IT Act Section 79 explainer: ಈಗ ಚರ್ಚೆಯಲ್ಲಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 79 ಅಂದರೇನು?
ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 79 ಸದ್ಯಕ್ಕೆ ತುಂಬ ಚರ್ಚೆಯಲ್ಲಿ ಇದೆ. ಏನಿದು ಹಾಗೂ ಇದು ಹೇಗೆ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಾದ ಟ್ವಿಟ್ಟರ್ನಂಥವುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿವರ ಇಲ್ಲಿದೆ.
ಕಾನೂನು ಅಧಿಕಾರಿಯನ್ನು ನಿಗದಿತ ಗಡುವಿನೊಳಗೆ ನೇಮಕ ಮಾಡದ ಹಿನ್ನೆಲೆಯಲ್ಲಿ ಇಷ್ಟು ಸಮಯ ಭಾರತದಲ್ಲಿ ಟ್ವಿಟ್ಟರ್ಗೆ ಇದ್ದ ಅಪೇಕ್ಷಿತ ಸುರಕ್ಷತೆಯನ್ನು ಅದು ಕಳೆದುಕೊಂಡಿದೆ. ಟೈಮ್ಸ್ ಆಫ್ ಇಂಡಿಯಾದಿಂದ ಈ ಬಗ್ಗೆ ವರದಿ ಮಾಡಲಾಗಿದೆ. ಯಾವುದೇ ಕಾನೂನುಬಾಹಿರ ಮತ್ತು ಪ್ರಚೋದನಾತ್ಮಕ ಮಾಹಿತಿಗಳನ್ನು ಯಾವುದೇ ಬಳಕೆದಾರರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದರೂ ಕಂಪೆನಿಯ ಹಿರಿಯ ಅಧಿಕಾರಿಗಳು, ಕಾರ್ಯನಿರ್ವಾಹಕ ನಿರ್ದೇಶಕರು ಕೂಡ ಪೊಲೀಸರ ವಿಚಾರಣೆ ಎದುರಿಸಬೇಕಾಗುತ್ತದೆ ಮತ್ತು ಕ್ರಿಮಿನಲ್ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಈ ಮೂಲಕವಾಗಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ದೊರೆತಿದ್ದ ಸುರಕ್ಷಾ ಕವಚವನ್ನು ಕಳೆದುಕೊಂದು ಏಕೈಕ ಅಮೆರಿಕನ್ ಪ್ಲಾಟ್ಫಾರ್ಮ್ ಟ್ವಿಟ್ಟರ್ ಎನಿಸಿಕೊಂಡಿದೆ.
ಯೂಟ್ಯೂಬ್, ಫೇಸ್ಬುಕ್, ವಾಟ್ಸಾಪ್ ಮತ್ತಿತರವುಗಳಿಗೆ ಸುರಕ್ಷತೆ ಹಾಗೇ ಮುಂದುವರಿದಿದೆ. ಕಂಪೆನಿಗಳು ಮೇ 25ನೇ ತಾರೀಕಿನೊಳಗೆ ಅಧಿಕಾರಿಗಳನ್ನು ನೇಮಕ ಮಾಡಬೇಕಿತ್ತು. ಆದರೆ ಕೆಲವು ಕಂಪೆನಿಗಳು ಲಾಕ್ಡೌನ್ ನೆಪ ನೀಡಿದರೆ, ಮತ್ತೆ ಕೆಲವು ಕಂಪೆನಿಗಳು ತಮ್ಮೆದುರಿಗೆ ಇರುವ ತಾಂತ್ರಿಕ ಸವಾಲುಗಳನ್ನು ಹೇಳಿಕೊಂಡವು. ಈಗಿನ ಬೆಳವಣಿಗೆಗಳ ಬಗ್ಗೆ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ಟ್ವಿಟ್ಟರ್ನಿಂದ ಈಗಿನ ಕ್ರಮವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ ಎಂಬಂತೆ ಬಿಂಬಿಸಲಾಯಿತು. ಮಧ್ಯವರ್ತಿ ಮಾರ್ಗದರ್ಶಿ ಸೂತ್ರವಾಗಿ ಅವುಗಳನ್ನು ತಂದಾಗ, ಉದ್ದೇಶಪೂರ್ವಕ ನಿರಾಕರಣೆಯ ಹಾದಿಯನ್ನು ಆಯ್ಕೆ ಮಾಡಿಕೊಂಡಿತು ಎಂದಿದ್ದಾರೆ. ಇದರ ಜತೆಗೆ ಬಳಕೆದಾರರ ಕುಂದು-ಕೊರತೆಯನ್ನು ನಿವಾರಿಸಲು ಇಲ್ಲಿನ ಕಾನೂನು ಪ್ರಕಾರ ಕಡ್ಡಾಯಗೊಳಿಸಿದ ಪ್ರಕ್ರಿಯೆ ಅನುಸರಿಸಲು ಟ್ವಿಟ್ಟರ್ ನಿರಾಕರಿಸಿದೆ. ಅದರ ಬೇಕು ಬೇಡಗಳಿಗೆ ತಕ್ಕಂತೆ ತಿರುಚಲಾದ ಮಾಧ್ಯಮಗಳ ವರದಿ ಇದು ಎಂದು ಹಣೆಪಟ್ಟಿ ಹಚ್ಚುವ ನೀತಿಯನ್ನು ಆರಿಸಿಕೊಂಡಿದೆ ಎಂದಿದ್ದಾರೆ.
ಈ ಮಧ್ಯೆ, ಮಂಗಳವಾರದಂದು ಟ್ವಿಟ್ಟರ್ ತಿಳಿಸಿರುವ ಪ್ರಕಾರ, ಮಧ್ಯಂತ ಮುಖ್ಯ ನಿಯಮಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಮಾಹಿತಿಯನ್ನು ಐಟಿ ಸಚಿವಾಲಯದ ಜತೆಗೆ ಹಂಚಿಕೊಳ್ಳುವುದಾಗಿ ಹೇಳಿದೆ. ತಕ್ಷಣದಿಂದಲೇ ನಿಯಮಾವಳಿಗೆ ಬದ್ಧವಾಗಿರುವಂತೆ ಸರ್ಕಾರದಿಂದ ಟ್ವಿಟ್ಟರ್ಗೆ ಕೊನೆಯ ಅವಕಾಶ ಎಂಬಂತೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಐಟಿ ನಿಯಮಾವಳಿಗಳಿಗೆ ಬದ್ಧವಾಗಿರದಿದ್ದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ದೊರೆತಿರುವ ಜವಾಬ್ದಾರಿಯ ವಿನಾಯಿತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಲಾಗಿತ್ತು.
ಅದಾದ ಮೇಲೆ ಟ್ವಿಟ್ಟರ್ನಿಂದ ಭಾರತ ಸರ್ಕಾರಕ್ಕೆ ಮಾಹಿತಿ ನೀಡಿ, ಮುಖ್ಯ ನಿಯಮಾಧಿಕಾರಿ ನೇಮಕದ ಪ್ರಕ್ರಿಯೆ ಇನ್ನೇನು ಅಂತಿಮ ಹಂತದಲ್ಲಿದೆ. ಒಂದು ವಾರದೊಳಗೆ ಹೆಚ್ಚುವರಿ ಮಾಹಿತಿ ನೀಡಲಾಗುವುದು ಎನ್ನಲಾಗಿತ್ತು. ಮಂಗಳವಾರದಂದು ಟ್ವಿಟ್ಟರ್ನ ವಕ್ತಾರರು ಮಾತನಾಡಿ, ಮಾರ್ಗದರ್ಶಿ ಸೂತ್ರಗಳಿಗೆ ಬದ್ಧವಾಗಿರುವುದಕ್ಕೆ ಕಂಪೆನಿ ಎಲ್ಲ ರೀತಿಯಿಂದಲೂ ಪ್ರಯತ್ನ ಮುಂದುವರಿಸುತ್ತದೆ. ಪ್ರತಿ ಹಂತದ ಪ್ರಕ್ರಿಯೆ ಬಗ್ಗೆಯೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ವಿಷಯ ತಿಳಿಸಲಾಗುವುದು ಎಂದಿದೆ. ಹೊಸ ನಿಯಮಾವಳಿ ಪ್ರಕಾರ, 50 ಲಕ್ಷ ಬಳಕೆದಾರರು ಇರುವ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಕುಂದುಕೊರತೆ ನೋಡಿಕೊಳ್ಳಲು ಅಧಿಕಾರಿಗಳನ್ನು, ನೋಡಲ್ ಅಧಿಕಾರಿ ಮತ್ತಯ ಮುಖ್ಯ ನಿಯಮಾವಳಿ ಅಧಿಕಾರಿಗಳನ್ನು ನೇಮಕ ಮಾಡಬೇಕು. ಮತ್ತು ಆ ಎಲ್ಲ ಅಧಿಕಾರಿಗಳು ಭಾರತದ ನಿವಾಸಿಗಳಾಗಿರಬೇಕು.
ಏನಿದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 ಯಾವುದೇ ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ)ಗೆ ಸಂಬಂಧಿಸಿದ ಡೇಟಾ, ಮಾಹಿತಿ ಅಥವಾ ಸಂವಹನದ ಲಿಂಕ್ ತಮ್ಮ ಪ್ಲಾಟ್ಫಾರ್ಮ್ ಮೂಲಕ ದೊರೆಯುವಂತೆ ಆದಲ್ಲಿ ಅಥವಾ ಹೋಸ್ಟ್ ಆದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಇದರ ಪ್ರಕಾರವಾಗಿ ಸಾಮಾಜಿಕ ಮಾಧ್ಯಮದ ಮಧ್ಯವರ್ತಿಗಳು ಕಾನೂನು ಕ್ರಮದ ವ್ಯಾಪ್ತಿಗೆ ಬರುವುದಿಲ್ಲ. ಇನ್ನೂ ಮುಂದುವರಿದು ಹೇಳುವುದಾದರೆ, ಆ ಮಧ್ಯವರ್ತಿ ಯಾವುದೇ ಬಗೆಯಲ್ಲೂ ಆ ಸಂದೇಶವನ್ನು ಮಾರ್ಪಡಿಸಿರಬಾರದು, ಪ್ರಶ್ನೆ ರೀತಿ ಸಂದೇಶವನ್ನು ಹಂಚಿರಬಾರದು. ಸರಳವಾಗಿ ಹೇಳಬೇಕು ಅಂದರೆ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಸಂದೇಶ ಕಳುಹಿಸುವ ಮತ್ತು ಪಡೆಯುವ ವಾಹಕವಾಗಿ ಅಷ್ಟೇ ಕೆಲಸ ಮಾಡಿರಬೇಕು. ತಾನು ಯಾವುದೇ ಹಸ್ತಕ್ಷೇಪ ಮಾಡಿರಬಾರದು. ಆಗ ಅದರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲ್ಲ.
ಜಾಗತಿಕ ನಿಯಮಾವಳಿಗಳ ಸೆಕ್ಷನ್ 230, ಕಮ್ಯುನಿಕೇಷನ್ಸ್ ಡೀಸೆನ್ಸಿ ಕಾಯ್ದೆ 1996ರ ಪ್ರಕಾರ, ಬೇರೆಯವ ಮಾಹಿತಿ ಒದಗಿಸುವವರಿಂದ ಏನಾದರೂ ಸುದ್ದಿ ಅಥವಾ ಮಾಹಿತಿ ನೀಡುವ ಇಂಟರ್ ಆಕ್ಟಿವ್ ಕಂಪ್ಯೂಟರ್ ಸೇವೆ ಅಥವಾ ಯಾವುದೇ ಸಂಸ್ಥೆಯುನ್ನು ಪ್ರಕಾಶಕ ಅಥವಾ ಸ್ಪೀಕರ್ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಯಾವುದೇ ಉತ್ತರದಾಯಿತ್ವ ಇರುವುದಿಲ್ಲ.
ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರನಂತೆ ವರ್ತಿಸುತ್ತಿರುವ ಟ್ವಿಟರ್ನಿಂದ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ: ರವಿಶಂಕರ್ ಪ್ರಸಾದ್
( Information Technology act, 2000 section 79 is most discussing now. What is the significance and importance of this section, explained)