ಇಂಗ್ಲೆಂಡ್ ಮಾಜಿ ಆಟಗಾರ, ಖ್ಯಾತ ಕಾಮೆಂಟೇಟರ್ ಮತ್ತು ಕ್ರಿಕೆಟ್ ಅಂಕಣಕಾರರೂ ಆಗಿರುವ ಡೇವಿಡ್ ಲಾಯ್ಡ್, ಸಿಡ್ನಿ ಟೆಸ್ಟ್ ಕೊನೆಯ ದಿನದಂದು ನಿರಂತರವಾಗಿ ಭಾರತದ ರವಿಚಂದ್ರನ್ ಅಶ್ವಿನ್ ಅವರನ್ನು ಮೂದಲಿಸುತ್ತಾ ಅವರ ಏಕಾಗ್ರತೆಗೆ ಭಂಗ ತರುವ ಪ್ರಯತ್ನ ಮಾಡಿದ ಆಸ್ಟ್ರೇಲಿಯಾ ಟೀಮಿನ ನಾಯಕ ಟಿಮ್ ಪೈನ್ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ದಿ ಡೈಲಿ ಮೇಲ್ ಪತ್ರಿಕೆಗೆ ಬರೆದಿರುವ ಅಂಕಣದಲ್ಲಿ ಲಾಯ್ಡ್, ಪೈನ್ ವಿಕೆಟ್ ಹಿಂದೆ ನಿಂತುಕೊಂಡು ಮಾಡುತ್ತಿದ್ದ ಮೂದಲಿಕೆ ಕೇಳಿ ತಾವು ದಿಗ್ಭಾಂತರಾಗಿದ್ದಾಗಿ ಬರೆದುಕೊಂಡಿದ್ದಾರೆ. ಯಾರಾದರೂ ತಮ್ಮನ್ನು ಹಾಗೆ ಟಾರ್ಗೆಟ್ ಮಾಡಿದ್ದರೆ ಜೀವನ ಪರ್ಯಂತ ಅವರಿಗೆ ಮರ್ಯಾದೆ ಕೊಡುತ್ತಿರಲಿಲ್ಲ ಎಂದು ಲಾಯ್ಡ್ ಬರೆದಿದ್ದಾರೆ.
‘ಎದುರಾಳಿ ತಂಡದ ಆಟಗಾರರನ್ನು ಮೂದಲಿಸದಂತೆ, ಸ್ಲೆಡ್ಜ್ ಮಾಡದಂತೆ ತಡೆಯುವುದು ನಾಯಕನ ಕರ್ತವ್ಯವಾಗಿರುತ್ತದೆ, ವೈಯಕ್ತಿಕವಾದ ಉದಾಹರಣೆಯೊಂದಿಗೆ ಅವನು ಟೀಮನ್ನು ಮುನ್ನಡೆಸಬೇಕು. ಇದೇ ವಿಷಯವನ್ನು ಬೇರೆ ರೀತಿಯಲ್ಲಿ ನಾನು ಹೇಳಬಯಸುತ್ತೇನೆ. ರವಿಚಂದ್ರನ್ ಅಶ್ವಿನ್ ಎದುರಿಸಿದ್ದು ನನ್ನೊಂದಿಗೆ ನಡೆದಿದ್ದರೆ, ಹಾಗೆ ಮಾಡಿದವನಿಗೆ ನಾನು ಯಾವತ್ತೂ ಮರ್ಯಾದೆ ನೀಡುತ್ತಿರಲಿಲ್ಲ’ ಎಂದು ಲಾಯ್ಡ್ ಅಂಕಣದಲ್ಲಿ ಹೇಳಿದ್ದಾರೆ.
ಡೇವಿಡ್ ಲಾಯ್ಡ್
‘ವಿಕೆಟ್ ಹಿಂದೆ ಪೈನ್ ಕಿರುಚುತ್ತಿರುವುದು ಕಂಡು ನಾನು ದಿಗ್ಮೂಢನಾದೆ. ಎರಡು ದಶಕಗಳ ಕಾಲ ನಾನು ಕ್ರಿಕೆಟ್ ಆಡಿದ್ದೇನೆ, ಆಗ ಸ್ಲೆಡ್ಜಿಂಗ್ ಅನ್ನೋದು ಅಸ್ತಿತ್ವದಲೇ ಇರಲಿಲ್ಲ. ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಇಯಾನ್ ಚಾಪೆಲ್ ಅದನ್ನು ಮಾಡಿಸುತ್ತಿದ್ದರು ಅಂತ ಜನ ಹೇಳುತ್ತಾರೆ. ಆದರೆ, ಜೆಫ್ ಥಾಮ್ಸನ್ ಮತ್ತು ಡೆನಿಸ್ ಲಿಲ್ಲೀ ಮೊದಲಾದವರು ಮಾಡುತ್ತಿದ್ದಿದ್ದು ಒಂದು ಬಗೆಯ ಮೋಜಿನಂತಿರುತಿತ್ತು. ದಿನದಾಟ ಮುಗಿದ ನಂತರ ಅವರೊಂದಿಗೆ ಕೂತು ಬಿಯರ್ ಹೀರಲು ಮನಸ್ಸಾಗದ ರೀತಿಯಲ್ಲಿ ಅವರು ಯಾವತ್ತೂ ಮಾತಾಡಿರಲಿಲ್ಲ’ ಎಂದು ಲಾಯ್ಡ್ ಹೇಳಿದ್ದಾರೆ.
‘ಪೈನ್ ಅವರ ಹೇಸಿಗೆ ಹುಟ್ಟಿಸುವ ಮಾತುಗಳನ್ನು ಕೇಳಿಸಿಕೊಂಡ ನಂತರ ಆಸ್ಟ್ರೇಲಿಯಾದ ಆಟಗಾರರೊಂದಿಗೆ ಕೂತು ಡ್ರಿಂಕ್ಸ್ ತೆಗೆದುಕೊಳ್ಳಲು ಅಶ್ವಿನ್ಗೆ ಮನಸ್ಸಾದರೂ ಹೇಗೆ ಬಂದೀತು? ತಮ್ಮ ಕೆಟ್ಟ ಮ್ಯಾನಿರಿಸಂಗಳನ್ನು ಸ್ಯಾಂಡ್ ಪೇಪರ್ನಿಂದ ಒರೆಸಿಕೊಂಡರಾಯಿತು ಎಂದು ಅವರು ಭಾವಿಸಿದಂತಿದೆ. ಇವರು ಸುಧಾರಿಸುವುದು ಯಾವಾಗ? ಅವರೆಲ್ಲ ಯಾಕೆ ಹಾಗೆ ಆಡುತ್ತಾರೆನ್ನುವುದು ನನಗರ್ಥವಾಗುತ್ತಿಲ್ಲ.’ ಎಂದು ಲಾಯ್ಡ್ ಬರೆದುಕೊಂಡಿದ್ದಾರೆ.