SMAT 2024: ಕೇವಲ 18 ಎಸೆತಗಳಲ್ಲಿ ಪಂದ್ಯ ಗೆದ್ದು ದಾಖಲೆ ಬರೆದ ಜಮ್ಮು ಕಾಶ್ಮೀರ
Syed Mushtaq Ali Trophy 2024: ಸೈಯದ್ ಮುಷ್ಟಾಕ್ ಅಲಿ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶ ತಂಡವು 9.1 ಓವರ್‌ಗಳಲ್ಲಿ ಕೇವಲ 32 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಈ ಟೂರ್ನಿಯ ಇತಿಹಾಸದಲ್ಲಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಎರಡನೇ ತಂಡ ಎಂಬ ಬೇಡದ ದಾಖಲೆ ಬರೆದಿದೆ. 32 ರನ್‌ಗಳ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ಕೇವಲ 18 ಎಸೆತಗಳಲ್ಲಿ ಗೆಲುವಿನ ದಡ ಮುಟ್ಟಿದೆ.
ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಇಂದು ನಡೆದ ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶ ನಡುವಿನ ಪಂದ್ಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಅತಿದೊಡ್ಡ ಗೆಲುವಿಗೆ ಸಾಕ್ಷಿಯಾಗಿದೆ. ಅರುಣಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವಿನ ಈ ಪಂದ್ಯ ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಬಿಕೆಸಿಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ 10 ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ ತಂಡ ಕೇವಲ 9.1 ಓವರ್‌ಗಳಲ್ಲಿ 32 ರನ್‌ಗಳಿಗೆ ಆಲೌಟ್ ಆಯಿತು. ಈ ಇನ್ನಿಂಗ್ಸ್‌ನಲ್ಲಿ ಅರುಣಾಚಲ ಪ್ರದೇಶದ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ ಎಂಬುದು ಇಲ್ಲಿ ವಿಶೇಷ.
ಕಡಿಮೆ ಸ್ಕೋರ್ ದಾಖಲಿಸಿದ ಎರಡನೇ ತಂಡ
ಈ ಪಂದ್ಯದಲ್ಲಿ ಕೇವಲ 32 ರನ್‌ಗಳಿಗೆ ಆಲೌಟ್ ಆದ ಅರುಣಾಚಲ ಪ್ರದೇಶ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲಿ ಅತಿ ಕಡಿಮೆ ಸ್ಕೋರ್ ದಾಖಲಿಸಿದ ಎರಡನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ 2009ರಲ್ಲಿ ಜಾರ್ಖಂಡ್ ವಿರುದ್ಧ ತ್ರಿಪುರಾ ತಂಡ ಕೇವಲ 30 ರನ್‌ಗಳಿಗೆ ಆಲೌಟ್ ಆಗಿತ್ತು. ಅಂದರೆ ಅರುಣಾಚಲ ಪ್ರದೇಶದ ತಂಡ ಈ ದಾಖಲೆ ಮುರಿಯುವುದರಿಂದ ಸ್ವಲ್ಪದರಲ್ಲೇ ಪಾರಾಗಿದೆ. ಈ ಟೂರ್ನಿಯಲ್ಲಿ ಈ ಎರಡು ತಂಡಗಳನ್ನು ಬಿಟ್ಟರೆ ಬೇರೆ ಯಾವುದೇ ತಂಡ 40 ರನ್‌ಗಳಿಗಿಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆಗಿಲ್ಲ.
ಕೇವಲ 18 ಎಸೆತಗಳಲ್ಲಿ ಗೆಲುವು
ಅರುಣಾಚಲ ಪ್ರದೇಶದ ಈ ಕಳಪೆ ಪ್ರದರ್ಶನದಿಂದಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಈ ಪಂದ್ಯದಲ್ಲಿ ಗೆಲ್ಲಲು ಕೇವಲ 33 ರನ್‌ಗಳ ಗುರಿ ಸಿಕ್ಕಿತು. ಈ ಸಣ್ಣ ಗುರಿಯನ್ನು ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡ ಹೆಚ್ಚು ಸಮಯ ತೆಗೆದುಕೊಳ್ಳದೆ ಕೇವಲ 3 ಓವರ್‌ಗಳಲ್ಲಿ ಪಂದ್ಯವನ್ನು ಮುಗಿಸಿತು. ತಂಡದ ಪರ ಯುದ್ಧವೀರ್ ಸಿಂಗ್ 11 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರೆ, ಕಮ್ರಾನ್ ಇಕ್ಬಾಲ್ 10 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂದರೆ 102 ಎಸೆತಗಳು ಬಾಕಿ ಇರುವಂತೆಯೇ ಜಮ್ಮು ಮತ್ತು ಕಾಶ್ಮೀರ ತಂಡ ಈ ಪಂದ್ಯವನ್ನು ಗೆದ್ದುಕೊಂಡಿತು. ಇದು ಬಾಲ್‌ಗಳ ವಿಷಯದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಅತಿದೊಡ್ಡ ಗೆಲುವು. ಇದಕ್ಕೂ ಮುನ್ನ 2009ರಲ್ಲಿ ಜಾರ್ಖಂಡ್ ತಂಡ ತ್ರಿಪುರಾ ತಂಡವನ್ನು ಇನ್ನೂ 100 ಎಸೆತಗಳು ಬಾಕಿ ಇರುವಂತೆಯೇ ಸೋಲಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ