ದೇಶದಲ್ಲಿ ಸೈಬರ್ ದರೋಡೆಕೋರರು (Cyber Fraud) ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೋಸ ಮಾಡಲು ಒಂದಲ್ಲ ಒಂದು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ದಾಖಲಾಗುತ್ತಲೇ ಇದೆ. ಇದೀಗ ಮೊಬೈಲಿನಲ್ಲಿ ವಿದ್ಯುತ್ ಬಿಲ್ (Current Bill) ಬಾಕಿ ಇದೆ ಎಂದು ಆನ್‌ಲೈನ್ ಮೂಲಕ ಸಂದೇಶ ರವಾನಿಸಿ ದುಷ್ಕರ್ಮಿಗಳು ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಸ್ಕಾಂ ಅಧಿಕಾರಿಗಳ ಹೆಸರಲ್ಲಿ ಮೋಸ ನಡೆಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಬೆಸ್ಕಾಂ (BESCOM) ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ವಂಚಕರು ವಿದ್ಯುತ್ ನಿಗಮದ ಹೆಸರಿನಲ್ಲಿ ಸಂದೇಶವನ್ನು ಕಳುಹಿಸುವ ಮೂಲಕ ಅವರಿಗೆ ಕರೆ ಮಾಡುವಂತೆ ಸೂಚಿಸುತ್ತಿದ್ದಾರೆ, ಇಲ್ಲದಿದ್ದಲ್ಲಿ ಸಂಪರ್ಕ ಕಡಿತಗೊಳಿಸುವಂತೆ ಎಚ್ಚರಿಸಿದ್ದಾರೆ.
ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್ ಹರಿದಾಡುತ್ತಿದೆ. “ಪ್ರಿಯ ಗ್ರಾಹಕರೇ, ನಿಮ್ಮ ಹಿಂದಿನ ತಿಂಗಳ ಬಿಲ್ ಅಪ್ಡೇಟ್ ಆಗದ ಕಾರಣ ಇಂದು ರಾತ್ರಿ 9.30 ಕ್ಕೆ ವಿದ್ಯುತ್ ಕಚೇರಿಯಿಂದ ನಿಮ್ಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ದಯವಿಟ್ಟು ತಕ್ಷಣವೇ ನಮ್ಮ ವಿದ್ಯುತ್ ಅಧಿಕಾರಿಯನ್ನು ಸಂಪರ್ಕಿಸಿ ಧನ್ಯವಾದಗಳು”, ಎಂದು ಒಂದು ಮೊಬೈಲ್ ಸಂಖ್ಯೆಯೊಂದಿಗೆ ಸಂದೇಶದಲ್ಲಿ ಬರೆಯಲಾಗಿರುತ್ತದೆ. ಈ ಸಂದೇಶವು ಅಧಿಕೃತ ಮೂಲದಿಂದ ಬರದಿದ್ದರೂ, ಬಹಳಷ್ಟು ಜನರು ಈ ಸಂಖ್ಯೆಗೆ ಕರೆ ಮಾಡಿ ಅವರು ತಿಳಿಸುವ ಆ್ಯಪ್ ಇನ್ಸ್ಟಾಲ್ ಮಾಡಿ ಹಣ ಕಳೆದುಕೊಂಡು ಮೋಸ ಹೋಗುತ್ತಿದ್ದಾರೆ.
ಬೆಸ್ಕಾಂನಿಂದ ಎಚ್ಚರಿಕೆಯ ಸಂದೇಶ:
ಬೆಸ್ಕಾಂ ಎಂದಿಗೂ ಯಾವುದೇ ಮೊಬೈಲ್ ಸಂಖ್ಯೆಯಿಂದ ಗ್ರಾಹಕರಿಗೆ ಯಾವುದೇ ಮೆಸೆಜ್ಗಳನ್ನು ಕಳಿಸುವುದಿಲ್ಲ. ಅಲ್ಲದೇ ಒಟಿಪಿ, ಪಾಸ್ವರ್ಡ್ ತಿಳಿಸುವಂತೆ ಹೇಳುವುದಿಲ್ಲ. ನಿಮಗೆ ಬೆಸ್ಕಾಂ ಹೆಸರಲ್ಲಿ ಒಟಿಪಿ, ಪಾಸ್ವರ್ಡ್ ಕೇಳಿದರೆ ಅದು ಖಂಡಿತವಾಗಿಯೂ ಮೋಸದ ಜಾಲವೇ ಆಗಿರುತ್ತದೆ ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ. ”ಬೆಸ್ಕಾಂ ಹೆಸರಲ್ಲಿ ನಕಲಿ ಫೋನ್ ಕಾಲ್, ಮೆಸೆಜ್ಗಳು ಬರಬಹುದು. ದಯವಿಟ್ಟು ಇಂತಹ ವಂಚನೆಗೆ ಒಳಗಾಗದೆ ಎಚ್ಚರದಿಂದಿರಿ,” ಎಂದು ವಿದ್ಯುತ್ ಸರಬರಾಜು ಕಂಪನಿ ಮನವಿ ಮಾಡಿದೆ.
ನಿಮ್ಮ ಹಣ ದೋಚುತ್ತಾರೆ:
ಹೆಚ್ಚಾಗಿ ಐಟಿ ಕಂಪನಿಯಲ್ಲಿ ಕೆಲವ ಮಾಡುವವರೇ ಇವರ ಟಾರ್ಗೆಟ್ ಆಗಿದ್ದಾರೆ. ಈ ರೀತಿಯ ವಂಚನೆ ತುಂಬಾ ಅಪಾಯಕಾರಿ. ಇದರಲ್ಲಿ ವಂಚಕ ಗ್ರಾಹಕರಿಗೆ ಆ್ಯಪ್ ಒಂದನ್ನು ಇನ್ಸ್ಟಾಲ್ ಮಾಡುವಂತೆ ಸೂಚಿಸುತ್ತಾನೆ. ಅದನ್ನು ಇನ್ಸ್ಟಾಲ್ ಮಾಡಿದರೆ ವಂಚಕ ನಿಮ್ಮ ಮೊಬೈಲ್‌ಗೆ ಸಂಪೂರ್ಣ ಪ್ರವೇಶವನ್ನು ಪಡೆಯುತ್ತಾನೆ ಮತ್ತು ನಿಮ್ಮ ಬ್ಯಾಂಕ್ ವಿವರ, ಫೋಟೋಗಳು, ಸಂಪರ್ಕಗಳು, ವಾಟ್ಸ್ಆ್ಯಪ್ ಚಾಟ್‌ಗಳು, ಇಮೇಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳನ್ನು ಬಳಸಬಹುದು. ಇದರಿಂದ ನಿಮ್ಮ ಬ್ಯಾಂಕ್ ಖಾತೆ ಸಂಪೂರ್ಣ ಖಾಲಿಯಾಗಬಹುದು.
ಇಂತಹ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?:
ಸೈಬರ್ ವಂಚನೆ ಘಟನೆಗಳನ್ನು ಗಮನಿಸಿದರೆ, ಅಂತಹ ವಂಚನೆಗಳನ್ನು ಗುರುತಿಸುವುದು ತುಂಬಾ ಕಷ್ಟ. ಆದರೆ ಈ ವಂಚನೆಗಳನ್ನು ನೀವು ಗುರುತಿಸಬಹುದಾದ ಕೆಲವು ತಂತ್ರಗಳಿವೆ. ಅಪರಿಚಿತ ವ್ಯಕ್ತಿ ಅಥವಾ ಯಾವುದೇ ಸಂಖ್ಯೆಯಿಂದ ಕರೆ ಬಂದರೆ ನಿಮ್ಮ ವ್ಯಾಪ್ತಿಯ ವಿದ್ಯುತ್ ಕೇಂದ್ರವನ್ನು ಸಂಪರ್ಕಿಸಿ ಖಚಿತ ಪಡಿಸಿಕೊಳ್ಳಿ. ಅನಧಿಕೃತವಾಗಿ ಸ್ವೀಕರಿಸಿದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬಾರದು. ಲಿಂಕ್ ಅಧಿಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಹಾಗೆ ಮಾಡಲು, url ಅನ್ನು ಸರಿಯಾಗಿ ಪರಿಶೀಲಿಸಿ. ಹಣದ ಲಾಭವನ್ನು ಪಡೆದುಕೊಳ್ಳುವ ಲಿಂಕ್‌ಗಳು ಅಥವಾ ಸಂದೇಶಗಳ ಮೇಲೆ ಎಂದಿಗೂ ಕ್ಲಿಕ್ ಮಾಡಬೇಡಿ. ಇಂತಹ ಸಂದೇಶಗಳನ್ನು ಹೆಚ್ಚಾಗಿ ಸ್ಕ್ಯಾಮರ್‌ಗಳು ಕಳುಹಿಸುತ್ತಾರೆ. ಅಧಿಕೃತ ನ್ಯೂಸ್ ಮೆಸೇಜ್‌ಗಳು ಯಾವುದೇ ಅಕ್ಷರ ದೋಷ ಹೊಂದಿರುವುದಿಲ್ಲ. ಫೇಕ್ ಮೆಸೇಜ್‌ಗಳು ಹೆಚ್ಚು ಅಕ್ಷರ ದೋಷಗಳು, ಸ್ಪೆಲ್ಲಿಂಗ್ ತಪ್ಪುಗಳನ್ನು ಹೊಂದಿರುತ್ತವೆ. ಆದ್ದರಿಂದ ಎಚ್ಚರ ವಹಿಸಿ ಓದಿ.
Published On - 2:02 pm, Sat, 12 November 22