ಸೋಶಿಯಲ್ ಮೀಡಿಯಾದಲ್ಲಿ RCB ಪ್ರೊಫೈಲ್ ಫೋಟೋ ಇಲ್ಲ

  • TV9 Web Team
  • Published On - 10:24 AM, 14 Feb 2020
ಸೋಶಿಯಲ್ ಮೀಡಿಯಾದಲ್ಲಿ RCB ಪ್ರೊಫೈಲ್ ಫೋಟೋ ಇಲ್ಲ

ಸೋಶಿಯಲ್ ಮೀಡಿಯಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರೊಫೈಲ್ ಫೋಟೋ ಹಾಗೂ ಪೋಸ್ಟ್​ಗಳು ಡಿಲೀಟ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ನಾಯಕ ಕೊಹ್ಲಿಯ ಗಮನಕ್ಕೆ ತರದೇ ಆರ್​ಸಿಬಿ ಫ್ರಾಂಚೈಸಿ, ಮಾಡಿದ್ದೇನು? ಕೊಹ್ಲಿ, ಚಹಲ್, ಎಬಿಡಿ ಆಶ್ಚರ್ಯ ವ್ಯಕ್ತಪಡಿಸಿದ್ದು ಯಾಕೆ ಅನ್ನೋದ್ರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.

ಕಲರ್​ಫುಲ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-13ಕ್ಕೆ ದಿನಗಣನೆ ಶುರುವಾಗಿದ್ದು, ಈ ಬಾರಿ ಟ್ರೋಫಿ ಗೆಲ್ಲಲೇಬೇಕೆಂದು ಪಣತೊಟ್ಟಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡೋಕೆ ಮುಂದಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಆರ್​ಸಿಬಿ ಪ್ರೊಫೈಲ್ ಫೋಟೋ ಇಲ್ಲ!
ಐಪಿಎಲ್​ನಲ್ಲಿ ಜಯಪ್ರಿಯ ತಂಡವಾಗಿರೋ ಆರ್​ಸಿಬಿ, ಸೋಶಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಅಭಿಮಾನಿಗಳನ್ನ ಹೊಂದಿದೆ. ಆದ್ರೀಗ ಟ್ವಿಟರ್, ಫೇಸ್​ಬುಕ್ ಹಾಗೂ ಇನ್​ಸ್ಟಾದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪ್ರೊಫೈಲ್ ಫೋಟೋಗಳೇ ಡಿಲೀಟ್ ಆಗಿರೋದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಲೋಗೋ ಡಿಲೀಟ್ ಆಗಿರೋದು ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ, ಸ್ವತಃ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮಿಸ್ಟರ್ 360ಬ್ಯಾಟ್ಸ್​ಮನ್ ಎಬಿ ವಿಲಿಯರ್ಸ್, ಸ್ಪಿನ್ನರ್ ಯಜ್ವಿಂದರ್ ಚಹಲ್ ಹಾಗೂ ಮೆಂಟರ್ ಮೈಕ್ ಹಸ್ಸೆನ್​ಗೂ ಅಚ್ಚರಿಯನ್ನುಂಟು ಮಾಡಿದೆ.

ಕ್ಯಾಪ್ಟನ್ ಕೊಹ್ಲಿಗೆ ಶಾಕ್ ಕೊಟ್ಟ ಆರ್​ಸಿಬಿ ಫ್ರಾಂಚೈಸಿ!
ಹೀಗೆ ದಿಢೀರ್​ನೇ ಟ್ವಿಟರ್, ಫೇಸ್​ಬುಕ್ ಹಾಗೂ ಇನ್​ಸ್ಟಾ ಪೇಜ್​ನಲ್ಲಿ ಲೋಗೋವನ್ನ ಡಿಲೀಟ್ ಮಾಡಿರೋದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯನ್ನ ಹುಟ್ಟುಹಾಕಿದೆ. ಯಾಕಂದ್ರೆ, ತಂಡದ ಲೋಗೋ ಮಾತ್ರ ಡಿಲೀಟ್ ಆಗಿಲ್ಲ. ಬದಲಾಗಿ ಪೇಜ್​ನಲ್ಲಿದ್ದ ಎಲ್ಲಾ ಪೋಸ್ಟ್​ಗಳನ್ನ ತೆಗೆದುಹಾಕಲಾಗಿದೆ. ಇದ್ರಿಂದ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಒಂದು ಶಾಕ್ ಆಗಿದೆ. ಅಲ್ಲದೇ, ನನಗೆ ಗೊತ್ತಿಲ್ಲದಂತೆ ತಂಡದಲ್ಲಿ ಏನ್ ನಡೀತಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯ ಮುಗಿದ ನಂತ್ರ ಆರ್​ಸಿಬಿ ಟ್ವಿಟರ್ ಪೇಜ್ ನೋಡಿರೋ ಕೊಹ್ಲಿ, ಕಳವಳವನ್ನ ವ್ಯಕ್ತಪಡಿಸಿದ್ದಾರೆ. ಪೇಜ್​ನಲ್ಲಿ ಪೋಸ್ಟ್​ಗಳು ಕಾಣುತ್ತಿಲ್ಲ. ಇದು ನನ್ನ ಗಮನಕ್ಕೂ ಬಂದಿಲ್ಲ. ಏನಾದ್ರೂ ಬೇಕಾದ್ರೆ ಸಹಾಯ ಪಡೆದುಕೊಳ್ಳಿ ಅಂತ ಕೊಹ್ಲಿ ಆರ್​ಸಿಬಿ ಫ್ರಾಂಚೈಸಿಗೆ ಸಲಹೆ ಕೊಟ್ಟಿದ್ದಾರೆ.

ಕ್ಯಾಪ್ಟನ್ ಗಮನಕ್ಕೆ ಬಂದಿಲ್ಲ:
‘‘ನಾಯಕನ ಗಮನಕ್ಕಿಲ್ಲದೇ ಎಲ್ಲಾ ಪೋಸ್ಟ್​ಗಳು ಡಿಲೀಟ್ ಆಗಿದೆ. ಏನಾದ್ರೂ ಬೇಕಾದ್ರೆ ಸಹಾಯ ಪಡೆದುಕೊಳ್ಳಿ.”
-ವಿರಾಟ್ ಕೊಹ್ಲಿ, ಆರ್​ಸಿಬಿ ನಾಯಕ
ಕೇವಲ ನಾಯಕ ವಿರಾಟ್ ಕೊಹ್ಲಿಗೆ ಮಾತ್ರವಲ್ಲ, ಮಿಸ್ಟರ್ 360 ಬ್ಯಾಟ್ಸ್​ಮನ್ ಎಬಿ ಡಿವಿಲಿಯರ್ಸ್ ಸಹ ಅಚ್ಚರಿಯನ್ನ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಖಾತೆಗಳಿಗೆ ಏನಾಗಿದೆ.? ಅಂತ ಪ್ರಶ್ನೆ ಮಾಡಿದ್ದಾರೆ.

ಖಾತೆಗಳಿಗೆ ಏನಾಗಿದೆ?
‘‘ಆರ್​ಸಿಬಿ ತಂಡದ ಖಾತೆಗಳಿಗೆ ಏನಾಗಿದೆ? ಬಹುಶಃ ಇದೊಂದು ಸ್ಟ್ರಾಟಜಿ ಬ್ರೇಕ್ ಆಗಿರಬಹುದು!”
-ಎಬಿ ಡಿವಿಲಿಯರ್ಸ್, ಆರ್​ಸಿಬಿ ಆಟಗಾರ
ಇನ್ನೂ ಲೋಗೋ ಡಿಲೀಟ್ ಆಗಿರೋದು ಆರ್​ಸಿಬಿ ತಂಡ ಸ್ಪಿನ್ನರ್ ಯಜ್ವಿಂದರ್ ಚಹಲ್​ಗೂ ಗಲಿಬಿಲಿಯುಂಟು ಮಾಡಿದೆ. ಆರ್​ಸಿಬಿ ಫ್ರಾಂಚೈಸಿ ಇದ್ಯಾವ ರೀತಿಯ ಗೂಗ್ಲಿ ಬಿಟ್ಟಿದೆ ಅಂತ ಪ್ರಶ್ನೆ ಮಾಡಿದ್ದಾರೆ.

ಪೋಸ್ಟ್ ಎಲ್ಲಿ ಹೋದವು?
‘‘ಆರ್​ಸಿಬಿ ಫ್ರಾಂಚೈಸಿಯಿಂದ ಇದು ಯಾವ ರೀತಿಯ ಗೂಗ್ಲಿ.? ಇನ್​ಸ್ಟಾಗ್ರಾಂನ ಪ್ರೊಫೈಲ್ ಫೋಟೋ ಹಾಗೂ ಪೋಸ್ಟ್​ಗಳು ಎಲ್ಲಿ ಹೋದವು?”
– ಯಜ್ವಿಂದರ್ ಚಹಲ್, ಆರ್​ಸಿಬಿ ಆಟಗಾರ
ಬೆಂಗಳೂರು ತಂಡ ನೂತನ ಮೆಂಟರ್ ಆಗಿರೋ ಮೈಕ್ ಹಸ್ಸೆನ್​ಗೂ ಕೂಡ, ಇಲ್ಲಿ ಏನ್ ನಡೀತಿದೆ ಅನ್ನೋ ಬಗ್ಗೆ ಗೊತ್ತಿಲ್ಲ. ಈ ಕುರಿತು ಟ್ವೀಟ್ ಮಾಡಿರೋ ಮೈಕ್ ಹಸ್ಸೆನ್, ಪ್ರೊಫೈಲ್ ಚಿತ್ರಗಳಿಗೆ ಏನಾಗಿದೆ ಅಂತ ಪ್ರಶ್ನಿಸಿದ್ದಾರೆ.

ಪೋಸ್ಟ್​ಗಳಿಗೆ ಏನಾಗಿದೆ?
‘‘ಆರ್​ಸಿಬಿ ಫ್ರಾಂಚೈಸಿ ಎಲ್ಲವೂ ಸರಿ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳಿಗೆ ಏನಾಗಿದೆ?
– ಮೈಕ್ ಹಸ್ಸೆನ್, ಆರ್​ಸಿಬಿ ಮೆಂಟರ್

ಹೊಸ ಲೋಗೋ ಬಿಡುಗಡೆಗೆ ಕ್ಷಣಗಣನೆ!
ಎಲ್ಲಾ ಸೋಶಿಯಲ್ ಮೀಡಿಯಾಗಳಿಂದ ಲೋಗೋ ಹಾಗೂ ಪೋಸ್ಟ್​ಗಳನ್ನ ಡಿಲೀಟ್ ಮಾಡಿರೋ ಆರ್​ಸಿಬಿ ಫ್ರಾಂಚೈಸಿ, ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಲು ಸಜ್ಜಾಗಿದೆ. ಈ ಹಿಂದೆ ಆರ್​ಸಿಬಿ ಲೋಗೋದಲ್ಲಿ ಬೆಂಗಳೂರು ಹೆಸರನ್ನ ಕೈಬಿಟ್ಟಿದ್ದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಆದ್ರಿಂದ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ಇರೋದನ್ನ, ಬೆಂಗಳೂರು ಅಂತ ಕನ್ನಡದಲ್ಲಿ ಸರಿಪಡಿಸಲಿದೆ. ಅಲ್ಲದೇ, ಆರ್​ಸಿಬಿ ಹೊಸ ಕಂಪನಿ ಜೊತೆ ಜಾಹೀರಾತು ಒಪ್ಪಂದವನ್ನ ಮಾಡಿಕೊಂಡಿದ್ದು, ಹೊಸ ಲೋಗೋ ಬಿಡುಗಡೆ ಮಾಡೋದಕ್ಕೆ ಸಜ್ಜಾಗಿದೆ.

ಹೊಸ ದಶಕ.. ಹೊಸ ಆರ್​ಸಿಬಿಗೆ ಕೌಂಟ್​ಡೌನ್!
ಇನ್ನು ನಿನ್ನೆ ಆರ್​ಸಿಬಿ ಪ್ರಾಂಚೈಸಿ ತಮ್ಮ ಇನ್​ಸ್ಟಾದಲ್ಲಿ ಹೊಸ ಡಿಕೇಡ್ ಮತ್ತು ಹೊಸ ಆರ್​ಸಿಬಿ ಎಂದು ಪೋಸ್ಟ್ ಮಾಡಿದೆ. ಹೊಸ ದಶಕದ ಹೊಸ ಆರ್​ಸಿಬಿ ವ್ಯಾಲೆಂಟೆನ್ಸ್ ದಿನವಾದ ಇವತ್ತು ತನ್ನ ಹೊಸ ಹೆಸರನ್ನ ರಿವೀಲ್ ಮಾಡೋಕೆ ಆರ್​ಸಿಬಿ ರೆಡಿಯಾಗಿದೆ. ಪ್ರೇಮಿಗಳ ದಿನವಾದ ಇಂದು ಹೊಚ್ಚ ಹೊಸ ರಂಗಲ್ಲಿ ಆರ್​ಸಿಬಿ ಹೆಸ್ರು ರಿವೀಲ್ ಮಾಡೋಕೆ ಪ್ರಾಂಚೈಸಿ ಪ್ಲ್ಯಾನ್ ಮಾಡಿದೆ.

ಒಟ್ನಲ್ಲಿ ಕಳೆದ 12ಸೀಸನ್​ನಿಂದ ಕಪ್ ಗೆಲ್ಲೋದಕ್ಕೆ ಕಸರತ್ತು ನಡೆಸ್ತಿರೋ ಆರ್​ಸಿಬಿ ತಂಡ ಲೋಗೋ ಸೇರಿ ಹಲವು ಬದಲಾವಣೆ ಮುಂದಾಗಿದೆ. ಪ್ರೇಮಿಗಳ ದಿನವಾದ ಇಂದು ಆರ್​ಸಿಬಿಗೆ ಯಾವ ಹೆಸ್ರು ಇಡಬಹುದು ಅಂತ ಅಭಿಮಾನಿಗಳು ಕೂತುಹಲದಿಂದ ಕಾಯುವಂತೆ ಮಾಡಿದೆ.