ಹಿಟ್ಲರ್​​ನ ಮೋಟು ಮೀಸೆ ಮಣ್ಣಾಗುವಂತೆ ‘ಭಾರತ ಮಾರಾಟಕ್ಕೆ ಇಲ್ಲ’ ಎಂದು ಧ್ಯಾನ್​ ಚಂದ್ ದಿಟ್ಟ ಉತ್ತರ ಕೊಟ್ಟಿದ್ದನ್ನು ಸ್ಮರಿಸಬೇಕಾದ ದಿನ ಇಂದು!

ಹಿಟ್ಲರ್​​ನ ಮೋಟು ಮೀಸೆ ಮಣ್ಣಾಗುವಂತೆ ‘ಭಾರತ ಮಾರಾಟಕ್ಕೆ ಇಲ್ಲ’ ಎಂದು ಧ್ಯಾನ್​ ಚಂದ್ ದಿಟ್ಟ ಉತ್ತರ ಕೊಟ್ಟಿದ್ದನ್ನು ಸ್ಮರಿಸಬೇಕಾದ ದಿನ ಇಂದು!
ಹಿಟ್ಲರ್​​ನ ಮೋಟು ಮೀಸೆ ಮಣ್ಣಾಗುವಂತೆ ‘ಭಾರತ ಮಾರಾಟಕ್ಕೆ ಇಲ್ಲ’ ಎಂದು ಮೇಜರ್ ಧ್ಯಾನ್​ ಚಂದ್ ಕೊಟ್ಟ ದಿಟ್ಟ ಉತ್ತರ ಸ್ಮರಿಸಬೇಕಾದ ದಿನ ಇಂದು!

ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ನಲವತ್ತು ಸಾವಿರ ನಾಜಿಗಳು ಧ್ಯಾನ್​ ಚಂದ್ ಉತ್ತರ ಕೇಳಿ, ಆತನ ಎದೆಗೆ ಹಿಟ್ಲರ್​ ಗುಂಡು ಹೊಡೆಯುವುದು ಗ್ಯಾರೆಂಟಿ ಎಂದು ಅಂದುಕೊಳ್ಳುತ್ತಿರುವಾಗ.. ಒಂದು ಹೆಜ್ಜೆ ಹಿಂದಕ್ಕೆ ಹೋದ ಹಿಟ್ಲರ್,​ ಧ್ಯಾನ್​ ಚಂದ್​ಗೆ ಮಿಲಿಟರಿ ಸೆಲ್ಯೂಟ್​ ಹೊಡೆಯುತ್ತಾ ನಿನ್ನ ದೇಶಾಭಿಮಾನಕ್ಕೆ ಇಡೀ ಜರ್ಮನ್ ಸೆಲ್ಯೂಟ್​ ಹೊಡೆಯುತ್ತದೆ ಎಂದು ಹೇಳುತ್ತಾ ಧ್ಯಾನ್​ ಚಂದ್​ಗೆ ಹಾಕಿ ಮಾಂತ್ರಿಕ ಎಂಬ ಬಿರುದನ್ನು ನೀಡುತ್ತಾನೆ. ನಿನ್ನಂತಹ ಆಟಗಾರರು ಶತಮಾನಕ್ಕೆ ಒಬ್ಬರಂತೆ ಹುಟ್ಟುತ್ತಾರೆ ಎಂದು ಹೆಮ್ಮೆಯಿಂದ ಕೊಂಡಾಡುತ್ತಾನೆ.

sadhu srinath

|

Aug 06, 2021 | 5:13 PM

ಭಾರತದ ಕ್ರೀಡಾ ರಂಗದ ಮಟ್ಟಿಗೆ ಹೇಳಬೇಕು ಅಂದ್ರೆ ಇಂದಿನ ದಿನ ನಿಜಕ್ಕೂ ಸುದಿನ. ಇದು ನಿಜಕ್ಕೂ ಮೇಜರ್​​ ದಿನ. ಸರ್ವೋತ್ಕೃಷ್ಟ ಸಾಧನೆ ತೋರಿದ ಭಾರತದ ಕ್ರೀಡಾಪಟುಗಳಿಗೆ ಇದುವರೆಗೂ ರಾಜೀವ್​ ಗಾಂಧಿ ಖೇಲ್​ ರತನ್ ಎಂಬ ಪುರಸ್ಕಾರವನ್ನು ನೀಡಲಾಗುತ್ತಿತ್ತು. ಆದರೆ ಆ ಪ್ರಶಸ್ತಿಯ​ ಹೆಸರು ಇಂದಿನಿಂದ ಬದಲಾಗಿದ್ದು ಅದನ್ನೀಗ ಹಾಕಿ ಮಾಂತ್ರಿಕ ಮೇಜರ್​ ಧ್ಯಾನ್​​ ಚಂದ್​ ಹೆಸರಿನಲ್ಲಿ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅತ್ತ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಆಟಗಾರರು ನಾನಾ ಕ್ರೀಡೆಗಳಲ್ಲಿ ಮಹತ್ತರವಾದ ಪುಟ್ಟಪುಟ್ಟ ಹೆಜ್ಜೆಗಳನ್ನು ಇಡುತ್ತಿರುವ ಸಂದರ್ಭದಲ್ಲಿ, ಅದರಲ್ಲೂ ಭಾರತದ ಹಾಕಿ ಕ್ರೀಡಾಪಟುಗಳು ಅಮೋಘ ಸಾಧನೆ ಮಾಡಿರುವಾಗ ಈ ಘೋಷಣೆ ಹೊರಬಿದ್ದಿರುವುದು ನಿಜಕ್ಕೂ ಕ್ರೀಡಾಭಿಮಾನಿಗಳಿಗೆ ಸಂತಸ ತಂದಿದೆ.

ಮೇಜರ್​ ಧ್ಯಾನ್​​ ಚಂದ್ (1905-1979) ಭಾರತದ ಹಾಕಿ ಕ್ರೀಡೆಯ ಮಾಂತ್ರಿಕನೇ ಸರಿ. ಜಗದ್ವಿಖ್ಯಾತ ಕ್ರೀಡಾ ಪ್ರತಿಭೆಯನ್ನು ಹೊಂದಿದ್ದ ಮೇಜರ್​ ಧ್ಯಾನ್​​ ಚಂದ್ ಹೆಸರಿನಲ್ಲಿ ಭಾರತ ಇಂದಿಗೂ ರಾಷ್ಟ್ರೀಯ ಕ್ರೀಡಾ ದಿನವನ್ನು (National Sports Day) ಆಚರಿಸುತ್ತದೆ.

ಈ ಸಂದರ್ಭದಲ್ಲಿ ಇತಿಹಾಸದ ಪುಸ್ತಕವೊಂದನ್ನು ಒಂಚೂರು ತಿರುವಿ ಹಾಕಿದರೆ ಹಿಟ್ಲರ್- ಧ್ಯಾನ್​​ ಚಂದ್ ಮುಖಾಮುಖಿ ಪುಟವೊಂದು ಕಣ್ಣಿಗೆ ರಾಚುತ್ತದೆ. ಭಾರತ ಹಾಕಿ ತಂಡದ ಕ್ಯಾಪ್ಟನ್​ ಧ್ಯಾನ್​​ ಚಂದ್ ಎಂಬ ಹಾಕಿ ಪ್ರತಿಭಾ ಗಣಿ ‘ಭಾರತ ಮಾರಾಟಕ್ಕೆ ಇಲ್ಲ’ ಎಂದು ಎದೆಯುಬ್ಬಿಸಿಕೊಂಡು ತಣ್ಣನೆಯ ದನಿಯಲ್ಲಿ ಆದರೆ ಖಡಕ್ಕಾಗಿ ಹಿಟ್ಲರ್ ಅಂಥಾ ಹಿಟ್ಲರ್​ಗೇ ದಿಟ್ಟ ಉತ್ತರ ನೀಡಿದ ಘಳಿಗೆಯದು.

ಅದು 1936ರ ಕಾಲ. ಜರ್ಮನಿಯ ನಾಜಿಗಳು ಬೇಸಿಗೆ ಒಲಿಂಪಿಕ್ಸ್​​ ಕ್ರೀಡಾಕೂಟವನ್ನು (Summer Olympics) ಅದ್ದೂರಿಯಾಗಿ ನಡೆಸಿಕೊಟ್ಟಿದ್ದರು. ಆ ಕ್ರೀಡಾಕೂಟದಲ್ಲಿ ಮೇಜರ್​ ಧ್ಯಾನ್​​ ಚಂದ್ ನಾಯಕತ್ವದಲ್ಲಿ ಭಾರತದ ಹಾಕಿ ತಂಡ ಫೈನಲ್​ಗೆ ಲಗ್ಗೆಯಿಟ್ಟಿತ್ತು. ಅದಕ್ಕೂ ಮುನ್ನ ಸೆಮಿಫೈನಲ್​​ನಲ್ಲಿ ಫ್ರಾನ್ಸ್​ ವಿರುದ್ಧ ಒಂದಲ್ಲ ಎರಡಲ್ಲ ಹತ್ತು ಗೋಲ್​ಗಳನ್ನು ಭಾರತೀಯ ಹಾಕಿ ಪಟುಗಳು ಬಾರಿಸಿದ್ದರು. ಆದರೆ ಎದುರಾಳಿ ತಂಡಕ್ಕೆ ಒಂದು ಗೋಲನ್ನೂ ಹೊಡೆಯಲು ಅವಕಾಶ ನೀಡದೇ ಹೋದರು. ತನ್ಮೂಲಕ ಭಾರತ ತಂಡ 10-0 ವಿಕ್ಟರಿಯೊಂದಿಗೆ ಫೈನಲ್​ಗೆ ರಹದಾರಿ ಪಡೆದಿತ್ತು. ಆ ಪಂದ್ಯದಲ್ಲಿ ಧ್ಯಾನ್​​ ಚಂದ್ ಒಬ್ಬರೇ ನಾಲ್ಕು ಗೋಲು ಬಾರಿಸಿದ್ದರು.

ಆದರೆ ಫೈನಲ್​ನಲ್ಲಿ ಎದುರಿಗೆ ಇದ್ದಿದ್ದು ಒಲಿಂಪಿಕ್ಸ್ (Berlin Olympics 1936)​​ ಆತಿಥ್ಯ ರಾಷ್ಟ್ರವಾದ ಜರ್ಮನಿ. ಆಗಸ್ಟ್​ 15ರಂದು ಬರ್ಲಿನ್​ನಲ್ಲಿ ಫೈನಲ್​​ ಪಂದ್ಯ ಆಯೋಜಿಸಲಾಗಿತ್ತು. 40 ಸಾವಿರ ಜರ್ಮನ್ನರು ಫೈನಲ್​ ನೋಡಲು ಟಿಕೆಟ್​ ತೆಗೆದುಕೊಂಡು ಒಳಪ್ರವೇಶಿಸಿದ್ದರು. ಇವರೆದುರು ಹೇಗಪ್ಪಾ ಆಡುವುದು? ಎಂದು ಭಾರತದ ಹಾಕಿ ಪಟುಗಳು ಒಳಗೊಳಗೇ ಭೀತಿಗೊಳಗಾಗಿದ್ದರು. ಅವರನ್ನು ಮತ್ತಷ್ಟು ಆತಂಕ, ಭಯಕ್ಕೆ ಈಡುಮಾಡಿದ ಸಂಗತಿಯೆಂದರೆ ಅಡಾಲ್ಫ್​ ಹಿಟ್ಲರ್​​ ಎಂಬ ಸರ್ವಾಧಿಕಾರಿ ತನ್ನ ಮೋಟು ಮೀಸೆಯೊಂದಿಗೆ ಬಂದು ಫೈನಲ್ ಪಂದ್ಯ ವೀಕ್ಷಿಸುತ್ತಾನೆ ಎಂಬುದು.

ದಾದಾ ಧ್ಯಾನ್​ ಚಂದ್ ಹಾಕಿ ಆಟ ಆಗ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ: ಆದರೆ ಈ ಕಡೆಗೆ ಬ್ಯಾಟಲ್​ ಫ್ರಂಟ್​ನಲ್ಲಿ ಇದ್ದಿದ್ದು ಇದೇ ಧ್ಯಾನ್​ ಚಂದ್ ಎಂಬ ಅಸಾಧಾರಣ ಕೀಡಾಪಟು. ಆತ ತನ್ನ ಖ್ಯಾತಿಗೆ ತಕ್ಕಂತೆ ಮೈದಾನದಲ್ಲಿ ವಿಜೃಂಭಿಸಿಬಿಟ್ಟ. ಅಡಾಲ್ಫ್​ ಹಿಟ್ಲರ್ ಪಂದ್ಯ ವೀಕ್ಷಿಸುತ್ತಿದ್ದಾನೆ ಎಂಬುದನ್ನು ಮರೆತು ತನ್ನ ಎಂದಿನ ಆಟ ಆಡತೊಡಗಿದ. ಮುಂದೆ ಆತನ ಆಟ ಚಿನ್ನದಂತಹ ಇತಿಹಾಸದ ಪುಟಕ್ಕೆ ಸೇರಿತು. ಭಾರತ ತಂಡವು ಜರ್ಮನ್​ ತಂಡವನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಚಿನ್ನದ ಪದಕ ಗೆದ್ದಾಗಿತ್ತು.

ಸೆಮಿಫೈನಲ್​ನಲ್ಲಿ ನಾಲ್ಕು ಗೋಲು ಬಾರಿಸಿದ್ದ ದಾದಾ ಧ್ಯಾನ್​ ಚಂದ್ ಫೈನಲ್​ನಲ್ಲಿ ಸಿಕ್ಸರ್​ ಬಾರಿಸಿದ್ದರು! ಅಂದರೆ ಭಾರತ ತಂಡ ಒಟ್ಟು 8 ಗೋಲು ಬಾರಿಸಿದ್ದರೆ 6 ಗೋಲುಗಳು ಧ್ಯಾನ್​ ಚಂದ್ ಹಾಕಿ ಸ್ಟಿಕ್​​ನಿಂದ ಸಿಡಿದಿತ್ತು. ಅದನ್ನು ಸಾಕ್ಷಾತ್​ ಪರಾಂಬರಿಸಿದ್ದ ಅಡಾಲ್ಫ್​ ಹಿಟ್ಲರ್ ಎಂಬ ಮೋಟು ಮೀಸೆಯ ಮಾಮ ಪಂದ್ಯ ಮುಗಿದ ಮೇಲೆ, ಭಾರತದ ತಂಡದ ನಾಯಕನ ಕೊರಳಿಗೆ ಗೆಲುವಿನ ಮಾಲೆ ತೊಡಿಸುವಾಗ, ‘ಮಿಸ್ಟರ್​ ಧ್ಯಾನ್​ ಚಂದ್​! ಜರ್ಮನಿ ಸೇನೆಯಲ್ಲಿ ನಿನಗೆ ಉದ್ಯೋಗ ನೀಡುವೆ. ಜಾಯಿನ್ ಆಗಿಬಿಡು’ ಎಂದು ಧಿಮಾಕಿನಿಂದ ಕೇಳುತ್ತಾನೆ.

ಅದಕ್ಕೆ ಜೀನವದಲ್ಲಿ ಮೊದಲ ಬಾರಿಗೆ ಹಿಟ್ಲರ್​​ನ ಮೀಸೆ ಮಣ್ಣಾಗುವಂತೆ ಧ್ಯಾನ್​ ಚಂದ್ ದಿಟ್ಟ ಪ್ರತ್ಯುತ್ತರ ನೀಡಿದ್ದರು. ಭಾರತ ಮಾತೆಯ ಗಾಢ ಧ್ಯಾನದಲ್ಲಿರುವಂತೆ​ ಕಣ್ಣು ಮುಚ್ಚಿದ ಧ್ಯಾನ್​ ಚಂದ್ ತಣ್ಣಗೆ, ಆದರೆ ಕಂಚಿನ ಕಂಠದಲ್ಲಿ ‘‘ಭಾರತ ಮಾರಾಟಕ್ಕೆ ಇಲ್ಲ’’ India is not for sale ಎಂದು ಉತ್ತರಿಸಿದ್ದರು. ಮುಂದೆ ಧ್ಯಾನ್​ ಚಂದ್ ಅವರೇ ತಾವು ಹಿಟ್ಲರ್​​ಗೆ ಇಂತಹ ದಿಟ್ಟ ಉತ್ತರ ನೀಡಿದ್ದಾಗಿ ಭಾರತಕ್ಕೆ ಬಂದ ಮೇಲೆ ಅನೇಕ ಬಾರಿ ಹೇಳಿದ್ದರು.

ಈ ಮಧ್ಯೆ, ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ನಲವತ್ತು ಸಾವಿರ ನಾಜಿಗಳು ಧ್ಯಾನ್​ ಚಂದ್ ಉತ್ತರ ಕೇಳಿ, ಆತನ ಎದೆಗೆ ಹಿಟ್ಲರ್​ ಗುಂಡು ಹೊಡೆಯುವುದು ಗ್ಯಾರೆಂಟಿ ಎಂದು ಅಂದುಕೊಳ್ಳುತ್ತಿರುವಾಗ.. ಒಂದು ಹೆಜ್ಜೆ ಹಿಂದಕ್ಕೆ ಹೋದ ಹಿಟ್ಲರ್,​ ಧ್ಯಾನ್​ ಚಂದ್​ಗೆ ಮಿಲಿಟರಿ ಸೆಲ್ಯೂಟ್​ ಹೊಡೆಯುತ್ತಾ ನಿನ್ನ ದೇಶಾಭಿಮಾನಕ್ಕೆ ಇಡೀ ಜರ್ಮನ್ ಸೆಲ್ಯೂಟ್​ ಹೊಡೆಯುತ್ತದೆ ಎಂದು ಹೇಳುತ್ತಾ ಧ್ಯಾನ್​ ಚಂದ್​ಗೆ ಹಾಕಿ ಮಾಂತ್ರಿಕ (Wizard of Hockey) ಎಂಬ ಬಿರುದನ್ನು ನೀಡುತ್ತಾನೆ. ನಿನ್ನಂತಹ ಆಟಗಾರರು ಶತಮಾನಕ್ಕೆ ಒಬ್ಬರಂತೆ ಹುಟ್ಟುತ್ತಾರೆ ಎಂದು ಹೆಮ್ಮೆಯಿಂದ ಕೊಂಡಾಡುತ್ತಾನೆ. ಇದಿಷ್ಟೂ ಭಾರತೀಯ ಹಾಕಿ ಇತಿಹಾಸದ ಚಿನ್ನದ ಪುಟಗಳಲ್ಲಿ ದಾಖಲಾಗಿದೆ.

(Extra ordinary day to remember Major Dhyan Chand and Adolf Hitler as Dhyan Chand episode as he said India is not for sale)

Follow us on

Most Read Stories

Click on your DTH Provider to Add TV9 Kannada