ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ್ತಿ ಬ್ರಿಟ್ನಿ ಗ್ರೈನರ್​ಗೆ 9 ವರ್ಷ ಜೈಲು ಶಿಕ್ಷೆ ವಿಧಿಸಿದ ರಷ್ಯಾ; ಕೆಂಡಕಾರಿದ ಜೋ ಬೈಡನ್

Brittney Griner: ಅಮೆರಿಕದ ಬಾಸ್ಕೆಟ್‌ಬಾಲ್ ತಾರೆ ಬ್ರಿಟ್ನಿ ಗ್ರೈನರ್‌ಗೆ ಡ್ರಗ್ಸ್ ಕಳ್ಳಸಾಗಣೆಗಾಗಿ ರಷ್ಯಾದಲ್ಲಿ ಒಂಬತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ್ತಿ ಬ್ರಿಟ್ನಿ ಗ್ರೈನರ್​ಗೆ 9 ವರ್ಷ ಜೈಲು ಶಿಕ್ಷೆ ವಿಧಿಸಿದ ರಷ್ಯಾ; ಕೆಂಡಕಾರಿದ ಜೋ ಬೈಡನ್
Brittney Griner
TV9kannada Web Team

| Edited By: pruthvi Shankar

Aug 06, 2022 | 5:52 PM

ಈಗಾಗಲೇ ಉಕ್ರೇನ್​ನಲ್ಲಿ ಅಮೆರಿಕ ಮತ್ತು ರಷ್ಯಾ ನಡುವಿನ ಸಂಘರ್ಷ ಮುಂದುವರಿದಿರುವಾಗಲೇ ಇದೀಗ ಮತ್ತೊಂದು ಸಮಸ್ಯೆ ಬ್ರಿಟ್ನಿ ಗ್ರೈನರ್ ರೂಪದಲ್ಲಿ ಬಂದಿದೆ. ಅಮೆರಿಕದ ಬಾಸ್ಕೆಟ್‌ಬಾಲ್ ತಾರೆ ಬ್ರಿಟ್ನಿ ಗ್ರೈನರ್‌ಗೆ ಡ್ರಗ್ಸ್ ಕಳ್ಳಸಾಗಣೆಗಾಗಿ ರಷ್ಯಾದಲ್ಲಿ ಒಂಬತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ರಷ್ಯಾದ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಮಾಸ್ಕೋಗೆ ಬಂದಿದ್ದ ಬ್ರಿಟ್ನಿ, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಪಾಸಣೆ ವೇಳೆ ಡ್ರಗ್ಸ್‌ನೊಂದಿಗೆ ಸಿಕ್ಕಿಬಿದಿದ್ದರು. ಆಕೆಯ ಲಗೇಜ್‌ನಲ್ಲಿ ಹಶಿಶ್ ಆಯಿಲ್ ಕಾರ್ಟ್ರಿಡ್ಜ್‌ಗಳನ್ನು ಪತ್ತೆ ಮಾಡಿದ ನಂತರ ಅಲ್ಲಿನ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಅಲ್ಲಿನ ನ್ಯಾಯಾಲಯದಲ್ಲಿ ಬ್ರಿಟ್ನಿಯನ್ನು ವಿಚಾರಣೆಗೊಳಪಡಿಸಲಾಯಿತು.

ಆಕೆ ಉದ್ದೇಶಪೂರ್ವಕವಾಗಿ ಡ್ರಗ್ಸ್ ತಂದು ತಪ್ಪು ಮಾಡಿದ್ದಾಳೆ ಎಂದು ಪ್ರಾಸಿಕ್ಯೂಟರ್ ನಿಕೊಲಾಯ್ ವ್ಲಾಸೆಂಕೊ ನ್ಯಾಯಾಲಯದಲ್ಲಿ ವಾದಿಸಿದರು. ಈ ಸಂದರ್ಭದಲ್ಲಿ ಬ್ರಿಟ್ನಿ ಗ್ರೈನರ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ, ಮಾಸ್ಕೋ ಪ್ರದೇಶದ ಖಿಮ್ಕಿ ಸಿಟಿ ನ್ಯಾಯಾಲಯದ ನ್ಯಾಯಾಧೀಶ ಅನ್ನಾ ಸೊಟ್ನಿಕೋವಾ ಗುರುವಾರ ಶಿಕ್ಷೆಯನ್ನು ಅಂತಿಮಗೊಳಿಸಿದ್ದು, ಕೋರ್ಟ್ ಗ್ರಿನರ್​ಗೆ ಒಂಬತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಒಂದು ಮಿಲಿಯನ್ ರೂಬಲ್ಸ್ (ರೂ. 13.1 ಲಕ್ಷ) ದಂಡವನ್ನು ಕೂಡ ವಿಧಿಸಲಾಗಿದೆ. ಇದೇ ವೇಳೆ ನ್ಯಾಯಾಲಯದ ತೀರ್ಪಿಗೆ ಬ್ರಿಟ್ನಿ ಗ್ರೈನರ್ ಪ್ರತಿಕ್ರಿಯಿಸಿದ್ದು, ಇದು ಉದ್ದೇಶಪೂರ್ವಕ ತಪ್ಪು ಅಲ್ಲ ಎಂದು ವಿವರಿಸಿದರು. ನ್ಯಾಯಾಲಯದ ತೀರ್ಪಿನಿಂದ ಕ್ರೀಡಾಪ್ರೇಮಿಯಾಗಿ ಜೀವನ ಮುಗಿದಿದೆ ಎಂದು ಭಾವಿಸುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ರಷ್ಯಾದ ಮೇಲೆ ಕೋಪಗೊಂಡ ಅಮೆರಿಕ

ಬ್ರಿಟ್ನಿ ಗ್ರೀನರ್ ಅವರ ದೋಷಾರೋಪಣೆಯ ನಂತರ ಯುಎಸ್ ಅಧ್ಯಕ್ಷ ಜೋ ಬಿಡೆನ್ ಪ್ರತಿಕ್ರಿಯಿಸಿದ್ದು, ರಷ್ಯಾ ಬ್ರಿಟ್ನಿಯನ್ನು ಸುಳ್ಳು ಅಪರಾದದ ಮೇಲೆ ಬಂಧಿಸುತ್ತಿದೆ. ಇದು ಸ್ವೀಕಾರಾರ್ಹವಲ್ಲ. ಆಕೆಯನ್ನು ಕೂಡಲೇ ಬಿಡುಗಡೆ ಮಾಡುವಂತೆ ರಷ್ಯಾವನ್ನು ಕೇಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಕೂಡ ರಷ್ಯಾದಲ್ಲಿ ಗ್ರಿನರ್ ಬಂಧನದ ಬಗ್ಗೆ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಆಕೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಗ್ರೈನರ್ ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತೆಯಾಗಿದ್ದು, ಮಹಿಳಾ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನಲ್ಲಿ (WNBA) ಸ್ಟಾರ್ ಆಟಗಾರ್ತಿಯಾಗಿದ್ದಾರೆ.

ಏತನ್ಮಧ್ಯೆ, ಬ್ರಿಟ್ನಿ ಗ್ರೈನರ್ ಪ್ರಕರಣದ ಬಗ್ಗೆ ಅಮೆರಿಕ ಈಗಾಗಲೇ ಗಮನಹರಿಸಿದೆ. ಬಾಸ್ಕೆಟ್‌ಬಾಲ್ ತಾರೆ ಬ್ರಿಟ್ನಿ ಗ್ರೈನರ್ ಮತ್ತು ಅಮೆರಿಕದ ಮಾಜಿ ಅಧಿಕಾರಿ ಪಾಲ್ ವೇಲನ್ ರಷ್ಯಾದ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಈಗಾಗಲೇ ಅಮೆರಿಕದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮ್ಮ ದೇಶದ ಶಸ್ತ್ರಾಸ್ತ್ರ ಕಳ್ಳಸಾಗಣೆದಾರ ವಿಕ್ಟರ್ ಬೌಟ್‌ನನ್ನು ಬಿಡುಗಡೆ ಮಾಡಲು ರಷ್ಯಾ ಷರತ್ತು ವಿಧಿಸಿದೆ ಎಂದು ತೋರುತ್ತದೆ. ಮತ್ತೊಂದೆಡೆ, ಈ ವಿಷಯದ ಬಗ್ಗೆ ಅಮೆರಿಕದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಹೇಳಿದ್ದಾರೆ. ಖೈದಿಗಳ ವಿಚಾರವಾಗಿ ಉಭಯ ದೇಶಗಳ ನಡುವೆ ಶೀಘ್ರದಲ್ಲೇ ಮಾತುಕತೆ ನಡೆಯುವ ಸಾಧ್ಯತೆಗಳಿವೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada