India vs New Zealand 1st Test: ಭಾರತ-ನ್ಯೂಜಿಲೆಂಡ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

India vs New Zealand, 1st Test: ಆ ಬಳಿಕ ಬಂದ ರಾಸ್ ಟೇಲರ್, ಹೆನ್ರಿ ನಿಕೋಲಸ್ ಅಕ್ಷರ್ ಹಾಗೂ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಮೇಲುಗೈ ಸಾಧಿಸಿದ ಟೀಮ್ ಇಂಡಿಯಾ ಬೌಲರುಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು.

India vs New Zealand 1st Test: ಭಾರತ-ನ್ಯೂಜಿಲೆಂಡ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ
India vs New Zealand, 1st Test

ಭಾರತ-ನ್ಯೂಜಿಲೆಂಡ್ (India vs New Zealand 1st Test) ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯಕಂಡಿದೆ. ದ್ವಿತೀಯ ಇನಿಂಗ್ಸ್​ ಮೂಲಕ ಟೀಮ್ ಇಂಡಿಯಾ ನೀಡಿದ 284 ರನ್​ಗಳ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಇದಕ್ಕೂ ಮುನ್ನ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಶತಕದೊಂದಿಗೆ 345 ರನ್​ ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ಅಕ್ಷರ್ ಪಟೇಲ್ ಸ್ಪಿನ್ ಮೋಡಿ ಮುಂದೆ ಕ್ರೀಸ್​ ಕಚ್ಚಿ ನಿಲ್ಲಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ 296 ರನ್​ಗೆ ಆಲೌಟ್ ಆಗುವ ಮೂಲಕ 49 ರನ್​ಗಳ ಹಿನ್ನಡೆ ಅನುಭವಿಸಿತ್ತು.

49 ರನ್​ಗಳೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಮತ್ತೆ ಆಸರೆಯಾಗಿದ್ದು ಶ್ರೇಯಸ್ ಅಯ್ಯರ್. ಈ ಬಾರಿ 65 ರನ್​ಗಳ ಅರ್ಧಶತಕ ಬಾರಿ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ಮತ್ತೊಂದೆಡೆ ವೃದ್ಧಿಮಾನ್ ಸಾಹ ಕೂಡ ಆಕರ್ಷಕ ಅರ್ಧಶತಕ ಬಾರಿಸಿದರು. ಅಷ್ಟೇ ಅಲ್ಲದೆ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ 7 ವಿಕೆಟ್ ನಷ್ಟದೊಂದಿಗೆ 234 ರನ್​ಗಳಿಸಿದ್ದ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸಿತು.

ಮೊದಲ ಇನಿಂಗ್ಸ್​ ಹಿನ್ನಡೆಯೊಂದಿಗೆ 284 ರನ್​ಗಳ ಟಾರ್ಗೆಟ್ ಪಡೆದ ನ್ಯೂಜಿಲೆಂಡ್​ಗೆ ನಾಲ್ಕನೇ ದಿನದಾಟದ ಕೊನೆಯ ಓವರ್​ಗಳ ವೇಳೆ ಅಶ್ವಿನ್ ಆರಂಭಿಕ ಆಘಾತ ನೀಡಿದರು. ಕೇವಲ 4 ರನ್​ಗೆ ಒಂದು ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ 5ನೇ ದಿನದಾಟದಲ್ಲಿ ಎಚ್ಚರಿಕೆಯ ಆಟವಾಡಿದರು.

ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯುವ ಇರಾದೆಯಲ್ಲಿ ಕಣಕ್ಕಿಳಿದ ನ್ಯೂಜಿಲೆಂಡ್ ಪರ ಲಾಥಮ್ 146 ಎಸೆತಗಳಲ್ಲಿ 52 ರನ್​ ಬಾರಿಸಿ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ವಿಲಿಯಂ ಸೊಮರ್ವೆಲ್ 110 ಎಸೆತಗಳಲ್ಲಿ 36 ರನ್​ ಬಾರಿಸಿ ಕ್ರೀಸ್ ಕಚ್ಚಿ ನಿಂತರು. ಬಳಿಕ ಬಂದ ಕೇನ್ ವಿಲಿಯಮ್ಸನ್ ಕೂಡ 112 ಎಸೆತಗಳನ್ನು ಎದುರಿಸಿ 24 ರನ್ ಮಾತ್ರ ಕಲೆಹಾಕಿದರು. ಆದರೆ ವಿಲಿಯಂ ವಿಕೆಟ್ ಉರುಳಿಸಿ ಉಮೇಶ್ ಯಾದವ್ ಟೀಮ್ ಇಂಡಿಯಾಗೆ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ವಿಲಿಯಮ್ಸನ್ ಅವರನ್ನೂ ಕೂಡ ಜಡೇಜಾ ಎಲ್​ಬಿ ಬಲೆಗೆ ಬೀಳಿಸಿದರು.

ಆ ಬಳಿಕ ಬಂದ ರಾಸ್ ಟೇಲರ್, ಹೆನ್ರಿ ನಿಕೋಲಸ್ ಅಕ್ಷರ್ ಹಾಗೂ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಮೇಲುಗೈ ಸಾಧಿಸಿದ ಟೀಮ್ ಇಂಡಿಯಾ ಬೌಲರುಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇದರ ಬೆನ್ನಲ್ಲೇ ಟಿಮ್ ಸೌಥಿ ಹಾಗೂ ಕೈಲ್ ಜೇಮಿಸನ್ ವಿಕೆಟ್ ಉರುಳಿಸಿ ಜಡೇಜಾ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು.

ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ ರವೀಂದ್ರ ಒಂದೆಡೆ ಬಂಡೆಯಂತೆ ಕ್ರೀಸ್ ಕಚ್ಚಿ ನಿಂತಿದ್ದರು. 91 ಎಸೆತಗಳನ್ನು ಎದುರಿಸಿದ ರಚಿನ್ ಏಕಾಂಗಿಯಾಗಿ ಹೋರಾಡಿ ಅಜೇಯ 18 ರನ್​ಗಳಿಸಿದರು. ಪರಿಣಾಮ ಭಾರತ ತಂಡವು ಕೊನೆಯ 8 ಓವರ್​ಗಳಲ್ಲಿ ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಅದರಂತೆ ನ್ಯೂಜಿಲೆಂಡ್ ತಂಡವು 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡರು. ಅಂತಿಮ ಹಂತದಲ್ಲಿ ಭಾರೀ ರೋಚಕತೆಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಭಾರತದ ಪರ ಅಶ್ವಿನ್ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 4 ವಿಕೆಟ್ ಉರುಳಿಸಿ ಮಿಂಚಿದರು.

ಇದನ್ನೂ ಓದಿ: R Ashwin: ಹೊಸ ಮೈಲುಗಲ್ಲು ದಾಟಿದ ಅಶ್ವಿನ್: ಈಗ ಭಾರತದ 3ನೇ ಯಶಸ್ವಿ ಬೌಲರ್

ಇದನ್ನೂ ಓದಿ: 83 New Poster: 1983 ಕ್ರಿಕೆಟ್ ಕ್ರಾಂತಿಯ ಚಿತ್ರದಲ್ಲಿ ಯಾರೆಲ್ಲಾ ಕಾಣಿಸಿಕೊಂಡಿದ್ದಾರೆ ಗೊತ್ತಾ?

Published On - 4:21 pm, Mon, 29 November 21

Click on your DTH Provider to Add TV9 Kannada