ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ (Singapore Open 2022) ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು (PV Sindhu) ಅಮೋಘ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಚೀನಾದ ವಾಂಗ್ ಝಿ ಯಿ (Wang Zhi Yi) ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ತಾರೆ ಭರ್ಜರಿ ಪ್ರದರ್ಶನ ನೀಡಿದ್ದರು. ಆರಂಭದಿಂದಲೇ ವಾಂಗ್ ವಿರುದ್ದ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್ ಅನ್ನು 21-9 ಅಂತರದಿಂದ ಗೆದ್ದುಕೊಂಡರು. ಇದಾಗ್ಯೂ 2ನೇ ಸೆಟ್ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. ದ್ವಿತೀಯ ಸೆಟ್ನ ಆರಂಭದಲ್ಲೇ ಅತ್ಯುತ್ತಮ ಸ್ಮ್ಯಾಶ್ ಮೂಲಕ 6 ಪಾಯಿಂಟ್ ಕಲೆಹಾಕಿ ಒತ್ತಡಕ್ಕೆ ಸಿಲುಕಿಸಿದ್ದರು. ಪರಿಣಾಮ ಎರಡನೇ ಸೆಟ್ ಅನ್ನು ಪಿವಿ ಸಿಂಧು 11-21 ಅಂತರದಿಂದ ಸೋತರು.
ಮೊದಲೆರಡು ಸೆಟ್ಗಳಲ್ಲಿ ಇಬ್ಬರಿಂದಲೂ ಭರ್ಜರಿ ಪ್ರದರ್ಶನ ಮೂಡಿಬಂದಿದ್ದ ಕಾರಣ ಅಂತಿಮ ಸೆಟ್ನಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಮೊದಲ 5 ಪಾಯಿಂಟ್ವರೆಗೂ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು. ಈ ಹಂತದಲ್ಲಿ ತಮ್ಮ ಅನುಭವವನ್ನು ಧಾರೆಯೆರೆದ ಸಿಂಧು ಸ್ಮ್ಯಾಶ್ ಮೂಲಕ ವಾಂಗ್ ಝಿ ಯಿಯನ್ನು ಇಕ್ಕಟ್ಟಿಗೆ ಸಿಲುಕಿದರು. ಪರಿಣಾಮ ಏಕಾಏಕಿ ಸಿಂಧು ಅವರ ಪಾಯಿಂಟ್ 11 ಕ್ಕೇರಿದರೆ, ಝಿ 6 ರಲ್ಲೇ ಉಳಿದರು. ಆದರೆ ಈ ಹಂತದಲ್ಲಿ ಮತ್ತೊಮ್ಮೆ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಚೀನಿ ಆಟಗಾರ್ತಿ ತೀವ್ರ ಪೈಪೋಟಿ ನೀಡಿದರು. ಅಲ್ಲದೆ ಸಿಂಧು 12 ಪಾಯಿಂಟ್ ಕಲೆಹಾಕುವಷ್ಟರಲ್ಲಿ ವಾಂಗ್ ಝಿ 11ಕ್ಕೆ ಬಂದು ನಿಂತರು.
ಇದಾಗ್ಯೂ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಸಿಂಧು ಮತ್ತೊಮ್ಮೆ ತಮ್ಮ ಬ್ಯಾಕ್ ಜಂಪ್ ಸ್ಯಾಶ್ ಮೂಲಕ ವಾಂಗ್ ಝಿ ವಿರುದ್ದ ಮೇಲುಗೈ ಹೊಂದಿದರು. ಅಂತಿಮವಾಗಿ 21-15 ರ ಅಂತರದಿಂದ ಗೆಲ್ಲುವ ಮೂಲಕ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಇದಕ್ಕೂ ಮುನ್ನ ಸೆಮಿಫೈನಲ್ನಲ್ಲಿ ಜಪಾನ್ನ ಸೈನಾ ಕವಾಕಮಿ ಅವರನ್ನು ಕೇವಲ 31 ನಿಮಿಷಗಳಲ್ಲಿ 21-15 ಮತ್ತು 21-7 ರ ಅಂತರದಿಂದ ಸೋಲಿಸಿದರು. ಪಂದ್ಯದ ಆರಂಭದಿಂದಲೂ ಜಪಾನ್ ಆಟಗಾರ್ತಿಯ ವಿರುದ್ಧ ಮೇಲುಗೈ ಸಾಧಿಸಿದ್ದ ಸಿಂಧು ಮೊದಲ ಗೇಮ್ನಲ್ಲಿ 11-8ರಲ್ಲಿ ಮುನ್ನಡೆ ಕಾಯ್ದುಕೊಂಡರು. ಆದರೆ, ಜಪಾನಿನ ಆಟಗಾರ್ತಿ ಸರ್ವಿಸ್ ಮತ್ತು ಕ್ರಾಸ್ ಕೋರ್ಟ್ನ ಪ್ರಬಲ ಆಟದಿಂದಾಗಿ ಸತತ ಮೂರು ಪಾಯಿಂಟ್ಗಳನ್ನು ಗಳಿಸಿ ಸಿಂಧುಗೆ ಸರಿಸಮಾನವಾಗಿ ತಲುಪಿದರು. ಇದಾದ ಬಳಿಕ ಇಬ್ಬರ ನಡುವೆ ತಲಾ ಒಂದೊಂದು ಅಂಕಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಆದರೆ, ಸಿಂಧು ತಮ್ಮ ಅನುಭವದ ಲಾಭ ಪಡೆದು ಮೊದಲ ಗೇಮ್ನಲ್ಲಿ 21-15ರಿಂದ ಮುನ್ನಡೆ ಸಾಧಿಸಿದರು.
ಎರಡನೇ ಗೇಮ್ನಲ್ಲೂ ಇದೇ ಟ್ರೆಂಡ್ ಮುಂದುವರಿಸಿದ ಸಿಂಧು ಜಪಾನ್ ಆಟಗಾರ್ತಿ ಕವಾಕಮಿಗೆ ಕಂಬ್ಯಾಕ್ ಮಾಡಲು ಯಾವುದೇ ಅವಕಾಶ ನೀಡಲಿಲ್ಲ. ಎರಡನೇ ಗೇಮ್ನಲ್ಲಿ ಅವರು ಒಂದು ಹಂತದಲ್ಲಿ 5-0 ಮುನ್ನಡೆ ಸಾಧಿಸಿದ್ದರು. ಅಂತಿಮವಾಗಿ 21-7 ಗೇಮ್ಗಳನ್ನು ಗೆದ್ದು ಸಿಂಗಾಪುರ ಓಪನ್ನ ಫೈನಲ್ಗೆ ಪ್ರವೇಶಿಸಿದ್ದರು.
ಹಾಗೆಯೇ ಕ್ವಾರ್ಟರ್ಫೈನಲ್ನಲ್ಲಿ ವಿಶ್ವದ 19ನೇ ಶ್ರೇಯಾಂಕದ ಹಾನ್ ಯು ಅವರನ್ನು 17-21, 21-11 ಮತ್ತು 21-19 ಸೆಟ್ಗಳಿಂದ ಸೋಲಿಸಿದ್ದರು. ಈ ಪಂದ್ಯ 1 ಗಂಟೆ 2 ನಿಮಿಷಗಳ ಕಾಲ ನಡೆಯಿತು.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಸಿಂಧು ಈ ವರ್ಷ ಸೈಯದ್ ಮೋದಿ ಇಂಟರ್ನ್ಯಾಶನಲ್ ಮತ್ತು ಸ್ವಿಸ್ ಓಪನ್ನಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಸಿಂಧು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವ ಭರವಸೆ ಮೂಡಿಸಿದ್ದಾರೆ.