India vs Australia Test Series | ಚಿನ್ನಪ್ಪಂಪಟ್ಟಿಯಿಂದ ಬ್ರಿಸ್ಬೇನ್​ವರೆಗಿನ ನಟರಾಜನ್ ಏಳಿಗೆ ಕೋಟ್ಯಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ!

ಆಸ್ಟ್ರೇಲಿಯಾ ಪ್ರವಾಸಕ್ಕೆ ನಟರಾಜನ್​ರನ್ನು ಕೇವಲ ನೆಟ್ಸ್ ಬೌಲರ್ ಆಗಿ ಅಯ್ಕೆ ಮಾಡಲಾಗಿತ್ತು. ಆದರೆ, ಟೀಮುಗಳು ಪ್ರವಾಸ ಹೊರಡುವ ಕೆಲವೇ ದಿನಗಳ ಮೊದಲು ಟಿ20ಐ ಅವೃತ್ತಿಗೆ ಆಯ್ಕೆಯಾಗಿದ್ದ ವರುಣ್ ಚಕ್ರವರ್ತಿ ಗಾಯಗೊಂಡು ಪ್ರವಾಸದಿಂದ ಹಿಂದೆ ಸರಿದಿದ್ದರಿಂದ ಅವರ ಸ್ಥಾನದಲ್ಲಿ ನಟರಾಜನ್​ಗೆ ಅವಕಾಶ ಕಲ್ಪಿಸಲಾಯಿತು.

  • TV9 Web Team
  • Published On - 18:27 PM, 15 Jan 2021
India vs Australia Test Series | ಚಿನ್ನಪ್ಪಂಪಟ್ಟಿಯಿಂದ ಬ್ರಿಸ್ಬೇನ್​ವರೆಗಿನ ನಟರಾಜನ್ ಏಳಿಗೆ ಕೋಟ್ಯಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ!
ತಂಗರಸು ನಟರಾಜನ್

ಇದೊಂದು ಅಪೂರ್ವ ದಾಖಲೆ!

ಇಂಥ ದಾಖಲೆ ಹಿಂದೆ ಯಾವತ್ತೂ ಅಗಿರಲಿಲ್ಲ ಮುಂದೆಯೂ ಸಹ ಪ್ರಾಯಶಃ ಆಗಲಿಕ್ಕಿಲ್ಲ. ಇವತ್ತು ಬ್ರಿಸ್ಬೇನ್​ನಲ್ಲಿ ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ ಮಾಡಿದ ತಂಗರಸು ನಟರಾಜನ್ ಈ ದಾಖಲೆಯ ಒಡೆಯಗಿದ್ದಾರೆ. ಕೇವಲ 44 ದಿನಗಳ ಅವಧಿಯಲ್ಲಿ, ಕ್ರಿಕೆಟ್​ನ ಎಲ್ಲ ಮೂರು ಫಾರ್ಮಾಟ್​ಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡುವುದು ಯಾವ ಅಂತರರಾಷ್ಟ್ರೀಯ ಆಟಗಾರನಿಗೂ ಸಾಧ್ಯವಾಗಿರಲಿಲ್ಲ. ಆದರೆ ನಟರಾಜನ್​ಗೆ ಆ ಭಾಗ್ಯ ದಕ್ಕಿದೆ.

ಹಾಗೆ ನೋಡಿದರೆ ನಟರಾಜನ್​ಗೆ ಇದು ‘ಬಯಸದೆ ಬಂದ ಭಾಗ್ಯ’. ಭಾರತದ ಪರ ಆಡಬೇಕೆಂದು ಅವರು ಬಯಸಿದ್ದು ಮತ್ತು ಹಗಲು-ರಾತ್ರಿ ಕನಸು ಕಂಡಿದ್ದು ನಿಜವಾದರೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಇಂಡಿಯನ್ ಪ್ರಿಮೀಯರ್ ಲೀಗ್​ 13 ನೇ ಆವೃತ್ತಿಯ ಕೊನೆಭಾಗದಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮುಗಳನ್ನು ಪ್ರಕಟಿಸಿದಾಗ ಸೀಮಿತ ಓವರ್ ಪಂದ್ಯಗಳಲ್ಲಿ ಪರಿಣಿತ ಬೌಲರ್ ಎನಿಸಿಕೊಂಡಿರುವ ನಟರಾಜನ್​ಗೆ ಮೂರು ಆವೃತ್ತಿಗಳಲ್ಲೂ ಸ್ಥಾನ ಸಿಕ್ಕಿರಲಿಲ್ಲ. ಸದರಿ ಪ್ರವಾಸಕ್ಕೆ ಅವರನ್ನು ಕೇವಲ ನೆಟ್ಸ್ ಬೌಲರ್ ಆಗಿ ಅಯ್ಕೆ ಮಾಡಲಾಗಿತ್ತು. ಆದರೆ, ಟೀಮುಗಳು ಪ್ರವಾಸ ಹೊರಡುವ ಕೆಲವೇ ದಿನಗಳ ಮೊದಲು ಟಿ20ಐ ಅವೃತ್ತಿಗೆ ಆಯ್ಕೆಯಾಗಿದ್ದ ವರುಣ್ ಚಕ್ರವರ್ತಿ ಗಾಯಗೊಂಡು ಪ್ರವಾಸದಿಂದ ಹಿಂದೆ ಸರಿದಿದ್ದರಿಂದ ಅವರ ಸ್ಥಾನದಲ್ಲಿ ನಟರಾಜನ್​ಗೆ ಅವಕಾಶ ಕಲ್ಪಿಸಲಾಯಿತು.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ಯಾನ್​ಬೆರಾದಲ್ಲಿ ನಡೆದ ಮೂರನೆ ಒಂದು ದಿನದ ಪಂದ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ನಟರಾಜನ್ ತಮ್ಮ 10 ಓವರ್​ಗಳ ಕೋಟಾದಲ್ಲಿ 70 ರನ್ ನೀಡಿ ದುಬಾರಿಯೆನಿಸಿದರೂ 2 ವಿಕೆಟ್​ ಪಡೆದು ಗಮನ ಸೆಳೆದರು.

ಲಬುಶೇನ್​ರನ್ನು ಔಟ್ ಮಾಡಿದ ನಟರಾಜನ್​ರನ್ನು ಅಭಿನಂದಿಸುತ್ತಿರುವ ಭಾರತೀಯ ಆಟಗಾರರು

ಆಮೇಲೆ ನಡೆದ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಮೂಲಕ ಈ ಆವೃತ್ತಿಗೂ ನಟರಾಜನ್ ಡೆಬ್ಯು ಮಾಡಿ ಸರಣಿಯಲ್ಲಿ ಒಟ್ಟು 6 ವಿಕೆಟ್​ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸೀಮಿತ ಓವರ್ ಪಂದ್ಯಗಳ ಸರಣಿ ನಂತರ ಶುರುವಾಗಿದ್ದು 4 ಪಂದ್ಯಗಳ ಟೆಸ್ಟ್ ಸರಣಿ.

ಟೀಮಿನಲ್ಲಿ ಎಲ್ಲ ಖ್ಯಾತನಾಮ ವೇಗದ ಬೌಲರ್​ಗಳಿದ್ದುದ್ದರಿಂದ ಈ ಆವೃತ್ತಿಯಲ್ಲಿ ಅವರನ್ನು ಆಡಿಸುವ ಸಾಧ್ಯತೆ ಕ್ಷೀಣವಾಗಿತ್ತು. ಆದರೆ ಕನ್ನಡದಲ್ಲಿ ಹೇಳುತ್ತಾರಲ್ಲ, ತಾನೊಂದು ಬಗೆದರೆ ದೈವವೊಂದು ಬಗೆಯಿತು ಅಂತ, ನಟರಾಜನ್ ಕ್ರಿಕೆಟ್ ಬದುಕಿನಲ್ಲಿ ಅದು ಉಲ್ಟಾ ಆಯಿತು. ಅವರಿಗೆ ದೈವ ಒಳ್ಳೆಯದನ್ನೇ ಬಗೆಯಿತು. ಭಾರತದ ವೇಗಿಗಳು ಒಬ್ಬರಾದ ನಂತರ ಒಬ್ಬರಂತೆ ಗಾಯಗೊಂಡು ಸರಣಿಯಿಂದ ಹೊರಬಿದ್ದ ನಂತರ ಬ್ರಿಸ್ಬೇನ್​ನಲ್ಲಿ ಇಂದು ಶುರುವಾದ ನಾಲ್ಕನೆ ಟೆಸ್ಟ್​ನಲ್ಲಿ ಅವರು ಕ್ರಿಕೆಟ್​ನ ಸಾಂಪ್ರದಾಯಿಕ ಆವೃತ್ತಿಗೂ ಪಾದಾರ್ಪಣೆ ಮಾಡಿದರು.

ಹೀಗೆ, ಕೇವಲ 44 ದಿನಗಳ ಅವಧಿಯಲ್ಲಿ ಕ್ರಿಕೆಟ್​ ಮೂರು ಆವೃತ್ತಿಗಳಲ್ಲೂ ಪಾದಾರ್ಪಣೆ ಖ್ಯಾತಿ ನಟರಾಜನ್ ಅವರದ್ದಾಯಿತು. ಕೇವಲ ಎರಡು ತಿಂಗಳ ಹಿಂದೆ ಕೇವಲ ಯಾರ್ಕರ್ ಸ್ಪೆಷಲಿಸ್ಟ್​ ಎಂದು ಗುರುತಿಸಿಕೊಳ್ಳುತ್ತಿದ್ದ ಬೌಲರ್​ನ ಹೆಸರು ಈಗ ಎಲ್ಲ ಕ್ರಿಕೆಟ್​ ಪ್ರೇಮಿಗಳ ನಾಲಿಗೆ ಮೇಲಿದೆ.

ಕ್ರಿಕೆಟ್​ನಲ್ಲಿ ನಟರಾಜನ್ ಅವರ ಏಳು ಅಕ್ಷರಶಃ ಱಗ್ಸ್ ಟು ರಿಚಸ್ ಕತೆಯಂತಿದೆ. ಬಹಳಷ್ಟು ಜನಕ್ಕೆ ಗೊತ್ತಿರಲಾರದು, ಅವರದ್ದು ಕಡುಬಡತನದ ಕುಟಂಬ. ತಮಿಳುನಾಡಿನ ಸೇಲಂ ನಗರದಿಂದ 36 ಕಿಲೋಮೀಟರದ ದೂರದಲ್ಲಿರುವ ಚಿನ್ನಪ್ಪಂಪಟ್ಟಿ ಎಂದ ಚಿಕ್ಕ ಗ್ರಾಮದಲ್ಲಿ ನಟರಾಜನ್ ತಂದೆ ಒಬ್ಬ ದಿನಗೂಲಿ ಕಾರ್ಮಿಕ. ಮಧ್ಯಾಹ್ನದ ಊಟ ಸಿಕ್ಕರೆ ರಾತ್ರಿಯ ಊಟಕ್ಕಾಗಿ ಪರದಾಡುವ ಸ್ಥಿತಿ. ಆ ಊರಲ್ಲೇ ಅವರು ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಾ ಬೆಳೆದು, ನಂತರ ದಿಂಡಿಗಲ್ ಜಿಲ್ಲಾ ತಂಡಕ್ಕೆ ಆಡತೊಡಗಿದರು. ಅವರ ನಿಖರವಾದ ಬೌಲಿಂಗ್ ಕ್ರಮೇಣ ಪ್ರಸಿದ್ಧಿಗೆ ಬಂದು ಪ್ರಥಮ ದರ್ಜೆ ಪಂದ್ಯಗಳಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುವ ಸಮಯವೂ ಬಂದು ಬಿಟ್ಟಿತ್ತು.

ನಿಖರವಾದ ಯಾರ್ಕರ್​ನಿಂದ ಎಬಿ ಡಿ ವಿಲಿಯರ್ಸ್ ವಿಕೆಟ್ ಹಾರಿಸಿರುವ ನಟರಾಜನ್

2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ನಟರಾಜನ್​ ಅವರನ್ನು ತಂಡಕ್ಕೆ ಆರಿಸಿಕೊಂಡಿತಾದರೂ ಗಾಯದಿಂದಾಗಿ ​ಹೆಚ್ಚಿನದೇನೂ ಅವರು ಸಾಧಿಸಲಿಲ್ಲ. 2018ರಿಂದ ಅವರು ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಡಲಾರಂಭಿಸಿದ ನಂತರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲಾರಂಭಿಸಿದರು. 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಗ್ರಮಾನ್ಯ ಆಟಗಾರ ಎಬಿ ಡಿ ವಿಲಿಯರ್ಸ್ ಅವರನ್ನು ಔಟ್ ಮಾಡಿದ ನಟರಾಜನ್​ರ ಯಾರ್ಕರ್ ಟೂರ್ನಮೆಂಟಿನ ಎಸೆತ ಎನಿಸಿಕೊಂಡಿತ್ತು.

ನಂತರ ಏನಾಯಿತು ಎಂಬುದು ಈಗ ಇತಿಹಾಸ.

India vs Australia Test series | ಪ್ರಮುಖ ಆಟಗಾರರು ಸರಣಿಯಿಂದ ಹೊರಬಿದ್ದರೂ ಟೀಮ್ ಇಂಡಿಯಾನಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ: ಲಿಯಾನ್