
ದೇಶದ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಈ ಪರಿಷ್ಕರಣೆಯ ಭಾಗವಾಗಿ ಇದೀಗ ವಿಚಾರಣೆಗೆ ಹಾಜರಾಗುವಂತೆ ಟೀಮ್ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಅವರ ಸಹೋದರ ಮೊಹಮ್ಮದ್ ಕೈಫ್ ಅವರಿಗೆ ಚುನಾವಣಾ ಆಯೋಗ ಸಮನ್ಸ್ ಜಾರಿ ಮಾಡಿದೆ.
ದಕ್ಷಿಣ ಕೋಲ್ಕತ್ತಾದ ಜಾದವ್‌ಪುರ ಪ್ರದೇಶದ ಕರ್ತ್ಜು ನಗರ ಶಾಲೆಯಿಂದ ಸೋಮವಾರ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದ್ದು, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ (AERO) ಮುಂದೆ ಹಾಜರಾಗುವಂತೆ ಶಮಿ ಮತ್ತು ಅವರ ತಮ್ಮನಿಗೆ ಸೂಚಿಸಲಾಗಿದೆ.
ಪ್ರಸ್ತುತ ಮಾಹಿತಿ ಪ್ರಕಾರ, ಮೊಹಮ್ಮದ್ ಶಮಿ ವಿಜಯ್ ಹಝಾರೆ ಟ್ರೋಫಿಯಲ್ಲಿ ರಾಜ್‌ಕೋಟ್‌ನಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಿರುವುದರಿಂದ ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಪಂದ್ಯದ ಬಳಿಕ ಅವರು ಕೊಲ್ಕತ್ತಾಗೆ ಮರಳುವ ಸಾಧ್ಯತೆಯಿದೆ.
ಮೊಹಮ್ಮದ್ ಶಮಿ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ವಾರ್ಡ್ ಸಂಖ್ಯೆ 93 ರಲ್ಲಿ ಮತದಾರರಾಗಿ ದಾಖಲಾಗಿದ್ದಾರೆ. ಇದು ರಾಶ್‌ಬೆಹರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅಂದರೆ ರಾಶ್‌ಬೆಹರಿ ಕ್ಷೇತ್ರದಲ್ಲಿ ಮೊಹಮ್ಮದ್ ಶಮಿ ಮತದಾನದ ಹಕ್ಕನ್ನು ಹೊಂದಿದ್ದಾರೆ.
ಆದರೆ ಶಮಿ ಅವರು ಮೂಲತಃ ಉತ್ತರ ಪ್ರದೇಶದವರು. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಜನಿಸಿದ ಅವರು ಹಲವಾರು ವರ್ಷಗಳಿಂದ ಕೋಲ್ಕತ್ತಾದ ಖಾಯಂ ನಿವಾಸಿಯಾಗಿದ್ದಾರೆ.
ಇದೀಗ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಮೊಹಮ್ಮದ್ ಶಮಿ ಮತ್ತು ಅವರ ಸಹೋದರನ ಹೆಸರುಗಳು ಎಣಿಕೆ ನಮೂನೆಗಳಲ್ಲಿನ ತೊಡಕುಗಳಿಂದಾಗಿ ವಿಚಾರಣಾ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಈ ಮ್ಯಾಪಿಂಗ್ ವ್ಯತ್ಯಾಸಗಳ ಬಗ್ಗೆ ವಿಚಾರಣೆ ನಡೆಸಲು ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಕೈಫ್ ಅವರಿಗೆ ಚುನಾವಣಾ ಆಯೋಗ ನೋಟೀಸ್ ಕಳುಹಿಸಿದೆ.
ಅತ್ತ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವುದರಿಂದ ಮೊಹಮ್ಮದ್ ಶಮಿ ಈವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಶಮಿ ಅವರ ವಿಚಾರಣೆಯನ್ನು ಜನವರಿ 9 ರಿಂದ 11 ರ ನಡುವೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ವರದಿಯಾಗಿದೆ.
ಸದ್ಯ ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆ ಚಾಲನೆಯಲ್ಲಿದ್ದು, ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಈ ಪ್ರಕ್ರಿಯೆಯು ಅಂತ್ಯಗೊಳ್ಳಲಿದೆ. ಅಲ್ಲದೆ ಬಂಗಾಳದ ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 14 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ: ಅಬ್ಬರ ಸಿಡಿಲಬ್ಬರ… ಟ್ರಾವಿಸ್ ಹೆಡ್ ಬ್ಯಾಟ್ನಿಂದ ದಾಖಲೆಯ ಸೆಂಚುರಿ
ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ಎಸ್ಐಆರ್ ಪ್ರಕ್ರಿಯೆಯ ಭಾಗವಾಗಿ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ 58 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಅಳಿಸಲಾಗಿತ್ತು. ಅಲ್ಲದೆ ಪ್ರಕಟವಾದ ಕರಡು ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋಗಿದ್ದರೆ ಅಥವಾ ಕಾಣೆಯಾಗಿದ್ದರೆ, ಅವರು ಮತ್ತೊಮ್ಮೆ ಅಧಿಕೃತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಚುನಾವಣಾ ಆಯೋಗ ತಿಳಿಸಿದೆ.
Published On - 1:06 pm, Tue, 6 January 26