Khelo India University Games: ದಾಖಲೆಯೊಂದಿಗೆ ಚಿನ್ನ ಗೆದ್ದ ಕೋಮಲ್ ಕೊಹರ್: ಅಗ್ರಸ್ಥಾನದಲ್ಲಿ ಶಿವಾಜಿ ವಿಶ್ವವಿದ್ಯಾಲಯ

Khelo India University Games: ದಾಖಲೆಯೊಂದಿಗೆ ಚಿನ್ನ ಗೆದ್ದ ಕೋಮಲ್ ಕೊಹರ್: ಅಗ್ರಸ್ಥಾನದಲ್ಲಿ ಶಿವಾಜಿ ವಿಶ್ವವಿದ್ಯಾಲಯ
Khelo India University Games

Khelo India University Games: ಮಹಿಳೆಯರ 55 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಶಿವಾಜಿ ವಿಶ್ವವಿದ್ಯಾಲಯದ ಆರ್.ಸಾಕ್ಷಿ ಮಹೇಶ್ ಒಟ್ಟು 166 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದರು.

TV9kannada Web Team

| Edited By: Zahir PY

Apr 25, 2022 | 4:17 PM

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್  (Khelo India University Games) ಎರಡನೇ ಆವೃತ್ತಿಯು ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಬಾರಿ 200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ 4,000 ಕ್ಕೂ ಹೆಚ್ಚು ಆಟಗಾರರು 20 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾನುವಾರ ನಡೆದ ಪಂದ್ಯಾವಳಿಯಲ್ಲಿ ಹಲವು ದಾಖಲೆಗಳು ಕೂಡ ನಿರ್ಮಾಣವಾಗಿದೆ. ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ (ಎಂಡಿಯು) ಕೋಮಲ್ ಕೋಹರ್ ವೇಟ್‌ಲಿಫ್ಟಿಂಗ್‌ನಲ್ಲಿ 45 ಕೆಜಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಗಮನ ಸೆಳೆದಿದ್ದಾರೆ. ಮೊದಲ ದಿನ 2 ಚಿನ್ನ ಸೇರಿದಂತೆ ಗರಿಷ್ಠ 4 ಪದಕ ಗೆದ್ದ ಶಿವಾಜಿ ವಿಶ್ವವಿದ್ಯಾಲಯ ಮೇಲುಗೈ ಸಾಧಿಸಿದೆ.

ಹರಿಯಾಣ ವೇಟ್ ಲಿಫ್ಟರ್ ಕೋಮಲ್ ಕೋಹರ್ ಮಹಿಳೆಯರ 45 ಕೆಜಿ ತೂಕ ವಿಭಾಗದಲ್ಲಿ ಒಟ್ಟು 160 ಕೆಜಿ ಎತ್ತುವ ಮೂಲಕ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ನಲ್ಲಿ ಹೊಸ ದಾಖಲೆ ಬರೆದರು. ಅಂದಹಾಗೆ 2020 ರ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕೋಮಲ್ ಚಿನ್ನದ ಪದಕ ವಿಜೇತರಾಗಿದ್ದರು. ಇದೀಗ ಮತ್ತೊಮ್ಮೆ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ಮಹಿಳೆಯರ 55 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಶಿವಾಜಿ ವಿಶ್ವವಿದ್ಯಾಲಯದ ಆರ್.ಸಾಕ್ಷಿ ಮಹೇಶ್ ಒಟ್ಟು 166 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದರು. ಅವರು ಸ್ನ್ಯಾಚ್‌ನಲ್ಲಿ 73 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 93 ಕೆಜಿ ಎತ್ತಿದರು. ಮತ್ತೊಂದೆಡೆ, ಪುರುಷರ 55 ಕೆಜಿ ವಿಭಾಗದಲ್ಲಿ ಪಂಡಿತ್ ರವಿಶಂಕರ್ ಶುಕ್ಲಾ ವಿಶ್ವವಿದ್ಯಾಲಯದ ವಿಜಯ್ ಮಹೇಶ್ವರಿ 230 ಕೆಜಿಯೊಂದಿಗೆ ಚಿನ್ನ ಗೆದ್ದರು. ಅವರು ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ ಕ್ರಮವಾಗಿ 100 ಮತ್ತು 130 ಕೆಜಿಯ ಗರಿಷ್ಠ ತೂಕವನ್ನು ಎತ್ತಿದರು.

ಶೂಟಿಂಗ್‌ನಲ್ಲಿ ನಿಕಟ ಸ್ಪರ್ಧೆ: ಭಾನುವಾರ ಶೂಟಿಂಗ್​ನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ಮತ್ತು ತಂಡ ಸ್ಪರ್ಧೆಗಳು ಕೂಡ ನಡೆದಿದೆ. ವೈಯಕ್ತಿಕ ವಿಭಾಗದಲ್ಲಿ ಕೆಎಲ್ ವಿಶ್ವವಿದ್ಯಾನಿಲಯದ ಮದ್ದಿನೇನಿ ಮಹೇಶ್ ಅವರು ಫೈನಲ್‌ನಲ್ಲಿ ದೆಹಲಿ ವಿವಿಯ ಪಾರ್ಥ್ ಮಖಿಜಾ ಅವರನ್ನು 16-10 ರಿಂದ ಸೋಲಿಸಿ ಚಿನ್ನ ಗೆದ್ದರು. ಕ್ರೀಡಾಕೂಟದ ಕಂಚಿನ ಪದಕವನ್ನು ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಗಜಾನನ ಖಂಡಗಾಲೆ ಪಡೆದರು. ಟೀಮ್ ಈವೆಂಟ್‌ನಲ್ಲಿ ದೆಹಲಿ ವಿಶ್ವವಿದ್ಯಾಲಯ (1875.3 ಪಾಯಿಂಟ್ಸ್) ಫೈನಲ್‌ನಲ್ಲಿ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯವನ್ನು (1873.1 ಪಾಯಿಂಟ್ಸ್) ಸೋಲಿಸುವ ಮೂಲಕ ಚಿನ್ನ ಗೆದ್ದುಕೊಂಡಿತು. ಗುಜರಾತ್ ವಿಶ್ವವಿದ್ಯಾಲಯ ಕಂಚು ಪಡೆಯಿತು.

ಅಗ್ರಸ್ಥಾನದಲ್ಲಿ ಶಿವಾಜಿ ವಿಶ್ವವಿದ್ಯಾಲಯ: ದಿನದ ಅಂತ್ಯದಲ್ಲಿ ಶಿವಾಜಿ ವಿಶ್ವವಿದ್ಯಾನಿಲಯವು ಗರಿಷ್ಠ 4 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಶಿವಾಜಿ ವಿಶ್ವವಿದ್ಯಾಲಯ 2 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಗೆದ್ದಿದೆ. ಮತ್ತೊಂದೆಡೆ, ಕವಯಿತ್ರಿ ಬಹಿನಾಬಾಯಿ ಚೌಧರಿ ಉತ್ತರ ಮಹಾರಾಷ್ಟ್ರ ವಿಶ್ವವಿದ್ಯಾಲಯ ಒಂದು ಚಿನ್ನ ಮತ್ತು ಒಂದು ಬೆಳ್ಳಿಯೊಂದಿಗೆ ಎರಡು ಪದಕಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಕಳಿಂಗ ವಿಶ್ವವಿದ್ಯಾಲಯ 1 ಚಿನ್ನ ಮತ್ತು 1 ಕಂಚಿನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಪಂದ್ಯ ನಡೆಯುವುದು ಎಲ್ಲಿ? ಬೆಂಗಳೂರಿನ ಜೈನ್ ಗ್ಲೋಬಲ್ ಯೂನಿವರ್ಸಿಟಿ ಕ್ಯಾಂಪಸ್ (11 ಕ್ರೀಡೆಗಳು), ಜೈನ್ ಸ್ಪೋರ್ಟ್ಸ್ ಸ್ಕೂಲ್ (ಬ್ಯಾಡ್ಮಿಂಟನ್, ಟೆನಿಸ್, ಫುಟ್‌ಬಾಲ್ ಮತ್ತು ಟೇಬಲ್ ಟೆನಿಸ್), ಕಂಠೀರವ ಸ್ಟೇಡಿಯಂ ಕಾಂಪ್ಲೆಕ್ಸ್ (ಬ್ಯಾಸ್ಕೆಟ್‌ಬಾಲ್ ಮತ್ತು ಅಥ್ಲೆಟಿಕ್ಸ್), ಫೀಲ್ಡ್ ಮಾರ್ಷಲ್ ಕರಿಯಪ್ಪ ಹಾಕಿ ಕ್ರೀಡಾಂಗಣ ಮತ್ತು ಕ್ರೀಡಾ ಪ್ರಾಧಿಕಾರದ ಐದು ಸ್ಥಳಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಭಾರತದ (SAI) SAI ಅನ್ನು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ಶೂಟಿಂಗ್ ಕೂಡ ನಡೆಸಲಾಗುತ್ತದೆ.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ

Follow us on

Related Stories

Most Read Stories

Click on your DTH Provider to Add TV9 Kannada