ನವದೆಹಲಿ: ಟ್ವಿಟರ್ನಲ್ಲಿ (Twitter) ಅಧಿಕೃತ ಖಾತೆಗಳನ್ನು ಗುರುತಿಸಲು ನೆರವಾಗುವ ಬ್ಲೂಟಿಕ್ ಪಡೆಯಲು ಇನ್ನು ಮುಂದೆ 8 ಡಾಲರ್ ಶುಲ್ಕ ವಿಧಿಸುವ ಬಗ್ಗೆ ಮಾಲೀಕ ಎಲಾನ್ ಮಸ್ಕ್ (Elon Musk) ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಸಾಮಾಜಿಕ ಮಾಧ್ಯಮಗಳು ಈ ರೀತಿಯ ಶುಲ್ಕ ವಿಧಿಸಲು ಭಾರತ ಐಟಿ ಕಾನೂನಿನ ಅಡಿಯಲ್ಲಿ ಅವಕಾಶ ಇದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಕೆಲವು ಸರ್ಕಾರಿ ಅಧಿಕಾರಿಗಳು ಈ ರೀತಿಯ ಶುಲ್ಕ ವಿಧಿಸಲು ಕಾನೂನಿನಡಿ ಅವಕಾಶ ಇಲ್ಲ ಎಂದರೆ, ಇನ್ನು ಕೆಲವು ಅಧಿಕಾರಿಗಳು, ಇದು ಕಂಪನಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದಿದ್ದಾರೆ.
ಸ್ವಯಂಪ್ರೇರಣೆಯಿಂದ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವ್ಯಕ್ತಿಯ ಖಾತೆಯನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ದೃಢೀಕರಿಸಬೇಕು ಎಂದು ನಾವು ಬಯಸುತ್ತೇವೆ. ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಿಗಳ ಗುರುತು ಕಂಡುಹಿಡಿಯುವುದು ಸುಲಭವಾಗಲಿದೆ ಎಂಬುದಾಗಿ ಕಳೆದ ವರ್ಷ ಐಟಿ ಕಾನೂನಿಗೆ ಮಾಡಲಾದ ತಿದ್ದುಪಡಿಯಲ್ಲಿ ಸರ್ಕಾರ ಉಲ್ಲೇಖಿಸಿದೆ. ಆದಾಗ್ಯೂ ಈ ಸೇವೆಗೆ ಶುಲ್ಕ ವಿಧಿಸಬಹುದೇ ಅಥವಾ ಚಂದಾದಾರಿಕೆ ಪಡೆಯುವಂತೆ ಮಾಡಬಹುದೇ ಎಂಬುದನ್ನು ಉಲ್ಲೇಖಿಸಿಲ್ಲ.
ಫೇಸ್ಬುಕ್, ಇನ್ಸ್ಟಾಗ್ರಾಂ ಶುಲ್ಕ ವಿಧಿಸುತ್ತಿಲ್ಲ
ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ ಅಥವಾ ಕೂ ಬಳಕೆದಾರರ ದೃಢೀಕರಣಕ್ಕೆ ಶುಲ್ಕ ವಿಧಿಸುತ್ತಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಹೇಳಿರುವುದಾಗಿ ‘ನ್ಯೂಸ್ 18’ ವರದಿ ಮಾಡಿದೆ.
ನೂತನ ಐಟಿ ನಿಯಮದ ಅಡಿಯಲ್ಲಿ ಟ್ವಿಟರ್ ಬ್ಲೂಟಿಕ್ಗೆ ವಿಧಿಸಲಾಗುವ 8 ಡಾಲರ್ ಶುಲ್ಕದ ಬಗ್ಗೆ ಪ್ರಶ್ನಿಸಬಹುದಾಗಿದೆ. ಸದ್ಯದ ಮಟ್ಟಿಗೆ ಬಳಕೆದಾರರ ದೃಷ್ಟಿಯಿಂದ ಟ್ವಿಟರ್ನ ನಿಯಮಗಳಲ್ಲಿ ಏನೇನು ಬದಲಾವಣೆ ಆಗಲಿದೆ ಎಂಬುದನ್ನು ಕಾದು ನೋಡುವುದು ಉತ್ತಮ. ದೇಶದ ಖರೀದಿಸುವ ಶಕ್ತಿಗೆ ಅನುಗುಣವಾಗಿ ಮಸ್ಕ್ ಅವರು ಶುಲ್ಕದ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Layoffs at Twitter: ಟ್ವಿಟರ್ನಿಂದ 3,000ಕ್ಕೂ ಹೆಚ್ಚು ಉದ್ಯೋಗಿಗಳ ವಜಾಕ್ಕೆ ಎಲಾನ್ ಮಸ್ಕ್ ಚಿಂತನೆ
ಟ್ವಿಟರ್ ಬ್ಲೂಟಿಕ್ಗೆ ಶುಲ್ಕ ವಿಧಿಸುವ ವಿಚಾರ ಕಂಪನಿ ಮತ್ತು ಬಳಕೆದಾರನಿಗೆ ಬಿಟ್ಟಿದ್ದು. ಈ ವಿಷಯದಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ ಎಂದು ಮತ್ತೊಬ್ಬರು ಅಧಿಕಾರಿ ಹೇಳಿರುವುದಾಗಿಯೂ ವರದಿ ಉಲ್ಲೇಖಿಸಿದೆ.
ಐಟಿ ಕಾಯ್ದೆ ಏನು ಹೇಳುತ್ತದೆ?
ಭಾರತದಲ್ಲಿ ಸ್ವಯಂಪ್ರೇರಣೆಯಿಂದ ಮನವಿ ಮಾಡುವ ಪ್ರತಿಯೊಬ್ಬ ವ್ಯಕ್ತಿಯ ಖಾತೆಯನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ದೃಢೀಕರಿಸಬೇಕು. ಮೊಬೈಲ್ ಸಂಖ್ಯೆ ಬಳಸಿಕೊಂಡು ಅಥವಾ ಇನ್ನಿತರ ಯಾವುದೇ ಮೆಕ್ಯಾನಿಸಂ ಉಪಯೋಗಿಸಿಕೊಂಡು ಸಾಮಾಜಿಕ ಮಾಧ್ಯಮ ಕಂಪನಿಗಳು ಬಳಕೆದಾರನ ಖಾತೆಯನ್ನು ದೃಢೀಕರಣಗೊಳಿಸಬಹುದು ಎಂದು ‘ಮಾಹಿತಿ ತಂತ್ರಜ್ಞಾನ ಕಾಯ್ದೆ 2021’ರ ಸೆಕ್ಷನ್ 4 (7) ರಲ್ಲಿ ಹೇಳಲಾಗಿದೆ. ಆದರೆ ಈ ಸೇವೆಗೆ ಶುಲ್ಕ ವಿಧಿಸಬಹುದೇ ಎಂಬ ಬಗ್ಗೆ ಈ ಕಾಯ್ದೆಯಲ್ಲಿ ಸ್ಪಷ್ಟತೆ ಇಲ್ಲ.