ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​: ಟಾಪ್​-10 ಬ್ಯಾಟ್ಸ್​ಮನ್​​ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ರೋಹಿತ್ ಶರ್ಮ

ICC Test Ranking: ರೋಹಿತ್ ಅವರು 742 ರೇಟಿಂಗ್ಸ್ ಪಾಯಿಂಟ್​ಗಳನ್ನು ಶೇಖರಿಸಿದ್ದಾರೆ. ಇದು ಅವರು ತಮ್ಮ ಟೆಸ್ಟ್​ ಕರೀಯರ್​ನಲ್ಲಿ 2019 ಅಕ್ಟೋಬರ್​ನಲ್ಲಿ ಶೇಖರಿಸಿದ್ದ 722 ಪಾಂಯಿಂಟ್​ಗಳಿಗಿಂತ 20 ಪಾಯಿಂಟ್​ ಜಾಸ್ತಿಯಿದೆ.

  • TV9 Web Team
  • Published On - 21:48 PM, 1 Mar 2021
ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​: ಟಾಪ್​-10 ಬ್ಯಾಟ್ಸ್​ಮನ್​​ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ರೋಹಿತ್ ಶರ್ಮ

ದುಬೈ: ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಡೆಯುತ್ತಿರುವ ಪ್ರಸಕ್ತ ಸರಣಿಯ ಮೂರನೇ ಟೆಸ್ಟ್​ ಪಂದ್ಯದಲ್ಲಿ ಅತಿಥೇಯರು 10-ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ನಂತರ ಈ ಟೆಸ್ಟ್​ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಅರಂಭ ಆಟಗಾರ ರೋಹಿತ್ ಶರ್ಮ ರವಿವಾರದಂದು ಐಸಿಸಿ ಟೆಸ್ಟ್​ ಱಂಕಿಂಗ್​ಗಳಲ್ಲಿ 6 ಸ್ಥಾನಗಳಷ್ಟು ಜಿಗಿತ ಕಂಡು 8ನೇ ಸ್ಥಾನಕ್ಕೆ ಬಂದಿದ್ದಾರೆ. ಇದು ಅವರ ವೃತ್ತಿಬದುಕಿನ ಅತ್ಯುತ್ತಮ ಱಂಕಿಂಗ್ ಅಗಿದೆ. ಭಾರತದ ಸ್ಪಿನರ್​ಗಳು ವಿಜೃಂಭಿಸಿದ ಸದರಿ ಟೆಸ್ಟ್​ ಪಂದ್ಯದಲ್ಲಿ ರೋಹಿತ್, ಮೊದಲ ಇನ್ನಿಂಗ್ಸ್​ನಲ್ಲಿ 66ರನ್ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಅಜೇಯ 25 ರನ್ ಬಾರಿಸಿದರು. ಅವರು ಬ್ಯಾಟ್ಸ್​ಮನ್​ಗಳ ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ತಮ್ಮ ದೇಶದವರೇ ಅಗಿರುವ ಚೇತೇಶ್ವರ್​ ಪೂಜಾರಾ ಮತ್ತಿತರನ್ನು ಹಿಂದಿಕ್ಕಿದ್ದಾರೆ.

ರೋಹಿತ್ ಅವರು 742 ರೇಟಿಂಗ್ಸ್ ಪಾಯಿಂಟ್​ಗಳನ್ನು ಶೇಖರಿಸಿದ್ದಾರೆ. ಇದು ಅವರು ತಮ್ಮ ಟೆಸ್ಟ್​ ಕರೀಯರ್​ನಲ್ಲಿ 2019 ಅಕ್ಟೋಬರ್​ನಲ್ಲಿ ಶೇಖರಿಸಿದ್ದ 722 ಪಾಯಿಂಟ್​ಗಳಿಗಿಂತ 20 ಪಾಯಿಂಟ್​ ಜಾಸ್ತಿಯಿದೆ.

ಸ್ಪಿನ್ನರ್​ಗಳಿಗೆ ಭಾರೀ ನೆರವು ನೀಡಿದ ಮೊಟೆರಾ ಟೆಸ್ಟ್​ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಪಂದ್ಯದ ವ್ಯಕ್ತಿ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಮಾರಕ ಬೌಲಿಂಗ್ ಪ್ರದರ್ಶನಗಳನ್ನು ನೀಡಿ ಕ್ರಮವಾಗಿ 11 ಮತ್ತು 7 ವಿಕೆಟ್ ಪಡೆದು ತಮ್ಮ ರ‍್ಯಾಂಕಿಂಗ್​ಗಳನ್ನೂ ಉತ್ತಮಪಡಿಸಿಕೊಂಡಿದ್ದಾರೆ.

ಪಟೇಲ್ ಅವರ ಸಾಧನೆ 30 ಸ್ಥಾನಗಳ ಜಿಗಿತ ಕಾಣಲು ನೆರವಾಗಿದ್ದು ಅವರೀಗ ಬೌಲರ್​ಗಳ ರ‍್ಯಾಂಕಿಂಗ್​ನಲ್ಲಿ 38ನೇ ಸ್ಥಾನವನ್ನು ಅಕ್ರಮಿಸಿಕೊಂಡಿದ್ದಾರೆ. ಅಶ್ವಿನ್ ನಾಲ್ಕು ಸ್ಥಾನ ಜಿಗಿದು ಮೂರನೇ ಸ್ಥಾನಕ್ಕೇರಿದ್ದಾರೆ.

ಕೇವಲ ಭಾರತದ ಆಟಗಾರರ ರ‍್ಯಾಂಕಿಂಗ್ ಮಾತ್ರ ಉತ್ತಮಗೊಂಡಿಲ್ಲ, ಕೆಲ ಇಂಗ್ಲೆಂಡ್ ಆಟಗಾರರು ಸಹ ಉತ್ತಮ ಪ್ರದರ್ಶನಗನ್ನು ನೀಡಿ ಱಂಕಿಂಗ್​ಗಳಲ್ಲಿ ಮೇಲಕ್ಕೇರಿದ್ದಾರೆ. ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ಮೊದಲ ಬಾರಿಗೆ ಟಾಪ್-30 ಬೌಲರ್​ಗಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಅವರ ಱಂಕಿಂಗ್ 18 ಅಗಿದೆ. ಮೊಟೆರಾ ಸ್ಟೇಡಿಯಂನಲ್ಲಿ ಅಪರೂಪದ ಬೌಲಿಂಗ್ ಪ್ರದರ್ಶನ ನೀಡಿ ಪ್ರಥಮ ದರ್ಜೆ ಪಂದ್ಯಗಳಲ್ಲಿ ಮೊದಲ ಬಾರಿಗೆ 5 ವಿಕೆಟ್​ ಪಡೆಯುವ ಸಾಧನೆ ಮಾಡಿದ ಇಂಗ್ಲೆಂಟ್​ ಟೀಮಿನ ನಾಯಕ ಜೋ ರೂಟ್ ಬೌಲರ್​ಗಳ ಱಂಕಿಂಗ್​ನಲ್ಲಿ 16 ಸ್ಥಾನ ಮೇಲೆ ಜಿಗಿದು 72ನೇ ಸ್ಥಾನಕ್ಕೆ ಬಂದಿದ್ದಾರೆ. ಅಲ್​-ರೌಂಡರ್​ಗಳ ರ‍್ಯಾಂಕಿಂಗ್​ನಲ್ಲಿ ಅವರು 13 ನೇ ಸ್ಥಾನದಲ್ಲಿದ್ದಾರೆ.

ಇದೇ ಪಂದ್ಯದಲ್ಲಿ ಪ್ರವಾಸಿ ತಂಡದ ಪರ ಅರ್ಧ ಶತಕ ಬಾರಿಸಿದ ಓಪನರ್ ಜಕ್ ಕ್ರಾಲೀ 15 ಸ್ಥಾನ ಜಿಗಿದು 46ನೇ ಸ್ಥಾನಕ್ಕೆ ಬಂದಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ರ‍್ಯಾಂಕಿಂಗ್​ನಲ್ಲಿ ಕೇವಲ ಕ್ರಾಲೀ ಮಾತ್ರ ಗಮನಾರ್ಹ ಜಿಗಿತ ಕಂಡಿದ್ದಾರೆ.

ಇದನ್ನೂ ಓದಿ: ICC T20 Ranking: 2ನೇ ಸ್ಥಾನಕ್ಕೇರಿದ ಕನ್ನಡಿಗ ಕೆ.ಎಲ್.​ ರಾಹುಲ್​.. ಕಿಂಗ್​ ಕೊಹ್ಲಿಗೆ 7ನೇ ಸ್ಥಾನ..!