ಇಂದಿನ ಡಿಜಿಟಲ್ ಯುಗದಲ್ಲಿ, ಮೊಬೈಲ್ ಫೋನ್ ಇಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಈ ಸಾಧನಗಳು ನಮ್ಮ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ನಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸುವುದರಿಂದ ಹಿಡಿದು ನಮ್ಮ ವ್ಯವಹಾರಗಳನ್ನು ನಡೆಸುವವರೆಗೆ ಸ್ಮಾರ್ಟ್‌ಫೋನ್ ಅತ್ಯಗತ್ಯ. ಆದಾಗ್ಯೂ, ಮೊಬೈಲ್ ಫೋನ್‌ಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂದು ನೀವು ಯೋಚಿಸಿದ್ದೀರಾ?, ಇದು ಮೊಬೈಲ್ ಮಾರುಕಟ್ಟೆಗೆ ಹೇಗೆ ಬರುತ್ತದೆ?. ಇಂಥ ಕುತೂಹಲಕಾರಿ ಪ್ರಶ್ನೆ ನಿಮ್ಮಲ್ಲಿದ್ದರೆ ಇದಕ್ಕೆ ಉತ್ತರ ಇಲ್ಲಿದೆ. ಈ ಸ್ಟೋರಿಯಲ್ಲಿ, ಮೊಬೈಲ್ ಫೋನ್ ಉತ್ಪಾದನಾ ಪ್ರಕ್ರಿಯೆಯ ಬಗ್ಗೆ ಹಂತ ಹಂತವಾಗಿ ಮಾಹಿತಿ ನೀಡುತ್ತೇವೆ.
ಹೊಸ ಸ್ಮಾರ್ಟ್‌ಫೋನ್ ಅನ್ನು ಉತ್ಪಾದಿಸುವ ಪ್ರಕ್ರಿಯೆ ಆಸಕ್ತಿದಾಯಕವಾಗಿದೆ. ನೂತನ ಫೋನನ್ನು ತಯಾರಿಸುವಾಗ, ಕಂಪನಿಯು ಹಿಂದಿನ ಮಾದರಿಗಳ ನ್ಯೂನತೆಗಳನ್ನು ಹುಡುಕುತ್ತದೆ. ಅಂದರೆ ತಾವು ಬಿಡುಗಡೆ ಮಾಡಿದ ಹಿಂದಿನ ಫೋನ್‌ನಲ್ಲಿ ಏನು ತಪ್ಪಾಯಿತು?, ಹೊಸತನ ಏನು ಇರಬೇಕಿತ್ತು? ಎಂಬ ಬಗ್ಗೆ ಎಕ್ಸ್ಪರ್ಟ್ಗಳಿಂದ ಪ್ರತಿಕ್ರಿಯೆ ತೆಗೆದುಕೊಂಡು ಬಳಿಕ ಹೊಸ ಫೋನಿನ ಕೆಲಸ ಶುರುಮಾಡುತ್ತದೆ.
ಸ್ಮಾರ್ಟ್‌ಫೋನ್‌ಗಳ ಉತ್ಪಾದನಾ ಪ್ರಕ್ರಿಯೆಯನ್ನು ತಿಳಿದುಕೊಳ್ಳುವ ಮೊದಲು, ಫೋನ್‌ನ ವಿವಿಧ ಘಟಕಗಳಲ್ಲಿ ಬಳಸುವ ಕೆಲವು ವಸ್ತುಗಳ ಬಗ್ಗೆ ತಿಳಿದಿರಬೇಕು. ಉದಾಹರಣೆಗೆ, ಹೊರಗಿನ ಪ್ಯಾನೆಲ್ ಅನ್ನು ಸಾಮಾನ್ಯವಾಗಿ ಗಟ್ಟಿಯಾದ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ (ಅಕ್ರಿಲೋನಿಟ್ರೈಲ್ ಬ್ಯುಟಾಡೀನ್ ಸ್ಟೈರೀನ್ (ABS) ಅಥವಾ ಪಾಲಿಕಾರ್ಬೊನೇಟ್). ಈ ಪ್ಲಾಸ್ಟಿಕ್ ತಾಪಮಾನದ ಏರಿಳಿತಗಳನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ಹೊಂದಿದೆ.
ಡಿಸ್ಪ್ಲೇಗಳು ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ ತಂತ್ರಜ್ಞಾನದಿಂದ (LCD) ಮಾಡಲ್ಪಟ್ಟಿವೆ, ಇದು ಮೂಲತಃ ತೆಳುವಾದ ಗಾಜಿನ ಹಾಳೆಗಳಿಂದ ಕೂಡಿರುತ್ತವೆ. ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಯನ್ನು ಹೆಚ್ಚಾಗಿ ಲಿಥಿಯಂ ಅಯಾನ್, Ni-Cd ಅಥವಾ Ni-MH ನಿಂದ ತಯಾರಿಸಲಾಗುತ್ತದೆ. ಸ್ಮಾರ್ಟ್‌ಫೋನ್ ಬ್ಯಾಟರಿಗಳು ತಾಮ್ರ, ನಿಕಲ್, ಲಿಥಿಯಂ, ಕೋಬಾಲ್ಟ್ ಮತ್ತು ಕ್ಯಾಡ್ಮಿಯಂನಂತಹ ಅಂಶಗಳನ್ನು ಒಳಗೊಂಡಿರುತ್ತವೆ.
ಇದು ಸ್ಮಾರ್ಟ್‌ಫೋನ್ ಉತ್ಪಾದನೆಯ ಮೊದಲ ಹಂತವಾಗಿದೆ. ಇದರಲ್ಲಿ, ಮುಂಬರುವ ಫೋನ್ ಹೇಗಿರುತ್ತದೆ ಎಂಬುದನ್ನು ನಿರ್ಧರಿಸಲು ವಿನ್ಯಾಸಕರು ಮತ್ತು ಕಂಪನಿಯ ಸದಸ್ಯರ ತಂಡವು ಒಟ್ಟಿಗೆ ಕುಳಿತುಕೊಂಡು ಚರ್ಚಿಸುತ್ತದೆ. ಫೋನ್‌ನ ಆಕಾರ ಮತ್ತು ನೋಟಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಲಾಗುತ್ತದೆ. ದೀರ್ಘಾವಧಿಯ ಪ್ರಕ್ರಿಯೆಯ ನಂತರ, ಫೋನ್‌ನ ನೋಟ ಮತ್ತು ವಿನ್ಯಾಸದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದೇವೇಳೆ ಈ ಫೋನಿಗೆ ಎಷ್ಟು ಬೆಲೆ ನಿಗದಿ ಪಡಿಸಬಹುದು ಎಂಬ ಕುರಿತು ಚರ್ಚೆ ನಡೆಯುತ್ತದೆ.
ಮುಂದಿನ ಹಂತವು ಮೊಬೈಲ್ನ ವಿನ್ಯಾಸವನ್ನು ಚಿತ್ರದ ರೂಪದಲ್ಲಿ ತರುವುದು. ಇದಕ್ಕಾಗಿ, ಒಂದು ಮೂಲಮಾದರಿಯನ್ನು ತಯಾರಿಸಲಾಗುತ್ತದೆ. ಫೋನ್‌ನ ಈ ಆವೃತ್ತಿಯು ಯಾವುದೇ ಆಂತರಿಕ ಕಿಟ್ ಅನ್ನು ಹೊಂದಿರುವುದಿಲ್ಲ. ಇದು ಹೊರಗಿನ ಲುಕ್ ಯಾವರೀತಿ ಇರುತ್ತದೆ ಎಂದು ನೋಡಲು ಮಾತ್ರ ಬಳಸಲಾಗುತ್ತದೆ. ಈ ನಕಲಿ ಆವೃತ್ತಿಯನ್ನು ಸಂಬಂಧಿತ ಜನರಿಗೆ ಕಳುಹಿಸಿ ಅವರ ಅಭಿಪ್ರಾಯಗಳು ಮತ್ತು ವಿಮರ್ಶೆಗಳನ್ನು ಪಡೆದುಕೊಳ್ಳುತ್ತಾರೆ. ಬಳಿಕ ಫೋನ್‌ನ ವಿನ್ಯಾಸವನ್ನು ಅಂತಿಮಗೊಳಿಸಲು ಕೆಲ ಬದಲಾವಣೆಗಳನ್ನು ಮಾಡಲಾಗುತ್ತದೆ.
ಸ್ಮಾರ್ಟ್‌ಫೋನ್‌ನ ಫೀಚರ್ಸ್: ಈಗ, ಸ್ಮಾರ್ಟ್‌ಫೋನ್‌ನ ಅಸಲಿ ಕೆಲಸ ಶುರುವಾಗುತ್ತದೆ. ಮೊಬೈಲ್ ಎಂಜಿನಿಯರ್‌ಗಳು ಈ ಫೋನಿಗೆ ಬಳಸಬೇಕಾದ ತಂತ್ರಜ್ಞಾದ ಬಗ್ಗೆ ಚರ್ಚಿಸುತ್ತಾರೆ. ಈ ಹ್ಯಾಂಡ್ಸೆಟ್ನ ಪ್ರೊಸೆಸರ್ ಮತ್ತು ಮೆಮೊರಿಯ ಬಗ್ಗೆ ಮಾತುಕತೆ ನಡೆಸುತ್ತಾರೆ. ಇದಕ್ಕೆ ಸರಿ ಹೊಂದುವ ಡಿಸ್‌ಪ್ಲೇ ಸ್ಕ್ರೀನ್ ಮತ್ತು ಬ್ಯಾಟರಿ ಸಾಮರ್ಥ್ಯ ಮತ್ತು ಲುಕ್ ಅನ್ನು ನಿರ್ಧರಿಸುತ್ತಾರೆ. ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳ ಬಗ್ಗೆಯೂ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಎಲ್ಲ ವಿಷಯವನ್ನು ಚರ್ಚಿಸಿ ಫೈನಲ್ ಮಾಡಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವ ತಂಡಕ್ಕೆ ಕಳುಹಿಸಲಾಗುತ್ತದೆ.
ಸಾಫ್ಟ್‌ವೇರ್: ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ, ಸಾಫ್ಟ್‌ವೇರ್ ತಂಡವು ಮೊದಲೇ ನಿರ್ಧರಿಸಿದ ಆಪರೇಟಿಂಗ್ ಸಿಸ್ಟಮ್ ಅನ್ನು ಲೋಡ್ ಮಾಡುವ ಮೂಲಕ ಫೋನ್‌ನಲ್ಲಿ ಜೀವ ತುಂಬಲು ತಮ್ಮ ಕೆಲಸವನ್ನು ಪ್ರಾರಂಭಿಸುತ್ತದೆ. ನಂತರ ಸಾಫ್ಟ್‌ವೇರ್ ಇನ್ಸ್ಟಾಲ್ ಮಾಡಿ ಇದು ಫೋನ್‌ನಲ್ಲಿ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆಯೇ ಎಂದು ಡೆವಲಪರ್‌ಗಳು ಖಚಿತಪಡಿಸುತ್ತಾರೆ. ಅಂದರೆ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಮೃದುವಾಗಿ ಕಾರ್ಯನಿರ್ವಹಿಸುತ್ತಾ ಎಂದು ಪರೀಕ್ಷಿಸುತ್ತಾರೆ.
ಸ್ಮಾರ್ಟ್‌ಫೋನ್ ನಿರೀಕ್ಷೆಯಂತೆ ಕಾರ್ಯನಿರ್ವಹಿಸುತ್ತಿದೆಯೇ ಎಂದು ತಜ್ಞರ ತಂಡ ಪರಿಶೀಲಿಸುವುದರಿಂದ ಇದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಈ ಹಂತವು ಸಹ ಮುಖ್ಯವಾಗಿದೆ ಏಕೆಂದರೆ ಈ ಸಮಯದಲ್ಲಿ, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಫೋನ್‌ನಲ್ಲಿ ಲೋಡ್ ಆಗಿರುತ್ತದೆ ಮತ್ತು ಇದು ಉತ್ಪಾದನೆಯ ಪ್ರಮುಖ ಹಂತವಾಗಿದೆ.
ಸ್ಮಾರ್ಟ್‌ಫೋನ್‌ನ ಪರೀಕ್ಷೆ: ಎಲ್ಲಾ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ಇನ್ಸ್ಟಾಲ್ ಮಾಡಿದ ನಂತರ, ಫೋನ್ ಉತ್ಪಾದನೆಗೆ ಸಿದ್ಧವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಹಲವಾರು ಬಾರಿ ಪರೀಕ್ಷಿಸಲಾಗುತ್ತದೆ. ಪರೀಕ್ಷೆಗಳನ್ನು ಬ್ರೌಸಿಂಗ್ ಮೂಲಕ ಮಾಡಲಾಗುತ್ತದೆ. ಬಳಕೆದಾರರಿಗೆ ಸೂಕ್ತವಾಗುವಂತೆ ಮಾಡಲು ತಜ್ಞರು ಬಟನ್ ಪ್ಲೇಸ್‌ಮೆಂಟ್‌ಗಳು ಮತ್ತು ಆಂಟೆನಾ ಕಾರ್ಯಕ್ಷಮತೆಯನ್ನು ಸಹ ಪರಿಶೀಲಿಸುತ್ತಾರೆ.
ಫೋನ್‌ನ ವಿನ್ಯಾಸಗಳು ಮತ್ತು ಫೀಚರ್ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಡೆವಲಪರ್‌ಗಳು ಮತ್ತು ಸ್ಮಾರ್ಟ್‌ಫೋನ್ ತಯಾರಕರಿಗೆ ಇದು ಕೊನೆಯ ಅವಕಾಶವಾಗಿದೆ.
ಫೋನ್‌ನ ಬೃಹತ್ ಉತ್ಪಾದನೆ: ಮೂಲಮಾದರಿಯು ಎಲ್ಲಾ ಪರೀಕ್ಷೆಗಳಲ್ಲಿ ಅಂತಿಮಗೊಂಡ ಬಳಿಕ, ಸಾಮೂಹಿಕ ಉತ್ಪಾದನೆಯು ಪ್ರಾರಂಭವಾಗುತ್ತದೆ. ಸಾಮೂಹಿಕ ಉತ್ಪಾದನಾ ಪ್ರಕ್ರಿಯೆಯು ಸಂಬಂಧಿತ ಕಂಪನಿಯ ಉತ್ಪಾದನಾ ಘಟಕಗಳಲ್ಲಿ ನಡೆಯುತ್ತದೆ. “ಮೇಕ್ ಇನ್ ಇಂಡಿಯಾ” ಯೋಜನೆಯ ನಂತರ, ಭಾರತವು ಸ್ಯಾಮ್‌ಸಂಗ್, ಎಲ್ಜಿ, ಮೈಕ್ರೋಸಾಫ್ಟ್, ಏಸಸ್ ಮತ್ತು ಮೈಕ್ರೊಮ್ಯಾಕ್ಸ್ನಂತಹ ಹಲವಾರು ಕಂಪನಿಗಳ ಉತ್ಪಾದನಾ ಘಟಕಗಳನ್ನು ಹೊಂದಿದೆ.
ಭಾರತದಲ್ಲಿ ಆ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಘಟಕವಿದ್ದರೆ ಅದನ್ನು ಇಲ್ಲೇ ತಯಾರಿಸಲಾಗುತ್ತದೆ. ಇಲ್ಲಿದಿದ್ದರೆ ಹೊರಗಿನ ತಯಾರಕರಿಗೆ ನೀಡಲಾಗುತ್ತದೆ. ಈ ಸಮಯದಲ್ಲಿ, ಕಂಪನಿಯು ಸಾಮಾನ್ಯವಾಗಿ ಹೊಸ ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಘೋಷಿಸುತ್ತದೆ.
ಫೋನ್‌ನ ಪ್ಯಾಕೇಜಿಂಗ್: ಹ್ಯಾಂಡ್‌ಸೆಟ್ ಸಿದ್ಧವಾದ ಬಳಿಕ ಅದನ್ನು ಸಾಗಣೆಗಾಗಿ ಪ್ಯಾಕ್ ಮಾಡಲಾಗುತ್ತದೆ. ಇದರಲ್ಲಿ ಫೋನ್ ಚಾರ್ಜರ್, ಬ್ಯಾಕ್ ಕವರ್ ಒಳಗೊಂಡಿರುತ್ತದೆ. ಈ ಬಾಕ್ಸ್ ಅನ್ನು ನಂತರ ವಿವಿಧ ದೇಶಗಳಿಗೆ ಮತ್ತು ಮಾರುಕಟ್ಟೆಗಳಿಗೆ ರವಾನಿಸಲಾಗುತ್ತದೆ.
ಸಾಗಣೆ: ಇದು ಸ್ಮಾರ್ಟ್‌ಫೋನ್ ತಯಾರಿಕೆಯ ಅಂತಿಮ ಹಂತವಾಗಿದೆ. ಪ್ಯಾಕ್ ಮಾಡಲಾದ ಸ್ಮಾರ್ಟ್ಫೋನ್ಗಳನ್ನು ಪ್ರಪಂಚದಾದ್ಯಂತ ವಿವಿಧ ಮಾರುಕಟ್ಟೆಗಳಿಗೆ ರವಾನಿಸಲಾಗುತ್ತದೆ. ಫೋನ್ ಚಿಲ್ಲರೆ ವ್ಯಾಪಾರಿಗಳನ್ನು ತಲುಪಿದ ನಂತರ, ಅವರು ಸೇಲ್ಗೆ ಇಡುತ್ತಾರೆ. ಇದು ಒಂದು ಸ್ಮಾರ್ಟ್‌ಫೋನ್ ಉತ್ಪಾದನೆಯ ಸಂಪೂರ್ಣ ಪ್ರಕ್ರಿಯೆಯಾಗಿದೆ.
ಸದ್ಯಕ್ಕೆ ಸ್ಯಾಮ್‌ಸಂಗ್ ಭಾರತದಲ್ಲಿನ ಅತಿದೊಡ್ಡ ಮೊಬೈಲ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಶವೋಮಿ, ವಿವೋ, ಒಪ್ಪೋ, ರಿಯಲ್ ಮಿ, ಆ್ಯಪಲ್, ನೋಕಿಯಾ, ಮೊಟೊರೊಲಾ, ಮೈಕ್ರೊಮ್ಯಾಕ್ಸ್ ಮತ್ತು ಲಾವಾ ಕಂಪನಿಯ ಮೊಬೈಲ್ ಉತ್ಪಾದನೆ ಮಾಡುವ ವ್ಯವಸ್ಥೆಯನ್ನು ಹೊಂದಿದೆ. ಕಳೆದ ಒಂದು ವರ್ಷಗಳಲ್ಲಿ ಭಾರತವು ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಿದೆ. ಈ ಬಗ್ಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗಷ್ಟೆ ಮಾಹಿತಿ ನೀಡಿದ್ದರು.
“ದೇಶದಲ್ಲಿ ಬಳಕೆಯಾಗುತ್ತಿರುವ ಶೇ. 99.2ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಸ್ಥಳೀಯವಾಗಿಯೇ ಉತ್ಪಾದಿಸಲಾಗಿದೆ. ಭಾರತದಲ್ಲಿ ಮೊಬೈಲ್ ಉತ್ಪಾದಕ ಉದ್ಯಮ 44 ಬಿಲಿಯನ್ ಡಾಲರ್ಗೂ ಮೀರಿದೆ. ಪ್ರಸ್ತುತ ದೇಶದಲ್ಲಿ ಅನೇಕ ಸೇಲ್ ಫೋನ್ ಉತ್ಪಾದಕ ಘಟಕಗಳಿವೆ. 2025-26ರ ವೇಳೆಗೆ 300 ಬಿಲಿಯನ್ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ ಸರಕುಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಸಬ್ಸಿಡಿ ಮೂಲಕ ಉತ್ಪಾದಕರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ದೇಶವು ಮೊಬೈಲ್ ಉತ್ಪಾದನೆಯಲ್ಲಿ ಚೀನಾ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಮೇಡ್ ಇನ್ ಇಂಡಿಯಾ ಮೊಬೈಲ್ ಉತ್ಪಾದನೆ ಮೂಲಕ ದೇಶದಲ್ಲಿ 12 ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ. 2014ರಲ್ಲಿ ಭಾರತದಲ್ಲಿ ಮೊಬೈಲ್ ಉತ್ಪಾದನೆಯ ಸಂಖ್ಯೆ 18,900 ಕೋಟಿಯಾಗಿದ್ದರೆ, 2023-24ರಲ್ಲಿ ಈ ಸಂಖ್ಯೆ 4,16,700 ಕೋಟಿಗೆ ಏರಿಕೆಯಾಗಿದೆ. ಇದು ಜಾಗತಿಕ ಉತ್ಪಾದನಾ ಹಬ್ ಆಗುವ ಭಾರತದ ಕನಸಿಗೆ ಸಾಕ್ಷಿ,” ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮವು ದಶಕದ ಹಿಂದೆ ಹೊಂದಿದ್ದ ಗುರಿಯನ್ನು ಈಗ ತಲುಪಿದೆ ಮತ್ತು ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಪ್ರಕಾರ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಿಸುವ ದೇಶವಾಗಿದೆ.
Published On - 10:27 am, Mon, 29 April 24