ಭಾರತ vs ಆಸ್ಟ್ರೇಲಿಯಾ: 13.2 ಓವರ್ಗಳಿಗೆ ಸೀಮಿತವಾದ ಮೊದಲ ದಿನದಾಟ
India vs Australia 3rd Test: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 295 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು. ಇನ್ನು ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಜಯ ಸಾಧಿಸಿದೆ. ಇದೀಗ ಉಭಯ ತಂಡಗಳು 3ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದು, ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟವು ಮಳೆಗೆ ಆಹುತಿಯಾಗಿದೆ. ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಾಟದಲ್ಲಿ ಕೇವಲ 13.2 ಓವರ್ಗಳನ್ನು ಆಡಲು ಮಾತ್ರ ಅವಕಾಶ ಸಿಕ್ಕಿದೆ. 14 ಓವರ್ನಿಂದ ಶುರುವಾದ ವರುಣನ ಅವಕೃಪೆಯಿಂದಾಗಿ ಮೊದಲ ದಿನದಾಟವನ್ನು ರದ್ದುಗೊಳಿಸಲಾಯಿತು.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಎಡಗೈ ದಾಂಡಿಗ ಉಸ್ಮಾನ್ ಖ್ವಾಜಾ ಹಾಗೂ ಯುವ ಬಲಗೈ ಬ್ಯಾಟರ್ ನಾಥನ್ ಮೆಕ್‌ಸ್ವೀನಿ ಎಚ್ಚರಿಕೆಯ ಆರಂಭ ಒದಗಿಸಿದ್ದರು.
ಮೊದಲ ಹತ್ತು ಓವರ್ಗಳವರೆಗೆ ಕ್ರೀಸ್ ಕಚ್ಚಿ ನಿಲ್ಲುವ ತಂತ್ರದೊಂದಿಗೆ ಕಣಕ್ಕಿಳಿದ ಈ ಜೋಡಿಯು ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿದರು. ಇದರ ನಡುವೆ 33 ಎಸೆತಗಳನ್ನು ಎದುರಿಸಿದ ನಾಥನ್ ಮೆಕ್‌ಸ್ವೀನಿ 4 ರನ್ ಗಳಿಸಿದರೆ, ಉಸ್ಮಾನ್ ಖ್ವಾಜಾ 47 ಎಸೆತಗಳಲ್ಲಿ 3 ಫೋರ್ಗಳೊಂದಿಗೆ 19 ರನ್ ಬಾರಿಸಿದರು.
ಈ ಮೂಲಕ 13.2 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡವು 28 ರನ್ ಕಲೆಹಾಕಿತು. ಈ ವೇಳೆ ಭಾರೀ ಮಳೆಯಾಗಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಇದಾದ ಬಳಿಕ ಮಳೆ ಮುಂದುವರೆದಿದ್ದರಿಂದ ದ್ವಿತೀಯ ಸೆಷನ್ ಸಂಪೂರ್ಣ ಮಳೆಗೆ ಆಹುತಿಯಾಯಿತು.
ಇನ್ನು ತೃತೀಯ ಸೆಷನ್ ಆರಂಭಿಸುವಂತಹ ಪರಿಸ್ಥಿತಿ ಕಂಡು ಬಾರದ ಕಾರಣ ಮೊದಲ ದಿನದಾಟವನ್ನು ರದ್ದುಗೊಳಿಸಲು ಅಂಪೈರ್ ನಿರ್ಧರಿಸಿದ್ದಾರೆ. ಅದರಂತೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೊದಲ ದಿನದಾಟವು ಮಳೆಗೆ ಆಹುತಿಯಾಗಿದ್ದು, ಇನ್ನೂ 4 ದಿನದಾಟಗಳು ಬಾಕಿಯಿವೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: IPL 2025 vs PSL 2025: ಐಪಿಎಲ್ಗೆ ಟಕ್ಕರ್ ಕೊಡಲು ಪಿಎಸ್ಎಲ್ ರೆಡಿ..!
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝಲ್‌ವುಡ್.
ಭಾರತದ ಪಾಲಿಗೆ ನಿರ್ಣಾಯಕ ಪಂದ್ಯ:
ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಆಸ್ಟ್ರೇಲಿಯಾ ವಿರುದ್ಧದ ಉಳಿದ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾ ನೇರವಾಗಿ ಫೈನಲ್ಗೆ ಪ್ರವೇಶಿಸಬಹುದು. ಒಂದು ವೇಳೆ ಉಳಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಸೋತರೂ ಫೈನಲ್ಗೆ ಪ್ರವೇಶಿಸಲು ಬೇರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.
Published On - 12:12 pm, Sat, 14 December 24