ರಾಜ್ಕೋಟ್ನಲ್ಲಿ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದಿನಿಂದ ಶುರುವಾಗಿದೆ. ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ಆರಂಭಿಕ ಆಘಾತದಿಂದ ಹೊರಬಂದಿದೆ. ತಂಡದ ಪರ ನಾಯಕ ರೋಹಿತ್ ಶರ್ಮಾ (Rohit Sharma) ಶತಕ ಸಿಡಿಸಿದರೆ, ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಕೂಡ ಅಜೇಯ ಶತಕ ಸಿಡಿಸಿದ್ದಾರೆ. ಹೀಗಾಗಿ ತಂಡ ಸುಭದ್ರ ಸ್ಥಿತಿಯಲ್ಲಿದೆ. ಈ ನಡುವೆ ಟೆಸ್ಟ್ ಮಾದರಿಯಲ್ಲಿ ಸತತ ವೈಫಲ್ಯಗಳಿಂದ ಬಳಲುತ್ತಿರುವ ಶುಭ್ಮನ್ ಗಿಲ್ರನ್ನು (Shubman Gill) ತಂಡದಿಂದ ಹೊರಗಿಡಬೇಕು ಎಂಬ ಕೂಗು ಜೋರಾಗಿದೆ. ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಫಾರ್ಮ್ಗೆ ಮರಳಿರುವ ಸುಳಿವು ನೀಡಿದ್ದ ಗಿಲ್, ಮೂರನೇ ಟೆಸ್ಟ್ ಪಂದ್ಯದಲ್ಲಿ 9 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಸೀಮಿತ ಓವರ್ಗಳಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಗಿಲ್, ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಪದೇ ಪದೇ ಎಡವುತ್ತಿರುವುದೇಕೆ ಎಂಬುದನ್ನು ನೋಡುವುದಾದರೆ..
ಮೇಲೆ ಹೇಳಿದಂತೆ ಸೀಮಿತ ಓವರ್ಗಳ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಗಿಲ್, ಟೆಸ್ಟ್ ಮಾದರಿಯಲ್ಲಿ ಸತತ ವೈಫಲ್ಯಗಳಿಂದ ಬಳಲು ಕಾರಣವೇ ಅವರ ಕೈಗಳು. ವಾಸ್ತವವಾಗಿ ಶುಭ್ಮನ್ ಗಿಲ್ ಬ್ಯಾಟ್ ಅನ್ನು ತುಂಬಾ ಬಿಗಿಯಾಗಿ ಹಿಡಿಯುತ್ತಾರೆ. ಇದರಿಂದಾಗಿ ಬ್ಯಾಟ್ ತುಂಬಾ ವೇಗವಾಗಿ ಕೆಳಗೆ ಬರುತ್ತದೆ. ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಈ ರೀತಿಯ ಹ್ಯಾಂಡ್‌ಗ್ರಿಪ್ ಸ್ವೀಕಾರಾರ್ಹವಾಗಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಶೈಲಿಯ ಬ್ಯಾಟಿಂಗ್ ಬ್ಯಾಟರ್ಗೆ ತೊಂದರೆಯನ್ನುಂಟು ಮಾಡುತ್ತದೆ. ವಿಶೇಷವಾಗಿ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಮೇಲೆ ಇನ್ನಿಷ್ಟು ಪರಿಣಾಮ ಬೀರುತ್ತದೆ. ಗಿಲ್ ತಮ್ಮ ಬಲಗೈನಲ್ಲಿ ಬ್ಯಾಟ್ ಅನ್ನು ತುಂಬಾ ಗಟ್ಟಿಯಾಗಿ ಹಿಡಿಯುತ್ತಾರೆ. ಅದಕ್ಕಾಗಿಯೇ ಅವರು ಕಟ್ ಮತ್ತು ಪುಲ್ ಶಾಟ್‌ಗಳನ್ನು ಚೆನ್ನಾಗಿ ಆಡುತ್ತಾರೆ. ಆದರೆ ಚೆಂಡಿನ ಲೆಂತ್ ಕಡಿಮೆಯಾದಾಗ ಅದನ್ನು ಡಿಫೆಂಡ್ ಮಾಡುವಲ್ಲಿ ಕಷ್ಟವಾಗುತ್ತದೆ.
ರಾಜ್‌ಕೋಟ್ ಟೆಸ್ಟ್‌ನಲ್ಲಿ ಶುಭಮನ್ ಗಿಲ್ ಅವರ ವಿಕೆಟ್ ಅನ್ನು ವೇಗದ ಬೌಲರ್ ಮಾರ್ಕ್ ವುಡ್ ಪಡೆದರು. ವುಡ್ ಬೌಲ್ ಮಾಡಿದ ಔಟ್ ಸ್ಚಿಂಗ್ ಎಸೆತವನ್ನು ಡಿಫೆಂಡ್ ಮಾಡಲು ಗಿಲ್ ಪ್ರಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್‌ನ ಅಂಚನ್ನು ತಾಗಿ ವಿಕೆಟ್‌ಕೀಪರ್ ಬೆನ್ ಫಾಕ್ಸ್ ಕೈ ಸೇರಿತು. ಗಿಲ್ ಔಟಾದ ಬಳಿಕ ಪಂದ್ಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ದಿನೇಶ್ ಕಾರ್ತಿಕ್, ಗಿಲ್ ಏಕೆ ಈ ರೀತಿ ಏಕೆ ಔಟಾದರು ಎಂಬುದನ್ನು ವಿವರಿಸಿದರು. ಕಾರ್ತಿಕ್ ಕೂಡ ಮೇಲೆ ಹೇಳಿದ ಮಾತನ್ನೇ ಹೇಳಿದರು
ಬ್ಯಾಟರ್ ಸಾಫ್ಟ್ ಹ್ಯಾಂಡ್ನಲ್ಲಿ ಬ್ಯಾಟಿಂಗ್ ಮಾಡಿದರೆ ಅವರು ಸ್ಲಿಪ್ ಅಥವಾ ವಿಕೆಟ್ ಕೀಪರ್ಗೆ ಕ್ಯಾಚ್ ನೀಡುವ ಸಾಧ್ಯತೆ ಕಡಿಮೆ ಇರುತ್ತದೆ. ಚೆಂಡು ಸ್ವಲ್ಪ ಸ್ವಿಂಗ್ ಪಡೆದರೆ, ಸಾಫ್ಟ್ ಹ್ಯಾಂಡ್ಗ್ರಿಪ್ನಿಂದ ಚೆಂಡನ್ನು ಡಿಫೆಂಡ್ ಮಾಡಬಹುದು. ಇದರಿಂದಾಗಿ ವೇಗ ಕಳೆದುಕೊಳ್ಳುವ ಚೆಂಡು ಸ್ಲಿಪ್ ಅಥವಾ ವಿಕೆಟ್ ಕೀಪರ್ ಕೈಗೆ ಸೇರುವ ಮೂನವೇ ನೆಲಕ್ಕಪಳಿಸುತ್ತದೆ. ಸಚಿನ್ ತೆಂಡೂಲ್ಕರ್, ಎಬಿ ಡಿವಿಲಿಯರ್ಸ್, ಕುಮಾರ ಸಂಗಕ್ಕಾರ, ಮಹೇಲ ಜಯವರ್ಧನೆ ಅವರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳೆಲ್ಲ ಸಾಫ್ಟ್ ಹ್ಯಾಂಡ್‌ಗ್ರಿಪ್ ತಂತ್ರ ಬಳಸುತ್ತಾರೆ. ಹೀಗಾಗಿ ಈ ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಯಶಸ್ವಿಯಾಗಿದ್ದು. ಈಗ ಶುಭಮನ್ ಗಿಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ ತಮ್ಮಲ್ಲಿರುವ ಲೋಪವನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಬೇಕಿದೆ.
ಶುಭಮನ್ ಗಿಲ್ ಇದುವರೆಗೆ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 3 ಶತಕ ಸೇರಿದಂತೆ ಕೇವಲ 30.79 ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಅಗ್ರ ಕ್ರಮಾಂಕದಲ್ಲಿ ಗಿಲ್ ಅವರ ಕಳಪೆ ಪ್ರದರ್ಶನವನ್ನು ಸಾಬೀತುಪಡಿಸುತ್ತದೆ. ಗಿಲ್ ತನ್ನ ಅಲ್ಪಾವಧಿಯ ಟೆಸ್ಟ್ ವೃತ್ತಿಜೀವನದಲ್ಲಿ 4 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. 9 ಬಾರಿ ಅವರಿಗೆ ಎರಡು ಅಂಕಿಗಳನ್ನು ಮುಟ್ಟಲು ಸಾಧ್ಯವಾಗಿಲ್ಲ. ಕೇವಲ ನಾಲ್ಕು ಬಾರಿ ಮಾತ್ರ ಅರ್ಧಶತಕ ಸಿಡಿಸಿದ್ದಾರೆ. ಗಿಲ್ ಅವರ ಪ್ರದರ್ಶನ ಹೀಗೇ ಮುಂದುವರೆದರೆ ಅವರು ಬಹುಬೇಗನೇ ಟೆಸ್ಟ್ ತಂಡದಿಂದ ಹೊರಬೀಳಲಿದ್ದಾರೆ.
Published On - 5:03 pm, Thu, 15 February 24