India vs Australia Test Series | ಪಂತ್​ರನ್ನು ವಿಹಾರಿಗಿಂತ ಮೊದಲು ಆಡಲು ಕಳಿಸಿದ್ದು ರಹಾನೆಯ ಮಾಸ್ಟರ್ ಸ್ಟ್ರೋಕ್: ಪಾಂಟಿಂಗ್

ರಹಾನೆಯವರು ಪಂತ್​ರನ್ನು ವಿಹಾರಿಗಿಂತ ಮೊದಲು ಅಡಲು ಕಳಿಸಿದ್ದು ಮಾಸ್ಟರ್ ಸ್ಟ್ರೋಕ್ ಆಗಿತ್ತು, ಭಾರತ ಪಂದ್ಯವನ್ನು ಗೆಲ್ಲಬೇಕಾದರೆ ಅದನ್ನು ಮಾಡಲೇಬೇಕಿತ್ತು. ಪೈನ್​ರಿಂದ ಎರಡು ಜೀವದಾನ ಪಡೆದ ಪಂತ್​ಗೆ ಅದೃಷ್ಟದ ಬೆಂಬಲವಿದ್ದಿದ್ದೇನೋ ನಿಜ, ಆದರೆ, ಅವರು ಆಡಿದ್ದು ಸ್ಮರಣಿಯ ಇನ್ನಿಂಗ್ಸ್ ಎಂದು ಪಾಂಟಿಂಗ್ ಹೇಳಿದ್ದಾರೆ.

  • TV9 Web Team
  • Published On - 16:58 PM, 13 Jan 2021
India vs Australia Test Series | ಪಂತ್​ರನ್ನು ವಿಹಾರಿಗಿಂತ ಮೊದಲು ಆಡಲು ಕಳಿಸಿದ್ದು ರಹಾನೆಯ ಮಾಸ್ಟರ್ ಸ್ಟ್ರೋಕ್: ಪಾಂಟಿಂಗ್
ರಿಕ್ಕಿ ಪಾಂಟಿಂಗ್ ಮತ್ತು ರಿಷಭ್ ಪಂತ್

ಟೀಮ್ ಇಂಡಿಯಾದ ನಾಯಕ ಅಜಿಂಕ್ಯಾ ರಹಾನೆ ಅವರ ಸಕರಾತ್ಮಕ ಮತ್ತು ದಿಟ್ಟತನದ ನಾಯಕತ್ವವನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಮತ್ತೊಮ್ಮೆ ಶ್ಲಾಘಿಸುತ್ತಾ ಡ್ರಾನಲ್ಲಿ ಮುಕ್ತಾಯಗೊಂಡ ಎರಡನೇ ಟೆಸ್ಟ್​ನಲ್ಲಿ ರಿಷಭ್ ಪಂತ್​ರ ಆಟವನ್ನು ಕೊಂಡಾಡಿದ್ದಾರೆ. ‘ಮಾಸ್ಟರ್ ಸ್ಟ್ರೋಕ್’ ಎಂದು ಬಣ್ಣಿಸಿದ್ದಾರೆ.

ಪಂದ್ಯದ ಕೊನೆಯ ದಿನ ಮೈದಾನಕ್ಕಿಳಿದಾಗ ಭಾರತದ ಎದುರು ಪಂದ್ಯ ಗೆಲ್ಲುವ ಅವಕಾಶವಿತ್ತಾದರೂ, ಸೋಲಿನಿಂದ ತಪ್ಪಿಸಿಕೊಳ್ಳುವುದೂ ಸುಲಭದ ಮಾತಾಗಿರಲಿಲ್ಲ. ಕೊನೆಯ ದಿನ ಬೌಲರ್​ಗಳಿಗೆ ನೆರವಾಗುವ ಸಿಡ್ನಿ ಮೈದಾನದಲ್ಲಿ ವಿಶ್ವದ ಅತ್ಯುತ್ತಮ ಸ್ಪಿನ್ನರಗಳಲ್ಲಿ ಒಬ್ಬರಾಗಿರುವ ನೇಥನ್ ಲಿಯಾನ್ ಅವರನ್ನು ಎದುರಿಸಿ ಆಡುವುದು ಭಾರತೀಯ ಬ್ಯಾಟ್ಸ್​ಮನ್​ಗಳ ಸಾಮರ್ಥ್ಯಕ್ಕೆ ದೊಡ್ಡ ಸವಾಲಾಗಿತ್ತು.

ಮುನ್ನೂರಕ್ಕಿಂತ ಹೆಚ್ಚು ರನ್ ಗಳಿಸಬೇಕಿದ್ದ ಭಾರತದ ಕೈಯಲ್ಲಿ 8 ವಿಕೆಟ್​ಗಳಿದ್ದವು. ಆದರೆ ದಿನದ ಎರಡನೆ ಓವರ್​ನಲ್ಲೇ ಅದು ರಹಾನೆಯನ್ನು ಕಳೆದುಕೊಂಡಾಗ ಭಾರತ ಪಾಲಿಗೆ ಸ್ಥಿತಿ ನಾಜೂಕಾಯಿತು. ಆಸ್ಸೀಗಳು ಸಣ್ಣಗೆ ಗೆಲುವಿನ ಕೇಕೆ ಹಾಕತೊಡಗಿದ್ದರು. ಮೈದಾನದಲ್ಲಿ ಹಾಜರಿದ್ದ ಕೆಲವೇ ನೂರಗಳಷ್ಟು ಪ್ರೇಕ್ಷಕರು ಪಂದ್ಯ ಬೇಗ ಮುಗಿಯಬಹುದು ಅಂತ ಅಂದುಕೊಂಡಿದ್ದು ಸುಳ್ಳಲ್ಲ.

ವಿಹಾರಿಯನ್ನು ಅಭಿನಂದಿಸುತ್ತಿರುವ ನಾಯಕ ರಹಾನೆ

ಆದರೆ, ಆಗಲೇ ನಾಯಕ ರಹಾನೆ ಒಂದು ಅನಿರೀಕ್ಷಿತ ನಿಲುವು ತೆಗೆದುಕೊಂಡರು. ಹನುಮ ವಿಹಾರಿಗೆ ಪಂದ್ಯ ಡ್ರಾ ಆಗುವಂತೆ ನೋಡಿಕೊಳ್ಳುವ ನಿರ್ದೇಶನ ನೀಡಿ ಕ್ರೀಸಿಗೆ ಕಳಿಸುತ್ತಾರೆಂದು ಪ್ರತಿಯೊಬ್ಬರು ಭಾವಿಸಿದ್ದಾಗಲೇ ಚೆಂಡಿರೋದೆ ಬಾರಿಸುವುದಕ್ಕೆ ಎಂಬ ಮನಸ್ಥಿತಿಯ ಪಂತ್​ರನ್ನು ಕಳಿಸಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದರು. ಪಂತ್ ಅಕ್ಷರಶಃ ತಮ್ಮ ಖ್ಯಾತಿಗೆ ತಕ್ಕ ಆಟವಾಡಿ 97 ರನ್ ಬಾರಿಸದರಲ್ಲದೆ, ಮತ್ತೊಂದು ತುದಿಯಲ್ಲಿದ್ದ ಚೇತೇಶ್ವರ್ ಪೂಜಾರಾ ಅವರೊಂದಿಗೆ 148 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡು ಟೀಮ್ ಇಂಡಿಯಾಗೂ ಗೆಲ್ಲುವ ಅವಕಾಶ ಕಲ್ಪಿಸಿದರು. ಆದರೆ ಅಲ್ಪ ಅಂತರದಲ್ಲೇ ಆಸ್ಸೀ ಬೌಲರ್​ಗಳು ಪಂತ್ ಮತ್ತು ಪೂಜಾರಾ ಅವರನ್ನ ಔಟ್ ಮಾಡಿದ್ದರಿಂದ ಭಾರತ ಗೆಲ್ಲುವ ಯೋಚನೆಯನ್ನು ಕೈ ಬಿಟ್ಟು ಡ್ರಾಗಾಗಿ ಅಡಬೇಕಾಯಿತು.

ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ಕೆಚ್ಚದೆಯಿಂದ ಆಸ್ಸೀ ಬೌಲರ್​ಗಳ ದಾಳಿ ಮತ್ತು ಮೂದಲಿಕೆಯನ್ನು ಮೆಟ್ಟಿನಿಂತು ಪಂದ್ಯವನ್ನು ಡ್ರಾ ಮಾಡುವಲ್ಲಿ ಸಫರಾದರು.

ರಿಷಭ್ ಪಂತ್

‘ಪಂತ್​ರನ್ನು ವಿಹಾರಿಗಿಂತ ಮೊದಲು ಅಡಲು ಕಳಿಸಿದ್ದು ರಹಾನೆಯವರ ಮಾಸ್ಟರ್ ಸ್ಟ್ರೋಕ್ ಆಗಿತ್ತು. ಭಾರತ ಪಂದ್ಯವನ್ನು ಗೆಲ್ಲಬೇಕಾದರೆ ಅದನ್ನು ಮಾಡಲೇಬೇಕಿತ್ತು. ಟಿಮ್ ಪೈನ್​ರಿಂದ ಎರಡು ಜೀವದಾನ ಪಡೆದ ಪಂತ್​ಗೆ ಅದೃಷ್ಟದ ಬೆಂಬಲವಿದ್ದದ್ದೇನೋ ನಿಜ, ಆದರೆ, ಅವರು ಆಡಿದ್ದು ಸ್ಮರಣಿಯ ಇನ್ನಿಂಗ್ಸ್ ,’ ಎಂದು ಅನ್​ಪ್ಲೇಯೇಬಲ್ ಪಾಟ್​ಕಾಸ್ಟ್​ನೊಂದಿಗೆ ಮಾತಾಡುವಾಗ ಪಾಂಟಿಂಗ್ ಹೇಳಿದರು.

‘ಕ್ರೀಸಿಗೆ ಬಂದಕೂಡಲೇ ಪಂತ ಬ್ಯಾಟ್ ಬೀಸಲು ಆರಂಭಿಸದೆ ತಾಂತ್ರಿಕ ಕುಶಲತೆಯೊಂದಿಗೆ ಆಡಿದರು. ಅವರೊಬ್ಬ ಪ್ರಾಪರ್ ಬ್ಯಾಟ್ಸ್​ಮನ್ ಅಗಿದ್ದಾರೆ. ಅವರ ಬ್ಯಾಟಿಂಗ್ ಎಷ್ಟು ಇಂಪ್ರೆಸ್ಸಿವ್ ಆಗಿತ್ತೆಂದರೆ, ಹಲವಾರು ಜನ ಬ್ರಿಸ್ಬೇನ್ ಟೆಸ್ಟ್​ನಲ್ಲಿ ಅವರನ್ನು ಕೇವಲ ಬ್ಯಾಟ್ಸ್​ಮನ್​ ಸಾಮರ್ಥ್ಯದಲ್ಲಿ ಆಡಿಸಿ, ವೃದ್ಧಿಮಾನ್ ಸಹಾ ಅವರಿಗೆ ಕೀಪಿಂಗ್ ಜವಾಬ್ದಾರಿ ವಹಿಸಬೇಕು ಅಂತ ಹೇಳುತ್ತಿದ್ದರು’ ಎಂದು ಪಾಂಟಿಂಗ್ ಹೇಳಿದ್ದಾರೆ.

ಓದುಗರಿಗೆ ನೆನಪಿರಬಹುದು, ಪಂತ್ ತಾವೆದುರಿಸಿದ ಮೊದಲ 34 ಎಸೆತಗಳಲ್ಲಿ ಕೇವಲ 5 ರನ್ ಮಾತ್ರ ಗಳಿಸಿದ್ದರು. ಅದಾದ ನಂತರವೇ ಅವರು ಅಕ್ರಮಣಕಾರಿ ಹೊಡೆತಗಳನ್ನು ಭಾರಿಸಲಾರಂಭಿಸಿದ್ದು.

ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದ ಸಿಡ್ನಿ ಮೈದಾನದಲ್ಲಿ ಪಂದ್ಯದ ಕೊನೆಯ ದಿನ ಅತಿಥೇಯರ ಪ್ರಿಮೀಯರ್ ಸ್ಪಿನ್ನರ್ ನೇಥನ್ ಲಿಯಾನ ಬೌಲಿಂಗ್​ನಲ್ಲಿ, ಮೂರು ಸಿಕ್ಸರ್​ಗಳನ್ನು ಬಾರಿಸಿದ್ದು ಅವರಲ್ಲಿರುವ ಬ್ಯಾಟಿಂಗ್ ಕ್ಷಮತೆಗೆ ಸಾಕ್ಷಿಯಾಗಿದೆ. ಪೂಜಾರಾ ಅವರೊಂದಿಗೆ 148 ರನ್​ಗಳನ್ನು ಸೇರಿಸಿದ ಅವರು 97 ರನ್ ಗಳಿಸಿ ಶತಕ ವಂಚಿತರಾದರು. ಆದರೆ ಅವರ ಇನ್ನಿಂಗ್ಸ್ ಭಾರತ ಟೆಸ್ಟ್​ ಉಳಿಸಿಕೊಳ್ಳುವಲ್ಲಿ ದೊಡ್ಡ ಪಾತ್ರ ನಿರ್ವಹಿಸಿತು.

‘ಪಂತ್​​ರನ್ನು ಪ್ರಮೋಟ್ ಮಾಡಿದ್ದು ಮಾಸ್ಟರ್ ಸ್ಟ್ರೋಕ್ ಆದರೂ, ಯುವ ವಿಕೆಟ್​ಕೀಪರ್ ಅದನ್ನು ಸಮರ್ಥಿಸಿಕೊಂಡರಲ್ಲ, ಅದು ನಿಜಕ್ಕೂ ಶ್ಲಾಘನೀಯ. ತಮ್ಮದೇ ಆದ ಶೈಲಿಯಲ್ಲಿ ಪಂತ್ ಆ ಇನ್ನಿಂಗ್ಸ್ ಆಡಿದರು. ಅವರ ಆಟದಲ್ಲಿ ಆತ್ಮವಿಶ್ವಾಸದೊಂದಿಗೆ ಕೊಂಚ ದಾರ್ಷ್ಟ್ಯತೆಯೂ ಇತ್ತು’ ಎಂದು ಪಾಂಟಿಂಗ್ ಹೇಳಿದ್ದಾರೆ.

‘ಫೀಲ್ಡರ್​ಗಳೆಲ್ಲ ಚದುರಿದಾಗ ಲಿಯಾನ್ ಅವರನ್ನು ಪಂತ್​ರಂತೆ ಚಚ್ಚಲು ಸ್ಕಿಲ್ ಬೇಕಾಗುತ್ತದೆ. ಸರಣಿಯ ಅರಂಭಕ್ಕೆ ಮೊದಲು ಟೀಮ್ ಇಂಡಿಯಾದಲ್ಲಿ ಮುಂದಿನ 10-12 ವರ್ಷಗಳ ಕಾಲ ವಿಕೆಟ್​ಕೀಪರ್/ಬ್ಯಾಟ್ಸ್​ಮನ್ ಆಗಿ ಸ್ಥಾನ ಭದ್ರಪಡಿಸಿಕೊಳ್ಳಲು ಪಂತ್​ಗೆ ಅವಕಾಶವಿದೆ ಎಂದು ನಾನು ಹೇಳಿದ್ದೆ. ಸಿಡ್ನಿಯಲ್ಲಿ ಆಡಿದ ಇನ್ನಿಂಗ್ಸ್​ ಅವರ ಸಾಮರ್ಥ್ಯವನ್ನು ಸಾಬೀತು ಮಾಡಿದೆ’ ಎಂದು ಪಾಂಟಿಂಗ್ ಹೇಳಿದರು.

India vs Australia Test Series | ಅಶ್ವಿನ್ ಜಾಗದಲ್ಲಿ ನಾನಿದ್ದಿದ್ದರೆ ಪೈನ್​ಗೆ ಜೀವಮಾನವಿಡೀ ಮರ್ಯಾದೆ ಕೊಡುತ್ತಿರಲಿಲ್ಲ: ಡೇವಿಡ್ ಲಾಯ್ಡ್