ಇಂದು, ಅಂದರೆ ಜನವರಿ 24 ರಂದು ವರ್ಷದ ಅತ್ಯುತ್ತಮ ಏಕದಿನ ತಂಡವನ್ನು (ICC Men’s ODI Team of the Year 2022) ಪ್ರಕಟಿಸಿರುವ ಐಸಿಸಿ, ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಟ್ಟಾರೆ ಪ್ರದರ್ಶನದ ಆಧಾರದ ಮೇಲೆ 11 ಆಟಗಾರರನ್ನು ತನ್ನ ತಂಡಕ್ಕೆ ಆಯ್ಕೆ ಮಾಡಿದೆ. ಐಸಿಸಿ ಆಯ್ಕೆ ಮಾಡಿರುವ ವರ್ಷದ ಅತ್ಯುತ್ತಮ ಏಕದಿನ ತಂಡದಲ್ಲಿ 7 ದೇಶಗಳ 11 ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಅಚ್ಚರಿಯ ವಿಷಯವೆಂದರೆ ಏಕದಿನ ವಿಶ್ವ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡದಿಂದ ಒಬ್ಬನೇ ಒಬ್ಬ ಆಟಗಾರ ಐಸಿಸಿ ವರ್ಷದ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಇನ್ನುಳಿಂತೆ ಐಸಿಸಿ ತನ್ನ ಏಕದಿನ ತಂಡದ ನಾಯಕತ್ವವನ್ನು ಪಾಕಿಸ್ತಾನದ ನಾಯಕ ಬಾಬರ್ ಅಜಮ್ಗೆ ಹಸ್ತಾಂತರಿಸಿದೆ. ಈ ಮೂಲಕ ಪಾಕಿಸ್ತಾನದಿಂದ ವರ್ಷದ ಅತ್ಯುತ್ತಮ ಏಕದಿನ ತಂಡಕ್ಕೆ ಆಯ್ಕೆಯಾದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. 28ರ ಹರೆಯದ ಬಾಬರ್ ಕಳೆದ ವರ್ಷ ಏಕದಿನ ಪಂದ್ಯಗಳಲ್ಲಿ 87ಕ್ಕೂ ಅಧಿಕ ಸರಾಸರಿಯಲ್ಲಿ 679 ರನ್ ಗಳಿಸಿದ್ದರ ಫಲವಾಗಿ ಐಸಿಸಿ ವರ್ಷದ ಏಕದಿನ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
🌟 Unveiling the ICC Men’s ODI Team of the Year 2022 🌟
Does your favourite player make the XI? #ICCAwards | Details 👇
— ICC (@ICC) January 24, 2023
ಐಸಿಸಿ ಆಯ್ಕೆ ಮಾಡಿರುವ ವರ್ಷದ ಏಕದಿನ ತಂಡದಲ್ಲಿ ಟೀಂ ಇಂಡಿಯಾದ ಇಬ್ಬರು ಆಟಗಾರು ಸ್ಥಾನ ಪಡೆದಿದ್ದಾರೆ. ಈ ಮೂಲಕ ಐಸಿಸಿ ಏಕದಿನ ತಂಡದಲ್ಲಿ ಒಂದು ದೇಶದಿಂದ ಆಯ್ಕೆಯಾದ ಅತಿ ಹೆಚ್ಚು ಆಟಗಾರರ ಪೈಕಿ ಭಾರತ ಜಂಟಿಯಾಗಿ ಮೊದಲನೇ ಸ್ಥಾನ ಪಡೆದುಕೊಂಡಿದೆ. ಐಸಿಸಿಯ ವರ್ಷದ ಅತ್ಯುತ್ತಮ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಇಬ್ಬರು ಭಾರತೀಯ ಆಟಗಾರರಲ್ಲಿ ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಸಿರಾಜ್ ಹೆಸರಿದೆ. ಐಸಿಸಿ ತಂಡದಲ್ಲಿ ಶ್ರೇಯಸ್ ಅಯ್ಯರ್ 4ನೇ ಸ್ಥಾನದಲ್ಲಿದ್ದರೆ, ಸಿರಾಜ್ ವೇಗದ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
ಭಾರತದಂತೆಯೇ, ಐಸಿಸಿ ಕೂಡ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ನಿಂದ ತಲಾ ಇಬ್ಬರು ಆಟಗಾರರನ್ನು ಆಯ್ಕೆ ಮಾಡಿದೆ. ಆಸ್ಟ್ರೇಲಿಯಾದಿಂದ ಟ್ರಾವಿಸ್ ಹೆಡ್ ಮತ್ತು ಆಡಮ್ ಝಂಪಾ ಸ್ಥಾನ ಪಡೆದಿದ್ದರೆ, ನ್ಯೂಜಿಲೆಂಡ್ನ ವಿಕೆಟ್ಕೀಪರ್ ಆದ ಟಾಮ್ ಲ್ಯಾಥಮ್ ಮತ್ತು ಟ್ರೆಂಟ್ ಬೌಲ್ಟ್ ಐಸಿಸಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್ನ ಶಾಯ್ ಹೋಪ್ ಮತ್ತು ಅಲ್ಜಾರಿ ಜೋಸೆಫ್ ಕೂಡ ಐಸಿಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಅದೇ ಸಮಯದಲ್ಲಿ, ಪಾಕಿಸ್ತಾನ,ಜಿಂಬಾಬ್ವೆ ಮತ್ತು ಬಾಂಗ್ಲಾದೇಶದಿಂದ ತಲಾ ಒಬ್ಬೊಬ್ಬ ಆಟಗಾರ ಐಸಿಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಿಂಬಾಬ್ವೆಯಿಂದ ಸಿಕಂದರ್ ರಜಾ, ಬಾಂಗ್ಲಾದೇಶದಿಂದ ಮೆಹದಿ ಹಸನ್ಗೆ ಅವಕಾಶ ಸಿಕ್ಕಿದೆ.
ಬಾಬರ್ ಅಜಮ್ (ನಾಯಕ- ಪಾಕಿಸ್ತಾನ), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ),ಶಾಯ್ ಹೋಪ್ (ವೆಸ್ಟ್ ಇಂಡೀಸ್),ಶ್ರೇಯಸ್ ಅಯ್ಯರ್ (ಭಾರತ),ಟಾಮ್ ಲ್ಯಾಥಮ್ (ನ್ಯೂಜಿಲೆಂಡ್), ಸಿಕಂದರ್ ರಜಾ (ಜಿಂಬಾಬ್ವೆ), ಮೆಹಿದಿ ಹಸನ್ ಮಿರಾಜ್ (ಬಾಂಗ್ಲಾದೇಶ), ಅಲ್ಜಾರಿ ಜೋಸೆಫ್ (ವೆಸ್ಟ್ ಇಂಡೀಸ್), ಮೊಹಮ್ಮದ್ ಸಿರಾಜ್ (ಭಾರತ), ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್), ಆಡಮ್ ಝಂಪಾ (ಆಸ್ಟ್ರೇಲಿಯಾ).
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ