ರಾಜ್ಯಮಟ್ಟದ ಕಬಡ್ಡಿ ಆಟಗಾರ ನಡುಮನೆ ಪ್ರೀತಮ್ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರೀತಮ್ ಭಾಗವಹಿಸಿದ್ದರು. ಈ ಪಂದ್ಯಾಟದ ನಡುವೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ.
ಎದೆ ನೋವಿನಿಂದ ಅಂಗಳದಲ್ಲೇ ಕುಸಿದು ಬಿದ್ದ ಅವರನ್ನು ಸಹ ಆಟಗಾರರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಪ್ರೀತಮ್ ಶೆಟ್ಟಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಟ್ಲುಪಾಡಿ ನಡುಮನೆ ನಿವಾಸಿಯಾಗಿರುವ ಪ್ರೀತಮ್ ಶೆಟ್ಟಿ ಅತ್ಯುತ್ತಮ ಕಬಡ್ಡಿ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಕೆಲವೇ ದಿನಗಳಲ್ಲಿ ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಕಬಡ್ಡಿ ಅಂಗಳದಲ್ಲೇ ಯುವ ಆಟಗಾರ ತನ್ನ ಪ್ರಾಣಬಿಟ್ಟಿದ್ದಾರೆ. ಮೃತ ಪ್ರೀತಮ್ ಶೆಟ್ಟಿ ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.
ಕೆಲ ತಿಂಗಳುಗಳ ಹಿಂದೆಯಷ್ಟೇ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ ಕಬಡ್ಡಿ ಆಟಗಾರ ನಿರ್ಭಯ್ ಸಿಂಗ್ ಹಾತೂರ್ ಹೃದಯಾಘಾತದಿಂದ ನಿಧನರಾಗಿದ್ದರು. 35 ವರ್ಷದ ನಿರ್ಭಯ್ ಸಿಂಗ್ ಅತ್ಯುತ್ತಮ ಪ್ರದರ್ಶನಗಳೊಂದಿಗೆ ವಿದೇಶಗಳಲ್ಲೂ ತಮ್ಮ ಖ್ಯಾತಿ ವಿಸ್ತರಿಸಿದ್ದರು.
ಇದನ್ನೂ ಓದಿ: ಮೊಹಮ್ಮದ್ ಅಮೀರ್ ವಿದಾಯ, ಮತ್ತೆ ವಿದಾಯ.. ಮತ್ತೊಮ್ಮೆ ವಿದಾಯ..!
ಅಲ್ಲದೆ ವಿವಿಧ ರಾಷ್ಟ್ರೀಯ ಲೀಗ್ಗಳಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಬಹುಮಾನವಾಗಿ ಒಂದೇ ವರ್ಷದಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಮೋಟಾರ್‌ಸೈಕಲ್‌ಗಳು ಲಭಿಸಿದ್ದವು. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಿರ್ಭಯ್ ಸಿಂಗ್ ಹಾತೂರ್ ಅವರ ನಿಧನವು ಕ್ರೀಡಾ ಪ್ರೇಮಿಗಳಿಗೆ ಆಘಾತ ನೀಡಿತ್ತು.
ಇದೀಗ ಕರಾವಳಿಗೆ ಭಾಗದಲ್ಲಿ ಖ್ಯಾತಿ ಪಡೆದಿದ್ದ ಕಬಡ್ಡಿ ಪಟು ಪ್ರೀತಮ್ ಶೆಟ್ಟಿ ನಿಧನದಿಂದ ಅವರ ಆಪ್ತವಲಯವು ಆಘಾತಕ್ಕೀಡಾಗಿದೆ.
Published On - 12:36 pm, Sat, 14 December 24