ಭಾವನ ಮನೆಯಲ್ಲೇ ಕಳ್ಳತನ ಮಾಡಿದ್ದ, ಮಾಲು‌ ಮಾರಲಾಗದೆ ಪರದಾಡ್ತಿದ್ದ ಚೋರ ಸಿಕ್ಕಿಬಿದ್ದ!

ಬೆಂಗಳೂರು: ಕೊರೊನಾ ಲಾಕ್​ಡೌನ್​ ಅನ್ನೇ ಬಂಡವಾಳ ಮಾಡಿಕೊಂಡು ಸ್ವಂತ ಭಾವನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಸುದ್ದಗುಂಟೆಪಾಳ್ಯ ಠಾಣಾ ಪೊಲೀಸರರು ಆರೋಪಿ ಸೈಯ್ಯದ್ ಮಸೂದ್​ನನ್ನು ಬಂಧಿಸಿದ್ದಾರೆ.

ಆರೋಪಿ ಸೈಯ್ಯದ್, ಅಬ್ದುಲ್ ರಶೀದ್ ಮೇಖ್ರಿ ಪತ್ನಿಯ ಸಹೋದರನಾಗಿದ್ದಾನೆ. ಹಿಂದೆ ಅಬ್ದುಲ್ ರಶೀದ್ ಮನೆಯಲ್ಲಿ‌ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಪರಸ್ಪರ ಭಿನ್ನಾಭಿಪ್ರಾಯಗಳಿಂದ ಸೈಯದ್ ಮಸೂದ್ ಕೆಲಸ ಬಿಟ್ಟಿದ್ದ. ಲಾಕ್​ಡೌನ್‌ ವೇಳೆ ಬೆನ್ಸನ್ ಟೌನಿನಲ್ಲಿದ್ದ ಮಗಳ ಮನೆಗೆ ಅಬ್ದುಲ್ ರಶೀದ್ ಹೋಗಿದ್ದ. ಆಗ ಅಬ್ದುಲ್ ಮಗಳ ಮನೆಯಲ್ಲಿ‌ ಸೈಯದ್ ಮಸೂದ್ ಸಹೋದರಿ ಮನೆಗೆಲಸ ಮಾಡುತ್ತಿದ್ದರು.

ಕದ್ದ ಮಾಲು‌ ಮಾರಲಾಗದೆ ಪರದಾಡುತ್ತಿದ್ದ:
ರಶೀದ್ ಮನೆಯಲ್ಲಿ‌ ಹಣ, ಒಡವೆಗಳಿರುವ ವಿಚಾರವನ್ನ ಸಹೋದರನ ಮುಂದೆ ಹೇಳಿದ್ದಳು. ಈ ಹಿಂದೆ ಕೆಲಸ ಮಾಡಿದ್ದ ಮನೆಯಾದ್ದರಿಂದ ಸಲೀಸಾಗಿ ಬೀಗ ಒಡೆದು ಮಸೂದ್ ಕಳ್ಳತನ ಮಾಡಿದ್ದ. ಲಾಕ್​ಡೌನ್ ಸಂದರ್ಭದಲ್ಲಿ ಕದ್ದ ಮಾಲು‌ ಮಾರಲಾಗದೆ ಪರದಾಡುತ್ತಿದ್ದ. ಕಳ್ಳತನ ಸಂಬಂಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಮಾಲೀಕನ ಭಾವನೇ ಕಳ್ಳ ಎಂಬುದು ಪತ್ತೆಯಾಗಿದೆ. ಪರಸ್ಪರ ರಾಜಿಯಾಗಲು ಆರೋಪಿ ಹಾಗೂ ಮನೆ ಮಾಲೀಕ ಮುಂದಾಗಿದ್ದರು. ಅಷ್ಟರಲ್ಲಿ‌ ಆರೋಪಿ ಮಸೂದ್​ನನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 6 ಲಕ್ಷ ನಗದು, 171 ಗ್ರಾಂ ಚಿನ್ನ, ಮೈಕ್ರೋ ಓವೆನ್, ಸೀರೆಗಳು, ಆಸ್ತಿ ಪತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Related Posts :

Category:

error: Content is protected !!