ಐಪಿಎಲ್ 2021: ಸೀಸನ್​ನ ಮೊದಲ ಪಂದ್ಯದಲ್ಲಿ 5 ಬಾರಿ ಪ್ರಶಸ್ತಿ ಗೆದ್ದಿರುವ ಎಮ್​ಐ ಮತ್ತು ಒಮ್ಮೆಯೂ ಗೆದ್ದಿರದ ಆರ್​ಸಿಬಿ ನಡುವೆ ಹಣಾಹಣಿ

ಕ್ರಿಕೆಟ್ ಪಂದ್ಯ ಯಾವುದೇ ಆಗಿರಲಿ, ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು ಕ್ರಿಕೆಟ್​ ಪ್ರೇಮಿಗಳ ಕುತೂಹಲ ಮತ್ತು ರೋಮಾಂಚನವನ್ನು ಹುಟ್ಟಿಸುತ್ತವೆ. ಇನ್ನು ಐಪಿಎಲ್ ಅಂದರೆ ಕೇಳಬೇಕಾ? ಸೀಸನ್ ಜಾರಿಯಲ್ಲಿರುವಾಗ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ.

  • TV9 Web Team
  • Published On - 6:48 AM, 9 Apr 2021
ಐಪಿಎಲ್ 2021: ಸೀಸನ್​ನ ಮೊದಲ ಪಂದ್ಯದಲ್ಲಿ 5 ಬಾರಿ ಪ್ರಶಸ್ತಿ ಗೆದ್ದಿರುವ ಎಮ್​ಐ ಮತ್ತು ಒಮ್ಮೆಯೂ ಗೆದ್ದಿರದ ಆರ್​ಸಿಬಿ ನಡುವೆ ಹಣಾಹಣಿ
ಎಮ್​ಐ vs ಆರ್​ಸಿಬಿ

ಕ್ರೀಡಾಲೋಕದ ಅತ್ಯಂತ ಪ್ರಮುಖ ಮತ್ತು ಜನಪ್ರಿಯ ಈವೆಂಟ್​ಗಳಲ್ಲಿ ಒಂದಾಗಿರುವ ಇಂಡಿಯನ್ ಪ್ರಿಮೀಯರ್ ಲೀಗ್​ನ14 ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಸೀಸನ್ ಮೊದಲ ಪಂದ್ಯ ಶುಕ್ರವಾರ ಚೆನೈನ ಎಮ್​ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ನಿಮಗೆ ಗೊತ್ತಿದೆ, ಭಾರತದಲ್ಲಿ ಕೊವಿಡ್-19 ಪಾಸಿಟಿವ್ ಪ್ರಕರಣಗಳು ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ 13ನೇ ಸಿಸನ್​ನಂತೆ ಈ ಸೀಸನ್ ಪಂದ್ಯಗಳು ಸಹ ಖಾಲಿ ಮೈದಾನದಲ್ಲಿ ನಡೆಯಲಿವೆ. ಸೀಸನ್ನಿನ ಮೊದಲ ಪಂದ್ಯ 5 ಬಾರಿ ಚಾಂಪಿಯನ್​ಶಿಪ್​ ಗೆದ್ದಿರುವ ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಇನ್ನೂ ಒಮ್ಮೆಯೂ ಪ್ರಶಸ್ತಿ ಗೆಲ್ಲದ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ.

ಕ್ರಿಕೆಟ್ ಪಂದ್ಯ ಯಾವುದೇ ಆಗಿರಲಿ, ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು ಕ್ರಿಕೆಟ್​ ಪ್ರೇಮಿಗಳ ಕುತೂಹಲ ಮತ್ತು ರೋಮಾಂಚನವನ್ನು ಹುಟ್ಟಿಸುತ್ತವೆ. ಇನ್ನು ಐಪಿಎಲ್ ಅಂದರೆ ಕೇಳಬೇಕಾ? ಸೀಸನ್ ಜಾರಿಯಲ್ಲಿರುವಾಗ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ.

ಓಕೆ, ನಾವಿಲ್ಲಿ ಎಲ್ಲ ಐಪಿಎಲ್ ದಾಖಲೆಗಳನ್ನು ಚರ್ಚಿಸುವುದು ಬೇಡ, ಕೇವಲ ಆರ್​ಸಬಿ ಮತ್ತು ಎಮ್​ಐ ಪಂದ್ಯದ ಮೇಲೆ ಮಾತ್ರ ಫೋಕಸ್ ಮಾಡೋಣ. ಈ ತಂಡಗಳ ಪರ ಅತಿಹೆಚ್ಚು ವಿಕೆಟ್​ ಪಡೆದಿರುವ, ಕ್ಯಾಚ್​ ಹಿಡಿದಿರುವವರು ಯಾರೆಂದು ನಿಮಗೆ ಗೊತ್ತಿದೆಯಾ? ಸರಿ, ಆ ಸಂಗತಿಗಳನ್ನೇ ನಾವು ನೋಡೋಣ.

ಮೊದಲು ನಮ್ಮ ಬೆಂಗಳೂರು ತಂಡದಿಂದಲೇ ವಿಷಯ ಆರಂಭಿಸುವ. ಕೊಹ್ಲಿ ಪಡೆಗೆ ಇದುವರೆಗೆ ಅತಿ ಹೆಚ್ಚು ವಿಕೆಟ್​ ಪಡೆದಿರುವವರು ಯುಜ್ವೇಂದ್ರ ಚಹಲ್. ವಿಕೆಟ್​ಗಳ ಶತಕ ಪೂರೈಸಿರುವ ಏಕೈಕ್ ಬೌಲರ್ ಚಹಲ್. ಅವರು 82 ಇನ್ನಿಂಗ್​​ಗಳಲ್ಲಿ ಬೌಲ್ ಮಾಡಿ ಬರೋಬ್ಬರಿ 100 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರ ನಂತರದ ಸ್ಥಾನದಲ್ಲಿರುವವರು ಮೊನ್ನೆಯಷ್ಟೇ ಎಲ್ಲ ಬಗೆಯ ಕ್ರಿಕೆಟ್​ಗೆ ವಿದಾಯ ಹೇಳಿದ ಕರ್ನಾಟಕದ ಮಾಜಿ ಕ್ಯಾಪ್ಟನ್ ಆರ್​ ವಿನಯ್​ ಕುಮಾರ್. ಇವರು 63 ಇನ್ನಿಂಗ್ಸ್​ಗಳಿಂದ 72 ವಿಕೆಟ್​ ಪಡೆದಿದ್ದಾರೆ, 3, 4, ಮತ್ತು 5 ನೇ ಸ್ಥಾನಗಳಲ್ಲಿ ಕ್ರಮವಾಗಿ ಜಹೀರ್ ಖಾನ್ (49 ವಿಕೆಟ್​, 43 ಇನ್ನಿಂಗ್ಸ್), ಶ್ರೀನಾಥ್ ಅರವಿಂದ್ ( 45 ವಿಕೆಟ್​, 38 ಇನ್ನಿಂಗ್) ಮತ್ತು ಭಾರತದ ಲೆಜಂಡರಿ ಬೌಲರ್ ಅನಿಲ್ ಕುಂಭ್ಳೆ (45 ವಿಕೆಟ್​, 42 ಇನ್ನಿಂಗ್ಸ್) ಇದ್ದಾರೆ.

ಲಸಿತ್ ಮಲಿಂಗ ಮುಂಬೈ ಇಂಡಿಯನ್ಸ್ ಪರ ಅತಿಹೆಚ್ಚು ವಿಕೆಟ್​ ಪಡೆದಿದ್ದಾರೆ. ಅವರ ಟ್ಯಾಲಿ 122 ಇನ್ನಿಂಗ್ಸ್​​ಗಳಿಂದ 170 ವಿಕೆಟ್, ಎರಡನೇ ಸ್ಥಾನದಲ್ಲಿ 122 ಇನ್ನಿಂಗ್ಸ್​ಗಳಿಂದ 172 ವಿಕೆಟ್​ ಪಡೆದಿರುವ ಹರ್ಭಜನ್ ಸಿಂಗ್ ಇದ್ದಾರೆ. ಹಾಗೆಯೇ 3, 4 ಮತ್ತು 5 ನೇ ಸ್ಥಾನದಲ್ಲಿ ಕ್ರಮವಾಗಿ, ಜಸ್ಪ್ರೀತ್ ಬುಮ್ರಾ (82, 77), ಮಿಚೆಲ್ ಮ್ಯಾಕ್ಲಿನಘನ್ (76, 56) ಮತ್ತು ಕೈರನ್ ಪೊಲ್ಲಾರ್ಡ್ (56, 81) ಇದ್ದಾರೆ.

ಬ್ಯಾಟ್ಸ್​ಮನ್​ಗಳು ಸಿಕ್ಸ್ ಬಾರಿಸುವುದು ನಿಸ್ಸಂದೇಹವಾಗಿ ಮೈದಾನದಲ್ಲಿ ಕುಳಿತು ಆಟ ನೋಡುವ ಪ್ರೇಕ್ಷಕರಿಗೆ ಮತ್ತು ಮನೆಗಳಲ್ಲಿ ಟಿವಿ ಸೆಟ್​ಗಳ ಮುಂದೆ ಕೂತು ಪಂದ್ಯ ನೋಡುವವರಿಗೆ ರೋಮಾಂಚನ ಹುಟ್ಟಿಸುವ ಅಂಶ, ಹಾಗಾದರೆ, ಆರ್​ಸಿಬಿ ಯಾವ ಬ್ಯಾಟ್ಟ್​ಮನ್ ಪ್ರೇಕ್ಷರಲ್ಲಿ ಅತಿಹೆಚ್ಚು ಬಾರಿ ಅಂಥ ರೋಮಾಂಚನ ಹುಟ್ಟಿಸಿದ್ದಾರೆ? ನಿಮ್ಮ ಊಹೆ ಶತಪ್ರತಿದಷ್ಟು ಸರಿ.

360 ಡಿಗ್ರಿ ಕ್ರಿಕೆಟರ್ ಎಂದು ಕರೆಸಿಕೊಳ್ಳುವ ಎಬಿಡಿ ವಿಲಿಯರ್ಸ್​ 163 ಪಂದ್ಯಗಳಲ್ಲಿ 235 ಬಾರಿ ಚೆಂಡನ್ನು ಬೌಂಡರಿ ಗೆರೆ ಮೇಲಿಂದ ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವವರು ನಾಯಕ ಕಿಂಗ್ ಕೊಹ್ಲಿ, ಅವರ ಬ್ಯಾಟ್​ನಿಂದ ಇದುವರೆಗೆ 201 (192 ಇನ್ನಿಂಗ್ಸ್) ಸಿಕ್ಸರ್​ಗಳು ಸಿಡಿದಿವೆ.

ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮ 195 ಇನ್ನಿಂಗ್ಸ್​ಗಳಲ್ಲಿ 213 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕೈರನ್ ಪೊಲ್ಲಾರ್ಡ್​ 147 ಇನ್ನಿಂಗ್ಸ್​ಗಳಲ್ಲಿ 198 ಸಿಕ್ಸರ್​ ಬಾರಿಸಿದ್ದಾರೆ.

ಒಟ್ಟಾರೆಯಾಗಿ ನೋಡಿದ್ದೇಯಾದರೆ, ಮುಂಬೈ ತಂಡ 1,378 ಸಿಕ್ಸ್​ಗಳನ್ನು ಪ್ರತಿ ಇನ್ನಿಂಗ್ಸ್​ಗೆ 6.12 ಸರಾಸರಿಯಲ್ಲಿ ಮತ್ತು ಆರ್​ಸಿಬಿ 1,295 ಸಿಕ್ಸ್​ಗಳನ್ನು 6.14 ಸರಾಸರಿಯಲ್ಲಿ ದಾಖಲಿಸಿವೆ.

ಓಕೆ, ಕ್ಯಾಚ್​ಗಳ ವಿಷಯವನ್ನೂ ಒಮ್ಮೆ ನೋಡಿ ಬಿಡುವ, ಅರ್​ಸಿಬಿ ಪರ ಕೊಹ್ಲಿ 76 ಕ್ಯಾಚ್​ ಹಿಡಿದಿದ್ದರೆ, ಡಿ ವಿಲಿಯರ್ಸ್ 83 ಹಿಡಿದಿದ್ದಾರೆ. ಮುಂಬೈ ಪರ ಪೊಲ್ಲಾರ್ಡ್ 90 ಮತ್ತು ರೋಹಿತ್ 89 ಕ್ಯಾಚ್​ ಹಿಡಿದಿದ್ದಾರೆ.

ನಾಳೆ ಆಡುವ ಸಂಭಾವ್ಯ ತಂಡಗಳು ಹೀಗಿರಬಹುದು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್​ ಕೊಹ್ಲಿ, ಜೋಷ್ ಫಿಲಿಪ್, ಎ ಬಿ ಡಿ ವಿಲಿಯರ್ಸ್, ಗ್ಲೆನ್ ಮ್ಯಾಕ್ಸ್​ವೆಲ್, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್, ಸಚಿನ್ ಬೇಬಿ, ಯುಜ್ವೇಂದ್ರ ಚಹಲ್, ವಾಷಿಂಗ್ಟನ್​ ಸುಂದರ್, ಕೈಲ್ ಜೇಮಿಸನ್ ಮತ್ತು ಮೊಹಮ್ಮದ್ ಸಿರಾಜ್

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ, ಇಶಾನ್ ಕಿಷನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕ್ರಿಸ್​ ಲಿನ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಟ್ರೆಂಟ್​ ಬೌಲ್ಟ್, ರಾಹುಲ್ ಚಹರ್, ನೇಥನ್ ಕೌಲ್ಟರ್ ನೈಲ್ ಮತ್ತು ಆಡಂ ಮಿಲ್ನೆ

ಇದನ್ನೂ ಓದಿ: IPL 2021: 49ಬಾಲ್​ಗಳಲ್ಲಿ 104ರನ್! ದೇಸಿ ಕ್ರಿಕೆಟ್​ನಲ್ಲಿ ರನ್ ಮಳೆ ಹರಿಸಿರುವ ರಜತ್​ಗೆ ಆರ್​ಸಿಬಿ ತಂಡದಲ್ಲಿ ಸಿಗುತ್ತಾ ಅವಕಾಶ?

(Rohit’s 5 time champions MI to lock horns with yet to win Virat Kohli’s RCB in season’s opene)