ನೆರೆ ಬರೆಯಲ್ಲಿ ನರಳುತ್ತಿರೋರಿಗೆ ಮತ್ತೊಂದು ಬರೆ, ಸಾಲ ಕಟ್ಟುವಂತೆ ರೈತರಿಗೆ ವಾರ್ನಿಂಗ್

ಬೆಳಗಾವಿ: ಅದು ಅಂತಿಂಥ ಜಲಪ್ರಳಯವಲ್ಲ.. ದಶಕಗಳಿಂದಲೂ ಕಟ್ಟಿದ್ದ ಕನಸಿನ ಸೂರೇ ಕೊಚ್ಚಿಹೋದ ಗಳಿಗೆ.. ಜಮೀನೇ ಮರೆಯಾದ ಸಂದರ್ಭ.. ಜೀವ ಉಳಿಸಿಕೊಂಡಿದ್ದೇ ಸವಾಲು ಅಂತಾ ಅವ್ರೆಲ್ಲಾ ಕಣ್ಣೀರಲ್ಲೇ ಬದುಕ್ತಿದ್ರೆ ಬ್ಯಾಂಕ್​ ಸಾಲ ಅವ್ರನ್ನ ಮತ್ತಷ್ಟು ಕಾಡುತ್ತಿದೆ..

ನಗು ಮರೆಯಾಗಿದೆ.. ದೇಹ ಸೊರಗಿದೆ.. ಇಷ್ಟಾದ್ರೂ ಬದುಕಲು ಬಿಡ್ತಿಲ್ವಲ್ಲಾ ಅನ್ನೋ ನೋವು ಇವ್ರನ್ನ ಕಾಡ್ತಿದೆ.. ಅದೇ ನೋವು ಕಿಚ್ಚಾಗಿ ಬೀದಿಗಿಳಿಯುವಂತೆ ಮಾಡಿದೆ.. ಕೈಯಲ್ಲಿ ಪಾಸ್​ಬುಕ್ ಹಿಡಿದು ಬದುಕಲು ಬಿಡಿ ಅಂತಾ ಆಕ್ರೋಶ ಹೊರ ಹಾಕ್ತಿದ್ದಾರೆ..

ನೆರೆ ಬರೆಯಲ್ಲಿ ನರಳ್ತಿದ್ರೂ ಬ್ಯಾಂಕ್ ಅಧಿಕಾರಿಗಳ ಟಾರ್ಚರ್:
ಅಷ್ಟಕ್ಕೂ ಈ ಕಿಚ್ಚು ಹತ್ತಿದ್ದು ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಮುಂಭಾಗ.. ಐದು ತಿಂಗಳ ಹಿಂದಷ್ಟೇ ಮಹಾಪ್ರವಾಹಕ್ಕೆ ಬೆಳಗಾವಿ ಜಿಲ್ಲೆ ಮಂದಿ ಮನೆ, ಜಮೀನು, ಜಾನುವಾರು ಎಲ್ಲವನ್ನೂ ಕಳ್ಕೊಂಡಿದ್ರು.. ಅಳಿದುಳಿದ ಮನೆಯಲ್ಲೇ ಹೇಗೋ ಬದುಕು ದೂಡ್ತಿದ್ರು. ಹೀಗಾಗಿ ಸರ್ಕಾರ ಕೂಡ ಬ್ಯಾಂಕ್​ನವ್ರು ಬೆಳೆ ಸಾಲ ಸೇರಿದಂತೆ ಟ್ರ್ಯಾಕ್ಟರ್ ಸಾಲ ಪಡೆದಿದ್ದ ನೆರೆ ಸಂತ್ರಸ್ತರು ಸಾಲ ಮರಳಿಸಲು ಕಾಲಾವಕಾಶ ನೀಡಬೇಕೆಂದು ಸೂಚಿಸಿತ್ತು.. ಇಷ್ಟಾದ್ರೂ ಬ್ಯಾಂಕ್​ನವರು ನೆರೆ ಸಂತ್ರಸ್ತರಿಗೆ ನೋಟಿಸ್ ನೀಡಿದ್ರು. ಸಾಲ್ದು ಅಂತಾ ಸ್ವತಃ ಅಧಿಕಾರಿಗಳೇ ಫೀಲ್ಡಿಗಿಳಿದು ಸಾಲ ಕಟ್ಟಲು ವಾರ್ನ್ ಮಾಡುತ್ತಿದ್ದಾರೆ. ಹೀಗಾಗಿ ಸಾಲ ಮರುಪಾವತಿಗೆ ಕಾಲಾವಕಾಶ ನೀಡದಿದ್ರೆ ಆತ್ಮಹತ್ಯೆಯೊಂದೇ ದಾರಿ ಅಂತಿದ್ದಾರೆ ರೈತರು.

ಮತ್ತೊಂದೆಡೆ ರೈತರ ಅಕೌಂಟ್​ಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎರಡನೇ ಕಂತಿನ 2ಸಾವಿರ ರೂಪಾಯಿ ಹಣವನ್ನ ಕೇಂದ್ರ ಸರ್ಕಾರ ಜಮೆ ಮಾಡಿತ್ತು. ಇತ್ತ ಕೆಲ ರೈತರಿಗೆ ಫಸಲ್ ಭೀಮಾ ಯೋಜನೆ ಹಣವು ಕೂಡ ಜಮಾವಣೆಯಾಗಿತ್ತು. ಆದ್ರೆ ಬ್ಯಾಂಕ್​ಗೆ ಹೋಗಿ ಈ ಬಗ್ಗೆ ವಿಚಾರಿಸಿದ್ರೆ ನಿಮ್ಮ ಸಾಲದ ಖಾತೆಗೆ ಹಣ ಜಮಾ ಮಾಡಿಕೊಂಡಿದ್ದೇವೆ. ಹಣ ಕೊಡಲ್ಲ ಅಂದಿದ್ದಾರೆ. ಈ ಕಾರಣಕ್ಕೆ ಕೆಲ ರೈತರು ಬೆಳಗಾವಿ ನಗರದಲ್ಲಿರುವ ಲೀಡ್ ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡಿ ಲೀಡ್ ಬ್ಯಾಂಕ್ ಮ್ಯಾನೇಜರ್​ಗೆ ಮನವಿ ಸಲ್ಲಿಸಿದ್ರು. ಇಷ್ಟಾದ್ರೂ ಹಣ ಮಾತ್ರ ರೈತರಿಗೆ ಕೊಡದೆ ಸಾಲಕ್ಕೆ ಜಮಾ ಮಾಡ್ತಿದ್ದಾರೆ. ಈ ಬಗ್ಗೆ ಕಿತ್ತೂರ ತಹಶೀಲ್ದಾರ್​ರನ್ನ ಕೇಳಿದ್ರೆ ಬ್ಯಾಂಕ್​ಗಳಿಗೆ ಲಿಖಿತ ಆದೇಶ ಕೊಡ್ತೀವಿ ಅಂತಿದ್ದಾರೆ.

ಒಂದು ಕಡೆ ಸರ್ಕಾರ ಸದ್ಯಕ್ಕೆ ಸಾಲ ವಸೂಲಿ ಮಾಡಬೇಡಿ ಅಂತಿದ್ರೆ ಅಧಿಕಾರಿಗಳೆಲ್ಲ ಅಖಾಡಕ್ಕಿಳಿದು ವಸೂಲಿಗೆ ಮುಂದಾಗಿದ್ದಾರೆ. ಇತ್ತ ಭವಿಷ್ಯದ ದಿಕ್ಕೇ ತೋಚದೆ ಕುಂತಿರೋ ರೈತರು ಮತ್ತಷ್ಟು ದಿಗಿಲಿಗೆ ಬಿದ್ದಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more