Cyber Fraud: ಮಿಸ್ಡ್ ಕಾಲ್ನಿಂದ 50 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ: ನಿಮಗೂ ಮಿಸ್ ಕಾಲ್ ಬರಬಹುದು: ಎಚ್ಚರ
Missed Calls: ಇದುವರೆಗೆ ವಿದ್ಯುತ್ ಬಿಲ್, ಓಟಿಪಿ (OTP) ಮೂಲಕ ಹಣ ದೋಚಿಕೊಳ್ಳುತ್ತಿದ್ದ ಖದೀಮರು ಇದೀಗ ಫೋನ್‌ಗೆ ಮಿಸ್ಡ್‌ಕಾಲ್ ಕೊಡುವ ಮೂಲಕವೂ ಹಣ ಖದಿಯುವ ರಹಸ್ಯ ದಾರಿಯನ್ನು ಹುಡುಕಿದ್ದಾರೆ.
ದೇಶದಲ್ಲಿ ಸೈಬರ್ ದರೋಡೆಕೋರರ (Cyber Fraud) ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ದಾಖಲಾಗುತ್ತಲೇ ಇದೆ. ಇದುವರೆಗೆ ವಿದ್ಯುತ್ ಬಿಲ್, ಓಟಿಪಿ (OTP) ಮೂಲಕ ಹಣ ದೋಚಿಕೊಳ್ಳುತ್ತಿದ್ದ ಖದೀಮರು ಇದೀಗ ಫೋನ್‌ಗೆ ಮಿಸ್ಡ್‌ಕಾಲ್ (Missed Call) ಕೊಡುವ ಮೂಲಕವೂ ಹಣ ಖದಿಯುವ ರಹಸ್ಯ ದಾರಿಯನ್ನು ಹುಡುಕಿದ್ದಾರೆ. ಈರೀತಿಯ ಹೊಸ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ದೆಹಲಿ ಮೂಲದ ವ್ಯಕ್ತಿಯೊಬ್ಬರು ಮಿಸ್ಡ್‌ಕಾಲ್ ಮೂಲಕ ಐವತ್ತು ಲಕ್ಷ ರೂ. ಕಳೆದುಕೊಂಡ ಬಗ್ಗೆ ವರದಿಯಾಗಿದೆ. ಸೈಬರ್ ಅಪರಾಧಗಳಿಗೆ ಕುಖ್ಯಾತವಾಗಿರುವ ಜಾರ್ಖಂಡ್‌ನ ಜಾಮತಾಡಾ ಪ್ರದೇಶದಿಂದಲೇ ಈ ವಂಚನೆ ನಡೆದಿದೆ.
ಅಚ್ಚರಿ ಎಂದರೆ, ಇಲ್ಲಿ ಯಾವುದೇ ಒಟಿಪಿ ಪಡೆಯದೇ ಖದೀಮರು ವ್ಯಕ್ತಿಯಿಂದ ಹಣಕ್ಕೆ ಕನ್ನ ಹಾಕಿರುವುದು ವಿಶೇಷ. ಮೋಸ ಹೋದ ವ್ಯಕ್ತಿಯ ಸ್ಮಾರ್ಟ್‌ಫೋನ್‌ಗೆ ಮಿಸ್ ಕಾಲ್ ನೀಡಿ ಹಣವನ್ನು ಎಗರಿಸಲಾಗಿದೆ. ಇದಕ್ಕಾಗಿ ಖದೀಮರು ಸಿಮ್ ಸ್ವ್ಯಾಪ್ ಮಾಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಘಟನೆಯು ಅಕ್ಟೋಬರ್ 10 ರಂದು ನಡೆದಿದ್ದು, ಈಗ ತಡವಾಗಿ ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡು ವ್ಯಕ್ತಿ, ದಕ್ಷಿಣ ದಿಲ್ಲಿಯ ಸೆಕ್ಯುರಿಟಿ ಸರ್ವೀಸ್ ಕಂಪನಿಯ ನಿರ್ದೇಶಕರಾಗಿದ್ದಾರೆ.
ಹಣ ಕಳೆದುಕೊಳ್ಳುವುದಕ್ಕೂ ಮುನ್ನ ವ್ಯಕ್ತಿಗೆ ರಾತ್ರಿ 7 ರಿಂದ 8.45 ರ ನಡುವೆ ಪದೇ ಪದೇ ಮಿಸ್ಡ್ ಕಾಲ್‌ಗಳು ಬಂದಿವೆ. ಮೊದಲಿಗೆ ಮಿಸ್ ಕಾಲ್‌ಗಳನ್ನು ನಿರ್ಲಕ್ಷ್ಯ ಮಾಡಿದ್ದ ವ್ಯಕ್ತಿ ನಂತರ ಒಂದು ನಂಬರ್‌ನಿಂದ ಬಂದ ಕರೆಯನ್ನು ಸ್ವೀಕರಿಸಿದ್ದಾರೆ. ಕರೆಯನ್ನು ಸ್ವಿಕರಿಸಿದಾಗ ಅತ್ತ ಕಡೆಯಿಂದ ಯಾರೂ ಮಾತನಾಡಲಿಲ್ಲ, ಬದಲಿಗೆ ಸ್ವಲ್ಪ ಸಮಯದ ನಂತರ ಅವರ ಮೊಬೈಲ್‌ಗೆ RTGS ಸಂದೇಶ ಬಂದಿದೆ. ಆರ್‌ಟಿಜಿಎಸ್ ಮೂಲಕ 50 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡ ವ್ಯಕ್ತಿಗೆ ತಮ್ಮ ಬ್ಯಾಂಕ್ ಅಕೌಂಟ್‌ನಿಂದ ಸಾಕಷ್ಟು ವಹಿವಾಟು ನಡೆದಿರುವ ಬಗ್ಗೆ ಬ್ಯಾಂಕ್‌ನಿಂದಲೇ ಸಾಕಷ್ಟು ಮೆಸೇಜ್‌ಗಳು ಈ ವೇಳೆ ಬಂದಿದ್ದವು. 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಹಲವಾರು ಆರ್‌ಟಿಜಿಎಸ್ ವಹಿವಾಟುಗಳನ್ನು ವಂಚಕರು ವ್ಯಕ್ತಿಯ ಕಂಪನಿಯ ಚಾಲ್ತಿ ಖಾತೆಯಿಂದ ನಡೆಸಿದ್ದಾರೆ.
Tech Tips: ನಿಮ್ಮ ಮೊಬೈಲ್ನಲ್ಲಿ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ವಾ?: ಈ ಟ್ರಿಕ್ ಫಾಲೋ ಮಾಡಿ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ‘ಸಿಮ್ ಸ್ವಾಪ್’ ನಡೆಸಿರಬಹುದು ಎಂದು ಶಂಕಿಸಿದ್ದಾರೆ. ಅವರು ಆರ್‌ಟಿಜಿಎಸ್ ವರ್ಗಾವಣೆ ಮಾಡಿ, ಒಟಿಪಿಗೆ ಎನೇಬಲ್ ಮಾಡಿರುವ ಸಾಧ್ಯತೆ ಇದೆ. ಐವಿಆರ್ ಮೂಲಕ ಒಟಿಪಿ ಹೇಳುತ್ತಿರುವುದನ್ನು ವಂಚಕರು ಪ್ಯಾರಲಲ್ ಕರೆಯ ಮೂಲಕ ಕೇಳಿಸಿಕೊಂಡಿರಬಹುದು. ಅದಕ್ಕಾಗಿಯೇ ಅವರು ಮಿಸ್ ಕಾಲ್ ನೀಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಸಿಮ್ ಸ್ವಾಪ್ ಎಂದರೇನು?:
ಸಿಮ್ ಸ್ವ್ಯಾಪ್ ಅಥವಾ ಸಿಮ್ ಕ್ಲೋನಿಂಗ್ ಎಂದರೆ, ಈಗಾಗಲೇ ಚಾಲ್ತಿಯಲ್ಲಿರುವ ಸಿಮ್ ಜೊತೆಗೆ ಮತ್ತೊಂದು ಬದಲಿ ಸಿಮ್ ಪಡೆದುಕೊಂಡು ಅವ್ಯವಹಾರ ಮಾಡುವುದಾಗಿದೆ. ಅಂದರೆ, ಸಿಮ್ ಎಂದರೆ ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್. ಕಾರ್ಡ್ ಪ್ರವೇಶ ಪಡೆಯಲು ಈ ನಂಬರ್ ಬೇಕೇಬೇಕು. ಗ್ರಾಹಕರು ತಮ್ಮ ಖಾತೆಗೆ ಈ ಮೊಬೈಲ್ ನಂಬರ್ ಸಂಯೋಜಿಸಿರುತ್ತಾರೆ. ಖದೀಮರು ಗ್ರಾಹಕರ ಬ್ಯಾಂಕ್ ಖಾತೆಗೆ ಸಂಪರ್ಕಗೊಂಡಿರುವ ನೋಂದಾಯಿತ ಮೊಬೈಲ್ ಸಂಖ್ಯೆಗೆ ನಕಲಿ ಸಿಮ್ ಕಾರ್ಡ್ (ಎಲೆಕ್ಟ್ರಾನಿಕ್-ಸಿಮ್ ಸೇರಿದಂತೆ) ಪಡೆದುಕೊಂಡಿರುತ್ತಾರೆ. ಆಗ, ಅನಧಿಕೃತ ವಹಿವಾಟು ನಡೆಸಲು ಈ ನಕಲಿ ಸಿಮ್‌ಗೆ ಬರುವ ಒಟಿಪಿಯನ್ನು ಬಳಸಿಕೊಳ್ಳುತ್ತಾರೆ. ಈ ರೀತಿಯ ಪ್ರಕರಣ ಇದೀಗ ಇಡೀ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಕೇವಲ ಮಿಸ್ಡ್ ಕಾಲ್ ಮೂಲಕ ಹಣ ವರ್ಗಾಯಿಸಿದ್ದು ಹೇಗೆ ಎಂಬ ಚರ್ಚೆ ಜೋರಾಗಿದೆ.
ಹೆಚ್ಚಿನ ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:38 pm, Tue, 13 December 22