ಐಪಿಎಲ್ನ ಮೊದಲ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪ್ರಶಸ್ತಿ ವಿಜೇತರು. ಆದರೆ, ಆ ಯಶಸ್ಸನ್ನು ಮತ್ತೆ ಪುನರಾವರ್ತಿಸಲು ಅವರಿಗೆ ಇದುವರೆಗೂ ಸಾಧ್ಯವಾಗಿಲ್ಲ. ಕಳೆದ ಎರಡು ಆವೃತ್ತಿಯಲ್ಲಿ ಪ್ಲೇಆಫ್ಗೆ ಅರ್ಹತೆ ಪಡೆಯಲು ಅವರು ವಿಫಲರಾಗಿದ್ದಾರೆ. ಇದಕ್ಕೂ ಮೊದಲು, ಅವರು ಐಪಿಎಲ್ 2018 ರಲ್ಲಿ ತಮ್ಮ ಪುನರಾಗಮನ ಆವೃತ್ತಿಯಲ್ಲಿ ಎಲಿಮಿನೇಟರ್ನಲ್ಲಿ ಸೋತರು. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ತಮ್ಮ ಹಿಂದಿನ ಕಾರ್ಯಕ್ಷಮತೆಯನ್ನು ಸುಧಾರಿಸುವ ಭರವಸೆಯಲ್ಲಿಯೇ ಮುನ್ನುಗ್ಗುತ್ತಿದ್ದಾರೆ. ಕಳೆದ ವರ್ಷ, ಅವರ ಪ್ರಾರಂಭವು ಶೋಚನೀಯವಾಗಿದ್ದರೂ ನಂತರ ಉತ್ತಮ ಪ್ರದರ್ಶನ ನೀಡುವ ಮೂಲಕ ಸಾಮರ್ಥ್ಯವೇನು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೆಡ್ ಟು ಹೆಡ್ ರೆಕಾರ್ಡ್ ಉಭಯ ತಂಡಗಳು ಈವರೆಗೆ ಐಪಿಎಲ್ನಲ್ಲಿ 21 ಪಂದ್ಯಗಳಲ್ಲಿ ಭೇಟಿಯಾಗಿವೆ, ಅದರಲ್ಲಿ 12 ಪಂದ್ಯಗಳನ್ನು ರಾಜಸ್ಥಾನ್ ರಾಯಲ್ಸ್ ಮತ್ತು ಉಳಿದ 9 ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಗೆದ್ದಿದೆ. ಆದರೆ, ಐಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಈ ಎರಡು ತಂಡಗಳು ಈವರೆಗೂ ಮುಖಾಮುಖಿಯಾಗಿಲ್ಲ.
ಆಟಗಾರರ ವರದಿ ಎರಡು ತಂಡಗಳ ನಡುವಿನ ಕದನದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅತಿ ಹೆಚ್ಚು ರನ್ ಗಳಿಸಿದ್ದಾರೆ (406). ಕೆಎಲ್ ರಾಹುಲ್ (350), ಜೋಸ್ ಬಟ್ಲರ್ (251) ಮತ್ತು ಕ್ರಿಸ್ ಗೇಲ್ (217) ನಂತರದ ಸ್ಥಾನದಲ್ಲಿದ್ದಾರೆ. ಬೌಲರ್ಗಳಲ್ಲಿ ಜೋಫ್ರಾ ಆರ್ಚರ್ 7 ವಿಕೆಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಆಂಡ್ರ್ಯೂ ಟೈ (6) ಮತ್ತು ಬೆನ್ ಸ್ಟೋಕ್ಸ್ (6) ನಂತರದ ಸ್ಥಾನದಲ್ಲಿದ್ದಾರೆ.
ಕಳೆದ ಆವೃತ್ತಿಯ ಫಲಿತಾಂಶಗಳು ಐಪಿಎಲ್ 2020 ರಲ್ಲಿ, ಆರ್ಆರ್ ತನ್ನ ಎರಡೂ ಪಂದ್ಯಗಳನ್ನು ಪಿಬಿಕೆಎಸ್ ವಿರುದ್ಧ ಲೀಗ್ ಹಂತದಲ್ಲಿ ಗೆದ್ದಿತು. ರಾಹುಲ್ ತಿವಾಟಿಯಾ ಅವರ ಮಾಂತ್ರಿಕ ಆಟದ ಸಹಾಯದಿಂದ 224 ರನ್ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟಿದ್ದರಿಂದ ಅದು ಸಾಧ್ಯವಾಗಿತ್ತು. ಎರಡನೇ ಗೇಮ್ನಲ್ಲಿ ಪಿಬಿಕೆಎಸ್ 186 ರನ್ಗಳ ಗುರಿಯನ್ನು ಹೊಂದಿತ್ತು, ಇದರಲ್ಲಿ ಕ್ರಿಸ್ ಗೇಲ್ ಅವರು 99 ರನ್ ಗಳಿಸಿದ್ದರು. ಈ ಗುರಿಯನ್ನು ಬೆನ್ನಟ್ಟಿದ ಆರ್ಆರ್ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ಅವರ ಅದ್ಭುತ ಆಟದ ಸಹಾಯದಿಂದ 17.3 ಓವರ್ಗಳಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡಿತ್ತು.
ಇಂದಿನ ಪಂದ್ಯದಲ್ಲಿ ಗೆಲುವು ಯಾರಿಗೆ? ಎರಡು ತಂಡಗಳ ಬಲಾಬಲದ ಬಗ್ಗೆ ಯೋಚಿಸಿದಾಗ ಪಂಜಾಬ್ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠರನ್ನೇ ಹೊಂದಿದೆ. ಆರಂಭಿಕರಾಗಿ ಬರುವ ರಾಹುಲ್ ಹಾಗೂ ಗೇಲ್ ರನ್ ಮಳೆಯನ್ನೇ ಹರಿಸುವ ಸಾಮರ್ಥ್ಯ ಹೊಂದಿದ್ದಾರೆ. ನಂತರ ಬರುವ ಮಾಯಾಂಕ್ ಹಾಗೂ ಪೂರನ್ ಎಂತಹ ಸಮಯದಲ್ಲೂ ಪಂದ್ಯದ ದಿಕ್ಕನೇ ಬದಲಿಸುವ ಸಾಮಥ್ರ್ಯ ಹೊಂದಿದ್ದಾರೆ. ಆದರೆ ಬೌಲಿಂಗ್ ವಿಭಾಗದಲ್ಲಿ ತಂಡ ಶಮೀ ಅವರನ್ನೇ ನೆಚ್ಚಿಕೊಳ್ಳಬೇಕಿದೆ. ಇತ್ತ ರಾಜಸ್ಥಾನ ತನ್ನ ತಂಡದಲ್ಲಿ ನಾಯಕ ಸಂಜು, ಬಟ್ಲರ್, ಸ್ಟೋಕ್ಸ್ ಹಾಗೂ ರಾಹುಲ್ ತಿವಾಟಿಯಾ ಅವರಂತಹ ಹೊಡಿಬಡಿ ಆಟಗಾರರನ್ನೇ ತಂಡದಲ್ಲಿರಿಸಿಕೊಂಡಿದೆ. ಆದರೆ ಬೌಲಿಂಗ್ ವಿಭಾಗದಲ್ಲಿ ಆರ್ಚರ್ ಇಲ್ಲದಿರುವುದು ಕೊಂಚ ಹಿನ್ನಡೆ ಉಂಟುಮಾಡಿದೆ. ರಾಜಸ್ಥಾನಕ್ಕೆ ಹೋಲಿಸಿದರೆ ಪಂಜಾಬ್ ಕೊಂಚ ಬಲಿಷ್ಠವಾಗಿದ್ದು ನಾಳಿನ ಪಂದ್ಯದಲ್ಲಿ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.