Motera Stadium: ಹಲವಾರು ವೈಶಿಷ್ಟ್ಯತೆಗಳ ಮೊಟೆರಾದ ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ ವಿಶ್ವದಲ್ಲೇ ಅತಿ ದೊಡ್ಡದು!

|

Updated on: Feb 20, 2021 | 7:10 PM

India vs England Test Series: ಸರ್ದಾರ್ ಪಟೇಲ್ ಸ್ಟೇಡಿಯಂ 1,10,000 ಪ್ರೇಕ್ಷಕರು ಕೂತುಕೊಳ್ಳಬಹುದಾದಷ್ಟು ದೊಡ್ಡದಿದೆ. ಅಂದರೆ, 1,00,000 ಸಾಮರ್ಥ್ಯ ಹೊಂದಿರುವ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂಕ್ಕಿಂತ ದೊಡ್ಡದು! ಭಾರತದಲ್ಲಿ ಇದುವರೆಗೆ ಅತಿ ದೊಡ್ಡ ಸ್ಟೇಡಿಯಂ ಎನಿಸಿಕೊಳ್ಳುತ್ತಿದ್ದ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನ ಸಾಮರ್ಥ್ಯ 68,000.

Motera Stadium: ಹಲವಾರು ವೈಶಿಷ್ಟ್ಯತೆಗಳ ಮೊಟೆರಾದ ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ ವಿಶ್ವದಲ್ಲೇ ಅತಿ ದೊಡ್ಡದು!
ಸರ್ದಾರ್​ ಪಟೇಲ್ ಸ್ಟೇಡಿಯಂ, ಅಹಮದಾಬಾದ್
Follow us on

ಅಹಮದಾಬಾದ್​: ನಗರದ ಹೊರವಲುದಲ್ಲಿರುವ ಮೊಟೆರಾ ಕ್ರೀಡಾಂಗಣ ನಿಮಗೆ ಗೊತ್ತಲ್ಲ? ಅದೀಗ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ಪರಿವರ್ತನೆಗೊಂಡು ಸರ್ದಾರ್ ಪಟೇಲ್ ಅಂತ ಮರು-ನಾಮಕರಣಗೊಂಡಿದೆ. ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕಾರ್ಯದರ್ಶಿ ಜಯ್ ಶಾ ಗುಜರಾತ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾಗ ಮೊಟೆರಾ ಕ್ರೀಡಾಂಗಣದ ನವೀಕರಣ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದೀಗ ಒಂದು ಹೊಚ್ಚಹೊಸ ಮತ್ತು ಹಲವಾರು ವೈಶಿಷ್ಟ್ಯತೆಗಳನ್ನೊಳಗೊಂಡಿರುವ ಸ್ಟೇಡಿಯಂ ಆಗಿ ಮಾರ್ಪಟ್ಟಿದೆ. ಸರ್ದಾರ್ ಪಟೇಲ್ ಸ್ಟೇಡಿಯಂ 1,10,000 ಪ್ರೇಕ್ಷಕರು ಕೂತುಕೊಳ್ಳಬಹುದಾದಷ್ಟು ದೊಡ್ಡದಿದೆ. ಅಂದರೆ, 1,00,000 ಸಾಮರ್ಥ್ಯ ಹೊಂದಿರುವ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂಕ್ಕಿಂತ ದೊಡ್ಡದು! ಭಾರತದಲ್ಲಿ ಇದುವರೆಗೆ ಅತಿ ದೊಡ್ಡ ಸ್ಟೇಡಿಯಂ ಎನಿಸಿಕೊಳ್ಳುತ್ತಿದ್ದ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನ ಸಾಮರ್ಥ್ಯ 68,000.

ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ನಡುವಿನ ಪ್ರಸಕ್ತ ಟೆಸ್ಟ್​ ಸರಣಿಯ ಮೂರು ಮತ್ತು ನಾಲ್ಕನೇ ಟೆಸ್ಟ್​ ಪಂದ್ಯಗಳು ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹಾಗೆ ಫೆಬ್ರುವರಿ 24ರಿಂದ ಶುರುವಾಗಲಿರುವ 3ನೇ ಟೆಸ್ಟ್​ ಪಿಂಕ್ ಬಾಲ್ (ಅಹರ್ನಿಶಿ) ಟೆಸ್ಟ್​ ಆಗಿದೆ. ಹಗಲು-ರಾತ್ರಿ ಪಂದ್ಯಗಳಿಗೆ ಸಾಮಾನ್ಯವಾಗಿ ಸ್ಟೇಡಿಯಂನಲ್ಲಿ ಮಾಸ್ಟ್ ಬಲ್ಬ್​ಗಳನ್ನು ಬಳಸುತ್ತಾರೆ. ಆದರೆ, ಸರ್ದಾರ್ ಪಟೇಲ್ ಸ್ಟೇಡಿಯಂನ ರೂಫಿನ ಸುತ್ತ ಎಲ್​ಈಡಿ ಫ್ಲಡ್​ಲೈಟ್​ಗಳನ್ನು ಅಳವಡಿಸಲಾಗಿದೆ. ಈ ಲೈಟ್​ಗಳ ವೈಶಿಷ್ಟೈತೆಯೆಂದರೆ ಅವು ಹೊರಚಿಮ್ಮುವ ಬೆಳಕು ವಸ್ತುಗಳ ನೆರಳನ್ನು ಮರೆಮಾಚುತ್ತವೆ. ಅಂದರೆ, ಚೆಂಡು ಮತ್ತಷ್ಟು ಪ್ರಖರವಾಗಿ, ಸ್ಪಷ್ಟವಾಗಿ ಕಾಣಿಸುತ್ತದೆ.

ಸರ್ದಾರ್ ಪಟೇಲ್ ಸ್ಟೇಡಿಯಂ ಮಧ್ಯಭಾಗದಲ್ಲಿ 11 ಸೆಂಟರ್ ಸ್ಟ್ರಿಪ್​(ಪಿಚ್​)ಗಳಿವೆ. ಮೈದಾನವೊಂದರ ಮಧ್ಯಭಾಗದಲ್ಲಿ ಅತಿಹೆಚ್ಚು ಪಿಚ್​ಗಳನ್ನು ಹೊಂದಿರುವ ಹಿರಿಮೆಯನ್ನೂ ಸರ್ದಾರ್ ಪಟೇಲ್ ಸ್ಟೇಡಿಯಂ ತನ್ನದಾಗಿಸಿಕೊಂಡಿದೆ. ಮತ್ತೊಂದು ಗಮನಾರ್ಹ ಅಂಶವೆಂದರೆ, ಎಲ್ಲ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಎರಡು ಡ್ರೆಸಿಂಗ್​ ರೂಮುಗಳಿದ್ದರೆ, ಇಲ್ಲಿ ನಾಲಕ್ಕಿವೆ ಮತ್ತು ಎಲ್ಲದರಲ್ಲೂ ಇನ್-ಬಿಲ್ಟ್ ಜಿಮ್ನೇಷಿಯಂಗಳಿವೆ!

ಸರ್ದಾರ್ ಪಟೇಲ್ ಸ್ಟೇಡಿಯಂ ಹೊರಗಿನಿಂದ ಹೀಗೆ ಕಾಣುತ್ತದೆ

ಗುಜರಾತ್ ಕ್ರಿಕೆಟ್​ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಪಟೇಲ್ ಹೇಳುವಂತೆ ಸ್ಟೇಡಿಯಂಗೆ ಒಂದು ಅಪೂರ್ವವಾದ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ಸರಿಯುವುದು ನಿಂತ ಮೇಲೆ ತೀರಾ ಕಡಿಮೆ ಅವಧಿಯಲ್ಲಿ ಮೈದಾನವನ್ನು ಒಣಗಿಸಿಬಿಡುವಂಥ ಸ್ಟೇಟ್-ಆಫ್-ದಿ ಆರ್ಡ್ ಚರಂಡಿ ವ್ಯವಸ್ಥೆ ಇದಾಗಿದೆ ಎಂದು ಪಟೇಲ್ ಹೇಳುತ್ತಾರೆ.

ಸ್ಟೇಡಿಯಂ ಸಾಮರ್ಥ್ಯ 1,10, 000 ದಷ್ಟಿದ್ದರೂ ಇಲ್ಲಿ ನಡೆಯುವ ಎರಡು ಟೆಸ್ಟ್​ಗಳಿಗೂ ಕೇವಲ 55,000 ಪ್ರೇಕ್ಷಕರಿಗೆ ಮಾತ್ರ ಪಂದ್ಯ ವೀಕ್ಷಿಸುವ ಅವಕಾಶ ಕಲ್ಪಿಸಲಾಗುತ್ತದೆ. ಬಿಸಿಸಿಐ ಇತ್ತೀಚಿಗೆ ಆಯೋಜಿಸಿದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್​ನ ಹಲವು ಪಂದ್ಯಗಳನ್ನು ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಆಡಿಸಲಾಗಿತ್ತು.

‘ಮೈದಾನದ ಮಧ್ಯಬಾಗದಲ್ಲಿರುವ ಎಲ್ಲ 11 ಪಿಚ್​ಗಳು ಒಂದೇ ತೆರನಾಗಿವೆ. ಮತ್ತೊಂದು ವಿಷಯವನ್ನು ನಾನು ಹೇಳಲಿಚ್ಛಿಸುತ್ತೇನೆ. ಅಭ್ಯಾಸ ಪಿಚ್​ಗಳನ್ನು ತಯಾರಿಸಲು ಸಹ ನಾವು ಈ 11 ಪಿಚ್​ಗಳಿಗೆ ಬಳಸಿರುವ ಮಣ್ಣನ್ನೇ ಉಪಗೋಗಿಸದ್ದೇವೆ, ಅಂದರೆ, ಆಟಗಾರರು ಅಭ್ಯಾಸ ಮಾಡುವ ಮತ್ತು ಪಂದ್ಯಗಳನ್ನಾಡುವ ಅಡುವ ಪಿಚ್​​ಗಳಲ್ಲಿ ವ್ಯತ್ಯಾಸವಿಲ್ಲ,’ ಎಂದು ಪಟೇಲ್ ಹೇಳಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾರೊಂದಿಗೆ ಜಿಸಿಎ ಪದಾಧಿಕಾರಿಗಳು

‘ಪಿಚ್​ಗಳನ್ನು ತಯಾರಿಸುವಾಗ ಹುಲ್ಲಿನ ಕೆಳಗಡೆ ಮರಳನ್ನು ಹಾಕಲಾಗಿದೆ. ಇದರಿಂದಾಗುವ ಪ್ರಯೋಜನವೇನೆಂದರೆ, ಮೈದಾನದಲ್ಲಿ ಆಳವಡಿಸಲಾಗಿರುವ ಒಳಚರಂಡಿ ವ್ಯವಸ್ಥೆಯು ಪಿಚ್​ಗಳಿರುವ ಭಾಗದಲ್ಲಿನ ನೀರನ್ನು ಸಹ ಬೇಗ ಒಣಗಿಸಿಬಿಡುತ್ತದೆ. ಮ್ಯಾಚ್ ನಡೆಯುವಾಗ 8 ಸೆ. ಮೀ ನಷ್ಟು ಮಳೆಯಾದರೂ ಮೈದಾನ ತ್ವರಿತವಾಗಿ ಒಣಗಿಬಿಡುತ್ತದೆ. ಮಳೆಯಿಂದಾಗಿ ಪಂದ್ಯ ರದ್ದಾಗುವ ಇಲ್ಲವೇ ವಿಳಂಬಗೊಳ್ಳುವ ಸಾಧ್ಯತೆಯನ್ನು ದೂರಮಾಡುತ್ತದೆ.’ ಎಂದು ಪಟೇಲ್ ಹೇಳಿದರು.

ಮೈದಾನವನ್ನು ಮೆಂಟೇನ್ ಮಾಡುವುದಕ್ಕೋಸ್ಕರವೇ 2 ಕೋಟಿ ರೂ.ಗಳ ಸಲಕರಣೆಗನ್ನು ಖರೀದಿಲಾಗಿದೆ ಅಂತಲೂ ಪಟೇಲ್ ಹೇಳಿದರು.

‘ಸರ್ದಾರ್ ಪಟೇಲ್ ಕ್ರೀಡಾಂಗಣ 63 ಎಕರೆಗಳಷ್ಟು ಜಮೀನನ್ನು ಆಕ್ರಮಿಸಿದೆ. ಹೊರಾಂಗಣದ ಪಿಚ್​ಗಳು ಮತ್ತು ಎರಡು ಅಭ್ಯಾಸದ ಪಿಚ್​ಗಳೊಂದಿಗೆ ಒಳಾಂಗಣದಲ್ಲೂ 6 ಪಿಚ್​ಗಳನ್ನು ತಯಾರಿಸಿ ಬೌಲಿಂಗ್ ಮಷೀನ್​ಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಡ್ರೆಸ್ಸಿಂಗ್​ ರೂಮಿನಲ್ಲೂ ಒಂದೊಂದು ಜಮ್ನೇಷಿಯಂ ಇರುವ ವಿಶ್ವದ ಏಕೈಕ ಸ್ಟೇಡಿಯಂ ಇದು. ಸ್ಟೇಡಿಯಂ ಒಳಗಡೆಯೇ ಒಂದು ಕ್ಲಬ್​ಹೌಸ್ ಇದ್ದು ಅದರಲ್ಲಿ 50 ಡೀಲಕ್ಸ್ ರೂಮುಗಳು ಮತ್ತು 5 ಸ್ಯೂಟ್​ಗಳಿವೆ,’ ಎಂದು ಪಟೇಲ್ ಹೇಳಿದರು.

ಇದನ್ನೂ ಓದಿ: ಭಾರತ -ಇಂಗ್ಲೆಂಡ್ ನಡುವೆ ನಡೆಯುವ ಮೂರನೆ ಟೆಸ್ಟ್ ಹೊನಲು ಬೆಳಕಿನ ಪಂದ್ಯವಾಗಿರುತ್ತದೆ: ಬಿಸಿಸಿಐ

Published On - 6:47 pm, Sat, 20 February 21