ವಿರೋಧಕ್ಕೆ ಬೆಚ್ಚಿತಾ ವಾಟ್ಸ್​ಆ್ಯಪ್​? ಹೊಸ ಪ್ರೈವೆಸಿ ಪಾಲಿಸಿ ಇನ್ನೂ ವಿಳಂಬ

ಹೊಸ ಪಾಲಿಸಿ ಫೆಬ್ರುವರಿ 8ರಿಂದ ಜಾರಿಗೆ ಬರಬೇಕಿತ್ತು. ಆದರೆ, ಸಾಕಷ್ಟು ಮಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ವಾಟ್ಸಾಪ್​ ಅನ್​ಇನ್​ಸ್ಟಾಲ್​ ಮಾಡಿ ಸಿಗ್ನಲ್ ಮೆಸೆಂಜರ್​​​ ಆ್ಯಪ್​ನತ್ತ ಅನೇಕರು ವಾಲಿದ್ದರು. ಇದರಿಂದ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿ ವಾಟ್ಸ್​ಆ್ಯಪ್​ಗೆ ಎದುರಾಗಿತ್ತು.

  • TV9 Web Team
  • Published On - 16:11 PM, 17 Jan 2021
ವಿರೋಧಕ್ಕೆ ಬೆಚ್ಚಿತಾ ವಾಟ್ಸ್​ಆ್ಯಪ್​? ಹೊಸ ಪ್ರೈವೆಸಿ ಪಾಲಿಸಿ ಇನ್ನೂ ವಿಳಂಬ
ಸಾಂದರ್ಭಿಕ ಚಿತ್ರ

ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​ ಹೊಸ ಪ್ರೈವೆಸಿ ನೀತಿ ಜಾರಿಗೆ ತರಲು ಮುಂದಾಗಿತ್ತು. ಇದರನ್ವಯ ವಾಟ್ಸ್​ಆ್ಯಪ್ ಬಳಕೆದಾರರ ಪ್ರಮುಖ ಮಾಹಿತಿಯನ್ನು ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಜತೆ ಹಂಚಿಕೊಳ್ಳಲು ಅವಕಾಶವಿತ್ತು. ಆದರೆ, ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಕಾರಣ, ಹೊಸ ಪಾಲಿಸಿ ಮೂರು ತಿಂಗಳು ತಡವಾಗಿ ಜಾರಿಗೆ ಬರುತ್ತಿದೆ.

ಹೊಸ ಪಾಲಿಸಿ ಫೆಬ್ರವರಿ 8ರಿಂದ ಜಾರಿಗೆ ಬರಬೇಕಿತ್ತು. ಆದರೆ, ಸಾಕಷ್ಟು ಮಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ವಾಟ್ಸ್​ಆ್ಯಪ್​ ಅನ್​ಇನ್​ಸ್ಟಾಲ್​ ಮಾಡಿ ಸಿಗ್ನಲ್ ಮೆಸೆಂಜರ್​​​ ಆ್ಯಪ್​ನತ್ತ ಅನೇಕರು ವಾಲಿದ್ದರು. ಇದರಿಂದ ಬಳಕೆದಾರರನ್ನು ಕಳೆದುಕೊಳ್ಳುವ ಭೀತಿ ವಾಟ್ಸ್​ಆ್ಯಪ್​ಗೆ ಎದುರಾಗಿತ್ತು. ಹೀಗಾಗಿ ವಾಟ್ಸಾಪ್​ ಈ ಪಾಲಿಸಿ ಜಾರಿಗೊಳಿಸುವುದನ್ನು ಮೇ 15ರವರೆಗೆ ಮುಂದೂಡಿದೆ.

ನಮ್ಮ ಇತ್ತೀಚಿನ ಅಪ್‌ಡೇಟ್‌ನಲ್ಲಿ ಗೊಂದಲಗಳಿವೆ ಎಂದು ಅನೇಕರು ಹೇಳಿದ್ದಾರೆ. ಸಾಕಷ್ಟು ತಪ್ಪು ಮಾಹಿತಿಗಳು ಕಳವಳಕ್ಕೆ ಕಾರಣವಾಗಿವೆ. ಹೀಗಾಗಿ, ನಮ್ಮ ಆಶಯ, ತತ್ವ ಏನು ಎಂಬುದನ್ನು ಎಲ್ಲರಿಗೂ ಅರ್ಥ ಮಾಡಿಸುತ್ತೇವೆ. ತಾತ್ಕಾಲಿಕವಾಗಿ ಪಾಲಿಸಿ ಜಾರಿಗೆ ತರುವ ದಿನಾಂಕ ಮುಂದೂಡಿದ್ದೇವೆ ಎಂದು ವಾಟ್ಸಾಪ್​ ತನ್ನ ಬ್ಲಾಗ್‌ನಲ್ಲಿ ಹೇಳಿದೆ .

ಬೆಳವಣಿಗೆ ನಡೆದು ಬಂದ ಹಾದಿ: ವಾಟ್ಸ್​ಆ್ಯಪ್​ ಜನವರಿ 4ರಂದು ಪ್ರೈವೆಸಿ ನೀತಿ ಬದಲಾಯಿಸಿತ್ತು. ಬಳಕೆದಾರರಿಗೆ ಈ ಸಂಬಂಧ ಜನವರಿ 5ರಂದು ನೋಟಿಫಿಕೇಷನ್​ ಕಳುಹಿಸಿತ್ತು. ಈ ನೋಟಿಫಿಕೇಷ್​​ನಲ್ಲಿ ಬದಲಾದ ಪಾಲಿಸಿ ಬಗ್ಗೆ ವಿವರಿಸಲಾಗಿತ್ತು. ಹೊಸ ನಿಯಮಗಳನ್ನು ಒಪ್ಪಿ (Accept) ಅಥವಾ ನಂತರ ಒಪ್ಪಿ (Accept later) ಎನ್ನುವ ಆಯ್ಕೆ ನೀಡಲಾಗಿತ್ತು. ಫೆಬ್ರುವರಿ 8ರವರೆಗೆ ಹೊಸ ನೀತಿ ಒಪ್ಪಿಕೊಳ್ಳಲು ಕಾಲಾವಕಾಶ ಇದೆ. ಫೆಬ್ರುವರಿ 8ರ ಒಳಗೆ ನೀವು ನೂತನ ನೀತಿ ಒಪ್ಪಬೇಕು. ಇಲ್ಲ ಎಂದಾದರೆ ಬಳಕೆದಾರರು ವಾಟ್ಸ್​ಆ್ಯಪ್ ಬಳಸಲು ಸಾಧ್ಯವಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ವಾಟ್ಸಾಪ್​ ಏನೆಲ್ಲ ಮಾಹಿತಿ ಬಳಸಲಿದೆ: ವಾಟ್ಸ್​ಆ್ಯಪ್​ ಜಾರಿ ಮಾಡಿರುವ ಹೊಸ ನಿಯಮದ ಪ್ರಕಾರ ನಿಮ್ಮ ಮೊಬೈಲ್ ಅಥವಾ ಟ್ಯಾಬ್​ನ ಐಡಿಯನ್ನು ವಾಟ್ಸ್​ಆ್ಯಪ್​​ ಫೇಸ್​ಬುಕ್​ಗೆ ನೀಡುವ ಅವಕಾಶ ಇರಲಿದೆ. ಇನ್ನು, ನಿಮ್ಮ ಮೊಬೈಲ್​ ಬಳಕೆ ಮಾಡಿಕೊಂಡು ನೀವು ಸಾಕಷ್ಟು ವಸ್ತುಗಳನ್ನು ಖರೀದಿ ಮಾಡಿರುತ್ತೀರಿ. ಇದರ ಮಾಹಿತಿಯನ್ನು ವಾಟ್ಸ್​ಆ್ಯಪ್​ ಪಡೆದುಕೊಳ್ಳಲಿದೆ. ಇನ್ನು, ನಿಮ್ಮ ಲೊಕೇಷನ್​, ದೂರವಾಣಿ ಸಂಖ್ಯೆ, ವಾಣಿಜ್ಯ ವ್ಯವಹಾರ, ಇಮೇಲ್​ ಅಡ್ರೆಸ್​ ಹಾಗೂ ನಿಮ್ಮಲಿರುವ ಕಾಂಟ್ಯಾಕ್ಟ್​ ಮಾಹಿತಿಯನ್ನು ವಾಟ್ಸಾಪ್​ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಜತೆ ಹಂಚಿಕೊಳ್ಳಬಹುದು.

ವಾಟ್ಸಾಪ್​​-ಟೆಲಿಗ್ರಾಂ-ಸಿಗ್ನಲ್​: ಯಾವ ಆ್ಯಪ್​ ಹೆಚ್ಚು ಸೇಫ್​? ಇಲ್ಲಿದೆ ವಿವರ