Facebook: ಯಾರ ದಾಂಪತ್ಯ ಹೇಗಿದೆ ಎಂಬುದು ನಿಮಗೆ ಹೇಗೆ ತಿಳಿಯುತ್ತೆ? ನ್ಯಾಯಾಧೀಶರ ಹೇಳಿಕೆಗೆ ಫೇಸ್​ಬುಕ್ ಪ್ರತಿನಿಧಿ ತಬ್ಬಿಬ್ಬು

‘ಯಾವ ವ್ಯಕ್ತಿಯ ದಾಂಪತ್ಯ ಜೀವನ ಹೇಗಿದೆ ಎಂದು ನಿಮಗೆ ಹೇಗೆ ತಿಳಿಯುತ್ತದೆ’ ಎಂದು ನ್ಯಾಯಾಧೀಶರು ಅನುಮಾನಗೊಂಡು ಪ್ರಶ್ನಿಸಿದ್ದರು.

Facebook: ಯಾರ ದಾಂಪತ್ಯ ಹೇಗಿದೆ ಎಂಬುದು ನಿಮಗೆ ಹೇಗೆ ತಿಳಿಯುತ್ತೆ? ನ್ಯಾಯಾಧೀಶರ ಹೇಳಿಕೆಗೆ ಫೇಸ್​ಬುಕ್ ಪ್ರತಿನಿಧಿ ತಬ್ಬಿಬ್ಬು
ಫೇಸ್​ಬುಕ್ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 18, 2022 | 12:53 PM

ಬೆಂಗಳೂರು: ಅತಿಸೂಕ್ಷ್ಮ ವೈಯಕ್ತಿಕ ದತ್ತಾಂಶಗಳನ್ನು ಸಂಗ್ರಹಿಸಿ, ವಿಶ್ಲೇಷಿಸುವ ಮೂಲಕ ಬಳಕೆದಾರರ ನಡವಳಿಕೆಯ ವಿಧಾನಗಳನ್ನು (Behavioral Patterns) ದಾಖಲಿಸಿ ಮಾರಿಕೊಳ್ಳುವುದು ಸಾಮಾಜಿಕ ಮಾಧ್ಯಮಗಳ ಕಾರ್ಯವೈಖರಿ. ಮೆಟಾ ಎಂದು ಹೆಸರು ಬದಲಿಸಿಕೊಂಡ ಮಾತ್ರಕ್ಕೆ ಫೇಸ್​ಬುಕ್​ನ ಕಾರ್ಯವೈಖರಿ ಬದಲಾಗಿದೆ ಎಂದಲ್ಲ. ನಿಮ್ಮ ಮೊಬೈಲ್​ನಲ್ಲಿ ಫೇಸ್​ಬುಕ್ ಆ್ಯಪ್ ಇದೆ ಎಂದಾದರೆ, ನೀವು ಫೇಸ್​ಬುಕ್ ಮೂಲಕ ಹಂಚಿಕೊಂಡ ದತ್ತಾಂಶವಷ್ಟೇ ಅಲ್ಲ, ಥರ್ಡ್​ ಪಾರ್ಟಿ ಆ್ಯಪ್​ಗಳ ಮೂಲಕ ಹಂಚಿಕೊಂಡ ದತ್ತಾಂಶವನ್ನೂ ಹಲವು ಮೂಲಗಳಿಂದ ಫೇಸ್​ಬುಕ್ ಸಂಗ್ರಹಿಸಬಲ್ಲದು. ಬಹುತೇಕ ಸಾಮಾಜಿಕ ಮಾಧ್ಯಮ ಆ್ಯಪ್​ಗಳು, ಆ್ಯಪ್ ಡೆವಲಪರ್​ಗಳು ಹಾಗೂ ಆ್ಯಪ್​ಗಳ ಮೂಲಕ ಬಳಕೆದಾರರ ಸೂಕ್ಷ್ಮ ದತ್ತಾಂಶಗಳನ್ನು ಫೇಸ್​ಬುಕ್​ನಂಥ ಕಂಪನಿಗಳು ಸಂಗ್ರಹಿಸುತ್ತಲೇ ಇರುತ್ತವೆ. ಇಂದಿಗೂ ಫೇಸ್​ಬುಕ್ ಅತಿದೊಡ್ಡ ದತ್ತಾಂಶ ಸಂಗ್ರಹ ಹಾಗೂ ವಿಶ್ಲೇಷಕ ಕಂಪನಿಯಾಗಿಯೇ ಉಳಿದುಕೊಂಡಿದೆ.

ಹೀಗೆ ಸಂಗ್ರಹಿಸಿದ ದತ್ತಾಂಶಗಳನ್ನು ಫೇಸ್​ಬುಕ್ ಎಲ್ಲಿ ಇರಿಸುತ್ತಿದೆ ಎಂಬುದು ಈವರೆಗೆ ಸಮರ್ಪಕವಾಗಿ ತಿಳಿದುಬಂದಿಲ್ಲ. ಅಷ್ಟೇ ಅಲ್ಲ, ಫೇಸ್​ಬುಕ್ ಸಂಗ್ರಹಿಸಿರುವ ದತ್ತಾಂಶವನ್ನು ಸುಲಭವಾಗಿ ಹೊರತೆಗೆಯಲೂ ಸಾಧ್ಯವಾಗುವುದಿಲ್ಲ. ‘ದಿ ಇಂಟರ್​ಸೆಪ್ಟ್’ ಜಾಲತಾಣದಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಲೇಖನವು ಫೇಸ್​ಬುಕ್ ಸಂಗ್ರಹಿಸುವ ದತ್ತಾಂಶಗಳ ಬಗ್ಗೆ ಹಲವು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಲೇಖನಕ್ಕಾಗಿ ಅಮೆರಿಕದ ನ್ಯಾಯಾಲದಲ್ಲಿ ನಡೆದ ವಿಚಾರಣೆಯ ವೇಳೆ ಪ್ರಸ್ತಾಪವಾದ ಹಲವು ಅಂಶಗಳನ್ನು ಬಳಸಿಕೊಳ್ಳಲಾಗಿದೆ. ಫೇಸ್​ಬುಕ್​ನ ಇಬ್ಬರು ಹಿರಿಯ ಎಂಜಿನಿಯರ್​ಗಳನ್ನು ಮಾತನಾಡಿಸಲಾಗಿದೆ. ಈ ವೇಳೆ ಅವರು ಬಳಕೆದಾರರಿಂದ ಸಂಗ್ರಹಿಸುವ ಮಾಹಿತಿ ಮಾಹಿತಿಯನ್ನು ಕಂಪನಿಯು ಎಲ್ಲಿ ಇಟ್ಟಿರುತ್ತದೆ ಎಂಬುದು ತಿಳಿದಿಲ್ಲ. ಅದು ಗೌಪ್ಯವಾಗಿರುತ್ತದೆ ಎಂದು ಒಪ್ಪಿಕೊಂಡಿದ್ದಾರೆ.

2015ರ ಕೇಂಬ್ರಿಡ್ಜ್ ಅನಾಲಿಟಿಕ ಹಗರಣದ ನಂತರ ಫೇಸ್​ಬುಕ್​ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಡಲು ವಿಫಲವಾಗಿದೆ. ಡೇಟಾ ಸಂರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು. ಫೇಸ್​ಬುಕ್​ನ ಡೇಟಾ ಸಂಗ್ರಹ ಕಾರ್ಯಾಚರಣೆಗಳ ಮೇಲೆ ಹಲವು ಸರ್ಕಾರಿ ಸಂಸ್ಥೆಗಳು ನಿಗಾ ಇರಿಸಿವೆ. ಅಮೆರಿಕದ ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯದಲ್ಲಿ ಈ ಕುರಿತು ಸುದೀರ್ಘ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಾಧೀಶ ಡೇನಿಯಲ್ ಗ್ಯಾರಿ, ‘ಬಳಕೆದಾರರ ಆಸಕ್ತಿಯನ್ನು ಗುರುತಿಸಿ ಇಂಥದ್ದೇ ಜಾಹೀರಾತು ತೋರಿಸಬೇಕು ಎಂದು ನಿರ್ಧರಿಸುವುದು ಹೇಗೆ? ಬಳಕೆದಾರರು ಯಾವ ಪುಟ ನೋಡುತ್ತಾರೆ? ಯಾವ ರೀತಿಯ ಜಾಹೀರಾತಿನ ಮೇಲೆ ಎಷ್ಟುಹೊತ್ತು ಕಾಲ ಕಳೆಯುತ್ತಾರೆ ಎಂಬ ದತ್ತಾಂಶವನ್ನು ಹೇಗೆ ಸಂಗ್ರಹಿಸಲಾಗುತ್ತದೆ? ಒಮ್ಮೆ ತೋರಿಸಿದ ಜಾಹೀರಾತನ್ನು ಮತ್ತೊಮ್ಮೆ ತೋರಿಸದಂತೆ ಇರಲು ಯಾವ ರೀತಿಯ ಸೂತ್ರ ಬಳಕೆಯಾಗುತ್ತಿದೆ’ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ್ದ ಫೇಸ್​ಬುಕ್​ನ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕ ಯೂಜೀನ್ ಜರಾಷಾ, ‘ಒಬ್ಬ ಬಳಕೆದಾರರಿಗೆ ಒಂದೇ ಜಾಹೀರಾತನ್ನು ನಾವು ಒಂದಕ್ಕಿಂತ ಹೆಚ್ಚು ಬಾರಿ ತೋರಿಸುವುದಿಲ್ಲ ಎಂಬ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ದತ್ತಾಂಶಗಳನ್ನು ಸಂಗರಹಿಸುವ ವಿಧಾನಗಳ ಬಗ್ಗೆಯೂ ನನಗೆ ಖಚಿತವಾಗಿ ತಿಳಿಸಿಲ್ಲ’ ಎಂದು ತಿಳಿಸಿದ್ದರು.

‘ಒಬ್ಬ ಬಳಕೆದಾರನ ಪ್ರೊಫೈಲ್ ಒಮ್ಮೆ ಕ್ರಿಯೇಟ್ ಆದ ನಂತರ ಆ ಪ್ರೊಫೈಲ್​ನಿಂದ ನಿರಂತರವಾಗಿ ಮಾಹಿತಿ ಸಂಗ್ರಹಿಸಲು ಯಾವ ವಿಧಾನ ಅನುಸರಿಸುತ್ತಿದ್ದೀರಿ’ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದರು. ‘ಈ ಪ್ರಶ್ನೆಗೆ ಒಬ್ಬನೇ ವ್ಯಕ್ತಿಯು ಉತ್ತರಿಸಲು ಸಾಧ್ಯ ಎಂದು ನನಗೆ ಅನ್ನಿಸುವುದಿಲ್ಲ. ನನ್ನ ಬಳಿಯೂ ಈ ಪ್ರಶ್ನೆಗೆ ಉತ್ತರಿಸುವಷ್ಟು ಮಾಹಿತಿ ಲಭ್ಯವಿಲ್ಲ. ಇದನ್ನು ತಿಳಿಯಬೇಕಿದ್ದರೆ ಸಿಬ್ಬಂದಿಯ ತಂಡವೇ ಬೇಕಾಗುತ್ತದೆ’ ಎಂದು ಫೇಸ್​ಬುಕ್​ನ ಹಿರಿಯ ಸಿಬ್ಬಂದಿ ಹೇಳಿದ್ದರು.

ದಾಂಪತ್ಯ ಮತ್ತು ವಿಚ್ಛೇದನದ ಬಗ್ಗೆಯೂ ನ್ಯಾಯಾಲಯದಲ್ಲಿ ಚರ್ಚೆಯಾಗಿದೆ. ‘ಯಾವ ವ್ಯಕ್ತಿಯ ದಾಂಪತ್ಯ ಜೀವನ ಹೇಗಿದೆ ಎಂದು ನಿಮಗೆ ಹೇಗೆ ತಿಳಿಯುತ್ತದೆ’ ಎಂದು ನ್ಯಾಯಾಧೀಶರು ಅನುಮಾನಗೊಂಡು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಫೇಸ್​ಬುಕ್ ಪ್ರತಿನಿಧಿ, ‘ಜನರ ವರ್ತನೆ ಹಾಗೂ ನಡವಳಿಕೆಯನ್ನು ವಿಶ್ಲೇಷಿಸುವ ಹಲವು ಪೇಟೆಂಟ್ ಪಡೆದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಯಾವುದೋ ಹಂತದಲ್ಲಿ ದತ್ತಾಂಶಗಳನ್ನು ಬೇರೆಡೆಯಿಂದ ಪಡೆಯುತ್ತಿರಬಹುದು. ಆದರೆ ಅದು ಎಲ್ಲಿಂದ ಎಂಬುದು ನಮಗೆ ಗೊತ್ತಿಲ್ಲ’ ಎಂದು ಉತ್ತರಿಸಿದರು.

ಕಂಪನಿಯ ಪರವಾಗಿ ಹಾಜರಿದ್ದ ಇತರ ಮೂವರು ಪ್ರತಿನಿಧಿಗಳು ಈ ಉತ್ತರವನ್ನು ಅಲ್ಲಗಳೆಯಲಿಲ್ಲ. ‘ನಮ್ಮಲ್ಲಿ (ಫೇಸ್​ಬುಕ್) ಕೆಲಸ ಮಾಡುವ ರೀತಿಯೇ ಬೇರೆ. ಹಲವಾರು ಬಗೆಯ ಮನುಷ್ಯ ಸ್ವಭಾವಗಳನ್ನು ಗುರುತಿಸಿ, ಮ್ಯಾಪ್ ಮಾಡಿರುತ್ತೇವೆ. ಪ್ರತ್ಯೇಕವಾಗಿ ಕೋಡ್​ಗಳನ್ನೂ ಮಾಡಿಕೊಂಡಿರುತ್ತೇವೆ. ಅದಕ್ಕೆ ಅನುಗುಣವಾಗಿಯೇ ಸೂತ್ರಗಳನ್ನು (ಆಲ್ಗೊರಿದಂ) ಬರೆದಿರುತ್ತೇವೆ. ಇದರಿಂದ ಯಾರಿಗೆ ಏನು ಪ್ರಯೋಜನ ಎನ್ನುವುದು ಅರ್ಥವಾಗಿರಲಿಲ್ಲ. ಆರಂಭದ ದಿನಗಳಲ್ಲಿ ನನಗೂ ಈ ರೀತಿ ಕೆಲಸ ಮಾಡುವುದು ಭಯ ಹುಟ್ಟಿಸಿತ್ತು’ ಎಂದು ಅವರು ನ್ಯಾಯಾಲಯಕ್ಕೆ ನೀಡಿದ ತಪ್ಪೊಪ್ಪಿಗೆ ಮಾಹಿತಿಯಲ್ಲಿ ಹೇಳಿದ್ದಾರೆ.

Published On - 12:52 pm, Sun, 18 September 22