RCB ತಂಡದ ಆಪತ್ಭಾಂಧವ ಎಬಿ ಡಿವಿಲಿಯರ್ಸ್ (AB De Villiers) ಈ ಬಾರಿಯ ಐಪಿಎಲ್ಗೂ ಮೊದಲೇ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಆರ್ಸಿಬಿ ತಂಡದ ಪ್ರಮುಖ ಅಂಗವಾಗಿದ್ದ ಎಬಿಡಿ ಐಪಿಎಲ್ನಲ್ಲಿ ಆರ್ಸಿಬಿ ಪರ 156 ಪಂದ್ಯಗಳಾಡಿದ್ದರು. ಈ ವೇಳೆ ಒಟ್ಟು 4,491 ರನ್ಗಳನ್ನು ಕಲೆಹಾಕಿದ್ದರು. ಅಷ್ಟೇ ಅಲ್ಲದೆ ಆರ್ಸಿಬಿ ಪರ ಅತೀ ಹೆಚ್ಚು ರನ್ ಬಾರಿಸಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ಬರೆದಿದ್ದರು. ಇನ್ನು ಆರ್ಸಿಬಿ ಪರ ವಿರಾಟ್ ಕೊಹ್ಲಿ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ. ಇದಾಗ್ಯೂ ದಿಢೀರಣೆ ನಿವೃತ್ತಿ ಘೋಷಿಸಿ ಎಬಿಡಿ ಎಲ್ಲರಿಗೂ ಶಾಕ್ ನೀಡಿದ್ದರು.
ಎಬಿಡಿ ಅವರ ಈ ನಿರ್ಧಾರ ಆರ್ಸಿಬಿ ಅಭಿಮಾನಿಗಳ ನೋವಿಗೆ ಕಾರಣವಾಗಿತ್ತು. ಆದರೀಗ ಎಬಿಡಿ ಮತ್ತೆ ಆರ್ಸಿಬಿಗೆ ಕಂಬ್ಯಾಕ್ ಸಾಧ್ಯತೆಯಿದೆ. ಈ ಬಗ್ಗೆ ಸುಳಿವು ನೀಡಿದ್ದಾರೆ ಎಬಿಡಿ ಅವರ ಆಪ್ತ ವಿರಾಟ್ ಕೊಹ್ಲಿ. ಈ ಬಗ್ಗೆ ಮಾತನಾಡಿರುವ ಕೊಹ್ಲಿ ‘ನಾನು ಎಬಿ ಡಿವಿಲಿಯರ್ಸ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಅವರೊಂದಿಗೆ ಮಾತನಾಡುತ್ತಿರುತ್ತೇನೆ. ವಿಶೇಷ ಎಂದರೆ ಎಬಿಡಿ ಈಗಲೂ ಆರ್ಸಿಬಿ ತಂಡದ ಅಪ್ಡೇಟ್ಗಳನ್ನು ಪಡೆಯುತ್ತಿರುತ್ತಾರೆ.
ಇತ್ತೀಚೆಗೆ ಎಬಿಡಿ ತಮ್ಮ ಕುಟುಂಬದೊಂದಿಗೆ ಗಾಲ್ಫ್ ವೀಕ್ಷಿಸಲು ಅಮೆರಿಕಕ್ಕೆ ಹೋಗಿದ್ದರು. ಅಲ್ಲಿಂದಲೂ RCB ಯ ಪ್ರದರ್ಶನದ ಎಲ್ಲಾ ರೀತಿಯ ಮಾಹಿತಿಗಳನ್ನು ಪಡೆಯುತ್ತಿದ್ದರು. ಅಲ್ಲದೆ ಮುಂದಿನ ವರ್ಷ ಅವರು ಹೊಸ ಪಾತ್ರದಲ್ಲಿ ತಂಡದೊಂದಿಗೆ ಇರಲಿದ್ದಾರೆ ಎಂದು ವಿಶ್ವಾಸವಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಐಪಿಎಲ್ 2022 ರಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಕಳಪೆ ಫಾರ್ಮ್ನಲ್ಲಿದ್ದಾರೆ. 12 ಪಂದ್ಯಗಳಲ್ಲಿ ಕೇವಲ 216 ರನ್ ಗಳಿಸಿದ್ದಾರೆ. ಈ ವೇಳೆ ಅವರು ಮೂರು ಬಾರಿ ಗೋಲ್ಡನ್ ಡಕ್ಗೆ ಬಲಿಯಾಗಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಕೊಹ್ಲಿ ಇದುವರೆಗೆ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ್ದಾರೆ. ಹೀಗಾಗಿಯೇ ವಿರಾಟ್ ಕೊಹ್ಲಿ ವೃತ್ತಿಜೀವನದ ಅತ್ಯಂತ ಕೆಟ್ಟ ಫಾರ್ಮ್ನಲ್ಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರ ನಡುವೆ ಎಬಿಡಿ ಮತ್ತೆ ಆರ್ಸಿಬಿ ತಂಡವನ್ನು ಮುಂದಿನ ವರ್ಷ ಸೇರಿಕೊಳ್ಳುವ ನಿರೀಕ್ಷೆಯಿದೆ ಎಂದು ಕೊಹ್ಲಿ ಹೇಳಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ಏಕೆಂದರೆ ಈ ಹಿಂದೆ ಆರ್ಸಿಬಿ ತಂಡ ಕೋಚ್ ಸಂಜಯ್ ಬಂಗಾರ್, ಪ್ರತಿ ತಂಡಕ್ಕೂ ಬ್ಯಾಟಿಂಗ್ ಕೋಚ್ ಇರಬೇಕಾಗಿರುವುದು ಅನಿವಾರ್ಯ. ಅದರಲ್ಲೂ ಎಬಿಡಿ ಅವರಂತಹ ಆಟಗಾರನಿಗೆ ಬ್ಯಾಟಿಂಗ್ ಕೋಚ್ ಸ್ಥಾನ ನೀಡುವುದು ಅದು ತಂಡಕ್ಕೆ ಮತ್ತು ಆಟಗಾರರಿಗೆ ಒಳ್ಳೆಯದು ಎಂದಿದ್ದರು. ಇದೀಗ ವಿರಾಟ್ ಕೊಹ್ಲಿ ಕೂಡ ಎಬಿಡಿ ಹೊಸ ಪಾತ್ರದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿರುವುದು, ಎಬಿಡಿ ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಅಥವಾ ಮೆಂಟರ್ ಆಗುವುದನ್ನು ಪುಷ್ಠೀಕರಿಸಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.