Team India: ಒಂದು ತಂಡಕ್ಕೆ 2 ಕ್ಯಾಪ್ಟನ್ ಬೇಡ ಎಂದು 6 ನಾಯಕರುಗಳನ್ನು ಕಣಕ್ಕಿಳಿಸಿದ ಬಿಸಿಸಿಐ..!

Team India: ಕೆಎಲ್ ರಾಹುಲ್ ಗಾಯಗೊಂಡ ಪರಿಣಾಮ ಸೌತ್ ಆಫ್ರಿಕಾ ವಿರುದ್ದದ ಟಿ20 ಪಂದ್ಯಗಳಲ್ಲಿ ರಿಷಭ್ ಪಂತ್ ನಾಯಕರಾಗಿ ಕಾಣಿಸಿಕೊಂಡರು. ಇನ್ನು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಕಾರಣ ಐರ್ಲೆಂಡ್ ವಿರುದ್ದ ಹಾರ್ದಿಕ್ ಪಾಂಡ್ಯ ನಾಯಕರಾಗಿ ಪಾದರ್ಪಣೆ ಮಾಡಿದ್ದರು.

Team India: ಒಂದು ತಂಡಕ್ಕೆ 2 ಕ್ಯಾಪ್ಟನ್ ಬೇಡ ಎಂದು 6 ನಾಯಕರುಗಳನ್ನು ಕಣಕ್ಕಿಳಿಸಿದ ಬಿಸಿಸಿಐ..!
Virat Kohli
TV9kannada Web Team

| Edited By: Zahir PY

Jul 07, 2022 | 1:23 PM

2021 ರ ಟಿ20 ವಿಶ್ವಕಪ್​ ಬಳಿಕ ವಿರಾಟ್ ಕೊಹ್ಲಿ (Virat Kohli) ಟೀಮ್ ಇಂಡಿಯಾ (Team india) ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಾಗ್ಯೂ ಕಿಂಗ್ ಕೊಹ್ಲಿ ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ನಾಯಕರಾಗಿ ಮುಂದುವರೆಯುವುದಾಗಿ ತಿಳಿಸಿದ್ದರು. ಆದರೆ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಏಕಾಏಕಿ  ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದರು. ಇತ್ತ ವಿರಾಟ್ ಕೊಹ್ಲಿ ನಾಯಕನಾಗಿ ಮುಂದುವರೆಯಲು ಬಯಸುವುದಾಗಿ ತಿಳಿಸಿದರೂ ಬಿಸಿಸಿಐ ಅದನ್ನು ಒಪ್ಪಿರಲಿಲ್ಲ. ಅಲ್ಲದೆ ಸೀಮಿತ ಓವರ್​ಗಳ ತಂಡಕ್ಕೆ ಇಬ್ಬರು ನಾಯಕರು ಇರುವುದು ಸೂಕ್ತವಲ್ಲ. ಏಕದಿನ ಹಾಗೂ ಟಿ20 ಕ್ರಿಕೆಟ್​ಗೆ ಒಬ್ಬನೇ ನಾಯಕ ಇರಬೇಕು. ಹೀಗಾಗಿ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದರು. ಅದರಂತೆ ಟೀಮ್ ಇಂಡಿಯಾ ಸೀಮಿತ ಓವರ್​ಗಳ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದರು. ಇದಾದ ಬಳಿಕ ಕೊಹ್ಲಿ ಟೆಸ್ಟ್ ಕ್ರಿಕೆಟ್​ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದರು. ಅಲ್ಲಿಗೆ ಕಿಂಗ್ ಕೊಹ್ಲಿಯ ನಾಯಕತ್ವದ ಯುಗ ಅಂತ್ಯವಾಗಿತ್ತು.

ಆದರೆ ಈ ನಾಯಕತ್ವದ ಯುಗಾಂತ್ಯದೊಂದಿಗೆ ಟೀಮ್ ಇಂಡಿಯಾ ನಾಯಕರುಗಳ ಬದಲಾವಣೆಯ ಹೊಸ ಪರ್ವ ಆರಂಭವಾಗಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ನಾಯಕರುಗಳನ್ನು ಬದಲಿಸಿ ಇದೀಗ ಬಿಸಿಸಿಐ ನಗೆಪಾಟಲಿಗೀಡಾಗಿದೆ. ಅಂದರೆ ವಿರಾಟ್ ಕೊಹ್ಲಿಯನ್ನು ಯಾವ ಕಾರಣ ನೀಡಿ ನಾಯಕತ್ವದಿಂದ ತೆಗೆದು ಹಾಕಲಾಗಿತ್ತೊ, ಅದಕ್ಕೆ ತದ್ವಿರುದ್ದವಾಗಿ ನಾಯಕರುಗಳ ಬದಲಾವಣೆಗಳಾಗಿವೆ. ಬದಲಾವಣೆಗಳಾಗುತ್ತಾ ಸಾಗುತ್ತಿದೆ.

ಏಕೆಂದರೆ ಕಳೆದ 6 ತಿಂಗಳಲ್ಲಿ ಟೀಮ್ ಇಂಡಿಯಾವನ್ನು 6 ನಾಯಕರುಗಳು ಮುನ್ನಡೆಸಿದ್ದಾರೆ. ಅಂದರೆ ಇಲ್ಲಿ ಪರಿಪೂರ್ಣವಾಗಿ ಒಬ್ಬನೇ ನಾಯಕ ತಂಡವನ್ನು ಮುನ್ನಡೆಸಿಲ್ಲ ಎಂಬುದು ಸ್ಪಷ್ಟ. ಇಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದರೂ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದೇ ಹೆಚ್ಚು. ಹೀಗಾಗಿ ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಕೆಎಲ್ ರಾಹುಲ್ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ನಾಯಕರಾಗಿ ಪಾದರ್ಪಣೆ ಮಾಡಿದ್ದರು.

ಇದಾದ ಬಳಿಕ ಕೆಎಲ್ ರಾಹುಲ್ ಗಾಯಗೊಂಡ ಪರಿಣಾಮ ಸೌತ್ ಆಫ್ರಿಕಾ ವಿರುದ್ದದ ಟಿ20 ಪಂದ್ಯಗಳಲ್ಲಿ ರಿಷಭ್ ಪಂತ್ ನಾಯಕರಾಗಿ ಕಾಣಿಸಿಕೊಂಡರು. ಇನ್ನು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಕಾರಣ ಐರ್ಲೆಂಡ್ ವಿರುದ್ದ ಹಾರ್ದಿಕ್ ಪಾಂಡ್ಯ ನಾಯಕರಾಗಿ ಪಾದರ್ಪಣೆ ಮಾಡಿದ್ದರು. ಆದರೆ ಮತ್ತೊಂದೆಡೆ ಇಂಗ್ಲೆಂಡ್ ವಿರುದ್ದ ಟೆಸ್ಟ್​ ಪಂದ್ಯದಲ್ಲಿ ಜಸ್​ಪ್ರೀತ್ ಬುಮ್ರಾ ನಾಯಕರಾಗಿ ಕಾಣಿಸಿಕೊಂಡರು. ಇದೀಗ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೆ ಶಿಖರ್ ಧವನ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದರೆ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿದಾಗ ನೀಡಿದ ಹೇಳಿಕೆಗೂ ಈಗ ಬಿಸಿಸಿಐ ತೆಗೆದುಕೊಳ್ಳುತ್ತಿರುವ ಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಏಕೆಂದರೆ ಟಿ20 ತಂಡವನ್ನು ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮುನ್ನಡೆಸಿದ್ದಾರೆ. ಇನ್ನು ಏಕದಿನ ತಂಡದ ನಾಯಕರಾಗಿ ಕೆಎಲ್ ರಾಹುಲ್, ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಹಾಗೂ ಜಸ್​ಪ್ರೀತ್ ಬುಮ್ರಾ ಮುನ್ನಡೆಸಿದ್ದಾರೆ.

ಇಲ್ಲಿ ನಾಯಕರುಗಳ ಬದಲಾವಣೆಗೆ ನಾನಾ ಕಾರಣಗಳಿದ್ದರೂ, ಸೂಕ್ತ ನಾಯಕ ಆಯ್ಕೆಯಾಗಿಲ್ಲವೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತವೆ. ಏಕೆಂದರೆ ಈ ಹಿಂದೆ ನಾಯಕ ತಂಡದಲ್ಲಿ ಇಲ್ಲದಿದ್ದರೆ ಉಪನಾಯಕ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ಇದೀಗ ಸರಣಿಯಿಂದ ಸರಣಿಗೆ ನಾಯಕರುಗಳು ಬದಲಾವಣೆಯಾಗುತ್ತಿರುವುದೇ ಅಚ್ಚರಿ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ವಿರಾಟ್ ಕೊಹ್ಲಿಯ ನಾಯಕತ್ವದ ಅವಧಿಯಲ್ಲಿ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಮಾತ್ರ ನಾಯಕರುಗಳಾಗಿ ಕಾಣಿಸಿಕೊಂಡಿದ್ದರು. ಅದು ಕೂಡ ಕೊಹ್ಲಿಯ ಅನುಪಸ್ಥಿತಿಯ ನಡುವೆ ಎಂಬುದು ವಿಶೇಷ.

ಆದರೆ ಇದೀಗ ಕೇವಲ 6 ತಿಂಗಳುಗಳಲ್ಲಿ ಟೀಮ್ ಇಂಡಿಯಾವನ್ನು 6 ನಾಯಕರುಗಳು ಮುನ್ನಡೆಸಿದ್ದಾರೆ ಎಂದರೆ ಅಚ್ಚರಿಪಡಲೇಬೇಕು. ಅದರಲ್ಲೂ ಸೀಮಿತ ಓವರ್​ಗಳ ತಂಡವನ್ನು ಇಬ್ಬರು ನಾಯಕರು ಮುನ್ನಡೆಸುವುದು ಸೂಕ್ತವಲ್ಲ. ಏಕದಿನ ಹಾಗೂ ಟಿ20 ಕ್ರಿಕೆಟ್​ಗೆ ಒಬ್ಬನೇ ನಾಯಕ ಇರಬೇಕು. ಹೀಗಾಗಿ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಹೇಳಿಕೆಯನ್ನು ಪರಾಮರ್ಶಿಸಲು ಇದು ಸೂಕ್ತ ಸಮಯ ಎಂದಷ್ಟೇ ಹೇಳಬಹುದು.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada