ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರನೇ ಟಿ20 ಪಂದ್ಯ ಹಲವು ರೋಚಕತೆಗಳಿಗೆ ಸಾಕ್ಷಿಯಾಯಿತು. ಈ ಪಂದ್ಯವನ್ನು ವೀಕ್ಷಿಸಲು ಮೈದಾನಕ್ಕೆ ಬಂದಿದ್ದ ಪ್ರೇಕ್ಷಕರಿಗೆ ಬರಪೂರ ಮನರಂಜನೆ ಸಿಕ್ಕಿತು. ಮೊದಲ ಬಾರಿಗೆ ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ಎರಡೆರಡು ಸೂಪರ್ ಓವರ್‌ಗಳು (Double Super Overs) ಕಂಡುಬಂದವು. ಹೀಗಾಗಿ ಈ ಪಂದ್ಯವನ್ನು ಇತಿಹಾಸದ ಪುಟಗಳಲ್ಲಿ ದಾಖಲು ಮಾಡಲಾಗುತ್ತಿದೆ. ಏಕೆಂದರೆ ಮೇಲೆ ಹೇಳಿದಂತೆ ಇದೇ ಮೊದಲ ಬಾರಿಗೆ ಎರಡೆರಡು ಸೂಪರ್ ಓವರ್‌ಗಳು ಒಂದೇ ಪಂದ್ಯದಲ್ಲಿ ಕಂಡುಬಂದಿವೆ. ಅಷ್ಟಕ್ಕೂ ಕ್ರಿಕೆಟ್‌ನಲ್ಲಿ ಸೂಪರ್ ಓವರ್‌ನ ಇತಿಹಾಸವೇನು (Super Over History)? ಇದನ್ನು ಯಾವಾಗ ಜಾರಿಗೆ ತರಲಾಯಿತು? ಮೊದಲ ಬಾರಿಗೆ ಯಾವ ತಂಡಗಳ ನಡುವೆ ಸೂಪರ್ ಓವರ್ ಆಡಲಾಯಿತು? ಯಾವ ತಂಡ ಮೊದಲ ಸೂಪರ್ ಓವರ್ ಗೆದ್ದಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ.
ವಾಸ್ತವವಾಗಿ 2007 ರ ಮೊದಲು ಸೂಪರ್ ಓವರ್‌ನಂತಹ ಯಾವುದೇ ನಿಯಮ ಇರಲಿಲ್ಲ. ಆ ಸಮಯದಲ್ಲಿ ಬಾಲ್ ಔಟ್ ನಿಯಮ ಜಾರಿಯಲ್ಲಿತ್ತು. 2007 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನೋಡಿದವರಿಗೆ ಈ ನಿಯಮದ ಬಗ್ಗೆ ಅರಿವಿರುತ್ತದೆ. ಆ ಪಂದ್ಯದಲ್ಲಿ ಎರಡೂ ತಂಡಗಳ ನಡುವಿನ ಪಂದ್ಯ ಡ್ರಾ ಆಗಿತ್ತು. ಬಳಿಕ ಬಾಲ್ ಔಟ್ ನಿಯಮದ ಪ್ರಕಾರ ಭಾರತ ಪಂದ್ಯವನ್ನು ಗೆದ್ದುಕೊಂಡಿತು. ಇದರ ನಂತರ, ಬಾಲ್ ಔಟ್ ನಿಯಮವನ್ನು ರದ್ದುಗೊಳಿಸಿ, ಒಂದು ವೇಳೆ ಪಂದ್ಯ ಟೈ ಆದರೆ ಸೂಪರ್ ಓವರ್ ಆಡಿಸುವ ಚಿಂತನೆಗೆ ಬರಲಾಯಿತು. ಹೀಗಾಗಿ 2008ರಲ್ಲಿ ಸೂಪರ್ ಓವರ್ ನಿಯಮವನ್ನು ಜಾರಿಗೆ ತರಲಾಯಿತು. ಇದಾದ ಬಳಿಕ ಯಾವುದೇ ಪಂದ್ಯ ಡ್ರಾಗೊಂಡರೆ, ಆ ಪಂದ್ಯದ ವಿಜೇತರನ್ನು ಸೂಪರ್ ಓವರ್ ಮೂಲಕ ನಿರ್ಧರಿಸಲಾಗುತ್ತದೆ.
ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸೂಪರ್ ಓವರ್ ಪಂದ್ಯ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿತ್ತು.ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್ ತಂಡ ಸೂಪರ್ ಓವರ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಳಿಕ 2011ರ ಏಕದಿನ ವಿಶ್ವಕಪ್ನಲ್ಲೂ ಈ ನಿಯಮವನ್ನು ಅಳವಡಿಸಲಾಗಿತ್ತು. ಆದರೆ ಆ ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯ ಡ್ರಾ ಆಗಿರಲಿಲ್ಲ. ನಂತರ 1 ಅಕ್ಟೋಬರ್ 2012 ರಂದು, ಟಿ20 ಪಂದ್ಯ ಡ್ರಾಗೊಂಡಾಗ, ಸೂಪರ್ ಓವರ್ ಅನ್ನು ಶಾಶ್ವತವಾಗಿ ಜಾರಿಗೊಳಿಸಲಾಯಿತು. ಅಂದಿನಿಂದ, ಐಸಿಸಿ ಸೂಪರ್ ಓವರ್‌ನ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ.
2019ರ ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಟೈ ಆಗಿತ್ತು. ಹೀಗಾಗಿ ವಿಜೇತರನ್ನು ಸೂಪರ್ ಓವರ್ ಮೂಲಕ ತೀರ್ಮಾನಿಸಲು ನಿರ್ಧರಿಸಲಾಯಿತು. ಆದರೆ ಸೂಪರ್ ಓವರ್ ಕೂಡ ಟೈನಲ್ಲಿ ಕೊನೆಗೊಂಡಿತು. ಹೀಗಾಗಿ ಪಂದ್ಯದಲ್ಲಿ ಯಾವ ತಂಡ ಹೆಚ್ಚು ಬೌಂಡರಿ ಬಾರಿಸಿತ್ತೋ ಆ ತಂಡವನ್ನು ವಿಜೇತ ಎಂದು ಘೋಷಿಸಲು ತೀರ್ಮಾನಿಸಲಾಯಿತು. ಅದರಂತೆ ಪಂದ್ಯದಲ್ಲಿ ಹೆಚ್ಚು ಬೌಂಡರಿ ಬಾರಿಸಿದ್ದ ಇಂಗ್ಲೆಂಡ್ ತಂಡವನ್ನು ವಿಜೇತ ಎಂದು ಘೋಷಿಸಲಾಯಿತು. ಆದರೆ ಆ ಬಳಿಕ ಸೂಪರ್ ಓವರ್‌ನ ಈ ನಿಯಮವು ವಿವಾದಕ್ಕೆ ಒಳಗಾಯಿತು. ಹೀಗಾಗಿ ಬೌಂಡರಿ ಕೌಂಟ್ ನಿಯಮವನ್ನು ರದ್ದುಗೊಳಿಸಿದ ಎಂಸಿಸಿ ಈ ನಿಯಮದಲ್ಲಿ ಕೊಂಚ ಬದಲಾವಣೆ ಮಾಡಿತು. ಅದರಂತೆ ಪಂದ್ಯ ಮುಗಿಯುವವರೆಗೆ ಸೂಪರ್ ಓವರ್ ಆಡಿಸಲು ತೀರ್ಮಾನಿಸಲಾಯಿತು.
ಒಂದೇ ಪಂದ್ಯದಲ್ಲಿ ಎರಡು ಸೂಪರ್ ಓವರ್‌ಗಳು ನಡೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆಯೇ, ಸೂಪರ್ ಓವರ್‌ನ ಹೊಸ ನಿಯಮಗಳನ್ನು ಪರಿಚಯಿಸಿದ ನಂತರ 2020 ರ ಐಪಿಎಲ್ನಲ್ಲಿ ಎರಡೆರಡು ಸೂಪರ್ ಓವರ್ ಪಂದ್ಯಗಳು ನಡೆದಿದ್ದವು. ಮೊದಲ ಎರಡೆರಡು ಸೂಪರ್ ಓವರ್ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಆರ್‌ಸಿಬಿ ಜಯ ಗಳಿಸಿತ್ತು. ಎರಡನೇ ಎರಡೆರಡು ಸೂಪರ್ ಓವರ್ ಪಂದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ