ಆನ್​ಲೈನ್ ಬ್ಯಾಂಕಿಂಗ್ ಬಳಸುತ್ತೀರಾ?; ಮೊಬೈಲ್ ಕಳೆದುಹೋದ ಕೂಡಲೇ ಈ ರೀತಿ ಮಾಡದಿದ್ದರೆ ಪಂಗನಾಮ ಗ್ಯಾರಂಟಿ!

Net Banking | ಒಂದುವೇಳೆ, ನಿಮ್ಮ ಮೊಬೈಲ್ ಕಳೆದುಹೊದರೆ ನೀವು ಮೊದಲು ಮಾಡಬೇಕಾಗಿರುವುದೇನು? ಇಲ್ಲಿದೆ ಮಾಹಿತಿ.

ಆನ್​ಲೈನ್ ಬ್ಯಾಂಕಿಂಗ್ ಬಳಸುತ್ತೀರಾ?; ಮೊಬೈಲ್ ಕಳೆದುಹೋದ ಕೂಡಲೇ ಈ ರೀತಿ ಮಾಡದಿದ್ದರೆ ಪಂಗನಾಮ ಗ್ಯಾರಂಟಿ!
ಸಾಂದರ್ಭಿಕ ಚಿತ್ರ

ಮೊಬೈಲ್ ಎಂಬುದೇ ಒಂದು ಜಗತ್ತಾಗಿರುವ ಇಂದಿನ ಕಾಲದಲ್ಲಿ ಮೊಬೈಲ್ ಇಲ್ಲದಿದ್ದರೆ ಏನೂ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಬೈಲ್​ನಲ್ಲಿಯೇ ಹುಡುಕಿ ಫೋನ್ ಮಾಡುವುದರಿಂದ ನಮ್ಮ ಆಪ್ತರ, ಮನೆಯವರ ಫೋನ್ ನಂಬರ್ ಕೂಡ ನೆನಪಿರುವುದಿಲ್ಲ. ಬ್ಯಾಂಕಿಂಗ್ (Online Banking), ಶಾಪಿಂಗ್ (Shopping), ಇ-ಮೇಲ್ (E-Mail), ಷೇರು ಮಾರುಕಟ್ಟೆಯ ಅಕೌಂಟ್ ಹೀಗೆ ಪ್ರತಿಯೊಂದೂ ಮೊಬೈಲ್​ನಿಂದಲೇ ಆಗಬೇಕು. ಅಂಗೈಯಲ್ಲಿರುವ ಅಚ್ಚರಿಯಾದ ಈ ಮೊಬೈಲ್ ಕಳೆದುಹೋದರೆ ಏನು ಮಾಡುತ್ತೀರ? ನಿಮ್ಮ ಹತ್ತಿರದವರ ನಂಬರ್ ನೆನಪಿಲ್ಲ, ದುಡ್ಡು ಕೊಟ್ಟು ಮನೆಗೆ ಹೋಗೋಣವೆಂದರೆ ಫೋನ್ ಪೇ (Phone Pay), ಗೂಗಲ್ ಪೇ (Google Pay), ಪೇಟಿಎಂ (Paytm) ಇಲ್ಲ. ಎಟಿಎಂನಿಂದ ಹಣ ಡ್ರಾ ಮಾಡಿದರಾಯಿತು ಎಂದುಕೊಂಡರೆ ಎಟಿಎಂ ಪಿನ್ ಕೋಟ್ (ATM Pin Code) ಕೂಡ ಮೊಬೈಲಲ್ಲೇ ಸೇವಾಗಿದೆ. ಆ ಸಂದರ್ಭದಲ್ಲಿ ನೀವು ನಿಜವಾಗಿಯೂ ಅನಾಥರಾಗಿಬಿಡುತ್ತೀರ. ಹೀಗಿದ್ದಾಗ ನಿಮ್ಮ ಮೊಬೈಲ್ ಕದ್ದವರು ಅದರಲ್ಲಿ ಸೇವ್ ಆಗಿರುವ ಆ್ಯಪ್, ಆನ್​ಲೈನ್ ಬ್ಯಾಂಕಿಂಗ್ ಮೂಲಕ ನಿಮ್ಮ ಖಾತೆಯ ಹಣವೆಲ್ಲವನ್ನೂ ಟ್ರಾನ್ಸ್​ಫರ್ ಮಾಡಿಕೊಂಡರೂ ತಕ್ಷಣಕ್ಕೆ ನಿಮ್ಮ ಗಮನಕ್ಕೆ ಬರುವುದಿಲ್ಲ. ಏಕೆಂದರೆ ಓಟಿಪಿ (OTP), ಹಣ ಡ್ರಾ ಆದ ಮೆಸೇಜ್ ಕೂಡ ಅದೇ ಮೊಬೈಲ್​ಗೆ ಬರುತ್ತದೆ.

ಇದೇ ಕಾರಣಕ್ಕೆ ಮೊಬೈಲನ್ನು ಕಳೆದುಕೊಂಡ ಅನೇಕರು ಅದರ ಜೊತೆಗೆ ದುಡ್ಡನ್ನೂ ಕಳೆದುಕೊಂಡಿದ್ದಾರೆ. ಮೊಬೈಲ್​ನಲ್ಲಿ ಹೇಗೆ ಇಡೀ ಜಗತ್ತೇ ಇದೆಯೋ ಅಷ್ಟೇ ಅಪಾಯಕಾರಿ ಕೂಡ ಹೌದು. ಮೊದಲನೆಯದಾಗಿ ನಿಮ್ಮ ಪಾಸ್​ವರ್ಡ್​, ಬ್ಯಾಂಕ್ ಅಕೌಂಟ್ ನಂಬರ್, ಬ್ಯಾಂಕ್ ಡೀಟೇಲ್ಸ್​ಗಳನ್ನೆಲ್ಲ ಮೊಬೈಲ್​ನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸವನ್ನು ಬಿಟ್ಟುಬಿಡಿ. ನಿಮ್ಮ ಮೊಬೈಲ್​ನಲ್ಲಿರುವ ಎಲ್ಲ ಆ್ಯಪ್​ಗಳಿಗೂ ಪಾಸ್​ವರ್ಡ್​ ಹಾಕಿಟ್ಟುಕೊಳ್ಳಿ. ಆ ಪಾಸ್​ವರ್ಡ್​ ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳವಂಥದ್ದಾಗದಿರಲಿ. ಒಂದುವೇಳೆ, ನಿಮ್ಮ ಮೊಬೈಲ್ ಕಳೆದುಹೊದರೆ ನೀವು ಮೊದಲು ಮಾಡಬೇಕಾಗಿರುವುದೇನು? ಇಲ್ಲಿದೆ ಮಾಹಿತಿ.

ಸಿಮ್ ಕಾರ್ಡ್​ ಬ್ಲಾಕ್ ಮಾಡಿ:
ಮೊಬೈಲ್ ಕಳೆದುಹೋಗಿದೆ ಎಂಬುದು ಗೊತ್ತಾಗುತ್ತಿದ್ದಂತೆ ಮೊದಲು ನಿಮ್ಮ ಸಿಮ್ ಕಾರ್ಡ್​ ಬ್ಲಾಕ್ ಮಾಡಿಸಿ. ಇದರಿಂದ ಆಧಾರ್, ಪ್ಯಾನ್, ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಬಳಸಿ ಕದ್ದವರು ಹಣ ದೋಚಿಕೊಳ್ಳುವುದನ್ನು ತಡೆಯಲು ಸಾಧ್ಯವಿದೆ. ಬ್ಲಾಕ್ ಆದ ಸಿಮ್​ ಕಾರ್ಡ್​ನ ನಂಬರ್​ಗೆ ಓಟಿಪಿಯಾಗಲಿ, ಮೆಸೇಜ್ ಆಗಲಿ ಬರುವುದಿಲ್ಲ. ನಂತರ ನಿಧಾನವಾಗಿ ನೀವು ಅದೇ ನಂಬರ್​ಗೆ ಬೇರೆ ಸಿಮ್ ಕಾರ್ಡ್​ ಪಡೆದುಕೊಳ್ಳಬಹುದು.

ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಬ್ಲಾಕ್ ಮಾಡಿಸಿ:
ನಿಮ್ಮ ಬ್ಯಾಂಕ್​ಗೆ ಕರೆಮಾಡಿ, ನಿಮ್ಮ ಅಕೌಂಟಿನ ಮೊಬೈಲ್ ಬ್ಯಾಂಕಿಂಗ್ ಅನ್ನು ಬ್ಲಾಕ್ ಮಾಡುವಂತೆ ಸೂಚಿಸಿ. ಸಿಮ್ ಕಾರ್ಡ್​ ಮತ್ತು ಮೊಬೈಲ್ ಬ್ಯಾಂಕಿಂಗ್ ಎರಡಕ್ಕೂ ಒಂದಕ್ಕೊಂದು ಸಂಬಂಧವಿರುತ್ತದೆ. ನಿಮ್ಮ ಬ್ಯಾಂಕಿನ ಖಾತೆಯಲ್ಲಿ ರಿಜಿಸ್ಟರ್ ಆಗಿರುವ ನಂಬರ್​ಗೆ ಮಾತ್ರ ಓಟಿಪಿ ಬರುತ್ತದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಸಿಮ್ ಕಾರ್ಡ್​ ಜೊತೆಗೆ ಮೊಬೈಲ್ ಬ್ಯಾಂಕಿಂಗ್ ಅನ್ನೂ ಬ್ಲಾಕ್ ಮಾಡಿಸುವುದು ಉತ್ತಮ.

UPI ಪೇಮೆಂಟ್ ಆಯ್ಕೆ ರದ್ದುಗೊಳಿಸಿ:
ನಿಮ್ಮ ಮೊಬೈಲ್​ನಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂನಂತಹ ಯುಪಿಐ ಪೇಮೆಂಟ್ ಆ್ಯಪ್​ಗಳಿದ್ದರೆ ತಕ್ಷಣ ಅವುಗಳನ್ನು ಡೀಆಕ್ಟಿವೇಟ್ ಮಾಡಿಸಿ. ಆಗ ಆ ಮಾರ್ಗದಿಂದಲೂ ನಿಮ್ಮ ಖಾತೆಯ ಹಣವನ್ನು ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಪೇಮೆಂಟ್​ ಆ್ಯಪ್​ಗಳ ಹೆಲ್ಪ್​ ಡೆಸ್ಕ್​ಗೆ ಫೋನ್ ಮಾಡಿ, ನಡೆದ ಘಟನೆಯನ್ನು ವಿವರಿಸಿ.

ಪೊಲೀಸರಿಗೆ ದೂರು ನೀಡಿ:
ನಿಮ್ಮ ಮೊಬೈಲ್ ಕಳೆದುಹೋದ ಕೂಡಲೆ ಪೊಲೀಸ್ ಸ್ಟೇಷನ್​ಗೆ ಹೋಗಿ ಕಂಪ್ಲೇಟ್ ನೀಡಲು ಮರೆಯಬೇಡಿ. ಅವರಿಂದ ಎಫ್​ಐಆರ್ ಪ್ರತಿಯನ್ನು ಪಡೆದುಕೊಂಡು ಬನ್ನಿ. ಒಂದುವೇಳೆ ಕದ್ದವರು ನಿಮ್ಮ ಮೊಬೈಲ್ ಅನ್ನು ಮಿಸ್ ಯೂಸ್ ಮಾಡಿಕೊಂಡರೆ ಆಗ ಆ ಮೊಬೈಲ್ ನಿಮ್ಮ ಬಳಿ ಇರಲಿಲ್ಲ ಎಂಬುದಕ್ಕೆ ಇದೇ ಸಾಕ್ಷಿಯಾಗುತ್ತದೆ. ಹೀಗಾಗಿ, ನಿಮ್ಮ ಮೊಬೈಲ್ ಕಳ್ಳತನವಾಗಿ ಎಂಬುದನ್ನು ದೂರಿನಲ್ಲಿ ದಾಖಲಿಸಿ.

ಮೊಬೈಲ್‌ ಆ್ಯಪ್‌ಗಳ ಮೂಲಕ ಬ್ಯಾಂಕಿಂಗ್ ವಹಿವಾಟು ನಡೆಸುವವರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಯಾವ ಕಾರಣಕ್ಕೂ ಫೋನ್‌ನಲ್ಲಿ ಮೊಬೈಲ್‌ ಬ್ಯಾಂಕಿಂಗ್‌ನ ಲಾಗಿನ್‌ ಪಾಸ್‌ವರ್ಡ್‌ ಸೇವ್‌ ಮಾಡಬೇಡಿ. ಅದನ್ನು ಬೇರೆಲ್ಲಾದರೂ ಬರೆದಿಟ್ಟುಕೊಳ್ಳಿ. ಮೊಬೈಲ್‌ ಕಳೆದುಹೋದರೆ ಕೂಡಲೇ ನಿಮ್ಮ ಬ್ಯಾಂಕ್‌ಗೆ ಆ ಕುರಿತು ಮಾಹಿತಿ ಕೊಡಿ. ಬಳಕೆ ಆದ ಕೂಡಲೆ ಆ್ಯಪ್‌ನಿಂದ ಲಾಗ್‌ಆಫ್‌ ಆಗುವುದನ್ನು ಮರೆಯಬೇಡಿ. ನಿಮ್ಮ ಖಾತೆಯಲ್ಲಿರುವ ಹಣ ಹಾಗೂ ನಡೆಸಿದ ವಹಿವಾಟುಗಳು ಸರಿಯಾಗಿವೆಯೇ ಎಂಬುದನ್ನು ಆಗಾಗ ಪರೀಕ್ಷಿಸಿಕೊಳ್ಳಿ.

ಇದನ್ನೂ ಓದಿ: ಆನ್​ಲೈನ್​ ಶಿಕ್ಷಣಕ್ಕಾಗಿ ಮೊಬೈಲ್ ಬೇಡಿ ರಸ್ತೆಯಲ್ಲಿ ನಿಂತ ಸೋದರಿಯರಿಗೆ ಸಿಕ್ತು ಮೊಬೈಲ್​! ಮನಮಿಡಿದು ಮೊಬೈಲ್​ ಕೊಡಿಸಿದವರು ಯಾರು?

ಇದನ್ನೂ ಓದಿ: SBI customer alert: ಪ್ಯಾನ್ ಕಾರ್ಡ್- ಆಧಾರ್ ಕಾರ್ಡ್ ಜೂನ್ 30ರೊಳಗೆ ಲಿಂಕ್ ಆಗದಿದ್ದರೆ ಬ್ಯಾಂಕಿಂಗ್ ಸೇವೆಗಳು ಸಿಗಲ್ಲ

(Mobile Stolen? How to Keep Your Online Banking Details UPI Safe)