ಪ್ರಸ್ತುತ ನಡೆಯುತ್ತಿರುವ ಟೊಕಿಯೊ ಒಲಂಪಿಕ್ಸ್ನಲ್ಲಿ ಮಹಿಳಾ ಸ್ಪರ್ಧಿಗಳು ತಮ್ಮ ಛಲದಾಯಕ ಆಟದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ ಒಲಂಪಿಕ್ಸ್ ಇತಿಹಾಸದಲ್ಲಿ ನಡೆದ ಮೊದಲ ಒಲಂಪಿಕ್ಸ್ನಲ್ಲಿ ಮಹಿಳೆಯರ ಆಟಕ್ಕೆ ಅವಕಾಶವೇ ಇರದ ಕತೆ ನಿಮಗೆ ತಿಳಿದಿದೆಯೇ? ಅದರಲ್ಲೂ ವಿವಾಹಿತ ಮಹಿಳೆಯರು ಕ್ರೀಡಾಂಗಣದ ಒಳಗೆ ಕಾಣಿಸಿಕೊಂಡರೆ ಅವರನ್ನು ಎತ್ತರದ ಪರ್ವತದಿಂದ ಕೆಳಗೆ ತಳ್ಳುವ ಅಥವಾ ಇನ್ನಿತರ ಭೀಕರ ಶಿಕ್ಷೆಗಳಿಗೆ ಗುರಿಪಡಿಸಲಾಗುತ್ತಿತ್ತು ಎಂಬ ವಿಚಾರ ತಿಳಿದಿದೆಯೇ? ಹೌದು. ಗ್ರೀಕ್ನಲ್ಲಿ(Greece ) ಪ್ರಾರಂಭವಾದ ಮೊದಲ ಒಲಂಪಿಕ್ಸ್ನಲ್ಲಿ ಇಂತಹ ಪದ್ಧತಿಗಳಿದ್ದವು. ಇದ್ದಿದ್ದರಲ್ಲಿ ಮದುವೆಯಾಗದ ಹುಡುಗಿಯರಿಗೆ ಸ್ವಲ್ಪ ರಿಯಾಯಿತಿ ಇತ್ತು. ಅಂದರೆ ಅವರಿಗೆ ಕ್ರೀಡಾಂಗಣದೊಳಗೆ ಪ್ರವೇಶಿಸಿ ಕ್ರೀಡೆಗಳನ್ನು ವೀಕ್ಷಿಸಲು ಅವಕಾಶವಿತ್ತು.
ಅಥೆನ್ಸ್, ಡೇಲೋಸ್ ಸೇರಿದಂತೆ ಪೆಲೋಪೋನೀಸ್ ರಾಜ್ಯದಲ್ಲಿ(Peloponnese states) ಮಹಿಳೆಯರಿಗೆ ಒಲಂಪಿಕ್ಸ್ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಗ್ರೀಕ್ ಪುರಾಣಗಳನ್ನು ಗಮನಿಸಿದರೆ, ಅದರಲ್ಲಿ ಒಲಂಪಿಕ್ಸ್ ಪ್ರಾರಂಭವಾದ ‘ಈಲಿಸ್’ ನಗರದಲ್ಲಿ ಒಲಂಪಿಕ್ಸ್ ನಡೆಯುವಾಗ ಮಹಿಳೆಯರಿಗೆ ನಿಷೇಧವಿದ್ದ ಕುರಿತ ವಿವರಗಳು ಕಂಡುಬರುತ್ತವೆ. ಒಂದು ವೇಳೆ ಕಣ್ಣುತಪ್ಪಿಸಿ ವಿವಾಹಿತ ಮಹಿಳೆಯರು ಕ್ರೀಡಾಂಗಣದೊಳಗೆ ಪ್ರವೇಶಿಸಿದರೆ ಟೈಪೇಮ್ ಪರ್ವತದಿಂದ(Mount Typaeum) ಕೆಳಗೆ ಹರಿಯುತ್ತಿರುವ ನದಿಗೆ ಅವರನ್ನು ತಳ್ಳಲಾಗುತ್ತಿತ್ತು ಎಂದು ಗ್ರೀಕ್ನ ಭೂಗೋಳ ಶಾಸ್ತ್ರಜ್ಞ, ಪ್ರವಾಸ ಬರಹಗಾರ ಪೌಸಾನೀಸ್( Pausanias) ಉಲ್ಲೇಖಿಸಿದ್ದಾನೆ. (ವರದಿ: ಅಟ್ಲಾಸ್ ಒಬ್ಸ್ಕುರಾ)
ನಂತರದಲ್ಲಿ ಕೂಡಾ ಒಲಂಪಿಕ್ಸ್ ವೀಕ್ಷಕ ಪ್ರಧಾನವಾಗಿತ್ತು. ಆದರೆ ಮಹಿಳೆಯರಿಗೆ ತಾವೂ ಕೂಡಾ ಒಲಂಪಿಕ್ಸ್ನಲ್ಲಿ ಭಾಗವಹಿಸಲೇಬೇಕೆಂಬ ತುಡಿತವಿತ್ತು. ಅದಕ್ಕಾಗಿ ಅವರು ತಮ್ಮದೇ ಆದ ಒಲಂಪಿಕ್ಸ್ ಸ್ಪರ್ಧೆ ಆಯೋಜಿಸಿದರು. ಅದೇ ‘ದಿ ಹೆರೈನ್ ಗೇಮ್ಸ್’ (The Heraean Games). ಪೆನ್ ಮ್ಯೂಸಿಯಂನ ದಾಖಲೆಗಳ ಪ್ರಕಾರ ಹೆರೈನ್ ಒಲಂಪಿಕ್ಸ್ನಲ್ಲಿ ಮದುವೆಯಾಗದ ಯುವತಿಯರಿಗೆ ಬರಿಗಾಲ ಓಟ(Foot Race) ಸ್ಪರ್ಧೆ ನಡೆಯುತ್ತಿತ್ತು. ಈ ಒಲಂಪಿಕ್ಸ್ ಎಷ್ಟು ಹಳೆಯದು ಎಂಬುದಕ್ಕೆ ಯಾವುದೇ ನಿಖರ ಆಧಾರಗಳಿಲ್ಲ. ಆದರೆ ಪುರುಷರ ಒಲಂಪಿಕ್ಸ್ನಷ್ಟೇ ಇದೂ ಹಳೆಯದಾಗಿರಬಹುದು ಎನ್ನುತ್ತವೆ ದಾಖಲೆಗಳು. ಪೌಸಾನಿಸ್ ಬರೆದಿರುವ ಪ್ರಕಾರ, ಮಹಿಳೆಯರ ಒಲಂಪಿಕ್ಸ್ ಅನ್ನು ಈಲಿಸ್ ನಗರದ 16 ಮಹಿಳಾ ಪ್ರಮುಖರು ನಿರ್ವಹಿಸುತ್ತಿದ್ದರು. ನಾಲ್ಕು ವರ್ಷಗಳಿಗೊಮ್ಮೆ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿತ್ತು ಎಂದು ತಿಳಿಸಿದ್ದಾನೆ.
ಪೌಸಾನೀಸ್ ಒಲಂಪಿಕ್ಸ್ನಲ್ಲಿ ಭಾಗವಹಿಸುವ ಮಹಿಳೆಯರು ಯಾವ ರೀತಿಯ ಉಡುಗೆಯನ್ನು ಧರಿಸುತ್ತಿದ್ದರು ಎಂಬುದನ್ನೂ ಉಲ್ಲೇಖಿಸಿದ್ದಾನೆ. ಕ್ರಿಸ್ತ ಪೂರ್ವ ಎರಡಡನೇ ಶತಮಾನದಲ್ಲಿ ನಡೆಯುತ್ತಿದ್ದ ಹೇರಾ ಕ್ರೀಡೆಗಳಲ್ಲಿ ಮಹಿಳೆಯರು ಉದ್ದನೆಯ ಕೂದಲನ್ನು ಬಿಟ್ಟು, ಮೊಣಕಾಲ ಮೇಲೆ ಮತ್ತು ಎಡಭುಜ ಪೂರ್ಣವಾಗಿ ಮುಚ್ಚುವ ವಸ್ತ್ರವನ್ನು ಧರಿಸುತ್ತಿದ್ದರು. ಬಹುಶಃ ಅದು ಆಗಿನ ಕಾಲದ ಜನಸಾಮಾನ್ಯರ ಉಡುಗೆಯೂ ಆಗಿದ್ದಿರಬಹುದು ಎಂದು ಪೌಸಾನೀಸ್ ಅಭಿಪ್ರಾಪಡುತ್ತಾನೆ. ಒಲಂಪಿಕ್ಸ್ ಕ್ರೀಡೆಗಳಲ್ಲಿ ಗೆದ್ದ ಮಹಿಳೆಯರಿಗೆ ಆಲೀವ್ಸ್ನಿಂದ ಮಾಡಿದ ಕಿರೀಟವನ್ನು ನೀಡಲಾಗುತ್ತಿತ್ತು. ಜೊತೆಗೆ ಹೇರಾಗೆ ಸಮರ್ಪಿಸಿದ ಹಸುವಿನ ಒಂದು ಭಾಗವನ್ನೂ ನೀಡಲಾಗುತ್ತಿತ್ತು.
ಮಹಿಳೆಯರು ಪ್ರತ್ಯೆಕ ಒಲಂಪಿಕ್ಸ್ ಮಾಡಿದ್ದರು ಎಂಬ ಈ ದಾಖಲೆಗಳಿಗೆ ಕೆಲವು ತಜ್ಞರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಕಾರಣ, ಈ ವಾದಕ್ಕೆ ಕೆಲವು ದಾಖಲೆಗಳ ಹೊರತುಪಡಿಸಿ ಇತರ ಆಧಾರಗಳಿಲ್ಲ. ಎಲ್ಲರೂ ಪುರುಷರ ಒಲಂಪಿಕ್ಸ್ ಸ್ಪರ್ಧೆಯನ್ನೇ ಗಮನ ಹರಿಸಿದ್ದು ಮತ್ತು ಒಲಂಪಿಕ್ಸ್ನಲ್ಲಿ ಮಹಿಳೆಯರ ಪ್ರವೇಶವೇ ತಪ್ಪು ಎಂಬ ಆಗಿನ ಕಲ್ಪನೆ ದಾಖಲೀಕರಣಕ್ಕೆ ಹಿನ್ನೆಡೆ ಮಾಡಿರಲೂಬಹುದು ಎಂಬ ವಾದವೂ ತಜ್ಞರಲ್ಲಿದೆ.
ಅದೇನೇ ಇದ್ದರೂ, ಈಗ ಕಾಲ ಬದಲಾಗಿದೆ. ವರ್ತಮಾನದ ಕ್ರೀಡೆಗಳಲ್ಲಿ ಮಹಿಳೆಯರು ಮಿಂಚುತ್ತಿದ್ದಾರೆ. ಅಲ್ಲದೇ ಪ್ರಸ್ತುತ ನಡೆಯುತ್ತಿರುವ ಟೊಕಿಯೊ ಒಲಂಪಿಕ್ಸ್ನಲ್ಲಂತೂ ವೈಯಕ್ತಿಕವಾಗಿ ಅತೀ ಹೆಚ್ಚು ಪದಕ ಗೆದ್ದವರ ಪಟ್ಟಿಯಲ್ಲಿ ಮಹಿಳೆಯರ ಹೆಸರೇ ರಾರಾಜಿಸುತ್ತಿವೆ. ಇದು ಉತ್ತಮ ಭವಿಷ್ಯತ್ತಿನ ಮುನ್ಸೂಚನೆಯಂತೂ ಹೌದು.
ಇದನ್ನೂ ಓದಿ: ಅಮೃತಸರದ ವೃದ್ಧೆಗೆ ಸಹಾಯ ಮಾಡಲು ಮುಂದಾದ ನೆಟ್ಟಿಗರು! ನೀವೂ 80 ವರ್ಷದ ಅಜ್ಜಿಯನ್ನು ಬೆಂಬಲಿಸುವುದಾದರೆ ಇದನ್ನು ಓದಿ
ಇದನ್ನೂ ಓದಿ: Tokyo Olympics: ಒಲಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ ಲವ್ಲಿನಾ ಬೊರ್ಗೊಹೈನ್!
(Women started separate Olympics in ancient greece because they are not allowed to participate in games)
Published On - 12:32 pm, Sun, 1 August 21