ಐಪಿಎಲ್​ ಬಗ್ಗೆ ರೇಜಿಗೆ: ಪಾಕಿಸ್ತಾನ್​ ಸೂಪರ್​​ ಲೀಗ್​ ಆಡೋಕೆ ಹೊರಟ ಆರ್​ಸಿಬಿ ಆಟಗಾರ

ಐಪಿಎಲ್ ಎಂಬುದು ದೊಡ್ಡ ಸಾಗರ. ಅಲ್ಲಿ, ದೊಡ್ಡ ದೊಡ್ಡ ಹೆಸರುಗಳು ಹಾಗೂ ಹಣದ ಅಬ್ಬರದ ನಡುವೆ ಕ್ರಿಕೆಟ್​ ಎಂಬುದೇ ಕೊಚ್ಚಿ ಹೋದಂತೆ ಅನ್ನಿಸುತ್ತಿದೆ ಎಂದು ಆರ್​ಸಿಬಿ ಆಟಾಗರ ಬೇಸರ ಹೊರಹಾಕಿದ್ದಾರೆ.

  • TV9 Web Team
  • Published On - 20:12 PM, 2 Mar 2021
ಐಪಿಎಲ್​ ಬಗ್ಗೆ ರೇಜಿಗೆ: ಪಾಕಿಸ್ತಾನ್​ ಸೂಪರ್​​ ಲೀಗ್​ ಆಡೋಕೆ ಹೊರಟ ಆರ್​ಸಿಬಿ ಆಟಗಾರ
ಆರ್​ಸಿಬಿ ತಂಡದಲ್ಲಿ ಡೇಲ್​ ಸ್ಟೀನ್

ಇಂಡಿಯನ್​ ಪ್ರೀಮಿಯರ್​ ಲೀಗ್​ನಿಂದ ಆಟಗಾರರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ. ಇದೇ ಕಾರಣಕ್ಕೆ ದೇಶ-ವಿದೇಶದ ಹಲವು ಆಟಗಾರರು ಐಪಿಎಲ್​ ಆಡೋಕೆ ಆದ್ಯತೆ ನೀಡುತ್ತಿದ್ದಾರೆ. ಅನೇಕ ಆಟಗಾರರು ಐಪಿಎಲ್​ನಲ್ಲಿ ಆಡೋಕೆ ಅವಕಾಶ ಸಿಗಲಿಲ್ಲವಲ್ಲ ಎಂದು ಬೇಸರ ಹೊರ ಹಾಕಿದ್ದೂ ಇದೆ. ಆದರೆ, ಆರ್​ಸಿಬಿ ಆಟಗಾರನೋರ್ವ ಈಗ ಐಪಿಎಲ್​ನಿಂದ ಹೊರ ನಡೆದು ಪಾಕಿಸ್ತಾನ್​ ಸೂಪರ್​ ಲೀಗ್​ ಆಡೋಕೆ ಮುಂದಾಗಿದ್ದಾರೆ. ಅವರು ಬೇರಾರೂ ಅಲ್ಲ ಡೇಲ್​ ಸ್ಟೀನ್​.

ಸ್ವಲ್ಪ ಸಮಯ ಕ್ರಿಕೆಟ್​ನಿಂದ ದೂರ ಉಳಿಯುತ್ತೇನೆ ಎಂದು ಈ ಮೊದಲು ಡೇಲ್​ ಸ್ಟೀನ್ ಟ್ವೀಟ್​ ಮಾಡಿದ್ದರು. ಚಿಕ್ಕ ಸಂದೇಶದ ಮೂಲಕ ಒಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಈ ಬಾರಿಯ ಐಪಿಎಲ್ ಸೀಸನ್​ನಲ್ಲಿ ನಾನು ಆರ್​ಸಿಬಿ ಪರ ಆಡುತ್ತಿಲ್ಲ. ಹಾಗಂತ ನಾನು ಬೇರೆ ಟೀಮ್​ಗೆ ಆಡಬೇಕೆನ್ನುವ ನಿರ್ಧಾರ ಮಾಡಿಲ್ಲ. ಸ್ವಲ್ಪ ಸಮಯದವರೆಗೆ ಕ್ರಿಕೆಟ್​ನಿಂದ ದೂರವಿರಲು ನಿಶ್ಚಯಿಸಿಕೊಂಡಿದ್ದೇನೆ, ಎಂದಿದ್ದರು. ಈ ಕಾರಣ ನೀಡಿ ಆರ್​ಸಿಬಿ ತೊರೆದು ಹೋಗಿದ್ದರು. ಈಗ ಅಚ್ಚರಿ ಎಂಬಂತೆ ಅವರು ಪಿಎಸ್​ಎಲ್​ ಪರ ಆಡುತ್ತಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿರುವ ಡೇಲ್​, ಐಪಿಎಲ್​ ಬಿಟ್ಟು ಇತರ ಲೀಗ್‌ಗಳಲ್ಲಿ ಆಡುವುದು ಆಟಗಾರನಾಗಿ ಸ್ವಲ್ಪ ಹೆಚ್ಚು ಲಾಭದಾಯಕವೆಂದು ನನಗೆ ಅನ್ನಿಸುತ್ತಿದೆ. ಐಪಿಎಲ್ ಎಂಬುದು ದೊಡ್ಡ ಸಾಗರ. ಅಲ್ಲಿ, ದೊಡ್ಡದೊಡ್ಡ ಹೆಸರುಗಳು ಹಾಗೂ ಹಣದ ಅಬ್ಬರ ನಡುವೆ ಕ್ರಿಕೆಟ್​ ಎಂಬುದೇ ಕೊಚ್ಚಿ ಹೋದಂತೆ ಅನ್ನಿಸುತ್ತಿದೆ ಎಂದು ಬೇಸರ ಹೊರ ಹಾಕಿದ್ದಾರೆ.

ನೀವು ಪಿಎಸ್​ಎಲ್​ ಅಥವಾ ಶ್ರೀಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಮಾಡಿದರೆ ಕ್ರಿಕೆಟ್​ನ ಪ್ರಾಮುಖ್ಯತೆ ಗೊತ್ತಾಗುತ್ತದೆ. ನಾನು ಇಲ್ಲಿ ಬಂದು ಒಂದೆರಡು ದಿನ ಮಾತ್ರ ಕಳೆದಿದ್ದೇನೆ. ಇಲ್ಲಿಯೂ ನನಗೆ ಅಭಿಮಾನಿಗಳು ಇದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ಬಿಟ್ಟು ಹೋಗಿದ್ದಕ್ಕೆ ಬೇಸರ: ಈ ಮೊದಲು ಟ್ವೀಟ್​ ಮಾಡಿದ್ದ ಸ್ಟೀನ್​, ಆರ್​ಸಿಬಿ ಬಿಟ್ಟು ಹೋಗುವ ಬಗ್ಗೆ ಬೇಸರ ಹೊರ ಹಾಕಿದ್ದರು. ‘ಖಂಡಿತವಾಗಿಯೂ ಬೇರೆ ಲೀಗ್​ಗಳಲ್ಲಿ ಆಡುವ ಇಚ್ಛೆ ನನಗಿಲ್ಲ. ಕ್ರೀಡೆಯಿಂದ ಒಂದು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ, ಅಷ್ಟೆ. ನನ್ನನ್ನು ಅರ್ಥಮಾಡಿಕೊಂಡಿರುವುದಕ್ಕೆ ಆರ್​ಸಿಬಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು. ಆದರೂ ಪಿಎಸ್​ಎಲ್​ ಪರ ಆಡುತ್ತಿದ್ದಾರೆ.

ಇದನ್ನೂ ಓದಿ: ಈ ಬಾರಿಯ ಐಪಿಎಲ್​ ಸೀಸನ್​ನಲ್ಲಿ ಡೇಲ್ ಸ್ಟೀನ್ ಆರ್​ಸಿಬಿ ಪರ ಆಡುವುದಿಲ್ಲ!