ಟೊಕಿಯೊ ನಗರದಲ್ಲಿ ಒಲಂಪಿಕ್ಸ್ ಮುಗಿಯುವವರೆಗೆ ತುರ್ತು ಸ್ಥಿತಿಯನ್ನು ಘೋಷಿಸಲು ಜಪಾನೀ ಸರ್ಕಾರದ ಚಿಂತನೆ
ಪ್ರಧಾನ ಮಂತ್ರಿ ಯೊಶೊಹಿದೆ ಸುಗಾ ಅವರು ಸರ್ಕಾರದ ಪ್ರಮುಖ ಸಚಿವರೊಂದಿಗೆ ಸಭೆಯೊಂದನ್ನು ನಡೆಸಿ ಟೊಕಿಯೋ ನಗರದಲ್ಲಿ ಆಗಸ್ಟ್ 22 ರವರೆಗೆ ತುರ್ತು ಪರಿಸ್ಥಿಯನ್ನು ಹೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟ ಆಗಸ್ಟ 8ರಂದು ಮುಕ್ತಾಯಗೊಳ್ಳಲಿದೆ.
ಟೊಕಿಯೊ: ಟೊಕಿಯೊ ಒಲಂಪಿಕ್ಸ್ ಆರಂಭಗೊಳ್ಳಲು ಕೇವಲ ಎರಡು ವಾರ ಬಾಕಿಯಿರುವಂತೆಯೇ ಜಪಾನಿನ ರಾಜಧಾನಿಯಲ್ಲಿ ಕೊವಿಡ್-19 ಪ್ರಕರಣಗಳು ಕಳೆದೆರಡು ತಿಂಗಳ ಅವಧಿಯಲ್ಲೇ ಅತಿಹೆಚ್ಚು ವರದಿಯಾಗಿರುವುದರಿಂದ ಅಲ್ಲಿನ ಸರ್ಕಾರ ಮುಂದಿನ ವಾರದಿಂದ ಆರಂಭಗೊಂಡು ಕ್ರೀಡಾಕೂಟ ಮುಗಿಯುವವರೆಗೆ ಒಂದು ಹೊಸ ಬಗೆಯ ತುರ್ತು ಪರಿಸ್ಥಿತಿಯನ್ನು (ಖಾಸಿ ಎಮರ್ಜೆನ್ಸಿ) ಘೋಷಿಸುವುದು ಹೆಚ್ಚುಕಡಿಮೆ ಖಾತ್ರಿಯಾಗಿದೆ. ಕೊವಿಡ್-19 ಪಿಡುಗಿನಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿದ್ದ ಒಲಂಪಿಕ್ಸ್ ಗೇಮ್ಸ್ ಜುಲೈ 23ರಿಂದ ಆರಂಭಗೊಳ್ಳಲಿವೆ.
ಅಂತರರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಗುರುವಾರದಂದು ಟೊಕಿಯೊ ನಗರಕ್ಕೆ ಅಗಮಿಸಲಿದ್ದು ಅವರನ್ನು ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳೇ ಸ್ವಾಗತಿಸುವಂಥ ಸ್ಥಿತಿ ನಗರದಲ್ಲಿ ನಿರ್ಮಾಣಗೊಂಡಿದೆ. ಥಾಮಸ್, ಐಓಸಿಯ ಪಂಚತಾರಾ ಹೋಟೆಲ್ ಒಂದರಲ್ಲಿ ಮೂರು ದಿನಗಳ ಕಾಲ ಐಸೋಲೇಟ್ ಆಗಿದ್ದಾರೆ.
ಸರ್ಕಾರವು ತುರ್ತು ಪರಿಸ್ಥಿತಿ ಘೋಷನೆ ಮಾಡಿದರೆ, ಸ್ಥಳಿಯ ಜನರನ್ನು ಒಲಂಪಿಕ್ಸ್ ನಡೆಯುವ ಸ್ಥಳ ಪ್ರವೇಶಿಸದಂತೆ ನಿರ್ಬಂಧಿಸಲಾಗುವುದು. ಆದರೆ ಈ ಕುರಿತು ಒಂದು ಅಂತಿಮ ನಿರ್ಣಯವನ್ನು ಶುಕ್ರವಾರ ತೆಗೆದುಕೊಳ್ಳಲಾಗುವುದು.
ಈಗ ಜಾರಿಯಲ್ಲಿರುವ ತುರ್ತು ಪರಿಸ್ಥಿತಿಯಂಥ (ಖಾಸಿ ಎಮರ್ಜೆನ್ಸಿ) ಸ್ಥಿತಿ ರವಿವಾರದಂದು ತೆರವುಗೊಳ್ಳಲಿದೆ. ಟೊಕಿಯೊನಲ್ಲಿ ಬುಧವಾರ 920 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕಳೆದ ಬುಧವಾರ 714 ಪ್ರಕರಣಗಳು ವರದಿಯಾಗಿದ್ದವು. ಮೇ 13 ರಂದು 1,010 ಪ್ರಕರಣಗಳು ವರದಿಯಾಗಿದ್ದು ಬಿಟ್ಟರೆ, ಬುಧವಾರ ಪತ್ತೆಯಾಗಿರುವ ಪ್ರಕರಣಗಳು ಗರಿಷ್ಠ ಎನಿಸಿಕೊಂಡಿವೆ.
ಪ್ರಧಾನ ಮಂತ್ರಿ ಯೊಶೊಹಿದೆ ಸುಗಾ ಅವರು ಸರ್ಕಾರದ ಪ್ರಮುಖ ಸಚಿವರೊಂದಿಗೆ ಸಭೆಯೊಂದನ್ನು ನಡೆಸಿ ಟೊಕಿಯೋ ನಗರದಲ್ಲಿ ಆಗಸ್ಟ್ 22 ರವರೆಗೆ ತುರ್ತು ಪರಿಸ್ಥಿಯನ್ನು ಹೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟ ಆಗಸ್ಟ 8ರಂದು ಮುಕ್ತಾಯಗೊಳ್ಳಲಿದೆ.
ಪ್ರಧಾನಿ ಸುಗಾ ಅವರು, ತುರ್ತು ಪರಿಸ್ಥಿಯನ್ನು ಜಾರಿಗೊಳಿಸುವ ಬಗ್ಗೆ ಹೇಳಲಿಲ್ಲವಾದರೂ, ‘ಸೋಂಕುಗಳನ್ನು ತಡೆಯಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು,’ ಎಂದರು. ತಜ್ಞರೊಂದಿಗೆ ಚರ್ಚೆ ನಡೆಸಿ ಗುರುವಾರದಂದು ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸುಗಾ ಹೇಳಿದರು.
ತಿಂಗಳುಗಳ ಹಿಂದೆಯೇ ವಿದೇಶಿ ಪ್ರೇಕ್ಷಕರಿಗೆ ಅವಕಾಶ ನೀಡಬಾರದೆಂಬ ನಿರ್ಣಯವೊದನ್ನು ತೆಗೆದುಕೊಳ್ಳಲಾಗಿತ್ತು.
ಆದರೆ ಕೇವಲ ಎರಡು ವಾರಗಳ ಹಿಂದೆ, ಒಲಂಪಿಕ್ಸ್ ಆಯೋಜಕರು ಮತ್ತು ಐಒಸಿ 10,000 ಜನಕ್ಕೆ ಮೀರದಂತೆ ಮೈದಾನಗಳಲ್ಲಿ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಖಾಲಿ ಮೈದಾನಗಳಲ್ಲಿ ಕ್ರೀಡಾಕೂಟ ನಡೆಯುವುದು ಖಚಿತವಾಗಿದೆ. ಆದರೆ ಪ್ರಾಯೋಜಕರಿಗೆ ಸ್ಟೇಡಿಯಂಗಳಲ್ಲಿ ಪ್ರವೇಶಿಸಲು ಯಾವುದೇ ಅಡ್ಡಿಯಿರುವುದಿಲ್ಲ. ಸುಮಾರು ರೂ 10,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಸಮಾರಂಭ ಸಹ ಖಾಲಿ ಮೈದಾನಲ್ಲೇ ನಡೆಯಲಿದೆ.
ಟೊಕಿಯೊ ಗವರ್ನರ್ ಯುರಿಕೊ ಕೊಯಿಕೆ ಅವರು ಮಾಧ್ಯಮದವರೊಂದಿಗೆ ಮಾತಾಡುತ್ತಾ, ಸರ್ಕಾರ ತುರ್ತು ಸ್ಥಿತಿ ಘೋಷಿಸುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. ಕಳೆದ ವರ್ಷ ಕೊವಿಡ್ ಪಿಡುಗು ಜಪಾನಿನಲ್ಲಿ ಹಬ್ಬಿದ ನಂತರ ಇದುವರೆಗೆ ಮೂರು ಬಾರಿ ತುರ್ತು ಪರಿಸ್ಥಿತಿಯನ್ನು ಜಾರಿಮಾಡಲಾಗಿದೆ. ಸರ್ಕಾರದ ಕೊವಿಡ್-19 ಸಲಹಾ ಮಂಡಳಿ ಸಹ ಒಂದು ಪ್ರತ್ಯೇಕ ಸಭೆ ನಡೆಸಿ ನಗರದ ಪ್ರಸ್ತುತ ಪರಿಸ್ಥಿತಿಯ ಅವಲೋಕನ ನಡೆಸಿದೆ.
ಈಗಾಗಾಲೇ 15 ತಿಂಗಳು ವಿಳಂಬಗೊಂಡಿರುವ ಟೊಕಿಯೊ ಒಲಂಪಿಕ್ಸ್ ಅನ್ನು ವೈದ್ಯಕೀಯ ಸಲಹೆಗಳನ್ನು ಕಡೆಗಣಿಸಿ ಆಯೋಜಿಸಲಾಗುತ್ತಿದೆ. ಮುಂದೂಡಿಕೆಯಿಂದಾಗಿ ಐಒಸಿಯ ಆದಾಯ ಶೇಕಡಾ 75 ರಷ್ಟು ಕಡಿಮೆಯಾಗಿದೆ. ಒಂದು ಪಕ್ಷ ಒಲಂಪಿಕ್ಸ್ ರದ್ದಾದರೆ ಅದು ಸುಮಾರ 30 ಸಾವಿರ ಕೋಟಿ ರೂಪಾಯಿಗಳ ನಷ್ಟ ಅನುಭವಿಸಲಿದೆ.
ಜಪಾನಿನಲ್ಲಿ ಇದುವರೆಗೆ 8,10,000 ಸೋಕಿನ ಪ್ರಕರಣಗಳು ವರದಿಯಾಗಿವೆ ಮತ್ತು 14,900 ಜನ ಪಿಡುಗಿಗೆ ಬಲಿಯಾಗಿದ್ದಾರೆ. ದೇಶದ ಜನಸಂಖ್ಯೆಯ ಶೇಕಡಾ 15 ರಷ್ಟು ಜನ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಅಮೇರಿಕ (ಶೇ 47.4) ಮತ್ತು ಬ್ರಿಟನ್ಗಳಿಗೆ (ಶೇ 50) ಹೋಲಿಸಿದರೆ ಅದು ತೀರ ಕಡಿಮೆಯೆನಿಸುತ್ತದೆ.
ಇದನ್ನೂ ಓದಿ: Tokyo Olympics: ಒಲಂಪಿಕ್ಸ್ಗೆ ಕೊರೊನಾ ಕಾಟ.. ಮೂವರು ವಿದೇಶಿ ಸ್ಪರ್ಧಿಗಳಿಗೆ ಕೊರೊನಾ ಸೋಂಕು! ಆತಂಕದಲ್ಲಿ ಆಯೋಜಕರು