Bengaluru: ಅತ್ಯುತ್ತಮ ಜಾಗತಿಕ ತಂತ್ರಜ್ಞಾನ ಆವಿಷ್ಕಾರ ಕೇಂದ್ರಗಳಲ್ಲಿ ಬೆಂಗಳೂರಿಗೆ ಎಂಟನೇ ಸ್ಥಾನದ ಗರಿ
Technology Innovation Hub: ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ತಂತ್ರಜ್ಞಾನ ಆವಿಷ್ಕಾರ ಕೇಂದ್ರಗಳಲ್ಲಿ ಬೆಂಗಳೂರು 8ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಎಂದು ಕೆಪಿಎಂಜಿ(KPMG) ವರದಿ ತಿಳಿಸಿದೆ. ಹಾಗೆಯೇ ಭಾರತವು ಪರ್ಯಾಯ ತಂತ್ರಜ್ಞಾನಕ್ಕೆ(Disruptive Technology) ಪ್ರೋತ್ಸಾಹಿಸುವ ದೇಶಗಳಲ್ಲಿ ಸತತ ಎರಡನೇ ಬಾರಿಗೆ ಮೂರನೇ ಸ್ಥಾನ ಪಡೆದಿದೆ.
ಬೆಂಗಳೂರು: ವಿಶ್ವದ ಐಟಿ ಹಬ್ ಎಂದು ಕರೆಯಲಾಗುವ ಸ್ಯಾನ್ಫ್ರಾನ್ಸಿಸ್ಕೊದ ‘ಸಿಲಿಕಾನ್ ವ್ಯಾಲಿ’ಯನ್ನು ಹೊರತುಪಡಿಸಿದರೆ ವಿಶ್ವದ ಅತ್ಯತ್ತಮ ತಂತ್ರಜ್ಞಾನ ಆವಿಷ್ಕಾರ ಕೇಂದ್ರಗಳು(technology innovation hubs) ಎಂದು ಕರೆಯಬಹುದಾದ ಹತ್ತು ನಗರಗಳನ್ನು ಕೆಪಿಎಮ್ಜಿ(KPMG) ಪಟ್ಟಿ ಮಾಡಿದೆ. ಅದರಲ್ಲಿ ಲಂಡನ್, ಸಿಂಗಾಪುರ ಮೊದಲಾದ ನಗರಗಳೊಂದಿಗೆ ಬೆಂಗಳೂರು ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಬೆಳವಣಿಗೆಯಾಗಬಹುದಾದ ಸಾಧ್ಯತೆಯನ್ನೂ ಅಂದಾಜಿಸಿ ಈ ಪಟ್ಟಿ ತಯಾರಿಸಲಾಗಿದ್ದು, ಪರ್ಯಾಯ ತಂತ್ರಜ್ಞಾನವನ್ನು(Disruptive Technology) ಪ್ರೋತ್ಸಾಹಿಸುವ ದೇಶ/ ನ್ಯಾಯಾಂಗ ವ್ಯವಸ್ಥೆಗಳಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.
(Disruptive Technology/ ಪರ್ಯಾಯ ತಂತ್ರಜ್ಞಾನವೆಂದರೆ ಈಗಾಗಲೇ ಲಭ್ಯವಿರುವ ತಂತ್ರಜ್ಞಾನವನ್ನು ಮತ್ತಷ್ಟು ಬಲಪಡಿಸಿ, ಸುಲಭವಾಗಿಸಿ ಹೊಸ ಗ್ರಾಹಕರನ್ನು/ ಅತೀ ಹೆಚ್ಚು ಜನರನ್ನು ತಲುಪುವುದು. ಈ ಪ್ರಕ್ರಿಯೆ ಈ ಹಿಂದೆ ಇದ್ದ ಮಾರುಕಟ್ಟೆಯ ಗಾತ್ರವನ್ನು ಹಿಗ್ಗಿಸುವುದಲ್ಲದೇ, ಹಳೆಯ ಕಾಲದಿಂದ ಲಭ್ಯವಿದ್ದ ತಂತ್ರಜ್ಞಾನಗಳನ್ನು ಮಾರ್ಪಡಿಸಿ ಹೊಸ ತಂತ್ರಜ್ಞಾನಗಳನ್ನು ಜನರಿಗೆ ಪರಿಚಯಿಸುತ್ತದೆ. ಉದಾಹರಣೆಗೆ ಇ- ಕಾಮರ್ಸ್, ಡಿಜಿಟಲ್ ಸುದ್ದಿ ಮಾಧ್ಯಮಗಳು ಇತ್ಯಾದಿ)
ವರದಿಯಲ್ಲಿ ಭಾರತ ಮತ್ತು ಬೆಂಗಳೂರಿಗೆ ಶಹಬ್ಬಾಸ್ ಗಿರಿ ಸಿಕ್ಕಿದ್ದೇಕೆ?
‘ತಂತ್ರಜ್ಞಾನ ಆವಿಷ್ಕಾರ ಕೇಂದ್ರಗಳು’ (Technology Innovation Hubs) ಎಂಬ ಶೀರ್ಷಿಕೆಯಡಿಯಲ್ಲಿ 800ಕ್ಕೂ ಅಧಿಕ ಮಾರುಕಟ್ಟೆ ಪ್ರಮುಖರನ್ನು ಒಳಗೊಂಡು ಸರ್ವೆಯನ್ನು ನಡೆಸಲಾಗಿದ್ದು, ಅದರ ಆಧಾರದಲ್ಲಿ ವಾರ್ಷಿಕ ವರದಿಯನ್ನು ನೀಡಲಾಗಿದೆ. ಕೊವಿಡ್-19 ಸಾಂಕ್ರಾಮಿಕವು ಕೆಲಸ ಮಾಡುವ ಕುರಿತಂತೆ ಹಲವು ಪ್ರಯೋಗಗಳನ್ನೂ, ಬದಲಾವಣೆಗಳನ್ನೂ ನಡೆಸುವುದಕ್ಕೆ ದಾರಿ ಮಾಡಿಕೊಟ್ಟಿದೆ. ಅದಾಗ್ಯೂ, ತಂತ್ರಜ್ಞಾನ ಕೇಂದ್ರಗಳು ತಮ್ಮ ಮೂಲ ಬೆಲೆಯನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೇ, ಅವು ‘ಸಿಲಿಕಾನ್ ವ್ಯಾಲಿ’ (ಸಿಲಿಕಾನ್ ವ್ಯಾಲಿಯೆಂದರೆ ಅಮೆರಿಕಾದಲ್ಲಿ ವಿಶ್ವದ ಪ್ರತಿಷ್ಠಿತ ಕಂಪನಿಗಳು ಕಛೇರಿ ಹೊಂದಿರುವ ಸ್ಥಳ)ಯಲ್ಲಿ ಇಲ್ಲದಿದ್ದರೂ ಸಹ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನದಲ್ಲಿರಬಹುದು ಎಂದು ವರದಿ ತಿಳಿಸಿದೆ.
“ಭಾರತವು ಸತತ ಎರಡನೇ ಬಾರಿಗೆ ಪರ್ಯಾಯ ತಂತ್ರಜ್ಞಾನವನ್ನು ಬೆಂಬಲಿಸಿ, ಪ್ರೋತ್ಸಾಹಿಸುವ ದೇಶಗಳಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನವನ್ನು ಗಳಿಸಿದೆ. ಭಾರತದಲ್ಲಿರುವ ಸುವ್ಯವಸ್ಥಿತ ಐಟಿ ಹಬ್ಗಳು ಈ ಬೆಳವಣಿಗೆಗೆ ಸಹಾಯಕವಾಗಿವೆ. ಅದರಲ್ಲೂ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಎಂಟನೇ ಸ್ಥಾನ ಪಡೆಯುವಷ್ಟು ಸುವ್ಯವಸ್ಥೆಯನ್ನು ಹೊಂದಿದೆ” ಎಂದು ಟೆಕ್ನಾಲಜಿ, ಮೀಡಿಯಾ ಮತ್ತು ಟೆಲಿಕಾಂ, ಕೆಪಿಎಂಜಿಯ ಮುಖ್ಯಸ್ಥರಾದ ಸತ್ಯ ಈಶ್ವರನ್ ತಿಳಿಸಿದ್ದಾರೆ.
“ಬೆಂಗಳೂರಿನಲ್ಲಿ ಲಭ್ಯವಿರುವ ಮೂಲಸೌಕರ್ಯ ಮತ್ತು ಸಂಪನ್ಮೂಲಗಳು ವಿಶ್ವದ ಅತ್ಯುತ್ತಮ ಕಂಪನಿಗಳಿಗೆ ಸಹಾಯಕವಾಗಿದ್ದು, ನಗರದಿಂದ ಕಾರ್ಯನಿರ್ವವಹಿಸಲು ಅನುಕೂಲ ಮಾಡಿಕೊಟ್ಟಿವೆ. ಅಲ್ಲದೇ ಹೂಡಿಕೆದಾರರಿಗೆ ಯಾವುದೇ ಹಂತದಲ್ಲಿರುವ ಕಂಪೆನಿಗೆ ಹಣ ಹೂಡಲು ಬೆಂಗಳೂರಿನಲ್ಲಿ ಸಾಧ್ಯವಿದೆ. ಈ ಎಲ್ಲಾ ಕಾರಣಗಳಿಂದ ಮುಂದಿನ ದಿನಗಳಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಉತ್ತುಂಗಕ್ಕೇರಲಿದೆ ಎಂಬ ವಿಶ್ವಾಸವಿದೆ ” ಎಂದು ಈಶ್ವರನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಿಮೋಟ್ ಮಾದರಿಯಲ್ಲಿ ಕೆಲಸ ಸಾಗುತ್ತಿರುವಾಗ ಐಟಿ ಹಬ್ಗಳು ಇನ್ನು ಮುಂದೆಯೂ ಪ್ರಮುಖವಾಗಿವೆಯೇ?
ವರದಿಯ ಪ್ರಕಾರ, 39ಪ್ರತಿಶತ ಜನರು ಲಂಡನ್, ಸಿಂಗಾಪುರ್ ಮೊದಲಾದ ಐಟಿ ಕೇಂದ್ರಗಳು ಜಾಗತಿಕ ಮಟ್ಟದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡು ಮುಂದುವರೆಯಲಿವೆ ಎಂದು ಅಭಿಪ್ರಾಯಪಟ್ಟರೆ, 22ಪ್ರತಿಶತ ಜನರು ಇನ್ನು ಮುಂದೆ ಐಟಿ ಕೇಂದ್ರಗಳು ಮುಖ್ಯ ಪಾತ್ರವನ್ನು ಹೊಂದಿರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಯ ಮುಖ್ಯಸ್ಥರಲ್ಲಿ 80ಪ್ರತಿಶತ ನಾಯಕರು ತಮ್ಮ ಐಟಿ ಕೇಂದ್ರಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, 26ಪ್ರತಿಶತ ನಾಯಕರು ಮಾತ್ರ ಸಂಪೂರ್ಣವಾಗಿ ರಿಮೋಟ್ ಶೈಲಿಯಲ್ಲಿ ಕೆಲಸಗಾರರನ್ನು ನೇಮಿಸಿಕೊಳ್ಳಲು ಆಸಕ್ತಿ ತೋರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಕರೊನಾ ಸಾಂಕ್ರಾಮಿಕದ ಕಾರಣ, ಉಳಿದೆಲ್ಲಾ ಉದ್ಯಮಗಳು ನೆಲ ಕಚ್ಚಿದ್ದರೆ, ಐಟಿ ಕ್ಷೇತ್ರ ಮಾತ್ರ ಮುನ್ನುಗ್ಗುತ್ತಿದೆ. ಪ್ರಸ್ತುತ ಲಭ್ಯವಿರುವ ತಂತ್ರಜ್ಞಾನದಿಂದಾಗಿ ವಿಶ್ವದ ಯಾವುದೇ ಮೂಲೆಯಲ್ಲೂ ಹೊಸ ಅನ್ವೇಷಣೆ ನಡೆಯುವ ಅವಕಾಶವಿದೆ. ಹೀಗಿದ್ದಾಗ್ಯೂ ಐಟಿ ಹಬ್ಗಳು ತಮ್ಮ ಮೂಲ ಬೆಲೆಯನ್ನು ಕಳೆದುಕೊಳ್ಳಲಾರವು ಮತ್ತು ಅವು ಕೇವಲ ಸಿಲಿಕಾನ್ ವ್ಯಾಲಿಗೆ ಸೀಮಿತವಾಗಿರಬೇಕಾಗಿಲ್ಲ ಎಂದು ಕೆಪಿಎಂಜಿಯ ಜಾಗತಿಕ ಮುಖ್ಯಸ್ಥ ಅಲೆಕ್ಸ್ ಹೋಲ್ಟ್ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟು 12 ದೇಶಗಳಲ್ಲಿ ಸರ್ವೆ ನಡೆಸಿ ವರದಿಯನ್ನು ಸಿದ್ಧಪಡಿಸಲಾಗಿದ್ದು, ಮಾರ್ಚ್ 2021ರಿಂದ ಮೇ 2021ರವರೆಗೆ ಅಧ್ಯಯನ ನಡೆಸಲಾಗಿದೆ.
ಕೃಪೆ: ದಿ ನ್ಯೂಸ್ ಮಿನಿಟ್
ಇದನ್ನೂ ಓದಿ: iPhone 12: ಐಫೋನ್ 12 ಮೇಲೆ ಭರ್ಜರಿ ಆಫರ್: 12 ಸಾವಿರ ರೂ. ಕಡಿಮೆಗೆ ಖರೀದಿಸಬಹುದು
ಇದನ್ನೂ ಓದಿ: SBI Customer Alert: ಎಸ್ಬಿಐನಿಂದ ಹೊಸ ನಿಯಮ; ಹೀಗೆ ಮಾಡದಿದ್ದಲ್ಲಿ YONO ಲಾಗ್ ಇನ್ ಅಸಾಧ್ಯ
(Bengaluru gets 8th place in global list of leading technology innovation hubs says KPMG report)