Cristiano Ronaldo: ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್​ಗೆ ಗುಡ್​ ಬೈ ಹೇಳಿದ ಕ್ರಿಸ್ಟಿಯಾನೋ ರೊನಾಲ್ಡೊ..!

Cristiano Ronaldo: ಎರಡು ಅವಧಿಗಳಲ್ಲಿ ರೊನಾಲ್ಡೊ ಅವರ ಅತ್ಯುತ್ತಮ ಕೊಡುಗೆಗಾಗಿ ಕ್ಲಬ್ ಧನ್ಯವಾದಗಳನ್ನು ಹೇಳಲು ಬಯಸುತ್ತದೆ. ಹಾಗೆಯೇ ರೊನಾಲ್ಡೊ ಅವರ ಮುಂದಿನ ಭವಿಷ್ಯಕ್ಕೆ ಕ್ಲಬ್ ವತಿಯಿಂದ ಶುಭ ಹಾರೈಸುತ್ತೇವೆ ಎಂದು ಎಂದು ಹೇಳಿಕೊಂಡಿದೆ.

Cristiano Ronaldo: ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್​ಗೆ ಗುಡ್​ ಬೈ ಹೇಳಿದ ಕ್ರಿಸ್ಟಿಯಾನೋ ರೊನಾಲ್ಡೊ..!
Cristiano Ronaldo
TV9kannada Web Team

| Edited By: pruthvi Shankar

Nov 23, 2022 | 3:36 PM

ಫುಟ್ಬಾಲ್ ಜಗತ್ತಿನ ದೈತ್ಯ ಪ್ರತಿಭೆಯಾಗಿರುವ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅಧಿಕೃತವಾಗಿ ಮ್ಯಾಂಚೆಸ್ಟರ್ ಯುನೈಟೆಡ್‌ (Manchester United) ಕ್ಲಬ್​ನಿಂದ ಹೊರಬಿದ್ದದ್ದಾರೆ. ಈ ಬಗ್ಗೆ ಕ್ಲಬ್ ಕೂಡ ತನ್ನ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸದ್ಯ ಫಿಫಾ ವಿಶ್ವಕಪ್​ಗಾಗಿ (FIFA World Cup 2022) ಕ್ರಿಸ್ಟಿಯಾನೋ ರೊನಾಲ್ಡೊ ಕತಾರ್‌ನಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ರೊನಾಲ್ಡೊ ಪಿಯರ್ಸ್ ಮೋರ್ಗಾನ್ ಅವರೊಂದಿಗಿನ ಸಂದರ್ಶನದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದರು. ಅಲ್ಲದೆ ಕ್ಲಬ್ ತೊರೆಯುವ ಬಗ್ಗೆಯೂ ಮಾತನಾಡಿದ್ದರು. ಇದೀಗ ಈ ಇಬ್ಬರ ನಡುವಿನ ಕದನಕ್ಕೆ ಅಂತಿಮ ತೆರೆಬಿದ್ದಿದೆ.

ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ ಜೊತೆ ಸುದೀರ್ಘ ಒಡನಾಟವನ್ನು ಹೊಂದಿದ್ದಾರೆ. 2003 ರಲ್ಲಿ ತನ್ನ 18 ನೇ ವಯಸ್ಸಿನಲ್ಲಿ ಕ್ಲಬ್ ಸೇರಿದ್ದ ರೊನಾಲ್ಡೊಗೆ ಇಲ್ಲಿಂದಲೇ ಮನ್ನಣೆ ಸಿಕ್ಕಿತು. ಆದಾಗ್ಯೂ, 2009 ರಲ್ಲಿ ಈ ಕ್ಲಬ್ ತೋರಿದ್ದ ರೊನಾಲ್ಡೊ ರಿಯಲ್ ಮ್ಯಾಡ್ರಿಡ್‌ ಕ್ಲಬ್​ಗೆ ಸೇರ್ಪಡೆಗೊಂಡಿದ್ದರು. ನಂತರ 2021 ರಲ್ಲಿ ಮತ್ತೆ ಈ ಕ್ಲಬ್‌ಗೆ ಮರಳಿದ ರೊನಾಲ್ಡೊಗೆ, ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ವಾರಕ್ಕೆ 5 ಲಕ್ಷ ಪೌಂಡ್‌ಗಳ ಸಂಬಳವನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಬದುಕು ರೂಪಿಸಿದ ಕ್ಲಬ್ ಜೊತೆಗಿನ ಎರಡನೇ ಇನ್ನಿಂಗ್ಸ್​ಗೆ ರೊನಾಲ್ಡೊ ವಿದಾಯ ಹೇಳಿದ್ದಾರೆ.

ಅಧಿಕೃತ ಹೇಳಿಕೆ ಬಿಡುಗಡೆ

ಒಪ್ಪಂದದ ಅವಧಿಪೂರ್ವ ಮುಕ್ತಾಯವನ್ನು ರೊನಾಲ್ಡೊ ಜೊತೆಗೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಕೂಡ ದೃಢಪಡಿಸಿದೆ. ಪರಸ್ಪರ ಒಪ್ಪಿಗೆಯಿಂದಲೇ ಈ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕ್ಲಬ್, ಎರಡು ಅವಧಿಗಳಲ್ಲಿ ರೊನಾಲ್ಡೊ ಅವರ ಅತ್ಯುತ್ತಮ ಕೊಡುಗೆಗಾಗಿ ಕ್ಲಬ್ ಧನ್ಯವಾದಗಳನ್ನು ಹೇಳಲು ಬಯಸುತ್ತದೆ. ಹಾಗೆಯೇ ರೊನಾಲ್ಡೊ ಅವರ ಮುಂದಿನ ಭವಿಷ್ಯಕ್ಕೆ ಕ್ಲಬ್ ವತಿಯಿಂದ ಶುಭ ಹಾರೈಸುತ್ತೇವೆ ಎಂದು ಹೇಳಿಕೊಂಡಿದೆ.

ರೊನಾಲ್ಡೊ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, ಪರಸ್ಪರ ಒಪ್ಪಿಗೆಯೊಂದಿಗೆ ಅವಧಿಗೆ ಮುಂಚಿತವಾಗಿ ಒಪ್ಪಂದವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದೇವೆ. ನಾನು ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಈ ಕ್ಲಬ್‌ನ ಅಭಿಮಾನಿಗಳನ್ನು ಪ್ರೀತಿಸುತ್ತೇನೆ. ಇದು ಎಂದಿಗೂ ಬದಲಾಗುವುದಿಲ್ಲ. ಹೊಸ ಸವಾಲನ್ನು ಹುಡುಕುವ ಸಮಯ. ಮುಂಬರುವ ಸೀಸನ್​ಗಳಲ್ಲಿ ಕ್ಲಬ್​ ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಏನಿದು ವಿವಾದ?

ಸಂದರ್ಶನದಲ್ಲಿ ಆರೋಪಗಳ ಸುರಿಮಳೆಗೈದಿದ್ದ ರೊನಾಲ್ಡೊ, ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಹೊಸ ಮ್ಯಾನೇಜರ್ ಎರಿಕ್ ಟ್ಯಾನ್ ಹಾಗ್ ಸೇರಿದಂತೆ ಹಲವಾರು ಅಧಿಕಾರಿಗಳು ಹೊಸ ಸೀಸನ್​ನ ಆರಂಭದ ಮೊದಲು ನನ್ನನ್ನು ಕ್ಲಬ್‌ನಿಂದ ಹೊರಹಾಕಲು ಬಯಸಿದ್ದರು. ಹಾಗೆಯೇ ಕ್ಲಬ್‌ನ ಮಾಲೀಕರಾದ ಗ್ಲೇಜರ್ ಕುಟುಂಬವು ಕ್ಲಬ್‌ನ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅಲ್ಲದೆ ಕ್ಲಬನ್ನು ಅವರು ಕೇವಲ ಹಣ ಗಳಿಸುವ ಸಾಧನವಾಗಿ ಮಾತ್ರ ನೋಡುತ್ತಾರೆ.

ಮ್ಯಾನೇಜರ್ ಟೆನ್ ಹಾಗ್ ಜೊತೆ ನನ್ನ ಸಂಬಂಧವು ಮೊದಲಿನಿಂದಲೂ ಉತ್ತಮವಾಗಿಲ್ಲ. ಮ್ಯಾನೇಜರ್ ನನಗೆ ಗೌರವ ಕೊಡುವುದಿಲ್ಲ. ಹಾಗಾಗಿ ನಾನು ಕೂಡ ಅವರನ್ನು ಗೌರವಿಸುವುದಿಲ್ಲ. ಅಲ್ಲದೆ ಏಪ್ರಿಲ್‌ನಲ್ಲಿ ತನ್ನ ನವಜಾತ ಮಗು ಸಾವನ್ನಪ್ಪಿದಾಗ ಕ್ಲಬ್ ಅಧಿಕಾರಿಗಳು ಅನಾಗರೀಕರಂತೆ ನಡೆದುಕೊಂಡಿದ್ದರು ಎಂದು ರೊನಾಲ್ಡೊ ಆರೋಪಿಸಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada