐಪಿಎಲ್‌ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿವ ಸಿರಾಜ್​ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿ ಕಾಂಗರೂಗಳ ನಾಡಿಗೆ ತಂಡದೊಂದಿಗೆ ಪ್ರವಾಸ ಬೆಳೆಸಿದರು. ಆದರೆ ಸಿರಾಜ್​ ಅವರ ತಂದೆ ಹೃದಯಘಾತದಿಂದ ಹೈದ್ರಾಬಾದ್​ನಲ್ಲಿ ನಿಧನರಾದರು. ಈ ವಿಚಾರ ತಿಳಿದ ಸಿರಾಜ್​ ಅಕ್ಷರಶಃ ಮಂಕಾಗಿ ಹೋಗಿದ್ದರು.

ಬಿಸಿಸಿಐ ಸಿರಾಜ್​ ಅವರಿಗೆ ಭಾರತಕ್ಕೆ ತೆರಳಲು ಅವಕಾಶ ನೀಡಿದರೂ ಸಹ, ಸಿರಾಜ್​ ಧೃಡಸಂಕಲ್ಪ ಮಾಡಿ ತಂಡದೊಂದಿಗೆ ಉಳಿಯಲು ನಿರ್ಧರಿಸಿದರು. ತನ್ನ ಮೊದಲ ಸರಣಿಯಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿ ತಂದೆಗೆ ಅರ್ಪಿಸುವಾಗ ಸಿರಾಜ್​ ಭಾವುಕರಾಗಿದ್ದು ಪ್ರತಿಯೊಬ್ಬ ಕ್ರಿಕೆಟ್​ ಪ್ರೇಮಿಯ ಕಣ್ಗಳಲ್ಲಿ ಕಣ್ಣೀರು ಬರಿಸಿತು. ಈ ಯುವ ಆಟಗಾರ ಜನಾಂಗೀಯ ನಿಂದನೆಗೆ ಒಳಗಾದರೂ ಸಹ ತನ್ನ ಅದ್ಭುತ ಪ್ರದರ್ಶನದಿಂದ ಈಗ ಭಾರತದ ಹೆಮ್ಮೆಯ ಆಟಗಾರನಾಗಿ ತವರಿಗೆ ಮರಳಲ್ಲಿದ್ದಾರೆ.


ಒಂದು ಸಾವಿರ ರೂಪಾಯಿಗಾಗಿ ಕ್ರಿಕೆಟ್ ಆಡುತ್ತಿದ್ದ ನವದೀಪ್ ಸೈನಿ..
ಬಸ್ ಚಾಲಕನ ಮಗ ಸೈನಿ, ದೆಹಲಿಯಲ್ಲಿ ಒಂದು ಸಾವಿರ ರೂಪಾಯಿಗಾಗಿ ಟೆನಿಸ್ ಚೆಂಡಿನೊಂದಿಗೆ ಕ್ರಿಕೆಟ್ ಆಡುತ್ತಿದ್ದರು. ದೆಹಲಿಯ ಪ್ರಥಮ ದರ್ಜೆ ಆಟಗಾರ ಸುಮಿತ್ ನರ್ವಾಲ್, ಸೈನಿಯನ್ನು ರಣಜಿ ಟ್ರೋಫಿಯ ಅಭ್ಯಾಸಕ್ಕೆ ಕರೆತಂದರು. ಅಲ್ಲಿ ಅಂದಿನ ದೆಹಲಿ ತಂಡದ ನಾಯಕರಾಗಿದ್ದ ಗೌತಮ್ ಗಂಭೀರ್, ಸೈನಿಯನ್ನು ಪಂದ್ಯಾವಳಿಗೆ ಆಯ್ಕೆ ಮಾಡಿದರು. ಆದರೆ ಗಂಭೀರ್ ಅವರ ಈ ತೀರ್ಮಾನದ ಬಗ್ಗೆ ಅಸಮಾಧಾನ ತೋರಿದ ಕೆಲವರು, ಸೈನಿ ದೆಹಲಿಯವನಲ್ಲ. ಹಾಗಾಗಿ ಆತನಿಗೆ ತಂಡದಲ್ಲಿ ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ತಮ್ಮ ನಿರ್ಧಾರದ ಬಗ್ಗೆ ಅಚಲವಾಗಿದ್ದ ಗಂಭೀರ್, ಸೈನಿಯನ್ನು ತಂಡದಿಂದ ಕೈಬಿಟ್ಟರೆ ತಾನು ರಾಜೀನಾಮೆ ನೀಡುವುದಾಗಿ ಸಹ ಬೆದರಿಕೆ ಹಾಕಿದ್ದರು.


ಮೊಮ್ಮಗನಿಗಾಗಿ ಪಿಚ್ ಸಿದ್ಧಪಡಿಸಿದ್ದರು ಶುಭ್​ಮನ್​ ಗಿಲ್ ಅಜ್ಜ..
ಶುಬ್ಮನ್ ಗಿಲ್, ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಯಾಗಿ (ಭವಿಷ್ಯದ ಭಾರತೀಯ ನಾಯಕ) ಕಾಣುವ ಈ ಆಟಗಾರ, ಪಂಜಾಬ್‌ನ ಫಾಜಿಲ್ಕಾ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದವ. ಶುಬ್ಮನ್ ಗಿಲ್ ಅವರ ಅಜ್ಜ ತನ್ನ ಪ್ರೀತಿಯ ಮೊಮ್ಮಗನಿಗೆ ಮೈದಾನದಲ್ಲಿ ಪಿಚ್ ಸಿದ್ಧಪಡಿಸಿ, ಗಿಲ್​ನ ಕ್ರಿಕೆಟ್​ಗೆ ಬಾಲ್ಯದಲ್ಲಿಯೇ ಉತ್ತೇಜನ ನೀಡಿದರು. ಮಗನ ಕ್ರಿಕೆಟಿಂಗ್ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಅವರ ತಂದೆ ಚಂಡಿಗಢದಲ್ಲಿ ನೆಲೆಸಲು ನಿರ್ಧರಿಸಿದರು. ತಂದೆ ಮತ್ತು ಅಜ್ಜನ ಪರಿಶ್ರಮವನ್ನ ವ್ಯರ್ಥ ಮಾಡದ ಗಿಲ್, ಭಾರತ ಅಂಡರ್ -19 ವಿಶ್ವಕಪ್ ತಂಡದ ಸದಸ್ಯರಾಗಿದ್ದರು. ಇತ್ತೀಚೆಗೆ ಗಿಲ್,​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.


ಬಾಲ್ಯದಲ್ಲಿಯೇ ತಾಯಿಯನ್ನ ಕಳೆದುಕೊಂಡ ಪೂಜಾರ ಧೃತಿಗೆಡಲಿಲ್ಲ..
ಮುಖದಲ್ಲಿ ಹೆಚ್ಚು ಭಾವನೆ ವ್ಯಕ್ತಪಡಿಸದ ಈ ರಾಜ್‌ಕೋಟ್​ನ ಆಟಗಾರ.. ಹಲವು ಕಷ್ಟದ ಸಂದರ್ಭಗಳನ್ನು ಎದುರಿಸಿ ಈ ಹಂತಕ್ಕೆ ಬಂದು ತಲುಪಿದ್ದಾರೆ. ಪೂಜಾರ ಅವರ ತಂದೆ ಮತ್ತು ತರಬೇತುದಾರ ಅರವಿಂದ್ ಪೂಜಾರ, ಮಗನ ಈ ಸಾಧನೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜೂನಿಯರ್ ಕ್ರಿಕೆಟ್ ಆಡುವಾಗ ಪೂಜಾರ ಅವರ ತಾಯಿ ತೀರಿಕೊಂಡರು. ಆದರೆ ಈ ಆಟಗಾರ ತನ್ನ ಗುರಿ ಸಾಧಿಸುವಲ್ಲಿ ಹಿಂದೆ ಬೀಳಲಿಲ್ಲ.


ಆರು ಎಸೆತಗಳಿಗೆ ಆರು ಸಿಕ್ಸರ್‌ ಬಾರಿಸಿದ್ದ ಠಾಕೂರ್..
ಶಾರ್ದುಲ್ ಠಾಕೂರ್, ಈ ಪಾಲ್ಘರ್ ಆಟಗಾರ ತನ್ನ 13 ನೇ ವಯಸ್ಸಿನಲ್ಲಿ ಶಾಲಾ ಕ್ರಿಕೆಟ್‌ನಲ್ಲಿ (ಹರೀಶ್ ಶೀಲ್ಡ್) ಒಂದು ಓವರ್‌ನಲ್ಲಿ ಆರು ಎಸೆತಗಳಿಗೆ ಆರು ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದ. ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ವಿದ್ಯಾರ್ಥಿಯಾಗಿದ್ದ ವಿವೇಕಾನಂದ ಇಂಟರ್​ನ್ಯಾಷನಲ್ ಶಾಲೆಯಲ್ಲೇ ಠಾಕೂರ್​ ಅಧ್ಯಯನ ಮಾಡಿದ್ದಾರೆ. ಈ ಇಬ್ಬರು ಆಟಗಾರರಿಗೂ ದಿನೇಶ್ ಲಾಡ್ ತರಬೇತುದಾರರಾಗಿದ್ದಾರೆ.


ಕೋಚ್​ಗೆ ಗೌರವ ಸಲ್ಲಿಸುವ ಸಲುವಾಗಿ ವಾಷಿಂಗ್ಟನ್ ಹೆಸರಿಟ್ಟರು..
ವಾಷಿಂಗ್ಟನ್ ಸುಂದರ್ ಅವರ ತಂದೆ ಮಾಜಿ ಕ್ರಿಕೆಟಿಗ ಸುಂದರ್​ ಅವರು ತಮ್ಮ ವೃತ್ತಿ ಬದುಕಿನಲ್ಲಿ ಮಾರ್ಗದರ್ಶಕರಾಗಿದ್ದ ಪಿ.ಡಿ. ವಾಷಿಂಗ್ಟನ್‌ಗೆ ಗೌರವ ಸಲ್ಲಿಸುವ ಸಲುವಾಗಿ ಸುಂದರ್​ ಅವರ ತಂದೆ ವಾಷಿಂಗ್ಟನ್ ಎಂಬ ಹೆಸರನ್ನು ಸುಂದರ್ ಹೆಸರಿಗೆ ಸೇರಿಸಿದರು. ಇಂತಹ ಸುಂದರ್​ 2016 ರಲ್ಲಿ ಅಂಡರ್ -19 ತಂಡದಲ್ಲಿ ಓಪನರ್ ಆಗಿ ಆಡಿದ್ದರು. ಅವರ ಆಫ್-ಸ್ಪಿನ್ ಬೌಲಿಂಗ್ ನೋಡಿದ ರಾಹುಲ್ ದ್ರಾವಿಡ್ ಮತ್ತು ಪರಾಸ್ ಮಹಾಬ್ರೆ ಬೌಲಿಂಗ್ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದರು.


ನಟರಾಜನ್ ಬಳಿ ಬೂಟ್​ ಖರೀದಿಸಲು ಹಣವಿಲ್ಲರಲಿಲ್ಲ..
ಟಿ ನಟರಾಜನ್, ತಮಿಳುನಾಡಿನ ಮೂಲೆ ಗ್ರಾಮವಾದ ಚಿನ್ನಪ್ಪಂಪಟ್ಟಿಯ ಈ ಆಟಗಾರ ದೈನಂದಿನ ಕೂಲಿ ಕಾರ್ಮಿಕನ ಮಗನಾಗಿದ್ದು, ಬೌಲರ್‌ಗಳಿಗೆ ಬೇಕಾದ ಬೂಟುಗಳನ್ನು ಖರೀದಿಸಲು ಸಹ ಹಣವಿಲ್ಲದೆ ಪರದಾಡಿದ್ದರು. ಆದರೆ ಛಲ ಬಿಡದ ಟಿ ನಟರಾಜನ್ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದಲ್ಲದೆ, ತಮ್ಮ ಗ್ರಾಮದಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಸಹ ಪ್ರಾರಂಭಿಸಿದರು.