ಒತ್ತಡದಲ್ಲಿ ಟೀಮ್ ಇಂಡಿಯಾ: ಮತ್ತೆ ಸೈಲೆನ್ಸರ್ ಪ್ರಯೋಗ

Australia vs India: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು. ಆದರೆ ಅಡಿಲೇಡ್​ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಆಸ್ಟ್ರೇಲಿಯನ್ನರು ಭಾರತವನ್ನು 10 ವಿಕೆಟ್​​ಗಳಿಂದ ಸೋಲಿಸಿದೆ. ಇದೀಗ ಉಭಯ ತಂಡಗಳು ಮೂರನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ.

ಒತ್ತಡದಲ್ಲಿ ಟೀಮ್ ಇಂಡಿಯಾ: ಮತ್ತೆ ಸೈಲೆನ್ಸರ್ ಪ್ರಯೋಗ
IND vs AUS
Follow us
ಝಾಹಿರ್ ಯೂಸುಫ್
|

Updated on: Dec 11, 2024 | 9:53 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯವು ಡಿಸೆಂಬರ್ 14 ರಿಂದ ಶುರುವಾಗಲಿದೆ. ಬ್ರಿಸ್ಬೇನ್​ನ ಗಾಬ್ಬಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡವು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಏಕೆಂದರೆ ಈ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಸೋತರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ.

ಅಂದರೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೆ ನೇರವಾಗಿ ಪ್ರವೇಶಿಸಬೇಕಿದ್ದರೆ, ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಮೂರೂ ಪಂದ್ಯಗಳಲ್ಲೂ ಜಯ ಸಾಧಿಸಬೇಕು. ಹೀಗಾಗಿ ಟಿಮ್ ಇಂಡಿಯಾ ಪಾಲಿಗೆ ಮುಂದಿನ ಮೂರು ಮ್ಯಾಚ್​​ಗಳು ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.

ಅತ್ತ ಆಸ್ಟ್ರೇಲಿಯಾ ತಂಡಕ್ಕೆ ಇನ್ನೂ ಐದು ಟೆಸ್ಟ್ ಪಂದ್ಯಗಳಿವೆ. ಇಲ್ಲಿ ಟೀಮ್ ಇಂಡಿಯಾ ವಿರುದ್ಧ 3 ಮ್ಯಾಚ್ ಗೆದ್ದರೆ ಫೈನಲ್​ಗೆ ಪ್ರವೇಶಿಸುವುದು ಖಚಿತ. ಒಂದು ವೇಳೆ ಭಾರತದ ವಿರುದ್ಧ 2 ಮ್ಯಾಚ್​​ಗಳಲ್ಲಿ ಸೋತರೆ, ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರಲು ಉತ್ತಮ ಅವಕಾಶವಿದೆ.

ಈ ಎಲ್ಲಾ ಕಾರಣಗಳಿಂದಾಗಿ ಬ್ರಿಸ್ಬೇನ್ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಒತ್ತಡದ ಪಂದ್ಯ. ಅತ್ತ ಭಾರತ ತಂಡದ ಒತ್ತಡದ ಲಾಭ ಪಡೆಯುವುದರಲ್ಲಿ ಆಸ್ಟ್ರೇಲಿಯನ್ನರು ನಿಸ್ಸೀಮರು.

ಅದರಲ್ಲೂ ನಾಯಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾದ ಒತ್ತಡವನ್ನು ಹೆಚ್ಚಿಸುವಂತಹ ಮಾಸ್ಟರ್ ಪ್ಲ್ಯಾನ್ ರೂಪಿಸುವಲ್ಲಿ ನಿಪುಣರು. ಇದಕ್ಕೆ ಸಾಕ್ಷಿ 2023ರ ಏಕದಿನ ವಿಶ್ವಕಪ್ ಫೈನಲ್.

ಕಳೆದ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದವರೆಗೆ ಸೋಲಿಲ್ಲದ ಸರದಾರರಾಗಿ ಮುನ್ನುಗ್ಗಿದ್ದ ಟೀಮ್ ಇಂಡಿಯಾವನ್ನು ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯನ್ನರು ಮಣಿಸಿದ್ದರು. ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಮಿನ್ಸ್, ಅಹಮದಾಬಾದ್ ಸ್ಟೇಡಿಯಂನಲ್ಲಿ  ಭಾರತದ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ನಾವು ಮೌನವಾಗುವಂತೆ ಮಾಡುತ್ತೇವೆ ಎಂದಿದ್ದರು.

ಅಂದಿನಿಂದ ಸೈಲೆನ್ಸರ್ ಎಂದೇ ಖ್ಯಾತಿ ಪಡೆದಿರುವ ಪ್ಯಾಟ್ ಕಮಿನ್ಸ್ ಇದೀಗ ಗಾಬ್ಬಾ ಟೆಸ್ಟ್​ ಸೋಲಿನ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಅಂದರೆ ಕಳೆದ ಬಾರಿ ಇದೇ ಮೈದಾನದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿತ್ತು. ಆದರೆ ಈ ಬಾರಿ ಇತಿಹಾಸವನ್ನು ಪುನರಾವರ್ತಿಸಲು ಬಿಡುವುದಿಲ್ಲ ಎಂದು ಕಮಿನ್ಸ್ ಘೋಷಿಸಿದ್ದಾರೆ.

ಇದನ್ನೂ ಓದಿ: ಸರಣಿ ಗೆದ್ದ ಬಳಿಕ ಜೈ ಶ್ರೀರಾಮ್ ಎಂದ ಸೌತ್ ಆಫ್ರಿಕಾ ಆಟಗಾರ

ಹೀಗಾಗಿ ಬ್ರಿಸ್ಬೇನ್​ನ ಗಾಬ್ಬಾ ಮೈದಾನದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಈ ಹೋರಾಟದಲ್ಲಿ ಟೀಮ್ ಇಂಡಿಯಾ ಒತ್ತಡವನ್ನು ಮೆಟ್ಟಿ ನಿಲ್ಲಲಿದೆಯಾ? ಅಥವಾ ಪ್ಯಾಟ್ ಕಮಿನ್ಸ್ ಮತ್ತೊಮ್ಮೆ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡಲಿದ್ದಾರಾ ಕಾದು ನೋಡಬೇಕಿದೆ.