India vs England: ಗಾಯದಿಂದ ಚೇತರಿಸಿಕೊಂಡ ಟೀಂ ಇಂಡಿಯಾ ಆಲ್‌ರೌಂಡರ್ ಜಡೇಜಾ.. T20 – ಏಕದಿನ ಸರಣಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆ?

India vs England: ಜಡೇಜಾ ಟ್ವಿಟ್ಟರ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿ, ಈಗ ನಾನು ಮೈದಾನಕ್ಕೆ ಮರಳಿದ್ದೇನೆ ಎಂದು ಬರೆದು ಕೊಂಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಅಥವಾ ಏಕದಿನ ಸರಣಿಯಲ್ಲಿ ಜಡೇಜಾ ತಂಡಕ್ಕೆ ಮರಳುವ ನಿರೀಕ್ಷೆಗಳಿವೆ.

  • TV9 Web Team
  • Published On - 8:54 AM, 3 Mar 2021
India vs England: ಗಾಯದಿಂದ ಚೇತರಿಸಿಕೊಂಡ ಟೀಂ ಇಂಡಿಯಾ ಆಲ್‌ರೌಂಡರ್ ಜಡೇಜಾ.. T20 - ಏಕದಿನ ಸರಣಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆ?
ಟೀಂ ಇಂಡಿಯಾ ಆಟಗಾರರು

ಅಹಮದಾಬಾದ್: ಪ್ರಸ್ತುತ ಇಂಗ್ಲೆಂಡ್ (ಇಂಗ್ಲೆಂಡ್) ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಿದ್ಧತೆ ನಡೆಸಿದೆ. ಮಾರ್ಚ್ 4 ರಿಂದ ಈ ಪಂದ್ಯ ನಡೆಯಲಿದೆ. ಇದರ ನಂತರ, ಈ ಉಭಯ ತಂಡಗಳು ಟಿ20 ಸರಣಿಯಲ್ಲಿ ಭಾಗವಹಿಸಲಿದ್ದು, ಐದು ಪಂದ್ಯಗಳು ನಡೆಯಲಿವೆ. ಇಂತಹ ಪರಿಸ್ಥಿತಿಯಲ್ಲಿ, ಟೀಂ ಇಂಡಿಯಾಕ್ಕೆ ಟಿ20 ಸರಣಿಗೂ ಮೊದಲು ಸಂತೋಷದ ವಿಚಾರವೊಂದು ಕೇಳಿಬಂದಿದೆ. ಅದೆನೆಂದರೆ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಹೆಬ್ಬೆರಳಿನ ಗಾಯದಿಂದ ಚೇತರಿಸಿಕೊಂಡಿದ್ದು, ಅಭ್ಯಾಸಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಗೊಂಡಿದ್ದ ಜಡೇಜಾ ಹೆಬ್ಬೆರಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವಿಶ್ರಾಂತಿ ಪಡೆದ ನಂತರ ಜಡೇಜಾ, ಈಗ ಮೈದಾನದಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಯ
ಆಸ್ಟ್ರೇಲಿಯಾ ಪ್ರವಾಸದ ವೇಳೆ ಮೆಲ್ಬೋರ್ನ್‌ನಲ್ಲಿ ಆಡಿದ ಮೂರನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಗಾಯಗೊಂಡಿದ್ದರು. ಈ ಸರಣಿಯಲ್ಲಿ, ಬೌಲಿಂಗ್​ ಮತ್ತು ಬ್ಯಾಟ್‌ನಿಂದ ಉತ್ತಮ ಪ್ರದರ್ಶನ ನೀಡಿದ ಜಡೇಜಾಗೆ ಈ ಗಾಯದಿಂದಾಗಿ ಬ್ರಿಸ್ಬೇನ್‌ನಲ್ಲಿ ನಾಲ್ಕನೇ ಮತ್ತು ನಿರ್ಣಾಯಕ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. 4 ಪಂದ್ಯವನ್ನು ಗೆದ್ದ ಟೀಂ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಸತತ ಎರಡನೇ ಟೆಸ್ಟ್ ಸರಣಿ ಗೆದ್ದು ಬೀಗಿದ ಸಾಧನೆ ಮಾಡಿತ್ತು. ಈಗ ಜಡೇಜಾ ಟ್ವಿಟ್ಟರ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿ, ಈಗ ನಾನು ಮೈದಾನಕ್ಕೆ ಮರಳಿದ್ದೇನೆ ಎಂದು ಬರೆದು ಕೊಂಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಅಥವಾ ಏಕದಿನ ಸರಣಿಯಲ್ಲಿ ಜಡೇಜಾ ತಂಡಕ್ಕೆ ಮರಳುವ ನಿರೀಕ್ಷೆಗಳಿವೆ.

ಟಿ20 ಸರಣಿ ಮಾರ್ಚ್ 12 ರಿಂದ ಪ್ರಾರಂಭ
ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಪ್ರಸ್ತುತ ಪರಸ್ಪರ ಮುಖಾಮುಖಿಯಾಗಿವೆ. ಸರಣಿಯಲ್ಲಿ ಟೀಂ ಇಂಡಿಯಾ 2-1ರಿಂದ ಮುನ್ನಡೆ ಸಾಧಿಸಿದೆ. ಟೆಸ್ಟ್ ಸರಣಿಯ ನಂತರ, ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿಯು ಮಾರ್ಚ್ 12 ರಿಂದ ಪ್ರಾರಂಭವಾಗಲಿದ್ದು, ಇವೆಲ್ಲವೂ ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಯ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ. ಈ ಸರಣಿಯ ನಂತರ, ಭಾರತೀಯ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯಲ್ಲಿ ಭಾಗವಹಿಸಲಿದ್ದಾರೆ. ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿದ್ದು, ಐಪಿಎಲ್‌ನಲ್ಲಿ ಮಿಂಚು ಹರಿಸುವ ತವಕದಲ್ಲಿದ್ದಾರೆ.

ಇದನ್ನೂ ಓದಿ: India vs England Test Series: ಬುಮ್ರಾ ರಜೆ ಪಡೆದಿರುವುದು ಯಾಕೆ ಅನ್ನುವ ವಿಷಯ ಬಯಲಾಯ್ತು!