ಮೈಕ್ರೋಸಾಫ್ಟ್ನಿಂದ ಮೇಯೋರಾನ 1 ಚಿಪ್: ಇಡೀ ಭೂಮಿಯ ಎಲ್ಲಾ ಕಂಪ್ಯೂಟರ್ಗಳಿಂದಲೂ ಆಗದ ಕೆಲಸ ಈ ಅಂಗೈ ಅಗಲದ ಕ್ವಾಂಟಂ ಚಿಪ್ನಿಂದ ಸಾಧ್ಯ
Microsoft unveils Mayorana 1: ಭವಿಷ್ಯದಲ್ಲಿ ಈಗಿರುವ ಕಂಪ್ಯೂಟರ್ಗಳು ಅಸ್ತಿತ್ವದಲ್ಲಿ ಇರೊಲ್ಲ. ಕ್ವಾಂಟಂ ಕಂಪ್ಯೂಟರ್ಗಳು ಬರಲಿವೆ ಎಂದು ಸಾಕಷ್ಟು ಬಾರಿ ಕೇಳಿದ್ದೇವೆ. ಆ ಕನಸು ಬಹಳ ಬೇಗ ನೆರವೇರಲಿದೆ. ಮೈಕ್ರೋಸಾಫ್ಟ್ ಸಂಸ್ಥೆ ಮೇಯೋರಾನ ಎನ್ನುವ ಪ್ರಬಲ ಕ್ವಾಂಟಂ ಚಿಪ್ ನಿರ್ಮಿಸಿದೆ. ಟೋಪೋಕಂಡಕ್ಟರ್ ಎನ್ನುವ ಹೊಸ ದ್ರವ್ಯ ಸ್ಥಿತಿಯನ್ನು ಸೃಷ್ಟಿಸಿದ್ದೇವೆ. ಈ ಟೋಪೋಕಂಡಕ್ಟರ್ ಶಕ್ತಿಯಿಂದ ಕ್ಯುಬಿಟ್ಗಳನ್ನು ರಚಿಸಿ ಆ ಮೂಲಕ ಕ್ವಾಂಟಂ ಚಿಪ್ ತಯಾರಿಸಲಾಗಿದೆ.

ನವದೆಹಲಿ, ಫೆಬ್ರುವರಿ 21: ಮೈಕ್ರೋಸಾಫ್ಟ್ ಸಂಸ್ಥೆ ಮೇಯೋರಾನ1 (Mayorana 1) ಎನ್ನುವ ಹೊಸ ಕ್ವಾಂಟಂ ಚಿಪ್ ಬಿಡುಗಡೆ ಮಾಡಿದ್ದು, ಇದು ಹೊಸ ಇತಿಹಾಸ ಸೃಷ್ಟಿಗೆ ನಾಂದಿ ಹಾಡಿರುವುದಾಗಿ ಹೇಳಿದೆ. ಘನ, ದ್ರವ, ಅನಿಲ ಎನ್ನುವ ಮೂರು ಪ್ರಮುಖ ದ್ರವ್ಯತೆ (matter) ಜೊತೆಗೆ ಮೈಕ್ರೋಸಾಫ್ಟ್ ತಾನು ಟೋಪೋಕಂಡಕ್ಟರ್ಸ್ (Topoconductors) ಎನ್ನುವ ಹೊಸ ದ್ರವ್ಯ ಸ್ಥಿತಿಯನ್ನು (state of matter) ಸೃಷ್ಟಿಸಿದ್ದೇವೆ ಎಂದು ಹೇಳಿಕೊಂಡಿದೆ. ಟೋಪೋಕಂಡಕ್ಟರ್ಸ್ ಬಳಸಿ ಮೇಯೋರಾನ ಎನ್ನುವ ವಿಶ್ವದ ಮೊದಲ ಕ್ವಾಂಟಂ ಪ್ರೋಸಸಿಂಗ್ ಯುನಿಟ್ ಅನ್ನು ನಿರ್ಮಿಸಲಾಗಿದೆ. ಈ ಚಿಪ್ ಎಷ್ಟು ಶಕ್ತಿ ಶಾಲಿ ಎಂದರೆ, ವಿಶ್ವದ ಈಗಿನ ಎಲ್ಲಾ ಕಂಪ್ಯೂಟರ್ಗಳನ್ನು ಒಟ್ಟಿಗೆ ಸೇರಿಸಿದರೂ ಬಗೆಹರಿಸಲಾಗದ ಸಮಸ್ಯೆಗಳನ್ನು ಅಂಗೈ ಅಗಲದ ಈ ಕ್ವಾಂಟಂ ಚಿಪ್ ಬಗೆಹರಿಸಬಲ್ಲುದಂತೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ನಿನ್ನೆ ಈ ಚಿಪ್ ಹಾಗೂ ತಮ್ಮ ಸಂಸ್ಥೆ ಮಾಡಿರುವ ಸಾಧನೆಯನ್ನು ವಿವರಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲಾನ್ ಮಸ್ಕ್ ಈ ಪೋಸ್ಟ್ಗೆ ಕಾಮೆಂಟ್ ಮಾಡಿದ್ದು, ಕ್ವಾಂಟಂ ಕಂಪ್ಯೂಟಿಂಗ್ನಿಂದ ಹೆಚ್ಚೆಚ್ಚು ಆವಿಷ್ಕಾರಗಳು ಆಗುತ್ತವೆ ಎಂದಿದ್ದಾರೆ.
ಮೈಕ್ರೋಸಾಫ್ಟ್ನ ಮೇಯೋರಾನ1 ಚಿಪ್ ಬಗ್ಗೆ ಸಿಇಒ ಸತ್ಯ ನಾದೆಲ್ಲ ಹಾಕಿದ ಎಕ್ಸ್ ಪೋಸ್ಟ್ನ ವಿವರ
‘ಬಹುತೇಕ ನಾವೆಲ್ಲರೂ ಘನ, ದ್ರವ ಮತ್ತು ಅನಿಲ ಎನ್ನುವ ಮೂರು ಪ್ರಮುಖ ದ್ರವ್ಯ ಸ್ಥಿತಿ ಬಗ್ಗೆ ತಿಳಿಯುತ್ತಾ ಬೆಳೆದಿದ್ದೇವೆ. ಇವತ್ತು ಅದು ಬದಲಾಗುತ್ತಿದೆ…. ಹತ್ತಿರಹತ್ತಿರ 20 ವರ್ಷದ ಪ್ರಯತ್ನದ ಬಳಿಕ ನಾವು ಸಂಪೂರ್ಣ ಹೊಸ ದ್ರವ್ಯ ಸ್ಥಿತಿ ಸೃಷ್ಟಿಸಿದ್ದೇವೆ. ಟೋಪೋಕಂಡಕ್ಟರ್ಸ್ ಎನ್ನುವ ಹೊಸ ಕಣಗಳಿಂದ ಇದು ಸಾಧ್ಯವಾಗಿದೆ. ಇದರಿಂದ ಕಂಪ್ಯೂಟಿಂಗ್ನಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಇದು ಮೇಯೋರಾನಾ1 ಚಿಪ್ನ ರಚನೆಗೆ ಶಕ್ತಿ ನೀಡಿದೆ. ಮೇಯೋರಾನಾ ಎಂಬುದು ಟೋಪೋಲಾಜಿಕಲ್ ಕೋರ್ ಮೇಲೆ ನಿರ್ಮಿತವಾದ ವಿಶ್ವದ ಮೊದಲ ಕ್ವಾಂಟಂ ಪ್ರೋಸಸಿಂಗ್ ಯೂನಿಟ್ ಎನಿಸಿದೆ’ ಎಂದು ಸತ್ಯ ನಾದೆಲ್ಲಾ ಹೇಳಿದ್ದಾರೆ.
ಇದನ್ನೂ ಓದಿ: USAID: ಅಮೆರಿಕದ ಯುಎಸ್ ಏಡ್ ಇತಿಹಾಸ ಏನು, ಉದ್ದೇಶ ಯಾವುದು? ಟ್ರಂಪ್ ಬಳಗಕ್ಕೆ ಯಾಕೆ ಕೋಪ?
ಏನಿದು ಟೋಪೋಕಂಡಕ್ಟರ್..?
ಟೋಪೋಕಂಡಕ್ಟರ್ಗಳು ಮೇಯೋರಾನಾ ಕಣಗಳನ್ನು ನಿಯಂತ್ರಿಸಿ ಕ್ಯುಬಿಟ್ಗಳ ಸೃಷ್ಟಿಗೆ ಸಹಾಯವಾಗುತ್ತವೆ. ಕ್ಯುಬಿಟ್ ಎಂದರೆ ಕ್ವಾಂಟಂ ಬಿಟ್. ನಮ್ಮ ಮಾಮೂಲಿಯ ಕಂಪ್ಯೂಟರುಗಳಲ್ಲಿ ಬೈನರಿ ಡಿಜಿಟ್ ಅಥವಾ ಬಿಟ್ ಇರುವ ರೀತಿಯಲ್ಲಿ ಕ್ವಾಂಟಂ ಕಂಪ್ಯೂಟಿಂಗ್ನಲ್ಲಿ ಕ್ಯೂಬಿಟ್ಗಳು ಮೂಲ ಘಟಕಗಳಾಗಿರುತ್ತವೆ.
A couple reflections on the quantum computing breakthrough we just announced…
Most of us grew up learning there are three main types of matter that matter: solid, liquid, and gas. Today, that changed.
After a nearly 20 year pursuit, we’ve created an entirely new state of… pic.twitter.com/Vp4sxMHNjc
— Satya Nadella (@satyanadella) February 19, 2025
ಒಂದು ಪ್ರಬಲ ಕ್ವಾಂಟಂ ಕಂಪ್ಯೂಟರ್ ನಿರ್ಮಿಸಲು ಕೆಲ ದಶಕಗಳೇ ಬೇಕಾಗಬಹುದು ಎನ್ನುವ ಭಾವನೆ ಇದೆ. ಆದರೆ, ಮೈಕ್ರೋಸಾಫ್ಟ್ನ ಈ ಆವಿಷ್ಕಾರವು ಕೆಲ ವರ್ಷಗಳಲ್ಲೇ ಈ ಕನಸನ್ನು ನನಸು ಮಾಡಬಹುದು ಎನ್ನುವುದು ನಾದೆಲ್ಲಾ ಅವರ ಅನಿಸಿಕೆ.
ಟೋಪೋಕಂಡಕ್ಟರ್ಸ್ನಿಂದ ರಚಿತವಾದ ಕ್ಯುಬಿಟ್ ಒಂದು ಮಿಲಿಮೀಟರ್ನ ನೂರನೇ ಒಂದು ಭಾಗದ ಗಾತ್ರದ್ದಾಗಿರುತ್ತದೆ. ಈ ಕ್ಯುಬಿಟ್ಗಳು ಪುಟ್ಟದ್ದಾದರೂ ಬಹಳ ವೇಗವಾಗಿರುತ್ತವೆ. ಟೋಪೋಕಂಡಕ್ಟರ್ಗಳ ಸಹಾಯದಿಂದ ಮಿಲಿಯನ್ ಕ್ಯುಬಿಟ್ ಪ್ರೋಸಸರ್ ನಿರ್ಮಾಣದ ದಾರಿ ಈಗ ಸುಗಮಗೊಂಡಂತಾಗಿದೆ ಎಂದು ಮೈಕ್ರೋಸಾಫ್ಟ್ ಮುಖ್ಯಸ್ಥರು ಹೇಳುತ್ತಾರೆ.
ಮಿಲಿಯನ್ ಕ್ಯೂಬಿಟ್ ಪ್ರೋಸಸರ್ ನಿರ್ಮಾಣದ ಬಗ್ಗೆ ವಿವರಣೆ ಇರುವ ವಿಡಿಯೋ
‘ಇವತ್ತು ಭೂಮಿಯಲ್ಲಿರುವ ಎಲ್ಲಾ ಕಂಪ್ಯೂಟರುಗಳನ್ನು ಸೇರಿಸಿದರೂ ಸಾಧ್ಯವಾಗದ ಕೆಲಸಗಳನ್ನು ನಿಮ್ಮ ಅಂಗೈ ಅಗಲದ ಚಿಪ್ ಮಾಡಬಲ್ಲುದು’ ಎಂದು ಸತ್ಯ ನಾದೆಲ್ಲಾ ಹೊಸ ಚಿಪ್ ಎಷ್ಟು ಶಕ್ತಿಯುತ ಎಂಬುದಕ್ಕೆ ಒಂದು ನಿದರ್ಶನವಾಗಿ ವಿವರಿಸುತ್ತಾರೆ.
ಇದನ್ನೂ ಓದಿ: ಪುಣೆ ಬಳಿ ಟೆಸ್ಲಾ ಫ್ಯಾಕ್ಟರಿ ಸ್ಥಾಪನೆ? ಟಾಟಾ ಮೋಟಾರ್ಸ್ ಜೊತೆ ಟೆಸ್ಲಾ ಹೊಂದಾಣಿಕೆಗೆ ಮಾತುಕತೆ: ವರದಿ
ಇಲಾನ್ ಮಸ್ಕ್ ಪ್ರತಿಕ್ರಿಯೆ
ಎಕ್ಸ್ ಪ್ಲಾಟ್ಫಾರ್ಮ್ನ ಮುಖ್ಯಸ್ಥ ಇಲಾನ್ ಮಸ್ಕ್ ಅವರು ಸತ್ಯ ನಾದೆಲ್ಲ ಅವರ ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ಮೈಕ್ರೋಸಾಫ್ಟ್ನ ಮೇಯೋರಾನ1 ಚಿಪ್ ಅನ್ನು ಸ್ವಾಗತಿಸಿರುವ ಅವರು, ಕ್ವಾಂಟಂ ಕಂಪ್ಯೂಟಿಂಗ್ನಲ್ಲಿ ಹೆಚ್ಚೆಚ್ಚು ಆವಿಸ್ಕಾರಗಳು ಬರಲಿವೆ ಎಂದಿದ್ದಾರೆ.
More and more breakthroughs with quantum computing … https://t.co/rF4Hl9EQm0
— Elon Musk (@elonmusk) February 19, 2025
Exciting, right? We think this could be quantum’s transistor moment… just think of the implications for battery chemistry! And big congrats to you and the team on Grok 3!
— Satya Nadella (@satyanadella) February 19, 2025
ಮಸ್ಕ್ ಅವರ ಪ್ರತಿಕ್ರಿಯೆಗೆ ಸತ್ಯ ನಾದೆಲ್ಲ ಕೂಡ ಸ್ಪಂದಿಸಿದ್ದಾರೆ. ಇದನ್ನು ಕ್ವಾಂಟಂನ ಟ್ರಾನ್ಸಿಸ್ಟರ್ ಕ್ಷಣ ಎಂದು ಭಾವಿಸಬಹುದು ಎಂದಿರುವ ಅವರು, ಇಲಾನ್ ಮಸ್ಕ್ ಅವರ ಗ್ರೋಕ್ 3 ಟೀಮ್ಗೆ ಅಭಿನಂದನೆ ಕೂಡ ಹೇಳಿದ್ದಾರೆ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:43 am, Fri, 21 February 25