ನೋವು, ನಿಂದನೆ ನಡುವೆ ಮಿಂಚಿದ ಸಿರಾಜ್: ಹೈದರಾಬಾದ್ ಗಲ್ಲಿಯಲ್ಲಿ ಅರಳಿದ ಆಟೊ ಡ್ರೈವರ್​ ಮಗನ ನೋವಿನ ಕಥೆಯಿದು..

ತಂದೆ ತೀರಿಕೊಂಡ ನೋವು. ಜನಾಂಗೀಯ ನಿಂದನೆ ಎದುರಿಸಿದ ಅಪಮಾನದ ನಡುವೆ ಸಿರಾಜ್ ಮೆರೆದ ಪರಾಕ್ರಮ ನಿಜಕ್ಕೂ ಮೆಚ್ಚುವಂತಹದ್ದೇ. ಟೆಸ್ಟ್ ಕ್ರಿಕೆಟ್​ನಲ್ಲಿ ಸಾಧನೆ ಮಾಡ್ಬೇಕು ಅನ್ನೋ, ತಮ್ಮ ತಂದೆಯ ಕನಸನ್ನ ಅವರು ನನಸು ಮಾಡಿದ್ದಾರೆ.

  • TV9 Web Team
  • Published On - 16:46 PM, 20 Jan 2021
ನೋವು, ನಿಂದನೆ ನಡುವೆ ಮಿಂಚಿದ ಸಿರಾಜ್: ಹೈದರಾಬಾದ್ ಗಲ್ಲಿಯಲ್ಲಿ ಅರಳಿದ ಆಟೊ ಡ್ರೈವರ್​ ಮಗನ ನೋವಿನ ಕಥೆಯಿದು..
ಮೊಹಮ್ಮದ್ ಸಿರಾಜ್

ಟೆಸ್ಟ್ ಸರಣಿಯಲ್ಲಿ ಆ ಕ್ರಿಕೆಟಿಗ ಅನುಭವಿಸಿದ ನೋವು, ಅವಮಾನ, ನಿಂದನೆ ಒಂದೆರೆಡಲ್ಲ. ಆದ್ರೆ, ತಂದೆ ತೀರಿಕೊಂಡ ನೋವಿನಲ್ಲೇ, ತನ್ನ ಮೇಲೆ ಜನಾಂಗೀಯ ನಿಂದನೆ ಮಾಡಿದವರ ಮಣ್ಣಲ್ಲೇ, ಆತ ಮುಟ್ಟಿನೋಡಿಕೊಳ್ಳುವಂತಹ ಪ್ರತ್ಯುತ್ತರ ನೀಡಿದ್ದಾನೆ.

ಮೊದಲ ಇನ್ನಿಂಗ್ಸ್​ನಲ್ಲಿ 369ರನ್ ಗಳಿಸಿದ್ದ ಕಾಂಗರುಗಳು, ಎರಡನೇ ಇನ್ನಿಂಗ್ಸ್​ನಲ್ಲಿ 294ರನ್​ಗೆ ಸರ್ವಪತನಕಂಡರು. ಗಾಬಾ ಮೈದಾನದಲ್ಲಿ ಟೀಂ ಇಂಡಿಯಾ ಬೌಲರ್​ಗಳ ಸಾಧನೆ ನಿಜಕ್ಕೂ ಮೆಚ್ಚುವಂಥದ್ದೇ. ಯಾಕಂದ್ರೆ, ಆಸಿಸ್ ಬಲಿಷ್ಠ ಬ್ಯಾಟಿಂಗ್ ಲೈನ್​ಅಪ್ ಹೊಂದಿದ್ರೆ, ಟೀಂ ಇಂಡಿಯಾದಲ್ಲಿ ಐದು ಪಂದ್ಯಗಳನ್ನಾಡಿದ ಅನುಭವಿ ಬೌಲರ್​ಗಳು ಯಾರು ಇದ್ದಿಲ್ಲ. ಆದ್ರೂ, ಕರಾರುವಾಕ್ ದಾಳಿ ನಡೆಸಿದ ರಹಾನೆ ಪಡೆಯ ಬೌಲರ್​ಗಳು, ಆಸಿಸ್ ಬ್ಯಾಟಿಂಗ್​ ಧೂಳೀಪಟ ಮಾಡಿದ್ರು.

ಐದು ವಿಕೆಟ್ ಪಡೆದು ಮಿಂಚಿದ ಮೊಹಮ್ಮದ್ ಸಿರಾಜ್..
ಬ್ರಿಸ್ಬೇನ್ ಅಂಗಳದಲ್ಲಿ ಕಾಂಗರುಗಳು ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದಾರೆ ಅದಕ್ಕೆ ಕಾರಣವೇ, ಹೈದ್ರಾಬಾದ್ ಹುಡುಗ ಮೊಹಮ್ಮದ್ ಸಿರಾಜ್ ಪರಾಕ್ರಮ. ಸಿರಾಜ್, ಮೊದಲ ಇನ್ನಿಂಗ್ಸ್​ನಲ್ಲಿ ಪಡೆದಿದ್ದು ಒಂದೇ ಒಂದು ವಿಕೆಟ್. ಆದ್ರೆ, ಎರಡನೇ ಇನ್ನಿಂಗ್ಸ್​ನಲ್ಲಿ ಸಿರಾಜ್, ಟೀಂ ಇಂಡಿಯಾದ ಫ್ರಂಟ್​ಲೈನ್ ಬೌಲರ್ ಆಗಿ ಆಸಿಸ್ ಮೇಲೆ ಅಟ್ಯಾಕ್ ಮಾಡಿದ್ರು. ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದು ವಿಕೆಟ್ ಪಡೆದ ಸಿರಾಜ್, ಅತ್ಯದ್ಭುತ ಸ್ಪೆಲ್ ಮಾಡಿ, ಆಸಿಸ್ ಪತನಕ್ಕೆ ಕಾರಣವಾದ್ರು.

ಮೊಹಮ್ಮದ್ ಸಿರಾಜ್ ಪ್ರಮುಖ ಐದು ವಿಕೆಟ್​ಗಳನ್ನು ಕಬಳಿಸಿ ಉತ್ತಮ ಮೊತ್ತ ಕಲೆಹಾಕಬೇಕೆನ್ನುವ ಆಸಿಸ್ ಲೆಕ್ಕಾಚಾರವನ್ನ ಉಲ್ಟಾ ಮಾಡಿದ್ರು. ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಮಿಚೆಲ್ ಸ್ಟಾರ್ಟ್ ಹಾಗೂ ಜೋಶ್ ಹೆಜಲ್​ವುಡ್ ವಿಕೆಟ್ ಪಡೆದು ಮಿಂಚಿದ್ರು. ಇದ್ರೊಂದಿಗೆ ಭಾರತೀಯ ಬೌಲರ್​ ಒಬ್ಬ 17 ವರ್ಷಗಳ ನಂತರ ಬ್ರಿಸ್ಬೇನ್​ನಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾನೆ. ಅಲ್ಲದೇ, ಟೆಸ್ಟ್ ಸರಣಿಯಲ್ಲಿ ಸಿರಾಜ್ 13 ವಿಕೆಟ್ ಪಡೆದು, ಸರಣಿಯನ್ನ ಅವಿಸ್ಮರಣೀಯವಾಗಿರಿಸಿಕೊಂಡ್ರು.

ಜನಾಂಗೀಯ ನಿಂದನೆ ನಡುವೆ ಸಿರಾಜ್ ಕಾಂಗೂರಗಳ ಬೇಟೆ!
ಮೊಹಮ್ಮದ್ ಸಿರಾಜ್​ರನ್ನು ಆಸಿಸ್ ಕ್ರಿಕೆಟ್ ಅಭಿಮಾನಿಗಳು ಮೂರು ಬಾರಿ, ಜನಾಂಗೀಯ ನಿಂದನೆಗೆ ಗುರಿ ಮಾಡಿದ್ರು. ಸಿಡ್ನಿ ಟೆಸ್ಟ್​ನಲ್ಲಿ ಸಿರಾಜ್​ಗೆ ಕೋತಿ, ಕಂದು ನಾಯಿ ಅಂತ ಜನಾಂಗೀಯ ನಿಂದನೆ ಮಾಡಿದ್ದ ಕಿಡಿಗೇಡಿ ಪ್ರೇಕ್ಷಕರು, ಬ್ರಿಸ್ಬೇನ್​ನಲ್ಲಿ ಹುಳ ಅಂತ ನಿಂದನೆ ಮಾಡಿದ್ರು. ಆದ್ರೆ ಇದ್ಯಾವುದಕ್ಕೂ ಉತ್ತರಿಸದೇ ಸೈಲೆಂಟ್ ಆಗಿದ್ದ ಸಿರಾಜ್, ತಮ್ಮ ಅದ್ಭುತ ಬೌಲಿಂಗ್ ಮೂಲಕ ಮುಟ್ಟಿನೋಡಿಕೊಳ್ಳೋಹಾಗೇ ತಿರುಗೇಟು ಕೊಟ್ಟಿದ್ದಾರೆ.

ಪಂದ್ಯ ಮುಗಿದ ಬಳಿಕ ಸಿರಾಜ್ ಭಾವುಕದ ಮಾತುಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ಆಡೋದು ಆಟೊ ಡ್ರೈವರ್ ಆಗಿದ್ದ ನಮ್ಮ ತಂದೆಯವರ ಕನಸಾಗಿತ್ತು. ಆದ್ರೆ ಇವತ್ತು ಸಾಧನೆಯನ್ನ ಕಾಣ್ತುಂಬಿಕೊಳ್ಳಲು ಅವರೇ ಇಲ್ಲ. ಪಂದ್ಯಕ್ಕೂ ಮುನ್ನ ತಾಯಿ, ಫೋನ್ ಮಾಡಿದ್ರು. ಆ ಒಂದು ಕರೆಯೇ ನನ್ನ ಆತ್ಮವಿಶ್ವಾಸವನ್ನ ಹೆಚ್ಚಾಗುವಂತೆ ಮಾಡ್ತು ಎಂದಿದ್ದಾರೆ.

ಒಟ್ನಲ್ಲಿ ತಂದೆ ತೀರಿಕೊಂಡ ನೋವು. ಜನಾಂಗೀಯ ನಿಂದನೆ ಎದುರಿಸಿದ ಅಪಮಾನದ ನಡುವೆ ಸಿರಾಜ್ ಮೆರೆದ ಪರಾಕ್ರಮ ನಿಜಕ್ಕೂ ಮೆಚ್ಚುವಂತಹದ್ದೇ. ಅಲ್ಲದೇ, ಟೆಸ್ಟ್ ಕ್ರಿಕೆಟ್​ನಲ್ಲಿ ಸಾಧನೆ ಮಾಡ್ಬೇಕು ಅನ್ನೋ, ತಮ್ಮ ತಂದೆಯ ಕನಸನ್ನ ಅವರು ನನಸು ಮಾಡಿದ್ದಾರೆ.

ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರ ತಂದೆ ಆಟೋ ಡ್ರೈವರ್​ ನಿಧನ