India vs England, 4th Test, Day 1, LIVE Score: ಮೊದಲ ದಿನದಾಟದಲ್ಲಿ ಭಾರತ ಮೇಲುಗೈ, ಪಟೇಲ್​ಗೆ 4 ವಿಕೆಟ್

Ind vs Eng, 4th Test: ಭಾರತ ಮತ್ತು ಇಂಗ್ಲೆಂಡ್ ನಡುವೆ ಪ್ರಸಕ್ತ ಸರಣಿಯ ಕೊನೆಯ ಟೆಸ್ಟ್ ಪಂದ್ಯ ಇಂದು ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಆರಂಭಗೊಂಡಿದೆ.

  • TV9 Web Team
  • Published On - 16:58 PM, 4 Mar 2021
India vs England, 4th Test, Day 1, LIVE Score: ಮೊದಲ ದಿನದಾಟದಲ್ಲಿ ಭಾರತ ಮೇಲುಗೈ, ಪಟೇಲ್​ಗೆ 4 ವಿಕೆಟ್
ಅಕ್ಷರ್​ ಪಟೇಲ್​ಗೆ ವಿಕೆಟ್, ಭಾರತೀಯ ಆಟಗಾರರ ಸಂಭ್ರಮ

India vs England 4th Test, Day 1 Live: ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಆರಂಭವಾಗಿರುವ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟ ಕೊನೆಗೊಂಡಾಗ ಭಾರತ 1 ವಿಕೆಟ್​ ನಷ್ಟಕ್ಕೆ 24 ರನ್ ಗಳಿಸಿತ್ತು.  ರೋಹಿತ್ ಶರ್ಮ 8 ಮತ್ತು ಚೇತೇಶ್ವರ್ ಪೂಜಾರಾ 15 ರನ್​ ಗಳಿಸಿ ಆಡುತ್ತಿದ್ದಾರೆ. ಆರಂಭ ಆಟಗಾರ ಶುಭ್ಮನ್ ಗಿಲ್ ತಮ್ಮ ಖಾತೆ ತೆರೆಯಲು ವಿಫಲರಾಗಿ ಭಾರತದ ಇನ್ನಿಂಗ್ಸ್​ನ ಮೊದಲ ಓವರಿನಲ್ಲೇ ವೇಗದ ಬೌಲರ್ ಜಿಮ್ಮಿ  ಆಂಡರ್ಸನ್ ಅವರಿಗೆ ವಿಕೆಟ್ ಒಪ್ಪಿಸಿದರು.  

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 205 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು. ಪ್ರವಾಸಿ ತಂಡದ ಆರಂಭ ಆಟಗಾರರು ಟೀಮಿಗೆ ಉತ್ತಮ ಆರಂಭ ಕೊಡಿಸಲು ಮತ್ತೊಮ್ಮೆ ವಿಫಲರಾದರು. ಹಾಗೆಯೇ ಮೊದಲ ಟೆಸ್ಟ್​ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ದ ನಾಯಕ ಜೋ ರೂಟ್​ ಕೇವಲ 5 ರನ್​ ಗಳಿಸಿ ಮೊಹಮ್ಮದ್ ಸಿರಾಜ್​ಗೆ ವಿಕೆಟ್​ ಒಪ್ಪಿಸಿದರು.

ಮೂರನೇ ಟೆಸ್ಟ್​ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಅಕ್ಷರ್ ಪಟೇಲ್ ಈ ಪಂದ್ಯದಲ್ಲೂ ಉತ್ಕೃಷ್ಟ ಪ್ರದರ್ಶನ ನೀಡಿ 68 ರನ್​ಗಳಿಗೆ 4 ವಿಕೆಟ್ ಪಡೆದರು.

ವಿಶ್ವದ ಅಗ್ರಮಾನ್ಯ ಆಲ್​ರೌಂಡರ್​ಗಳಲ್ಲಿ ಒಬ್ಬರೆನಿಸಿಕೊಂಡಿರುವ ಬೆನ್ ಸ್ಟೋಕ್ಸ್ ಅರ್ಧ ಶತಕ (55,  6 ಬೌಂಡರಿ, 2 ಸಿಕ್ಸ್  ) ಬಾರಿಸಿ ಇಂಗ್ಲೆಂಡ್​ಗೆ ಆಸರೆಯಾದರು. ಭಾರತಕ್ಕೆ ಸ್ಟೋಕ್ಸ್ ಅಪಾಯಕಾರಿಯಾಗುತ್ತಿದ್ದ ಸಮಯದಲ್ಲೇ ವಾಷಿಂಗ್ಟನ್ ಸುಂದರ್​ ಅವರನ್ನು ಎಲ್​ ಬಿ ಬಲೆಗೆ ಕೆಡವಿದರು. ಡೇನಿಯಲ್ ಲಾರೆನ್ಸ್ ಉಪಯುಕ್ತ 46 (8 ಬೌಂಡರಿ) ರನ್​ಗಳ ಕಾಣಿಕೆ ನೀಡಿದರು.

ದಿನದಾಟದ ಮೂರನೇ ಸೆಷನ್​ನಲ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾದ ರವಿಚಂದ್ರನ್ ಅಶ್ವಿನ್​, ಒಟ್ಟು 3 ವಿಕೆಟ್​ಗಳನ್ನು ಬುಟ್ಟಿಗೆ ಹಾಕಿಕೊಂಡರು. ವೇಗದ ಬೌಲರ್ ಮೊಹಮ್ಮದ್ ಸಿರಾಜ್ 2 ವಿಕೆಟ್​ ಪಡೆದರೆ ಮತ್ತೊಂದು ವಿಕೆಟ್ ಅನ್ನು ವಾಷಿಂಗ್ಟನ್ ಸುಂದರ್​ ಪಡೆದರು.

ಭಾರತ ಆಡುವ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಿದೆ, ಜಸ್ಪ್ರೀತ್ ಅವರ ಸ್ಥಾನದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಆಡಿಸುತ್ತಿದೆ.

ಅತ್ತ,  ಇಂಗ್ಲೆಂಡ್ ಮೂರನೇ ಟೆಸ್ಟ್​ನಲ್ಲಾಡಿದ ಇಬ್ಬರು ವೇಗದ ಬೌಲರ್​ಗಳು- ಸ್ಟುವರ್ಟ್ ಬ್ರಾಡ್ ಮತ್ತು ಜೊಫ್ರಾ ಆರ್ಚರ್​ ಸ್ಥಾನದಲ್ಲಿ ಆಫ್-ಸ್ಪಿನ್ನರ್ ಡಾಮ್ ಬೆಸ್ ಮತ್ತು ಬ್ಯಾಟಿಂಗ್ ಆಲ್​ರೌಂಡರ್ ಡೇನಿಯಲ್ ಲಾರೆನ್ಸ್ ಅವರನ್ನು ಆಡಿಸುತ್ತಿದೆ.

4-ಟೆಸ್ಟ್​ಗಳ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುಂದಿದ್ದು ಸದರಿ ಟೆಸ್ಟ್​ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಜೂನ್​ನಲ್ಲಿ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಆಡುವ ಅರ್ಹತೆ ಗಿಟ್ಟಿಸಲಿದೆ. ಒಂದು ಪಕ್ಷ ಭಾರತ ಈ ಪಂದ್ಯವನ್ನು ಸೋತರೆ ಆಸ್ಟ್ರೇಲಿಯಾ ಅರ್ಹತೆ ಗಿಟ್ಟಿಸಿಬಿಡುತ್ತದೆ. ನ್ಯೂಜಿಲೆಂಡ್ ಈಗಾಗಲೇ ಫೈನಲ್ ಪ್ರವೇಶಿಸಿದೆ.

ಸಂಕ್ಷಿಪ್ತ ಸ್ಖೋರ್: ಇಂಗ್ಲೆಂಡ್ (ಮೊದಲ ಇನ್ನಿಂಗ್ಸ್) 205 ( ಬೆನ್ ಸ್ಟೋಕ್ಸ್ 55, ಡೇನಿಯಲ್ ಲಾರೆನ್ಸ್ 46 ಓಲ್ಲೀ ಪೋಪ್ 29, ಜಾನಿ ಬೇರ್​ ಸ್ಟೋ 28, ಅಕ್ಷರ್ ಪಟೇಲ್ 4|68, ರವಿಚಂದ್ರನ್ ಅಶ್ವಿನ್ 3/47, ಮೊಹಮ್ಮದ್ ಸಿರಾಜ್ 2/45)

ಭಾರತ (ಮೊದಲ ಇನ್ನಿಂಗ್ಸ್) 24/1 (ರೋಹಿತ್ ಶರ್ಮ ಬ್ಯಾಟಿಂಗ್ 8, ಚೇತೇಶ್ವರ್​ ಪೂಜಾರಾ ಬ್ಯಾಟಿಂಗ್ 15, ಜಿಮ್ಮಿ ಆಂಡರ್ಸನ್ 0/1)