ಮೀಸಲಾತಿ: ತಾತ್ಕಾಲಿಕವಾಗಿ ಉಪವಾಸ ಕೈ ಬಿಟ್ಟ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ

  • sadhu srinath
  • Published On - 16:45 PM, 23 Oct 2020

ಒಂದೆಡೆ, ಕರ್ನಾಟಕದ ಮೂರನೇ ದೊಡ್ಡ ಜಾತಿಯೆಂದು ಬಿಂಬಿಸುವ ಕುರುಬರು ತಮ್ಮನ್ನು ಪರಿಶಿಷ್ಟ ಪಂಗಡ (ಎಸ್ ಟಿ) ಸಮುದಾಯಕ್ಕೆ ಸೇರಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಲು ಪ್ರಾರಂಭಿಸಿದ್ದಾರೆ. ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿ ಆಗಿದ್ದಾಗ ನಡೆಸಿದ್ದ ಜಾತಿ ಸಮೀಕ್ಷೆಯನ್ನು ಜಾರಿಗೊಳಿಸಬೇಕು ಎಂದು ಹೇಳಿ ಸರಕಾರಕ್ಕೆ ತಲೆಬೇನೆ ನೀಡಲು ಮುಂದಾಗಿದ್ದಾರೆ. ಇನ್ನೊಂದೆಡೆ ಎಸ್ ಟಿ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ತಮಗಿರುವ ಮೀಸಲಾತಿ ಪ್ರಮಾಣವನ್ನು 7.5 % ಕ್ಕೆ ಏರಿಸಬೇಕೆಂದು ಚಳುವಳಿ ಪ್ರಾರಂಭಿದ್ದರು.

ಅಷ್ಟೇ ಅಲ್ಲ, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಇರುವ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಇದೇ ವಿಷಯವನ್ನಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಚುನಾವಣೆಯ ಮಧ್ಯೆ ಈ ಬೆಳವಣಿಗೆ ಬಿ ಜೆ ಪಿ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ನುಂಗಲಾಗದ ತುತ್ತಾಗಿತ್ತು. ಈಗ, ಎಸ್ ಟಿ ಸಮುದಾಯದ ಮಂತ್ರಿಗಳು ಸೇರಿ ಉಪವಾಸ ನಡೆಸುತ್ತಿರುವ ಸ್ವಾಮೀಜಿಗೆ ಮನವೊಲಿಸಿ ಸತ್ಯಾಗ್ರಹವನ್ನು ಕೈ ಬಿಡಲು ಒಪ್ಪಿಸಿದ್ದಾರೆ.

ನ್ಯಾಯಮೂರ್ತಿ ಎಸ್ ನಾಗಮೋಹನ್ ದಾಸ್ ಅವರು ತಮ್ಮ ವರದಿಯಲ್ಲೆ ಎಸ್ ಟಿ ಸಮಾಜಕ್ಕೆ ಅವರ ಜನಗಣತಿ ಆಧಾರದ ಮೇಲೆ, ಈಗಿರುವ 5 % ಮೀಸಲಾತಿ ಪ್ರಮಾಣವನ್ನು 7.5 % ಕ್ಕೆ ಏರಿಸಲು ವರದಿ ನೀಡಿದ್ದರು. ಈ ಹಿಂದಿನ ಸರಕಾರಗಳು ಕೂಡ ಅದನ್ನು ಜಾರಿಗೊಳಿಸಲು ಹಿಂದೇಟು ಹಾಕಿದ್ದು ಈಗ ಅದು ಯಡಿಯೂರಪ್ಪ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಮ್ ಪಿ ರೇಣುಕಾಚಾರ್ಯ ಹೇಳಿಕೆ ಬಿಡುಗಡೆ ಮಾಡಿ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕೈ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ರೇಣುಕಾಚಾರ್ಯ ಹಿರಿಯ ಸಚಿವರಾದ, ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು, ಭಾರೀ ನೀರಾವರೀ ಸಚಿವ, ರಮೇಶ ಜಾರಕಿಹೊಳಿ ಮತ್ತು, ಶಾಸಕ ರಾಜೂಗೌಡ ಮತ್ತು ತಾವು ಸ್ವಾಮಿಜಿಯನ್ನು ಭೇಟಿ ಮಾಡಿ ಇರುವ ಪರಿಸ್ಥಿತಿಯನ್ನ ವಿವರಿಸಿದೆವು. ಈಗ ಚುನಾವಣೆ ಇದೆ ಮತ್ತು ಕೋವಿಡ್​ ಸೋಂಕು ನಿರ್ವಹಣಾ ಕೆಲಸದ ಮಧ್ಯೆ ಮೀಸಲಾತಿ ಪ್ರಮಾಣ ಏರಿಸುವುದು ಕಷ್ಟ. ಹಾಗಾಗಿ ತಾವು ಸತ್ಯಾಗ್ರಹ ಹಿಂತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದರು. ಅದಕ್ಕೆ ಸ್ವಾಮೀಜಿ ಸಹ ಸಕಾರಾತ್ಮಕವಾಗಿ ಪ್ರತಿಸ್ಪಂದಿಸಿದ್ದಾರೆ.

ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿರುವುದಾಗಿಯೂ ಚುನಾವಣೆ ಮುಗಿದ ಮೇಲೆ ಒಂದು ತಿಂಗಳೊಳಗಾಗಿ ತಮ್ಮ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.