VHT 2025-26: ಕೇವಲ 9 ರನ್ಗಳಿಂದ ದಾಖಲೆಯ 5ನೇ ಶತಕದಿಂದ ವಂಚಿತರಾದ ದೇವದತ್ ಪಡಿಕ್ಕಲ್
Devdutt Padikkal: ವಿಜಯ್ ಹಜಾರೆ ಟೂರ್ನಿಯ ಕರ್ನಾಟಕ vs ರಾಜಸ್ಥಾನ ಪಂದ್ಯದಲ್ಲಿ ಕರ್ನಾಟಕ 324 ರನ್ ಗಳಿಸಿತು. ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಬಾರಿಸಿದರೆ, ದೇವದತ್ ಪಡಿಕ್ಕಲ್ 91 ರನ್ ಗಳಿಸಿ ಐದನೇ ಶತಕದಿಂದ ವಂಚಿತರಾದರು. ಪಡಿಕ್ಕಲ್ ಈ ಆವೃತ್ತಿಯಲ್ಲಿ ಈಗಾಗಲೇ 4 ಶತಕ ಹಾಗೂ 1 ಅರ್ಧಶತಕದೊಂದಿಗೆ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಕರ್ನಾಟಕ ಉತ್ತಮ ಆರಂಭ ಪಡೆದು ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.

ವಿಜಯ್ ಹಜಾರೆ ಟೂರ್ನಿಯ (Vijay Hazare Trophy) 6ನೇ ಸುತ್ತಿನ ಪಂದ್ಯಗಳು ಇಂದು ನಡೆಯುತ್ತಿವೆ. ಇಂದಿನ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ರಾಜಸ್ಥಾನ ತಂಡ ( Karnataka vs Rajasthan) ಎದುರಾಗಿದೆ. ಗುಜರಾತ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 324 ರನ್ ಕಲೆಹಾಕಿದೆ. ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಸಿಡಿಸಿದರೆ, ಅತ್ಯುತ್ತಮ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ( Devdutt Padikkal) ಕೇವಲ 9 ರನ್ಗಳಿಂದ ದಾಖಲೆಯ 5ನೇ ಶತಕದಿಂದ ವಂಚಿತರಾದರು. ಆದಾಗ್ಯೂ ನಾಯಕನ ಜೊತೆಗೂಡಿ ತಂಡಕ್ಕೆ ಒಳ್ಳೇಯ ಆರಂಭ ಒದಗಿಸಿಕೊಡುವಲ್ಲಿ ಪಡಿಕ್ಕಲ್ ಯಶಸ್ವಿಯಾದರು. ಇವರಿಬ್ಬರ ಜೊತೆಯಾಟದಿಂದಾಗಿ ಕರ್ನಾಟಕ ತಂಡ ಮೊದಲ ವಿಕೆಟ್ಗೆ 184 ರನ್ ಕಲೆಹಾಕಿತು.
ಕರ್ನಾಟಕಕ್ಕೆ ಭರ್ಜರಿ ಆರಂಭ
ಈ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಎಂದಿನಂತೆ ನಾಯಕ ಮಯಾಂಕ್ ಹಾಗೂ ಪಡಿಕ್ಕಲ್ ಇನ್ನಿಂಗ್ಸ್ ಆರಂಭಿಸಿದರು. ಕಳೆದ ಪಂದ್ಯದಲ್ಲಿ ನಾಯಕ ಮಯಾಂಕ್ ಎಡವಿದ್ದರಿಂದ ಈ ಪಂದ್ಯದಲ್ಲಿ ಅವರ ಮೇಲೆ ನಿರೀಕ್ಷೆಗಳಿದ್ದವು. ಅದರಂತೆ ಬ್ಯಾಟ್ ಬೀಸಿದ ಮಯಾಂಕ್, ಪಡಿಕ್ಕಲ್ ಜೊತೆಗೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಆರಂಭದಿಂದಲೂ ರಾಜಸ್ಥಾನ್ ವೇಗಿಗಳನ್ನು ಕಾಡಿದ ಈ ಜೋಡಿ ತಲಾ ಅರ್ಧಶತಕ ಬಾರಿಸುವುದರೊಂದಿಗೆ ತಂಡವನ್ನು ಶತಕದ ಗಡಿ ದಾಟಿಸಿತು. ಆ ಬಳಿಕ ನಾಯಕ ಮಯಾಂಕ್ ಈ ಆವೃತ್ತಿಯ ಎರಡನೇ ಶತಕದ ಸನಿಹದಲಿದ್ದರು. ಇತ್ತ ಪಡಿಕ್ಕಲ್ ಕೂಡ ಶತಕದತ್ತ ದಾಪುಗಾಲಿಟ್ಟಿದ್ದರು.
9 ರನ್ಗಳಿಂದ 5ನೇ ಶತಕ ಮಿಸ್
ಆದರೆ 82 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 91 ರನ್ಗಳಿಸಿ ಆಡುತ್ತಿದ್ದ ಪಡಿಕ್ಕಲ್, ಎದುರಾಳಿ ತಂಡದ ನಾಯಕ ಮಾನವ್ ಸುತಾರ್ ಎಸೆದ 29ನೇ ಓವರ್ನ 2ನೇ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಈ ಮೂಲಕ ಪಡಿಕ್ಕಲ್, ಈ ಆವೃತ್ತಿಯ 5ನೇ ಶತಕದಿಂದ ವಂಚಿತರಾದರು. ಈ ಪಂದ್ಯದಲ್ಲಿ ಪಡಿಕ್ಕಲ್ ಶತಕ ಬಾರಿಸಿದ್ದರೆ, ವಿಜಯ್ ಹಜಾರೆ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಅಧಿಕ ಶತಕಗಳನ್ನು ಬಾರಿಸಿದ್ದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಪಡಿಕ್ಕಲ್ಗೂ ಮುನ್ನ ಎನ್ ಜಗದೀಸನ್ ಹಾಗೂ ಕನ್ನಡಿಗ ಕರುಣ್ ನಾಯರ್, ಒಂದೇ ಆವೃತ್ತಿಯಲ್ಲಿ ತಲಾ 5 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
ದೇಶಿ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಅಬ್ಬರ; ಭಾರತ ತಂಡಕ್ಕೆ ಆಯ್ಕೆ ಯಾವಾಗ?
6 ಪಂದ್ಯಗಳಲ್ಲಿ 4 ಶತಕ, 1 ಅರ್ಧಶತಕ
ಈ ಆವೃತ್ತಿಯಲ್ಲಿ ಇದುವರೆಗೆ 6 ಪಂದ್ಯಗಳನ್ನಾಡಿರುವ ಪಡಿಕ್ಕಲ್ 605 ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಭರ್ಜರಿ ಶತಕಗಳು ಹಾಗೂ ಒಂದು ಅರ್ಧಶತಕ ಸೇರಿದೆ. ಅಂದರೆ ಪಡಿಕ್ಕಲ್ ಆಡಿರುವ 6 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಹೊರತುಪಡಿಸಿ ಉಳಿದ 5 ಪಂದ್ಯಗಳಲ್ಲಿ ಶತಕ ಹಾಗೂ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. 2025-26ರ ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಡಿಕ್ಕಲ್ ಜಾರ್ಖಂಡ್ ವಿರುದ್ಧ 147 ರನ್ ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ನಂತರ ಕೇರಳ ವಿರುದ್ಧ 124 ರನ್, ತಮಿಳುನಾಡು ವಿರುದ್ಧ 22 ರನ್ ಗಳಿಸಿ ಔಟಾಗಿದ್ದರು. ನಂತರ ಪುದುಚೇರಿ ವಿರುದ್ಧ 113 ರನ್ ಬಾರಿಸಿದರೆ, ತ್ರಿಪುರ ವಿರುದ್ಧ 108 ರನ್ ಚಚ್ಚಿದ್ದರು. ಈಗ ರಾಜಸ್ಥಾನ ವಿರುದ್ಧ 91 ರನ್ ಬಾರಿಸಿದ ಪಡಿಕ್ಕಲ್ ಒಂಬತ್ತು ರನ್ಗಳಿಂದ ಶತಕ ವಂಚಿತರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Tue, 6 January 26
