ಸ್ವಾಮಿ ಹರ್ಷಾನಂದರ ಸ್ಮರಣೆ | ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಎಂಬಂತಿದ್ದರು ಗುರುಗಳು

ಅವರ ಕೊಠಡಿಯ ತುಂಬಾ ಗ್ರಂಥಗಳು, ಹಸ್ತಪ್ರತಿಗಳು ಇರುತ್ತಿದ್ದವು. ಆಗ, ನಮಗೆಲ್ಲಾ ಅವರ ಕೆಲಸಗಳು ಗೊತ್ತಾಗುತ್ತಿರಲಿಲ್ಲ. ಅರ್ಥವಾಗುತ್ತಿರಲಿಲ್ಲ. ಏನು ಇಷ್ಟೊಂದು ಕೆಲಸ ಮಾಡುತ್ತಿದ್ದಾರೆ ಎಂದು ಅನಿಸುತ್ತಿತ್ತು. ಆದರೆ, ಈಗ ಗಮನಿಸಿದರೆ ಎಲ್ಲವೂ ತಿಳಿಯುತ್ತದೆ.

  • TV9 Web Team
  • Published On - 18:30 PM, 12 Jan 2021
ಸ್ವಾಮಿ ಹರ್ಷಾನಂದರೊಂದಿಗೆ ಸ್ವಾಮಿ ಜಪಾನಂದರು

ಸ್ವಾಮಿ ಹರ್ಷಾನಂದರ ವ್ಯಕ್ತಿತ್ವದ ಭಾಗವೇ ಆಗಿದ್ದ ಸಾಧನೆಯ ಮಗ್ಗುಲನ್ನು ಈ ಲೇಖನದಲ್ಲಿ ಪರಿಚಯಿಸಿದ್ದಾರೆ ಪಾವಗಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ.

ಸನ್ಯಾಸ ಜೀವನವನ್ನು ಆರಂಭ ಮಾಡಿದಾಗ ನನಗೆ ಆರು ವರ್ಷ ಪ್ರಾಯ. ಅದು 1964ರ ಸಮಯ. ಇಂದು ಮಧ್ಯಾಹ್ನ ನಮ್ಮೆಲ್ಲರನ್ನೂ ಅಗಲಿದ ದಿವ್ಯ ಚೈತನ್ಯ, ಸ್ವಾಮಿ ಹರ್ಷಾನಂದ ಜೀ ಮಹಾರಾಜ್ ಅವರ ನೆರಳಲ್ಲಿ ಅಂದು ನಾನು ನನ್ನ ಜೀವನವನ್ನು ಅರಳಿಸಿದೆ. ಶಾಲೆಗೆ ಹೋಗುವ ಹುಡುಗ ನಾನು, ಆಶ್ರಮದ ಬಾಲ ಸಂಘಕ್ಕೆ ಸದಸ್ಯನಾದೆ. ಅಂದಿನಿಂದ ನನಗೆ ಸ್ವಾಮಿ ಹರ್ಷಾನಂದರ ಒಡನಾಟ ಒದಗಿತು. ಆಶ್ರಮದಲ್ಲಿ ನನ್ನನ್ನು ಆಪ್ಯಾಯತೆಯಿಂದ ಕರೆದು ಮಾತನಾಡಿಸಿ, ಆಶ್ರಯ ಕೊಟ್ಟರು. ಅದು ನನ್ನ ಸೌಭಾಗ್ಯ ಎಂದೇ ಭಾವಿಸುತ್ತೇನೆ.

ಹರ್ಷಾನಂದರು, ಮಾತೃಹೃದಯಿ. ಸಣ್ಣ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಬೆರೆತು, ತಮ್ಮ ಹಿರಿತನ ಮರೆತು ನಮ್ಮೆಲ್ಲರನ್ನೂ ಸಂತೈಸಿದ ಸಾಧು. 1964ರಿಂದ 74ರ ಅವಧಿಯಲ್ಲಿ ನಾನು ಸ್ವಾಮಿಗಳೊಂದಿಗೆ ಅತ್ಯಂತ ನಿಕಟವಾಗಿದ್ದೆ. ವೇದಪಾಠದ ಆರಂಭವನ್ನು ನಾನು ಅವರಿಂದ ಪಡೆದೆ. ವೇದಪಾಠದ ಓಂಕಾರವನ್ನು ಅವರಿಂದ ಕಲಿತೆ. ಬಳಿಕ, ಕೀರ್ತನೆಗಳನ್ನು, ಭಜನೆಗಳನ್ನು, ಶ್ರೀರಾಮಕೃಷ್ಣರ, ಪುರಂದರದಾಸರ, ಕನಕದಾಸರ ಕೀರ್ತನೆಗಳನ್ನು ಪೂಜ್ಯರಿಂದ ಕಲಿತೆ. ಆ ಭಾಗ್ಯ ನನಗೆ ದೊರಕಿತು.

ಸನ್ಯಾಸತ್ವ ಸ್ವೀಕರಿಸುವ ನಿಟ್ಟಿನಲ್ಲಿ, ಬ್ರಹ್ಮಚರ್ಯ ದೀಕ್ಷೆಯಲ್ಲಿ ಮೈಸೂರಿನಲ್ಲಿರುವ ಸಂದರ್ಭದಲ್ಲಿ, ಸ್ವಾಮಿ ಹರ್ಷಾನಂದರ ಅನೇಕ ರೀತಿಯ ತರಗತಿಗಳಲ್ಲಿ ಭಾಗವಹಿಸುವ ಅವಕಾಶವೂ ನನಗೆ ಸಿಕ್ಕಿತ್ತು. ಅವರು ಮೈಸೂರಿನ ಶ್ರೀರಾಮಕೃಷ್ಣ ಇನ್ಟ್​ಟಿಟ್ಯೂಟ್ ಆಫ್ ಮಾರಲ್ ಮತ್ತು ಸ್ಪಿರಿಚುವಲ್ ಸಂಸ್ಥೆಯಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದರು. ಹಿಂದೂ ಧರ್ಮದ ವಿಚಾರಗಳನ್ನು ಹಾಗೂ ಪರಂಪರೆಯನ್ನು ಉಳಿಸುವ ನೆಲೆಯಲ್ಲಿ ಹರ್ಷಾನಂದ ಸ್ವಾಮಿಗಳು ಅಷ್ಟೂ ಕೆಲಸವನ್ನು ಮಾಡುತ್ತಿದ್ದರು. ನಾನು ನೋಡಿದ ಪ್ರಕಾರ ಈ ನೆಲೆಯಲ್ಲಿ, ಹರ್ಷಾನಂದ ಸ್ವಾಮಿಗಳು ಮಾಡಿದಷ್ಟು ಕೆಲಸವನ್ನು ಮತ್ಯಾರೂ ಮಾಡಿಲ್ಲ ಎಂದು ಘಂಟಾಘೋಷವಾಗಿ ಹೇಳಬಲ್ಲೆ.

ಅವರ ಬರವಣಿಗೆ ಶೈಲಿ ಸೊಗಸಾಗಿತ್ತು. ಅಕ್ಷರಗಳು ಬಹಳ ಸುಂದರವಾಗಿತ್ತು. ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ, ಬೆಂಗಾಲಿ ಭಾಷೆಗಳನ್ನು ಅದ್ಭುತವಾಗಿ ಬರೆಯುತ್ತಿದ್ದರು. ಬಹುಶಃ ಹರ್ಷಾನಂದ ಸ್ವಾಮೀಜಿ, ಸರಸ್ವತಿಯ ವರಪುತ್ರರೇ ಆಗಿದ್ದರು. ಅವರ ಕೊಠಡಿಯ ತುಂಬಾ ಗ್ರಂಥಗಳು, ಹಸ್ತಪ್ರತಿಗಳು ಇರುತ್ತಿದ್ದವು. ಆಗ, ನಮಗೆಲ್ಲಾ ಅವರ ಕೆಲಸಗಳು ಗೊತ್ತಾಗುತ್ತಿರಲಿಲ್ಲ. ಅರ್ಥವಾಗುತ್ತಿರಲಿಲ್ಲ. ಏನು ಇಷ್ಟೊಂದು ಕೆಲಸ ಮಾಡುತ್ತಿದ್ದಾರೆ ಎಂದು ಅನಿಸುತ್ತಿತ್ತು. ಆದರೆ, ಈಗ ಗಮನಿಸಿದರೆ ಎಲ್ಲವೂ ತಿಳಿಯುತ್ತದೆ.

ಧರ್ಮದ ಪುನರುರತ್ಥಾನದ ಕೆಲಸಕ್ಕೆ ಯಾವುದೇ ಸದ್ದಿಲ್ಲದೆ, ಆಡಂಬರ, ಜಾಹೀರಾತು ಇಲ್ಲದೆ, ತಮ್ಮ ಜೀವನವನ್ನೇ ಸಮರ್ಪಿಸಿದರು. ಹಿಂದೂ ಧರ್ಮದ ಬಗ್ಗೆ ಈ ಮಹಾಪುರುಷ ಮಾಡಿದ ಕೆಲಸ ಅಂಥದ್ದು. ಒಂದು ಗ್ರಂಥವಿದೆ. ಎ ಕಾನ್ಸೈಸ್ ಎನ್ಸೈಕ್ಲೋಪೀಡಿಯಾ ಆಫ್ ಹಿಂದೂಯಿಸಮ್ ಎಂದು. ಮೂರು ವಿಭಾಗದಲ್ಲಿ ಅದನ್ನು ಅಂದಿನ ರಾಷ್ಟ್ರಪತಿಗಳಾದ, ಅಬ್ದುಲ್ ಕಲಾಂ ಬಿಡುಗಡೆಗೊಳಿಸಿದರು. ಆ ಗ್ರಂಥ ರಚನೆಗೆ ಸ್ವಾಮೀಜಿ ಸುಮಾರು ಇಪ್ಪತ್ತೈದು ವರ್ಷ ವ್ಯಯಿಸಿದ್ದಾರೆ. ಅವರ ಚಿಂತನೆ, ದಾರಿಗಳೆಲ್ಲವೂ ಇಲ್ಲಿ ಅರ್ಥವಾಗುತ್ತದೆ. ಹರ್ಷಾನಂದರು, ಸುಂದರವಾಗಿ ಹಾಡಬಲ್ಲವರೂ ಆಗಿದ್ದರು. ಉತ್ತರಾದಿಯಲ್ಲಿ, ದಕ್ಷಿಣಾದಿಯಲ್ಲಿಯೂ ಹಾಡಬಲ್ಲವರಾಗಿದ್ದರು.

ಹರ್ಷಾನಂದರು ಸ್ವಾಮಿ ವಿರಜಾನಂದರ ಶಿಷ್ಯ. ವಿರಜಾನಂದರು, ಸ್ವಾಮಿ ವಿವೇಕಾನಂದರ ನಿಕಟ ಶಿಷ್ಯರಲ್ಲಿ ಒಬ್ಬರಾಗಿದ್ದರು. ಇಂದು ಹರ್ಷಾನಂದರನ್ನು ಕಳೆದುಕೊಂಡ ನಾವು ಅಂಥ ಅದ್ಭುತ ಪರಂಪರೆಯ ಕೊಂಡಿಯನ್ನು, ಕಳೆದುಕೊಂಡೆವು. ಅವರ ತಪಸ್ಸು, ಅಧ್ಯಯನ, ಸ್ವಾಧ್ಯಾಯ, ಪ್ರವಚನ, ಧ್ಯಾನ, ಜಪಗಳನ್ನು ಉಸಿರಾಗಿಟ್ಟುಕೊಂಡು ಬದುಕಿದವರನ್ನು ನಾವು ಕಳೆದುಕೊಂಡೆವು.

ಹರ್ಷಾನಂದರ ಬಗ್ಗೆ ಮೊದಲೇ ತಿಳಿದಿಲ್ಲ ಎಂದರೆ, ಅವರು ಹಾಗೆಯೇ ಇದ್ದರು ಎಂದರ್ಥ. ಮನವನನುಗೊಳಿಸು ಗುರುವೇ, ವನಸುಮದೊಳೆನ್ನ ಜೀವನವು ಎಂಬಂತೆ ಇದ್ದವರು ಹರ್ಷಾನಂದರು. ಸ್ವಾಮಿಗಳು ಭಾಷಾ ಪಾಂಡಿತ್ಯ ಹೊಂದಿದ್ದರು. ಬರೆದ ಗ್ರಂಥಗಳದ್ದು ದೊಡ್ಡ ಪಟ್ಟಿಯೇ ಇದೆ. ಹೀಗೆ, ವಿವಿಧ ಪಾಂಡಿತ್ಯ ಹೊಂದಿದ್ದರೂ ಬಹಳ ಸರಳವಾಗಿ ಬದುಕಿದ್ದರು. ಅವರ ಅಧ್ಯಾತ್ಮಿಕ ಜೀವನವನ್ನು ಹತ್ತಿರದಿಂದ ನಾವು ನೋಡಿದ್ದೇವೆ. ಜಪ, ಧ್ಯಾನವೇ ಅವರ ಉಸಿರಾಗಿತ್ತು. ಅಂಥಾ ಮಹಾಪುರುಷರ ಸಂಗ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಹೇಳಬೇಕಷ್ಟೇ.

ಶ್ರೀರಾಮಕೃಷ್ಣರ, ಶಾರದಾಮಾತೆಯವರ, ಸ್ವಾಮಿ ವಿವೇಕಾನಂದರ ಆಶೀರ್ವಾದ ಸ್ವಾಮಿ ಹರ್ಷಾನಂದರ ಮೇಲಿತ್ತು. ಅಧ್ಯಾತ್ಮಿಕ ಪಥದಲ್ಲಿ ಬಹಳ ಅನುಭವ ಪಡೆದ ತ್ಯಾಗಿಗಳು, ತೇಜಸ್ಚಿಗಳು, ಸಾಧು, ಸನ್ಯಾಸಿಗಳು ಹರ್ಷಾನಂದರು. ಸನ್ಯಾಸಿ ಜೀವನ ಹೇಗಿರಬೇಕು ಅಂದರೆ ಅವರನ್ನು ಕಂಡರೆ ತಿಳಿಯುತ್ತದೆ. ಅಂಥ ಸ್ವಾಮಿಗಳನ್ನು ಕಳೆದುಕೊಂಡ ನನ್ನಂಥವರು ನಿಜವಾಗಿಯೂ ಅನಾಥರಾಗಿದ್ದೇವೆ. ಭಾರತೀಯ ಪರಂಪರೆಯು ಬಡವಾಯಿತು.

ಸ್ವಾಮಿ ಜಪಾನಂದರು, ಸ್ವಾಮಿ ಹರ್ಷಾನಂದರಿಗೆ ಬರೆದ ಪತ್ರ

ಸ್ವಾಮಿ ಹರ್ಷಾನಂದರ ಹಸ್ತಾಕ್ಷರವಿರುವ ಪುಸ್ತಕ

ಸ್ವಾಮಿ ಹರ್ಷಾನಂದರು ಹಾಗೂ ಸ್ವಾಮಿ ಜಪಾನಂದರು

ಸ್ವಾಮಿ ಹರ್ಷಾನಂದರು ಹಾಗೂ ಸ್ವಾಮಿ ಜಪಾನಂದರು

(ನಿರೂಪಣೆ: ಗಣಪತಿ ದಿವಾಣ)

ವಿವೇಕಾನಂದರ ಜನ್ಮ ದಿನವಾದ ಇಂದೇ ಇಹಲೋಕ ತ್ಯಜಿಸಿದ ಸ್ವಾಮಿ ಹರ್ಷಾನಂದ

ಸ್ವಾಮಿ ಹರ್ಷಾನಂದರ ನೆನಪು | ಸದಾ ಪ್ರೋತ್ಸಾಹ, ಸ್ಫೂರ್ತಿ ನೀಡುತ್ತಿದ್ದ ಹಿರಿಯ ಸೋದರ

ನಿತ್ಯ ಬಳಸುವ ಪದಗಳಿಗೆ ಭಾವ-ಜೀವ ತುಂಬಿದ್ದ ಅಪರೂಪದ ಅಧ್ಯಾತ್ಮ ಸಾಧಕ ಸ್ವಾಮಿ ಹರ್ಷಾನಂದ ಮಹಾರಾಜ್